ಬ್ಲೂಮ್ ಬರ್ಗ್ ಬಿಲಿಯನೇರ್ ಸೂಚ್ಯಂಕದ ಪ್ರಕಾರ ಭಾರತ ಹಾಗೂ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಪಟ್ಟ ಈಗ ಮರಳಿ ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ ತೆಕ್ಕೆಗೆ ಸೇರಿದೆ. ಈ ಮೂಲಕ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಈಗ ಎರಡನೇ ಸ್ಥಾನಕ್ಕೆ ಜಾರಿದ್ದಾರೆ.
ನವದೆಹಲಿ (ಜ.5): ಉದ್ಯಮಿ ಗೌತಮ್ ಅದಾನಿ ಮರಳಿ ಫಾರ್ಮ್ ಗೆ ಬಂದಿದ್ದಾರೆ. ಕಳೆದೊಂದು ವರ್ಷದಿಂದ ತಮ್ಮ ಸಂಪತ್ತಿನಲ್ಲಿ ಸಾಕಷ್ಟು ಇಳಿಕೆ ಕಾಣುವ ಮೂಲಕ ಭಾರತದ ನಂ.1 ಶ್ರೀಮಂತ ಉದ್ಯಮಿ
ಸ್ಥಾನದಿಂದ ಕೆಳಗಿಳಿದಿದ್ದ ಅದಾನಿ ಈಗ ಮರಳಿ ಆ ಪಟ್ಟಕ್ಕೇರಿದ್ದಾರೆ. ಬ್ಲೂಮ್ ಬರ್ಗ್ ಬಿಲಿಯನೇರ್ ಸೂಚ್ಯಂಕದ (ಬಿಬಿಐ) ಪ್ರಕಾರ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕುವ ಮೂಲಕ ಗೌತಮ್ ಅದಾನಿ ಭಾರತದ ಹಾಗೂ ಏಷ್ಯಾದ ನಂ.1 ಶ್ರೀಮಂತ ವ್ಯಕ್ತಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇನ್ನು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅದಾನಿ 12ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಮುಖೇಶ್ ಅಂಬಾನಿ ಒಂದು ಸ್ಥಾನ ಹಿಂದಿದ್ದು, 13ನೇ ಸ್ಥಾನದಲ್ಲಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಭಾರತದ ಈ ಇಬ್ಬರು ಉದ್ಯಮಿಗಳ ಸ್ಥಾನಗಳಲ್ಲಿ ಏರಿಕೆಯಾಗಿದೆ. 2023ರ ಡಿಸೆಂಬರ್ ನಲ್ಲಿ ಅದಾನಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 15ನೇ ಸ್ಥಾನಕ್ಕೇರಿದ್ದರು. ಆಗ ಅಂಬಾನಿ 14ನೇ ಸ್ಥಾನದಲ್ಲಿದ್ದರು. ಕಳೆದ ವರ್ಷದ ಪ್ರಾರಂಭದಲ್ಲಿ ಹಿಂಡೆನ್ ಬರ್ಗ್ ವರದಿಯಲ್ಲಿ ಅದಾನಿ ವಿರುದ್ಧ ವಂಚನೆ ಆರೋಪ ಮಾಡಿದ ಬೆನ್ನಲ್ಲೇ ಸಂಸ್ಥೆಯ ಷೇರುಗಳ ಬೆಲೆಯಲ್ಲಿ ಇಳಿಕೆಯಾಗಿ ದೊಡ್ಡ ಪ್ರಮಾಣದಲ್ಲಿ ನಷ್ಟ ಅನುಭವಿಸಿದ್ದರು. ಆಗ ಅದಾನಿ ಈಗ ಮರಳಿ ಟ್ರ್ಯಾಕ್ ಗೆ ಬಂದಿದ್ದಾರೆ.
ಅದಾನಿ ನಿವ್ವಳ ಸಂಪತ್ತು ಎಷ್ಟು?
ಗೌತಮ್ ಅದಾನಿ ಅವರ ನಿವ್ವಳ ಸಂಪತ್ತು 97.6 ಬಿಲಿಯನ್ ಡಾಲರ್ ಇದ್ದು, ಏಷ್ಯಾ ಹಾಗೂ ಭಾರತದ ನಂ.1 ಶ್ರೀಮಂತ ವ್ಯಕ್ತಿ ಸ್ಥಾನಕ್ಕೇರಿದ್ದಾರೆ. ಅದಾನಿ ಸಂಪತ್ತಿನಲ್ಲಿ ವರ್ಷದಿಂದ ವರ್ಷಕ್ಕೆ 13.3 ಬಿಲಿಯನ್ ಡಾಲರ್ ಏರಿಕೆ ಕಂಡುಬಂದಿದೆ. ಆದರೆ, ಕಳೆದ ಸಾಲಿನಲ್ಲಿ ಮಾತ್ರ ಉದ್ಯಮದಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸಿದ್ದರು.
ಅದಾನಿ ಕೇಸ್ ತನಿಖೆ 3 ತಿಂಗಳಲ್ಲಿ ಪೂರ್ಣಗೊಳಿಸಿ; ಸೆಬಿ ತನಿಖೆ ಎತ್ತಿಹಿಡಿದ ಸುಪ್ರೀಂ; ಉದ್ಯಮಿಗೆ ತಾತ್ಕಾಲಿಕ ರಿಲೀಫ್
2023ರ ಜನವರಿ 24 ರಂದು, ಅಮೆರಿಕನ್ ಶಾರ್ಟ್-ಸೆಲ್ಲರ್ ಕಂಪನಿ ಹಿಂಡೆನ್‌ಬರ್ಗ್ ರಿಸರ್ಚ್ ಅದಾನಿ ಗ್ರೂಪ್ ವಿರುದ್ಧ ಮನಿ ಲಾಂಡರಿಂಗ್, ಷೇರುಗಳ ಮೌಲ್ಯವನ್ನು ಮೋಸದಿಂದ ಏರಿಸಿದ ಆರೋಪಗಳನ್ನು ಮಾಡಿತ್ತು. ಆದರೆ, ಈ ಆರೋಪಗಳನ್ನು ಅದಾನಿ ಗ್ರೂಪ್ ನಿರಾಕರಿಸಿತ್ತು. ಹಿಂಡೆನ್ ಬರ್ಗ್ ಆಪಾದನೆಗಳ ಬಳಿಕ ಅದಾನಿ ಗ್ರೂಪ್ ಕಂಪನಿಗಳ ಷೇರುಗಳ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದಿತ್ತು. ಅದಾನಿ ಸಂಪತ್ತಿನಲ್ಲಿ ಸುಮಾರು ಶೇ.60ರಷ್ಟು ಇಳಿಕೆ ಕಂಡುಬಂದಿತ್ತು. ಒಂದು ಹಂತದಲ್ಲಿ ಅದಾನಿ ಸಂಪತ್ತು 69 ಬಿಲಿಯನ್ ಡಾಲರ್ ಗೆ ಇಳಿಕೆಯಾಗಿತ್ತು.
ಈ ನಡುವೆ ಪ್ರಕರಣದ ತನಿಖೆಗೆ ಸುಪ್ರೀಂ ಕೋರ್ಟ್ 6 ಸದಸ್ಯರ ಸಮಿತಿಯನ್ನು ರಚಿಸಿತ್ತು. ಇದರ ಹೊರತಾಗಿ, ಮಾರುಕಟ್ಟೆ ನಿಯಂತ್ರಕ ಸೆಬಿ (ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ) ಅನ್ನು ಸಹ ತನಿಖೆ ಮಾಡಲು ಕೇಳಲಾಗಿತ್ತು. 2024ರ ಜನವರಿ 3ರಂದು ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಸೆಬಿ ತನಿಖೆಯನ್ನು ಎತ್ತಿ ಹಿಡಿದಿದೆ. ಅಲ್ಲದೆ, ಬಾಕಿ ಉಳಿದಿರುವ ಎರಡು ಪ್ರಕರಣಗಳ ತನಿಖೆಯನ್ನು 3 ತಿಂಗಳೊಳಗೆ ಪೂರ್ಣಗೊಳಿಸುವಂತೆ ಸೆಬಿಗೆ ನಿರ್ದೇಶಿಸಿದೆ. ಸೆಬಿ ತನಿಖೆಯನ್ನು ಎಸ್‌ಐಟಿಗೆ ಅಥವಾ ಸಿಬಿಐಗೆ ವರ್ಗಾವಣೆ ಮಾಡಲ್ಲ. ವರ್ಗಾಯಿಸಲು ಯಾವುದೇ ಆಧಾರವಿಲ್ಲ, ಸೆಬಿ ತನಿಖೆಯಲ್ಲಿ ಯಾವುದೇ ಲೋಪದೋಷವಿಲ್ಲ ಎಂದು ಕೂಡ ಸುಪ್ರೀಂ ಕೋರ್ಟ್ ಹೇಳಿದೆ. ಇದರಿಂದ ಗೌತಮ್ ಅದಾನಿ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ಬಿಗ್‌ಡೀಲ್‌ಗಾಗಿ ಬಿಲಿಯನೇರ್ ಮುಕೇಶ್ ಅಂಬಾನಿ-ಗೌತಮ್ ಅದಾನಿ ಫೈಟ್, ಎಷ್ಟು ಕೋಟಿಯ ಒಪ್ಪಂದ?
ಟಾಪ್ 50 ಪಟ್ಟಿಯಲ್ಲಿರುವ ಇತರ ಭಾರತೀಯರು
ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ ಅಂಬಾನಿ ಭಾರತ ಹಾಗೂ ಏಷ್ಯಾದ ಎರಡನೇ ಶ್ರೀಮಂ ಉದ್ಯಮಿಯಾಗಿದ್ದಾರೆ. ಇನ್ನು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 13ನೇ ಸ್ಥಾನದಲ್ಲಿದ್ದಾರೆ. ಕಳೆದ ಬದಲಾವಣೆ ಬಳಿಕ ಅವರು 764 ಮಿಲಿಯನ್ ಡಾಲರ್ ಗಳಿಸಿದ್ದಾರೆ. ಇನ್ನು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಶಾಪೂರ್ ಮಿಸ್ತ್ರಿ 34.6 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ 38 ಸ್ಥಾನದಲ್ಲಿದ್ದಾರೆ. ಶಿವ್ ನಡಾರ್ 33 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ 45ನೇ ಸ್ಥಾನದಲ್ಲಿದ್ದಾರೆ.