ತೆರಿಗೆ ಉಳಿತಾಯಕ್ಕೆ ಯಾವೆಲ್ಲ ಅವಕಾಶಗಳಿವೆ ಎಂದು ಹುಡುಕೋರಿಗೆ ಸಣ್ಣ ಉಳಿತಾಯ ಯೋಜನೆಗಳು ನೆರವು ನೀಡುತ್ತವೆ. ಸುಕನ್ಯಾ ಸಮೃದ್ಧಿ, ಹಿರಿಯ ನಾಗರಿಕರ ಉಳಿತಾಯ ಯೋಜನೆ ಸೇರಿದಂತೆ ಕೆಲವು ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ರೆ 1.5 ಲಕ್ಷದ ತನಕ ತೆರಿಗೆ ಉಳಿತಾಯ ಮಾಡಬಹುದು.
Business Desk: ದುಡಿಮೆಯಲ್ಲಿ ಒಂದಿಷ್ಟು ಉಳಿತಾಯ ಮಾಡಬೇಕು ಎಂಬ ಯೋಚನೆ ಎಲ್ಲರಿಗೂ ಇರುತ್ತೆ. ಆದರೆ, ಕೆಲವರು ಯೋಚನೆಯನ್ನು ಕಾರ್ಯರೂಪಕ್ಕೆ ತಂದ್ರೆ, ಇನ್ನೊಂದಿಷ್ಟು ಜನರಿಗೆ ಕಾರಣಾಂತರಗಳಿಂದ ಅದು ಸಾಧ್ಯವಾಗೋದಿಲ್ಲ. ಆದ್ರೆ ತೆರಿಗೆ ಪಾವತಿಸೋರಿಗೆ ಉಳಿತಾಯ ಮಾಡೋದು ಅನಿವಾರ್ಯ. ಏಕೆಂದರೆ ಕೆಲವು ಯೋಜನೆಗಳಲ್ಲಿ ಹೂಡಿಕೆ ಮಾಡಿದ್ರೆ ಒಂದಿಷ್ಟು ತೆರಿಗೆ ಉಳಿತಾಯ ಮಾಡಬಹುದು. ಹೀಗಾಗಿ ಇಂದು ಉಳಿತಾಯಕ್ಕೂ ಜನರು ಮಹತ್ವ ನೀಡಲು ಪ್ರಾರಂಭಿಸಿದ್ದಾರೆ. ತೆರಿಗೆ ಉಳಿತಾಯ ಮಾಡೋದು ಹೇಗೆ ಎಂದು ತಲೆಕೆಡಿಸಿಕೊಂಡವರಿಗೆ ಕೆಲವು ಸಣ್ಣ ಉಳಿತಾಯ ಯೋಜನೆಗಳು ಹಣ ಉಳಿತಾಯದ ಜೊತೆಗೆ ತೆರಿಗೆ ಉಳಿಸಲು ಕೂಡ ನೆರವು ನೀಡುತ್ತವೆ. ಈ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ರೆ 1.5ಲಕ್ಷ ರೂ. ತನಕ ತೆರಿಗೆ ಉಳಿತಾಯ ಮಾಡಬಹುದು. ಹಾಗಾದ್ರೆ ತೆರಿಗೆ ಉಳಿತಾಯಕ್ಕೆ ನೆರವು ನೀಡುವ ಸಣ್ಣ ಉಳಿತಾಯ ಯೋಜನೆಗಳು ಯಾವುವು? ಇಲ್ಲಿದೆ ಮಾಹಿತಿ.
1.ಸುಕನ್ಯಾ ಸಮೃದ್ಧಿ ಯೋಜನೆ (ಎಸ್ಎಸ್ ಎ): ಹೆಣ್ಣು ಮಗುವಿನ ಪೋಷಕರು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ವಾರ್ಷಿಕ ಶೇ.8.2ರಷ್ಟು ಬಡ್ಡಿ ಸಿಗುತ್ತದೆ. ನೀವು ಈ ಯೋಜನೆಯಲ್ಲಿ ಕನಿಷ್ಠ 250ರೂ.ನಿಂದ ಹೂಡಿಕೆ ಪ್ರಾರಂಭಿಸಬಹುದು. ಇನ್ನು ಗರಿಷ್ಠ 1.5 ಲಕ್ಷ ರೂ. ತನಕ ಹೂಡಿಕೆ ಮಾಡಲು ಅವಕಾಶವಿದೆ. ಇನ್ನು ಈ ಹೂಡಿಕೆಯಿಂದ ಬಂದ ಬಡ್ಡಿಗೆ ಕೂಡ ಯಾವುದೇ ತೆರಿಗೆ ವಿಧಿಸಲಾಗೋದಿಲ್ಲ. ಶಿಕ್ಷಣ ಅಥವಾ ಹೆಣ್ಣುಮಗುವಿನ ಮದುವೆ ಉದ್ದೇಶಕ್ಕಾಗಿ ಪೋಷಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. 15 ವರ್ಷಗಳ ತನಕ ಪೋಷಕರು ಮಗುವಿನ ಹೆಸರಿನಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡಬೇಕು. ಹೆಣ್ಣುಮಗುವಿಗೆ 21 ವರ್ಷ ತುಂಬಿದಾಗ ಈ ಯೋಜನೆಯಲ್ಲಿನ ಹಣ ವಿತ್ ಡ್ರಾ ಮಾಡಬಹುದು.18ನೇ ವಯಸ್ಸಲ್ಲಿ ಅಧ್ಯಯನಕ್ಕಾಗಿ 50% ಹಿಂಪಡೆಯಲು ಅವಕಾಶವಿದೆ. ಸಮೀಪದ ಅಂಚೆ ಕಚೇರಿ ಅಥವಾ ಯಾವುದೇ ಬ್ಯಾಂಕಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಖಾತೆ ತೆರೆಯಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಆದಾಯ ತೆರಿಗೆಯ ಸೆಕ್ಷನ್ 80C ಅಡಿಯಲ್ಲಿ 1.50 ಲಕ್ಷ ರೂ. ರವರೆಗೆ ತೆರಿಗೆ ವಿನಾಯ್ತಿ ಪಡೆಯಲು ಅವಕಾಶವಿದೆ.
ನಿಮ್ಮ ಹೆಣ್ಣುಮಗುವಿಗೆ ಇದಕ್ಕಿಂತ ಉತ್ತಮ ಉಡುಗೊರೆ ಬೇರಿಲ್ಲ;ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಆಕೆ ಭವಿಷ್ಯ ಭದ್ರ
2.ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್ ಸಿಎಸ್ಎಸ್): ಈ ಯೋಜನೆ ಐದು ವರ್ಷಗಳ ಲಾಕ್ -ಇನ್ ಅವಧಿ ಹೊಂದಿದೆ. ಅಲ್ಲದೆ, ಈ ಯೋಜನೆ 60 ವರ್ಷ ಮೇಲ್ಪಟ್ಟ ಹೂಡಿಕೆದಾರರಿಗೆ ಮಾತ್ರ ಅನ್ವಯಿಸಲಿದೆ. ಇನ್ನು ಎಸ್ ಸಿಎಸ್ಎಸ್ ನಲ್ಲಿ ಗರಿಷ್ಠ 30 ಲಕ್ಷ ರೂ. ತನಕ ಹೂಡಿಕೆ ಮಾಡಬಹುದು. ಇನ್ನು ಕನಿಷ್ಠ ಒಂದು ಸಾವಿರ ರೂ, ಹೂಡಿಕೆ ಮಾಡಬೇಕು. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಸಿ ಅಡಿಯಲ್ಲಿ ಗರಿಷ್ಠ 1.5ಲಕ್ಷ ರೂ. ತನಕ ತೆರಿಗೆ ಕಡಿತದ ಪ್ರಯೋಜನ ಪಡೆಯಲು ಅವಕಾಶವಿದೆ.
3.ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್ ಎಸ್ ಸಿ): ಈ ಯೋಜನೆ ಐದು ವರ್ಷಗಳ ಅವಧಿಯದ್ದಾಗಿದೆ. ಈ ಯೋಜನೆಯಲ್ಲಿ ಕನಿಷ್ಠ 1 ಸಾವಿರ ರೂ. ಹೂಡಿಕೆ ಮಾಡಬಹುದು. ಪ್ರಸ್ತುತ ಈ ಯೋಜನೆಗೆ ಶೇ.7.7 ಬಡ್ಡಿದರ ನೀಡಲಾಗುತ್ತಿದೆ. ಇನ್ನು ಈ ಯೋಜನೆಯನ್ನು ಅವಧಿಗೆ ಮುನ್ನ ಕ್ಲೋಸ್ ಮಾಡಲು ಅವಕಾಶವಿಲ್ಲ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಕೂಡ 1.5 ಲಕ್ಷ ರೂ. ತನಕ ತೆರಿಗೆ ವಿನಾಯ್ತಿ ಪಡೆಯಬಹುದು.
4.ರಾಷ್ಟ್ರೀಯ ಉಳಿತಾಯ ಯೋಜನೆ (ಎನ್ ಎಸ್ ಸಿ): ಎನ್ ಎಸ್ ಸಿ ಐದು ವರ್ಷಗಳ ಅವಧಿಯದ್ದಾಗಿದೆ. ಇದರಲ್ಲಿ ಹೂಡಿಕೆ ಮಾಡಬಹುದಾದ ಕನಿಷ್ಠ ಮೊತ್ತ ಒಂದು ಸಾವಿರ ರೂ. ಪ್ರಸ್ತುತ ಎನ್ ಎಸ್ ಸಿಯಲ್ಲಿನ ಹೂಡಿಕೆಗೆ ಶೇ.7.7ರಷ್ಟು ಬಡ್ಡಿದರವಿದೆ. ಬಡ್ಡಿಯನ್ನು ಮೆಚ್ಯೂರ್ ಆದ ಬಳಿಕ ಪಾವತಿಸಲಾಗುತ್ತದೆ. ಇನ್ನು ಅವಧಿಗೂ ಮುನ್ನ ಈ ಯೋಜನೆಯನ್ನು ಕ್ಲೋಸ್ ಮಾಡಲು ಅವಕಾಶವಿಲ್ಲ. ನಿಧನ ಸೇರಿದಂತೆ ಕೆಲವು ಸಂದರ್ಭಗಳಲ್ಲಿ ಮಾತ್ರ ಕ್ಲೋಸ್ ಮಾಡಬಹುದು.
ಷೇರು ಮಾರುಕಟ್ಟೆಯಲ್ಲಿ ಕೋಲಾಹಲ; ಕುಸಿದ ಸೆನ್ಸೆಕ್ಸ್, ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ನಷ್ಟ
5. ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್): ಇದು ವೇತನ ಪಡೆಯುವ ಹಾಗೂ ಸ್ವ ಉದ್ಯೋಗ ಹೊಂದಿರುವ ಎರಡೂ ವರ್ಗದ ಜನರು ಹೂಡಿಕೆಗೆ ನೆಚ್ಚಿಕೊಂಡ ಜನಪ್ರಿಯ ಯೋಜನೆಗಳಲ್ಲಿ ಒಂದು. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ವಾರ್ಷಿಕ ಶೇ.7.1ರಷ್ಟು ಬಡ್ಡಿ ಸಿಗುತ್ತದೆ. ಇದರ ಬಡ್ಡಿಯನ್ನು ಪ್ರತಿ ತ್ರೈಮಾಸಿಕದಲ್ಲಿ ಹಣಕಾಸು ಸಚಿವರು ಬದಲಾಯಿಸುತ್ತಾರೆ. ಈ ಯೋಜನೆ 15 ವರ್ಷಗಳ ಅವಧಿಯದ್ದಾಗಿದ್ದು, ಕನಿಷ್ಠ500ರೂ.ನಿಂದ ಹಿಡಿದು ಗರಿಷ್ಠ 1.5ಲಕ್ಷ ರೂ. ತನಕ ಪ್ರತಿ ಹಣಕಾಸು ಸಾಲಿನಲ್ಲಿ ಹೂಡಿಕೆ ಮಾಡಬಹುದು.
6.ಅವಧಿ ಠೇವಣಿ: ಇದು ಐದು ವರ್ಷಗಳ ಅವಧಿಯದ್ದಾಗಿದೆ. ಇದರಲ್ಲಿ ಕನಿಷ್ಠ ಒಂದು ಸಾವಿರ ರೂ. ಹೂಡಿಕೆ ಮಾಡೋದು ಅಗತ್ಯ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80 ಸಿ ಅಡಿಯಲ್ಲಿ 1.5 ಲಕ್ಷ ರೂ. ತನಕ ತೆರಿಗೆ ಉಳಿತಾಯ ಮಾಡಬಹುದು.