
ನವದೆಹಲಿ (ಸೆ.8): ಜಿ20 ಶೃಂಗಸಭೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಾಳೆ (ಸೆ.9) ಹಾಗೂ ನಾಡಿದ್ದು (ಸೆ.10) ನಡೆಯಲಿದೆ. ಈ ಸಂದರ್ಭದಲ್ಲಿ ವಿಶ್ವ ಬ್ಯಾಂಕ್ ಆರ್ಥಿಕ ಸೇರ್ಪಡೆಗೆ ಜಿ20 ರಾಷ್ಟ್ರಗಳ ಸಹಭಾಗಿತ್ವದ ಕುರಿತು ದಾಖಲೆ ಸಿದ್ಧಪಡಿಸಿದೆ. ಇದರಲ್ಲಿ ವಿಶ್ವ ಬ್ಯಾಂಕ್ ಕಳೆದ ಒಂದು ದಶಕದ ಅವಧಿಯಲ್ಲಿ ಮೋದಿ ಸರ್ಕಾರದ ಅಡಿಯಲ್ಲಿ ಡಿಜಿಟಲ್ ಪಬ್ಲಿಕ್ ಇನ್ಫ್ರಾಸ್ಟ್ರಚರ್ (ಡಿಪಿಐ) ಭಾರತದಲ್ಲಿ ತಂದಿರುವ ಬದಲಾವಣೆಗಳನ್ನು ಶ್ಲಾಘಿಸಿದೆ. ಭಾರತದಲ್ಲಿ ಡಿಜಿಟಲ್ ಪಬ್ಲಿಕ್ ಇನ್ಫ್ರಾಸ್ಟ್ರಚರ್ ರೂಪಿಸಲು ಮೋದಿ ನೇತೃತ್ವದ ಸರ್ಕಾರ ಕೈಗೊಂಡ ಕ್ರಮಗಳು ಹಾಗೂ ನೀತಿಗಳನ್ನು ಈ ವರದಿಯಲ್ಲಿ ಹೈಲೈಟ್ ಮಾಡಿರೋದು ವಿಶೇಷ. ಐದು ದಶಕಗಳಲ್ಲಿ ಸಾಧಿಸಬೇಕಾದದ್ದನ್ನು ಭಾರತ ಕೇವಲ ಆರು ವರ್ಷಗಳಲ್ಲಿ ಸಾಧಿಸಿದೆ ಎಂದು ವಿಶ್ವ ಬ್ಯಾಂಕ್ ಮೆಚ್ಚುಗೆ ವ್ಯಕ್ತಪಡಿಸಿದೆ. ಹಾಗೆಯೇ ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಬಗ್ಗೆ ಕೂಡ ವರದಿಯಲ್ಲಿ ಪ್ರಸ್ತಾಪಿಸಿದ್ದು, 2015ರಲ್ಲಿ 147.2 ಮಿಲಿಯನ್ ಖಾತೆಗಳನ್ನು ಜನ್ ಧನ್ ಯೋಜನೆಯಡಿಯಲ್ಲಿ ತೆರೆಯಲಾಗಿದ್ದು, 2022ರ ಜೂನ್ ನಲ್ಲಿ ಈ ಖಾತೆಗಳ ಸಂಖ್ಯೆ 462 ಮಿಲಿಯನ್ ತಲುಪಿದೆ. ಇದರಲ್ಲಿ ಶೇ.56ರಷ್ಟು ಖಾತೆಗಳನ್ನು ಮಹಿಳೆಯರು ಹೊಂದಿದೆ ಎಂಬ ಮಾಹಿತಿ ಕೂಡ ಈ ವರದಿಯಲ್ಲಿದೆ.
ಡಿಬಿಟಿ ಬಗ್ಗೆ ಮೆಚ್ಚುಗೆ
ವಿವಿಧ ಸರ್ಕಾರಿ ಯೋಜನೆಗಳ ಲಾಭವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡುವ ನೇರ ಲಾಭ ವರ್ಗಾವಣೆ (DBT) ಯೋಜನೆ ಬಗ್ಗೆ ಕೂಡ ವಿಶ್ವ ಬ್ಯಾಂಕ್ ಮೆಚ್ಚುಗೆ ವ್ಯಕ್ತಪಡಿಸಿದೆ. 312 ಪ್ರಮುಖ ಯೋಜನೆಗಳ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ 53 ಇಲಾಖೆಗಳಿಂದ 361 ಬಿಲಿಯನ್ ಡಾಲರ್ ಮೊತ್ತವನ್ನು ನರವಾಗಿ ವರ್ಗಾವಣೆ ಮಾಡಲಾಗಿದೆ. ಈ ಕ್ರಮದಿಂದ ಸರ್ಕಾರಕ್ಕೆ ಕೂಡ 33 ಬಿಲಿಯನ್ ಡಾಲರ್ ಉಳಿತಾಯವಾಗಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.
ಜಿ20 ಶೃಂಗಸಭೆ: 15 ದೇಶದ ಮುಖ್ಯಸ್ಥರೊಂದಿಗೆ ಮೋದಿ ಪ್ರಮುಖ ದ್ವಿಪಕ್ಷೀಯ ಸಭೆ: ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್..
ಯುಪಿಐ ಕ್ರಾಂತಿ
ಭಾರತದಲ್ಲಿ 14.89 ಟ್ರಿಲಿಯನ್ ರೂ. ಮೌಲ್ಯದ 9.41 ಬಿಲಿಯನ್ ಗಿಂತಲೂ ಅಧಿಕ ವರ್ಗಾವಣೆಗಳು 2023ರ ಮೇ ತಿಂಗಳೊಂದರಲ್ಲೇ ಆಗಿದೆ. 2022-23ನೇ ಸಾಲಿನಲ್ಲಿ ಯುಪಿಐ ವಹಿವಾಟಿನ ಒಟ್ಟು ಮೌಲ್ಯ ಭಾರತದ ಜಿಡಿಪಿಯ ಸುಮಾರು ಶೇ.50ರಷ್ಟಿದೆ ಎಂದು ವಿಶ್ವ ಬ್ಯಾಂಕ್ ವರದಿಯಲ್ಲಿ ತಿಳಿಸಲಾಗಿದೆ.
ಖಾಸಗಿ ವಲಯಕ್ಕೂ ಪ್ರಯೋಜನ
ಡಿಪಿಐ ಭಾರತದ ಖಾಸಗಿ ವಲಯಕ್ಕೂ ಸಾಕಷ್ಟು ನೆರವು ನೀಡಿದೆ. ಇದರಿಂದ ಉದ್ಯಮ ಸಂಬಂಧಿ ಕೆಲಸಗಳು ವೇಗವಾಗಿ ನಡೆಯುತ್ತಿದ್ದು, ಸಮಯ ಹಾಗೂ ಹಣ ಎರಡೂ ಉಳಿತಾಯವಾಗುತ್ತಿದೆ ಎಂದು ವರದಿ ಹೇಳಿದೆ. ಹಾಗೆಯೇ ಭಾರತದ ಬ್ಯಾಂಕಿಂಗ್ ವಲಯ ಕೂಡ ಡಿಜಿಟಲೀಕರಣಗೊಂಡಿದೆ. ಹೀಗಾಗಿ ಕೆವೈಸಿ ಪ್ರಕ್ರಿಯೆ ಕೂಡ ಸರಂಡಿದೆ. ವೆಚ್ಚ ಕೂಡ ತಗ್ಗಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ. ಕ್ರಾಸ್ ಬಾರ್ಡರ್ ಪೇಮೆಂಟ್ಸ್, ಡಿಇಪಿಎ ಮುಂತಾದವುಗಳ ಬಗ್ಗೆ ಕೂಡ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಡಿಜಿಟಲ್ ಹಣಕಾಸು ಸೇರ್ಪಡೆಗೆ ಜಿ20 ಉನ್ನತ ಮಟ್ಟದ ನೀತಿಗಳು ಹೀಗಿವೆ.
ಡಿಜಿಟಲ್ ಹಣಕಾಸು ಸೇರ್ಪಡೆಗೆ ಜಿ20 ಉನ್ನತ ಮಟ್ಟದ ನೀತಿಗಳು 2016ರಲ್ಲಿ ಒಟ್ಟು 8 ನೀತಿಗಳನ್ನು ಉಲ್ಲೇಖಿಸಲಾಗಿತ್ತು. ಅವು ಹೀಗಿವೆ.
ನೀತಿ 1: ಹಣಕಾಸು ಸೇರ್ಪಡೆಗೆ ಡಿಜಿಟಲ್ ವಿಧಾನವನ್ನು ಉತ್ತೇಜಿಸುವುದು.
ನೀತಿ 2: ಡಿಜಿಟಲ್ ಹಣಕಾಸು ಸೇರ್ಪಡೆ ಗುರಿ ಸಾಧಿಸಲು ಆವಿಷ್ಕಾರ ಹಾಗೂ ಅಪಾಯ ಎರಡರ ನಡುವೆ ಸಮತೋಲನ ಕಾಯ್ದುಕೊಳ್ಳುವುದು.
ನೀತಿ 3: ಡಿಜಿಟಲ್ ಹಣಕಾಸು ಸೇರ್ಪಡೆಗೆ ಕಾನೂನು ಹಾಗೂ ನಿಯಂತ್ರಣ ಚೌಕಟ್ಟು ರಚಿಸೋದು.
ನೀತಿ 4: ಡಿಜಿಟಲ್ ಹಣಕಾಸು ಸೇವಾ ಮೂಲಸೌಕರ್ಯ ವ್ಯವಸ್ಥೆಯನ್ನು ವಿಸ್ತರಿಸೋದು.
ಜಿ20 ಶೃಂಗಸಭೆ 2023: ಪ್ರಮುಖ ಸದಸ್ಯರು, ಸವಾಲು ಹಾಗೂ ಜಾಗತಿಕ ವಿಚಾರ
ನೀತಿ 5: ಗ್ರಾಹಕರ ಸಂರಕ್ಷಣೆಗೆ ಜವಾಬ್ದಾರಿಯುತ ಡಿಜಿಟಲ್ ಹಣಕಾಸು ಅಭ್ಯಾಸಗಳನ್ನು ಸ್ಥಾಪಿಸೋದು.
ನೀತಿ 6: ಡಿಜಿಟಲ್ ಹಾಗೂ ಹಣಕಾಸು ಸಾಕ್ಷರತೆ ಹಾಗೂ ಜಾಗೃತಿಯನ್ನು ಬಲಪಡಿಸೋದು.
ನೀತಿ 7: ಡಿಜಿಟಲ್ ಹಣಕಾಸು ಸೇವೆಗಳಿಗೆ ಗ್ರಾಹಕರ ಗುರುತಿಗೆ ಅನುಕೂಲ ಕಲ್ಪಿಸೋದು.
ನೀತಿ 8: ಡಿಜಿಟಲ್ ಹಣಕಾಸು ಸೇರ್ಪಡೆ ಪ್ರಗತಿಯನ್ನು ಟ್ರ್ಯಾಕ್ ಮಾಡಿ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.