
ನವದೆಹಲಿ:(ಆ.18): ವಿಶ್ವಸಂಸ್ಥೆ ಜಿಡಿಪಿ ಅಳೆಯಲು ಹೊಸ ಮಾನದಂಡ ಸೂಚಿಸಿದೆ. ಅದರಂತೆ ಕೇಂದ್ರ ಸರ್ಕಾರ ಹೊಸ ಮಾನದಂಡಗಳೊಂದಿಗೆ ದೇಶದ ಪರಿಷ್ಕೃತ ಜಿಡಿಪಿ ದರ ಪಟ್ಟಿಯನ್ನು ಬಿಡುಗಡೆ ಮಡಲಾಗಿದೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಯ ಸರ್ಕಾರದ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ಉತ್ತಮವಾಗಿತ್ತು ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಯುಪಿ ಅವಧಿಯಲ್ಲಿ ಭಾರತ ಶೇ. 10.08 ಆರ್ಥಿಕ ಪ್ರಗತಿ ಸಾಧಿಸಿತ್ತು ಎಂದು ವರದಿ ತಿಳಿಸಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಇದು ಎರಡನೇ ಅತ್ಯುತ್ತಮ ಪ್ರಗತಿ ಸಾಧನೆ ಎಂದೂ ವರದಿ ತಿಳಿಸಿದೆ.
ಇನ್ನು ಸರಾಸರಿ ಲೆಕ್ಕಾಚಾರದಲ್ಲೂ ಈಗಿನ ಎನ್ಡಿಎ ಸರ್ಕಾರಕ್ಕಿಂತ ಯುಪಿಎ ಸಾಧನೆ ಉತ್ತಮವೆಂಬ ವಿಚಾರ ಬೆಳಕಿಗೆ ಬಂದಿದೆ. ಮೋದಿ ನೇತೃತ್ವದಲ್ಲಿ 4 ವರ್ಷದ ಆಡಳಿತದಲ್ಲಿ ಸರಾಸರಿ ಶೇ. 7.3ರಷ್ಟು ಆರ್ಥಿಕ ಅಭಿವೃದ್ಧಿಯಾದರೆ, ಯುಪಿಎ ಸರಕಾರದ ಎರಡು ಅವಧಿಯಲ್ಲಿ ಶೇ. 8.1 ಸರಾಸರಿ ಅಭಿವೃದ್ಧಿಯಾಗಿದೆ.
1988-89ರಲ್ಲಿ ರಾಜೀವ್ ಗಾಂಧಿ ಸರ್ಕಾರದ ಅವಧಿಯಲ್ಲಿ ಭಾರತ 10.20% ಜಿಡಿಪಿ ಬೆಳವಣಿಗೆ ಸಾಧಿಸಿದ್ದೇ ಇದೂವರೆಗಿನ ಗರಿಷ್ಠ ಮಟ್ಟವಾಗಿದೆ. ಅದಾದ ಬಳಿಕ ಯುಪಿಎ ಅವಧಿಯಲ್ಲಿ ಭಾರತದ ಆರ್ಥಿಕತೆ ಶೇ. 10.08ರಷ್ಟು ದರದಲ್ಲಿ ಬೆಳವಣಿಗೆ ಸಾಧಿಸಿತ್ತು.
ಈ ಮುಂಚಿನ ಜಿಡಿಪಿ ಲೆಕ್ಕಾಚಾರದಲ್ಲಿ ಹಲವು ಲೋಪದೋಷಗಳಿದ್ದವು. ಬಹುತೇಕ ಅಸಂಘಟಿತ ವಲಯಗಳ ಒಟ್ಟು ಉತ್ಪನ್ನಗಳು ಈ ಲೆಕ್ಕಾಚಾರದಲ್ಲಿ ಕೈಬಿಟ್ಟುಹೋಗುತ್ತಿದ್ದವು. ಕೃಷಿ ಮತ್ತು ಕಾರ್ಪೊರೇಟ್ ವಲಯದ ಅನೇಕ ವ್ಯವಹಾರಗಳನ್ನು ಹಿಂದಿನ ಪದ್ಧತಿಯಲ್ಲಿ ನಿಖರವಾಗಿ ಅಂದಾಜಿಸಲು ಸಾಧ್ಯವಾಗುತ್ತಿರಲಿಲ್ಲ.
ಈ ಕಾರಣಕ್ಕೆ ಜಿಡಿಪಿ ಲೆಕ್ಕಾಚಾರಕ್ಕೆ ವಿಶ್ವ ಸಂಸ್ಥೆ 2008ರಲ್ಲಿ ಹೊಸ ಮಾರ್ಗದರ್ಶಿ ಸೂತ್ರಗಳನ್ನ ರಚಿಸಿತ್ತು. ಪ್ರತೀ ಐದು ವರ್ಷಗಳಿಗೊಮ್ಮೆ ಮೂಲ ವರ್ಷ(ಬೇಸ್ ಇಯರ್)ವನ್ನು ಬದಲಿಸಬೇಕೆಂಬುದು ಈ ಸೂತ್ರಗಳಲ್ಲೊಂದಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.