ರೆಡ್‌ಬುಲ್‌, ಪೆಪ್ಸಿಕೋ, ಸ್ಟಿಂಗ್‌, ಕ್ಯಾಂಪಾ ಸೇರಿ 6 ಎನರ್ಜಿ ಡ್ರಿಂಕ್‌ಗೆ FSSAI ನೋಟಿಸ್‌

Published : Jul 02, 2026, 11:24 AM IST
fssai notice to red bull pepsico sting campa

ಸಾರಾಂಶ

FSSAI, ರೆಡ್‌ಬುಲ್ ಮತ್ತು ಸ್ಟಿಂಗ್ ಸೇರಿದಂತೆ ಆರು ಪ್ರಮುಖ ಎನರ್ಜಿ ಡ್ರಿಂಕ್ ಬ್ರ್ಯಾಂಡ್‌ಗಳಿಗೆ ನೋಟಿಸ್ ಜಾರಿ ಮಾಡಿದೆ. ಈ ಕಂಪನಿಗಳು 'ಎನರ್ಜಿ ಡ್ರಿಂಕ್' ಎಂದು ಕಾನೂನುಬಾಹಿರವಾಗಿ ಬ್ರ್ಯಾಂಡಿಂಗ್ ಮಾಡಿ ತಪ್ಪು ಮಾಹಿತಿ ನೀಡುತ್ತಿವೆ ಎಂದು ಪ್ರಾಧಿಕಾರ ಆರೋಪಿಸಿದೆ.

ನವದೆಹಲಿ (ಜು.2): ದೇಶದ ಪ್ರಮುಖ ಆಹಾರ ಸುರಕ್ಷತಾ ನಿಯಂತ್ರಕ ಸಂಸ್ಥೆಯಾದ ‘ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ’ (FSSAI) ಬುಧವಾರದಂದು ಮಾರುಕಟ್ಟೆಯ ದಿಗ್ಗಜ ಕಂಪನಿಗಳಾದ ರೆಡ್‌ಬುಲ್, ಪೆಪ್ಸಿಕೋ ಮತ್ತು ಸ್ಟಿಂಗ್ ಸೇರಿದಂತೆ ಆರು ಪ್ರಮುಖ ಪಾನೀಯ ಬ್ರ್ಯಾಂಡ್‌ಗಳಿಗೆ ನೋಟಿಸ್ ಜಾರಿ ಮಾಡಿದೆ. ಮಾರುಕಟ್ಟೆಯಲ್ಲಿ ‘ಎನರ್ಜಿ ಡ್ರಿಂಕ್ಸ್’ ಎಂದು ಬಿಂಬಿಸಿಕೊಂಡು ಮಾರಾಟವಾಗುತ್ತಿರುವ ಈ ಉತ್ಪನ್ನಗಳು ನಿಯಮಬಾಹಿರವಾಗಿ ಬ್ರ್ಯಾಂಡಿಂಗ್ ಮಾಡುತ್ತಿವೆ ಮತ್ತು ಗ್ರಾಹಕರ ಹಾದಿತಪ್ಪಿಸುವಂತಹ ಹಕ್ಕುಗಳನ್ನು (Misleading Claims) ಮಂಡಿಸುತ್ತಿವೆ ಎಂದು ಎಫ್‌ಎಸ್ಎಸ್‌ಎಐ ಈ ಕಠಿಣ ಕ್ರಮ ಕೈಗೊಂಡಿದೆ.

ಆಹಾರ ಸುರಕ್ಷತಾ ಹಠಾತ್ ತಪಾಸಣೆಯ ಅಡಿಯಲ್ಲಿ ನೋಟಿಸ್ ಪಡೆದಿರುವ 6 ಪ್ರಮುಖ ಬ್ರ್ಯಾಂಡ್‌ಗಳೆಂದರೆ, ರೆಡ್‌ಬುಲ್ ಎನರ್ಜಿ ಡ್ರಿಂಕ್ (Red Bull Energy Drink), ಪೆಪ್ಸಿಕೋ ಸಂಸ್ಥೆಯ ಆಡ್ರಿನಾಲಿನ್ ರಶ್ ಎನರ್ಜಿ ಡ್ರಿಂಕ್ (PepsiCo's Adrenaline Rush), ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್‌ನ ಕ್ಯಾಂಪಾ ಎನರ್ಜಿ ಡ್ರಿಂಕ್ ಗೋಲ್ಡ್ ಬೂಸ್ಟ್ (Campa Energy Drink Gold Boost), ಸ್ಟಿಂಗ್ ಎನರ್ಜಿ ಡ್ರಿಂಕ್ (Sting Energy Drink), ಹೆಲ್ ಎನರ್ಜಿ (Hell Energy ಹಾಗೂ ಕೋಕಾ-ಕೋಲಾದ ಮಾನ್‌ಸ್ಟರ್ ಎನರ್ಜಿ (Monster Energy) ಡ್ರಿಂಕ್‌ಗೆ ನೋಟಿಸ್ ನೀಡಲಾಗಿದೆ.

ಇನ್‌ಸ್ಟಾಗ್ರಾಮ್ ಸೇರಿದಂತೆ ಪ್ರಮುಖ ಜಾಲತಾಣಗಳಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಎಫ್‌ಎಸ್ಎಸ್‌ಎಐ, ಆಹಾರ ನಿಯಮಾವಳಿಗಳನ್ನು ಉಲ್ಲಂಘಿಸಿ ಬ್ರ್ಯಾಂಡಿಂಗ್ ಮತ್ತು ಪ್ರಚಾರದ ಕ್ಲೈಮ್‌ಗಳನ್ನು ಮಾಡಿರುವುದಕ್ಕಾಗಿ ಈ ಕಂಪನಿಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಖಚಿತಪಡಿಸಿದೆ.

ನೋಟಿಸ್ ನೀಡಲು ಪ್ರಮುಖ ಕಾರಣಗಳೇನು?

ಅನಧಿಕೃತವಾಗಿ ‘ಎನರ್ಜಿ ಡ್ರಿಂಕ್’ ಹೆಸರು ಬಳಕೆ: ಎಫ್‌ಎಸ್ಎಸ್‌ಎಐ ತನ್ನ ನಿಯಮಾವಳಿಗಳಲ್ಲಿ ‘ಎನರ್ಜಿ ಡ್ರಿಂಕ್’ ಅಥವಾ ಅದಕ್ಕೆ ಸಮಾನವಾದ ಪಾನೀಯಗಳ ವರ್ಗಕ್ಕೆ ಯಾವುದೇ ನಿರ್ದಿಷ್ಟ ಅಧಿಕೃತ ಮಾನದಂಡಗಳನ್ನು (Specific Standards) ಇದುವರೆಗೆ ಅಧಿಸೂಚಿಸಿಲ್ಲ. ಇಂತಹ ಯಾವುದೇ ಅಧಿಕೃತ ವರ್ಗೀಕರಣ ಇಲ್ಲದಿದ್ದರೂ, ಈ ಕಂಪನಿಗಳು ತಮ್ಮ ಉತ್ಪನ್ನಗಳ ಲೇಬಲ್ ಹಾಗೂ ಬ್ರ್ಯಾಂಡಿಂಗ್‌ನಲ್ಲಿ ‘ಎನರ್ಜಿ ಡ್ರಿಂಕ್’ ಎಂಬ ವಿವರಣೆಯನ್ನು ಕಾನೂನುಬಾಹಿರವಾಗಿ ಬಳಸುತ್ತಿವೆ ಎಂದು ಪ್ರಾಧಿಕಾರ ಆರೋಪಿಸಿದೆ.

ಆಹಾರ ವರ್ಗೀಕರಣದ ದುರ್ಬಳಕೆ: ನಿಯಂತ್ರಕ ಸಂಸ್ಥೆಯು ತನ್ನ ನಿಯಮಾವಳಿಗಳಲ್ಲಿ ನೀಡಿರುವ ಆಹಾರ ವರ್ಗೀಕರಣ ವ್ಯವಸ್ಥೆಯು (Food Category System) ಕೇವಲ ಆಡಳಿತಾತ್ಮಕ ವರ್ಗೀಕರಣದ ಉದ್ದೇಶಕ್ಕಾಗಿ ಮಾತ್ರಸೀಮಿತವಾಗಿದೆಯೇ ಹೊರತು, ಅದನ್ನು ಉತ್ಪನ್ನಗಳ ಹೆಸರು ಅಥವಾ ಲೇಬಲಿಂಗ್ ಮಾಡಲು ಬಳಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.

ದೈಹಿಕ ಸಾಮರ್ಥ್ಯದ ನಕಲಿ ಹಕ್ಕುಗಳು: ಈ ಪಾನೀಯಗಳ ಪ್ರಚಾರಕ್ಕಾಗಿ ಬಳಸಲಾಗುತ್ತಿರುವ ಕೆಲವು ಚಿಕಿತ್ಸಕ (Therapeutic) ಮತ್ತು ದೈಹಿಕ ಸಾಮರ್ಥ್ಯ ಹೆಚ್ಚಿಸುವ ಹಕ್ಕುಗಳನ್ನು ಪ್ರಾಧಿಕಾರ ತೀವ್ರವಾಗಿ ಆಕ್ಷೇಪಿಸಿದೆ. ಈ ಪಾನೀಯಗಳನ್ನು ಕುಡಿಯುವುದರಿಂದ "ತನು ಮತ್ತು ಮನಸ್ಸು ಚೈತನ್ಯಗೊಳ್ಳುತ್ತದೆ" (Vitalises body and mind), "ಏಕಾಗ್ರತೆ ಹೆಚ್ಚುತ್ತದೆ" (Enhancing focus), "ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ" (Boost energy levels) ಮತ್ತು "ಸಾಮಾನ್ಯ ದೌರ್ಬಲ್ಯಕ್ಕೆ ಸಹಕಾರಿ" (Aid in general weakness) ಎಂಬಂತಹ ಆಕರ್ಷಕ ಹಕ್ಕುಗಳನ್ನು ಮಂಡಿಸಲಾಗುತ್ತಿದೆ. ಆದರೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ರ ಪ್ರಕಾರ ಇಂತಹ ಯಾವುದೇ ಹಕ್ಕುಗಳನ್ನು ಬಳಸಲು ಆಹಾರ ಉತ್ಪನ್ನಗಳಿಗೆ ಅನುಮತಿಯೇ ಇಲ್ಲ ಎಂದು ಎಫ್‌ಎಸ್ಎಸ್‌ಎಐ ಹೇಳಿದೆ.

ಪ್ರತಿಕ್ರಿಯೆಗೆ ಕಂಪನಿಗಳ ನಕಾರ

ಎಫ್‌ಎಸ್ಎಸ್‌ಎಐ ಹೊರಡಿಸಿರುವ ಈ ಮಹತ್ವದ ನೋಟಿಸ್‌ಗೆ ಸಂಬಂಧಿಸಿದಂತೆ ಆಕ್ಷೇಪಣೆ ಎದುರಿಸುತ್ತಿರುವ ಆರೂ ಕಂಪನಿಗಳಿಂದ ತಕ್ಷಣಕ್ಕೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಅಥವಾ ಸ್ಪಷ್ಟೀಕರಣಗಳು ಲಭ್ಯವಾಗಿಲ್ಲ.

ಹೆಚ್ಚಾದ ಎಫ್‌ಎಸ್ಎಸ್‌ಎಐ ಕಣ್ಗಾವಲು (Stepped up Actions)

ಇತ್ತೀಚಿನ ತಿಂಗಳುಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವ, ತಪ್ಪು ದಾರಿಗೆಳೆಯುವ ಜಾಹೀರಾತುಗಳನ್ನು ನೀಡುವ ಮತ್ತು ಲೇಬಲಿಂಗ್ ನಿಯಮಗಳನ್ನು ಗಾಳಿಗೆ ತೂರುವ ಆಹಾರ ಮತ್ತು ಪಾನೀಯ ತಯಾರಿಕಾ ಸಂಸ್ಥೆಗಳ ವಿರುದ್ಧ ಎಫ್‌ಎಸ್ಎಸ್‌ಎಐ ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಗ್ರಾಹಕರಿಂದ ಬರುತ್ತಿರುವ ದೂರುಗಳ ಆಧಾರದ ಮೇಲೂ ಸಂಸ್ಥೆ ಕಠಿಣ ಕ್ರಮ ಜರುಗಿಸುತ್ತಿದೆ. ಜೊತೆಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಇಂತಹ ಜಾರಿ ಕ್ರಮಗಳನ್ನು ಎಕ್ಸ್ (ಟ್ವಿಟರ್) ಮತ್ತು ಇನ್‌ಸ್ಟಾಗ್ರಾಮ್‌ನಂತಹ ಸೋಶಿಯಲ್‌ ಮೀಡಿಯಾಗಳ ಮೂಲಕ ಸಾರ್ವಜನಿಕವಾಗಿ ಪ್ರಕಟಿಸುತ್ತಿದೆ.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಕ್ರಿಕೆಟ್ ಮಾತ್ರವಲ್ಲ, ಬಿಸಿನೆಸ್‌ನಲ್ಲೂ ಸಿಕ್ಸರ್, ಕೋಟಿ ಕೋಟಿ ವ್ಯವಹಾರ ಕಟ್ಟಿದ ಭಾರತದ 5 ಕ್ರಿಕೆಟಿಗರು
ಜೂನ್‌ ತಿಂಗಳಲ್ಲಿ ದಾಖಲೆಯ 4 ಲಕ್ಷ ಕಾರುಗಳ ಮಾರಾಟ: ಜಿಗಿದು ಕುಣಿದ ಟಾಟಾ, ಹುಂಡೈ, ಮಹೀಂದ್ರಾಗೆ ಆಘಾತ!