
ಕೆಲವರಿಗೆ ಎಲ್ಲಿ ಅದೃಷ್ಟ ಕುದುರುತ್ತೆ ಎಂದು ಹೇಳಲಾಗದು. ವಿದ್ಯಾಭ್ಯಾಸಕ್ಕೆಂದು ಭಾರತಕ್ಕೆ ಬಂದ ಯುವಕ ಕನ್ನಡ ನೆಲದಲ್ಲಿ ಅದರಲ್ಲೂ ಐಟಿ ಹಬ್ ಗ್ಲೋಬಲ್ ಸಿಟಿ ಎಂದೆಲ್ಲಾ ಖ್ಯಾತಿ ಗಳಿಸಿರುವ ಬೆಂಗಳೂರಿಗೆ ಬಂದು ಉದ್ಯಮಿಯಾಗಿ ಬದಲಾಗಿದ್ದು, ವಿದ್ಯಾರ್ಥಿಯಿಂದ ಉದ್ಯಮಿಯಾಗುವವರೆಗಿನ ಅವರ ರೋಚಕ ಪ್ರಯಾಣದ ಕತೆ ಇಲ್ಲಿದೆ.
ಫ್ರಾನ್ಸ್‌ನ 22 ವರ್ಷದ ನಿಕೋಲಸ್ ಗ್ರೊಸೆಮಿ ಭಾರತದಲ್ಲಿ ಸ್ನಾತಕೋತ್ತರ ಪದವಿ ಪಡೆಯುವುದಕ್ಕಾಗಿ ದೇಶ ತೊರೆದು ಭಾರತಕ್ಕೆ ಬಂದರು. ಆದರೆ ದೇಶ ತೊರೆದ ತಾನು ಒಂದು ಆಹಾರ ಉದ್ಯಮವನ್ನು ಆರಂಭಿಸಿ ಕೋಟಿಯೊಡೆಯನಾಗುತ್ತೇನೆ ಎಂಬ ಕಲ್ಪನೆ ಕೂಡ ಅವರಿಗಿರಲಿಲ್ಲ, ಆದರೆ ಅಡುಗೆಯಲ್ಲಿ ಆಸಕ್ತಿಯನ್ನು ಹೊಂದಿದ್ದ ನಿಕೋಲಸ್ ಅವರು ಸಣ್ಣದೊಂದು ತಳ್ಳುಗಾಡಿಯನ್ನು ಇರಿಸಿಕೊಂಡು ತಮ್ಮ ತಾಯಿಯ ಅಡುಗೆ ರೆಸಿಪಿಯಿಂದ ಪ್ರೇರಿತರಾಗಿ ಆಹಾರೋದ್ಯಮದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದೇ ಬಿಟ್ಟರು. ಫ್ರೆಂಚ್‌ನ ಈ ವಿಶೇಷ ರುಚಿಗೆ ಬೆರಗಾದ ಬೆಂಗಳೂರಿಗರು ಅವರ ಕೈ ಹಿಡಿದೇ ಬಿಟ್ಟರು.
ಸಣ್ಣದೊಂದು ಗಾಡಿಯೊಂದರಲ್ಲಿ ಪ್ಯಾರಿಸ್ ಪ್ಯಾನಿನಿ (ಸ್ಯಾಂಡ್ ವಿಚ್, ಪಿಜ್ಜಾ) ತಿನಿಸನ್ನು ತಯಾರಿಸಿ ಮಾರಾಟ ಮಾಡಲು ಆರಂಭಿಸಿದರು. ಇವರ ನಿಜವಾದ ಫ್ರೆಂಚ್ ರುಚಿಯನ್ನು ಹೋಲುವ ಈ ಪ್ಯಾರಿಸ್ ಪ್ಯಾನಿನಿ ಬೆಂಗಳೂರಿನಲ್ಲಿ ಸಾಕಷ್ಟು ಬೇಗನೆ ಜನಪ್ರಿಯತೆ ಪಡೆಯಿತು. ನಗರದ ಆಹಾರ ಹಬ್ಬಗಳಲ್ಲಿಯೂ ಇದು ಸಾಕಷ್ಟು ಜನಪ್ರಿಯತೆ ಪಡೆಯಿತು. ಅಲ್ಲದೇ ಸಣ್ಣದಾಗಿ ಆರಂಭವಾದ ಈ ಆಹಾರೋದ್ಯಮ ಬೃಹದಾಕಾರವಾಗಿ ಬೆಳೆಯಿತು.
ಕಠಿಣ ಪರಿಶ್ರಮ ಹಾಗೂ ಸಮರ್ಪಣೆಯಿಂದ ಪ್ಯಾರಿಸ್ ಪಾನಿನಿ ಕೆಲವೇ ದಿನಗಳಲ್ಲಿ ಬಹು ಮಳಿಗೆಗಳನ್ನು ಹೊಂದಿರುವ 50 ಕೋಟಿಯ ಉದ್ಯಮವಾಗಿ ಹೊರ ಹೊಮ್ಮಿತು. ನಿಕೋಲಸ್ ಅವರ ಈ ಯಶಸ್ಸಿನ ಹಿಂದೆ ಅವರ ಉತ್ಪನ್ನದ ಗುಣಮಟ್ಟ, ಗ್ರಾಹಕರೊಂದಿಗಿನ ಅವರ ಒಡನಾಟವಿದೆ. ಜೊತೆಗೆ ಅವರು ಜನರನ್ನು ಪ್ರತಿಧ್ವನಿಸುವ ಹೆಸರನ್ನೇ ಬ್ರಾಂಡ್ ಆಗಿ ಆಯ್ಕೆ ಮಾಡಿರುವುದು ಅದಕ್ಕೆ ಕಾರಣ.
ವಿದ್ಯಾಭ್ಯಾಸಕ್ಕೆಂದು ಬಂದು ವಿದ್ಯಾರ್ಥಿಯಾಗಿ ಬದಲಾದ ನಿಕೋಲಸ್, ಮಹತ್ವಾಕಾಂಕ್ಷೆ ಇರುವ ಉದ್ಯಮಿಗಳಿಗೆ ಅಮೂಲ್ಯವಾದ ಸಲಹೆಗಳನ್ನು ನೀಡುತ್ತಾರೆ. ಅವರ ಈ ಉದ್ಯಮದಲ್ಲಿ ಯಾವುದಕ್ಕೆ ಎಷ್ಟು ವೆಚ್ಚವಾಗುತ್ತದೆ ಎಂದು ವಿವರಿಸಿರುವ ಅವರು, ಶೇಕಡಾ 28ರಷ್ಟು ಆಹಾರಕ್ಕೆ ವೆಚ್ಚವಾದರೆ ಶೇಕಡಾ 10ರಷ್ಟು ಕಟ್ಟಡದ ಬಾಡಿಗೆಗೆ ಹೋಗುತ್ತದೆ, ಶೇಕಡಾ 15ರಷ್ಟು ಕಾರ್ಮಿಕರ ವೆಚ್ಚ ತಗುಲುತ್ತದೆ ಹಾಗೂ ಆಡಳುತ ನಿರ್ವಹಣೆಗೆ ಶೇಕಡಾ 10ರಷ್ಟು ಹಾಗೂ ಮಾರ್ಕೆಟಿಂಗ್ ಮಾಡುವುದಕ್ಕೆ ಶೇಕಡಾ 5ರಿಂದ 10 ರಷ್ಟು ವೆಚ್ಚವಾಗುತ್ತದೆ. ಹಾಗೂ ಶೇಕಡಾ 15ರಷ್ಟು ಲಾಭಾಂಶ ಬರುತ್ತದೆ ಎಂದು ಹೇಳಿಕೊಂಡಿದ್ದಾರೆ. ವೆಚ್ಚವನ್ನು ಸಮತೋಲನಗೊಳಿಸುವುದರೊಂದಿಗೆ ಉತ್ತಮ ಗುಣಮಟ್ಟವನ್ನು ನೀಡಿದರೆ ಯಶಸ್ಸು ಸಾಧ್ಯ ಎಂಬುದನ್ನು ಅವರು ತೋರಿಸಿದ್ದಾರೆ.
ಸಣ್ಣ ಆಹಾರ ಟ್ರಕ್ ಆಗಿ ಪ್ರಾರಂಭವಾದ ಪ್ಯಾರಿಸ್ ಪಾಣಿನಿ ಈಗ ಬೆಂಗಳೂರು ಜನರ ಪ್ರೀತಿಯ ಬ್ರ್ಯಾಂಡ್ ಆಗಿದ್ದು, ಭಾರತದ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಅಭಿವೃದ್ಧಿ ಹೊಂದುತ್ತಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.