ಆಯುಷ್ಮಾನ್ ಯೋಜನೆ ಶೀಘ್ರದಲ್ಲಿ ಮಧ್ಯಮ ವರ್ಗಕ್ಕೂ ವಿಸ್ತರಣೆ ಸಾಧ್ಯತೆ; ವಿಮಾ ಕವರೇಜ್ ಎಷ್ಟು?

By Suvarna News  |  First Published Mar 29, 2023, 1:38 PM IST

ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮಹತ್ವದ ಕಾರ್ಯಕ್ರಮಗಳಲ್ಲೊಂದಾದ ಆಯುಷ್ಮಾನ್ ಭಾರತ್ ಯೋಜನೆಯನ್ನು ಮಧ್ಯ ವರ್ಗದ ಜನರಿಗೂ ವಿಸ್ತರಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ. ಇದು ಜಾರಿಯಾದರೆ ಮಧ್ಯಮ ಆದಾಯ ಹೊಂದಿರುವ 40 ಕೋಟಿ ಜನರಿಗೆ ಪ್ರಯೋಜನವಾಗಲಿದೆ. ಪ್ರಸ್ತುತ ಈ ಯೋಜನೆ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಮಾತ್ರ ಲಭ್ಯವಿದೆ. 


ನವದೆಹಲಿ (ಮಾ.29): ಆರೋಗ್ಯ ಸೇವಾ ವೆಚ್ಚಗಳ ಬೆಲೆ ಹೆಚ್ಚಳದಿಂದ ಬಡ ಜನರು ಮಾತ್ರವಲ್ಲ, ಮಧ್ಯಮ ವರ್ಗದ ಜನರು ಕೂಡ ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಇದನ್ನು ಕೇಂದ್ರ ಸರ್ಕಾರ ಕೂಡ ಗಮನಿಸಿದಂತೆ ಕಾಣುತ್ತಿದ್ದು, ಆಯುಷ್ಮಾನ್ ಭಾರತ್ ಯೋಜನೆಯನ್ನು ಮಧ್ಯಮ ವರ್ಗದ ಜನರಿಗೂ ವಿಸ್ತರಿಸಲು ಚಿಂತನೆ ನಡೆಸಿದೆ. ಇದಕ್ಕಾಗಿ ಸರ್ಕಾರ ಆಯುಷ್ಮಾನ್ ಭಾರತ್ 2.0 ಆವೃತ್ತಿಯನ್ನು ಸಿದ್ಧಪಡಿಸುತ್ತಿದೆ. ಇದರಿಂದ ಈ ತನಕ ಬಡತನ ರೇಖೆಗಿಂತ ಕೆಳಗಿನ ಜನರಿಗೆ ಮಾತ್ರ ಲಭ್ಯವಿದ್ದ ಆಯುಷ್ಮಾನ್ ಭಾರತ್ ಯೋಜನೆಯ ಪ್ರಯೋಜನ ಇನ್ಮುಂದೆ ಮಧ್ಯಮ ವರ್ಗದ ಜನರಿಗೆ ಕೂಡ ಸಿಗಲಿದೆ. ದೇಶದಲ್ಲಿ ಮಧ್ಯಮ ಆದಾಯ ಹೊಂದಿರುವ 40 ಕೋಟಿ ಜನರಿಗೆ ಈ ಯೋಜನೆಯಿಂದ ಪ್ರಯೋಜನವಾಗಲಿದೆ. ಈ ಪ್ರಸ್ತಾವಿತ ಯೋಜನೆ ಬಗ್ಗೆ ನೀತಿ ಆಯೋಗ ಹಾಗೂ ಕೇಂದ್ರ ಆರೋಗ್ಯ ಸಚಿವಾಲಯ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ. ಈ ಯೋಜನೆಯ ಹಣಕಾಸಿನ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಪರ್ಯಾಯ ಯೋಜನೆ ಆಯ್ಕೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಹಣಕಾಸಿನ ಹೊರೆಯ ಜೊತೆಗೆ ಸರ್ಕಾರ ಯೋಜನೆ ಅನುಷ್ಠಾನದಿಂದ ಎದುರಾಗುವ ಸವಾಲುಗಳ ಬಗ್ಗೆಯೂ ಯೋಚಿಸುತ್ತಿದೆ. ಮೂಲಗಳ ಪ್ರಕಾರ ಆಯುಷ್ಮಾನ್ ಭಾರತ್ ಯೋಜನೆ ಮಾದರಿಯಲ್ಲೇ ಹೊಸ ಯೋಜನೆ ಪ್ರಾರಂಭಿಸುವ ಬಗ್ಗೆಯೂ ಸರ್ಕಾರ ಯೋಚಿಸುತ್ತಿದೆ.

ಹೊಸ ಅಥವಾ ಪರ್ಯಾಯ ಯೋಜನೆಗಳಲ್ಲಿ ಆಯುಷ್ಮಾನ್ ಭಾರತ್ ಅಡಿಯಲ್ಲಿ  5 ಲಕ್ಷ ರೂ. ವಿಮಾ ಕವರೇಜ್ ಒದಗಿಸುವಂತೆ ಅದೇ ಮಾದರಿಯಲ್ಲಿ ಕವರೇಜ್ ಒದಗಿಸುವ ಪ್ಲ್ಯಾನ್ ಕೂಡ ಸೇರಿದೆ. ಇನ್ನು ಯೋಜನೆಯಲ್ಲಿ ಕವರೇಜ್ ಪಡೆದಿರುವ ವ್ಯಕ್ತಿಯಿಂದಲೇ ಭಾಗಶಃ ಕೊಡುಗೆ ಅಥವಾ ಟಾಪ್-ಅಪ್ ಪಡೆಯುವ ಆಯ್ಕೆಗಳ ಬಗ್ಗೆ ಕೂಡ ಪರಿಶೀಲನೆ ನಡೆಸಲಾಗುತ್ತಿದೆ. ಈ ಯೋಜನೆಯನ್ನು ಸುಸ್ಥಿರಗೊಳಿಸಲು ಸರ್ಕಾರ ಆರೋಗ್ಯ ವಿಮಾ ಕಂಪನಿಗಳನ್ನು ಕೂಡ ಸಂಪರ್ಕಿಸಿದ್ದು, ಯೋಗ್ಯ ವೆಚ್ಚದಲ್ಲಿ ಮೂಲಭೂತ ವೈದ್ಯಕೀಯ ಕವರೇಜ್ ಒದಗಿಸುವ ಕೈಗೆಟಕುವ  ದರದಲ್ಲಿ ಪ್ಯಾಕೇಜ್ ರೂಪಿಸಲು ಪ್ರಯತ್ನಿಸುತ್ತಿದೆ.

Tap to resize

Latest Videos

ಸರ್ಕಾರಿ ನೌಕರರಿಗೆ ಬಂಪರ್‌, ಒಲ್ಡ್‌ ಪೆನ್ಶನ್‌ ಸ್ಕೀಮ್‌ ಶೀಘ್ರ ಜಾರಿ?

'ಈ ವರ್ಗದ ಜನರಿಗಾಗಿಯೇ ಖಾಸಗಿ ಕಂಪನಿಗಳು ಹೊಸ ಉತ್ಪನ್ನವೊಂದನ್ನು ಅಭಿವೃದ್ಧಿಪಡಿಸಲು ಒಲವು ತೋರಿದ್ದು, ಸರ್ಕಾರ ಹೆಚ್ಚಿನ ಕವರೇಜ್ ಸಿಗುವಂತೆ ಮಾಡುವ ಭರವಸೆಯನ್ನು ಕೂಡ ನೀಡಿದೆ. ಈ ಮೂಲಕ ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಆರೋಗ್ಯ ವಿಮಾ ಸೌಲಭ್ಯ ನೀಡಲು ಪ್ರಯತ್ನಿಸುತ್ತಿದೆ' ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ. ಈ ನಿಟ್ಟಿನಲ್ಲಿ ನೀತಿ ಆಯೋಗ ಕೂಡ ವಿಮಾ ಕಂಪನಿಗಳ ಜೊತೆಗೆ ಅನೇಕ ಸುತ್ತಿನ ಸಮಾಲೋಚನೆ ನಡೆಸಿದೆ. ಹಾಗೆಯೇ ಇದಕ್ಕೆ ಸಂಬಂಧಿಸಿದ ಕರಡು ಪ್ರತಿ ಕೂಡ ಶೀಘ್ರವಾಗಿ ಪರಿಗಣನೆಗೆ ಬರಲಿದೆ.

ಪ್ರಧಾನಿ ನರೇಂದ್ರ ಮೋದಿ 2018ರಲ್ಲಿ ಆಯುಷ್ಮಾನ್ ಭಾರತ್ ಯೋಜನೆಯನ್ನು ಪ್ರಾರಂಭಿಸಿದರು. ಇದು ಸಮಾಜದ ಸೌಲಭ್ಯ ವಂಚಿತ ಅಥವಾ ಕಡುಬಡತನದಲ್ಲಿರುವ ವರ್ಗಗಳಿಗೆ 5ಲಕ್ಷ ರೂ. ತನಕ ಆರೋಗ್ಯವಿಮಾ ಕವರೇಜ್ ಒದಗಿಸುತ್ತದೆ. ಈ ಯೋಜನೆಗೆ ಸರ್ಕಾರವೇ ಸಂಪೂರ್ಣ ಅನುದಾನ ನೀಡಿದ್ದು, ಇದರಿಂದ 10 ಕೋಟಿ ಕುಟುಂಬಗಳಿಗೆ ನೆರವು ನೀಡುವ ಗುರಿಯನ್ನು ಹೊಂದಿತ್ತು. 

EPF ಬಡ್ಡಿದರ: ಈ ಬಾರಿಯೂ ಉದ್ಯೋಗಿಗಳಿಗೆ ನಿರಾಸೆ; 2022-23ನೇ ಸಾಲಿಗೆ ಇಪಿಎಫ್ ಠೇವಣಿಗೆ ಶೇ.8.15 ಬಡ್ಡಿದರ ನಿಗದಿ

ಆಯುಷ್ಮಾನ್ ಭಾರತ್ - ಡಿಜಿಟಲ್ ಮಿಷನ್ ಅನ್ನು ಕೂಡ 2021ರ ಸೆಪ್ಟೆಂಬರ್ ನಲ್ಲಿ ಪ್ರಾರಂಭಿಸಲಾಗಿದೆ. ಇದರಿಂದ ದೇಶಾದ್ಯಂತದ ಆಸ್ಪತ್ರೆಗಳ ಡಿಜಿಟಲ್ ಆರೋಗ್ಯ ಸೊಲ್ಯೂಷನ್ಸ್ ಪರಸ್ಪರ ಸಂಪರ್ಕಿಸುತ್ತದೆ. ಇದರ ಅಡಿಯಲ್ಲಿ, ದೇಶದ ಜನರು ಈಗ ಡಿಜಿಟಲ್ ಆರೋಗ್ಯ ID ಪಡೆಯುತ್ತಾರೆ. ಪ್ರತಿಯೊಬ್ಬ ನಾಗರಿಕನ ಆರೋಗ್ಯ ದಾಖಲೆಯನ್ನು ಡಿಜಿಟಲ್ ಮೂಲಕ ರಕ್ಷಿಸಲಾಗುತ್ತದೆ. ಇದರಿಂದ ರೋಗಿ ಯಾವುದೇ ಆಸ್ಪತ್ರೆಗೆ ಹೋದರೂ ಸುಲಭವಾಗಿ ಚಿಕಿತ್ಸೆ ಪಡೆಯಬಹುದಾಗಿದೆ. 
 

click me!