ಕೇಂದ್ರ ಸರ್ಕಾರದ ಫ್ಲೋಟಿಂಗ್ ರೇಟ್ ಉಳಿತಾಯ ಬಾಂಡ್ ಗಳಿಗೆ ಆರ್ ಬಿಐ ಶೇ.7.03 ಬಡ್ಡಿದರ ಘೋಷಿಸಿದೆ.ಈ ಬಡ್ಡಿದರ ಇಂದಿನಿಂದ (ಮೇ 7) ನವೆಂಬರ್ 6ರ ತನಕ ಅಂದರೆ ಅರ್ಧ ವರ್ಷಕ್ಕೆ ಅನ್ವಯಿಸಲಿದೆ.
ನವದೆಹಲಿ (ಮೇ 7): ಕೇಂದ್ರ ಸರ್ಕಾರದ ಫ್ಲೋಟಿಂಗ್ ರೇಟ್ ಉಳಿತಾಯ ಬಾಂಡ್ (ಎಫ್ ಆರ್ ಬಿ) 2024ಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಸೋಮವಾರ (ಮೇ 6) ಶೇ.7.03 ಬಡ್ಡಿದರ ಘೋಷಿಸಿದೆ. ಈ ಬಡ್ಡಿದರ ಇಂದಿನಿಂದ (ಮೇ 7) ನವೆಂಬರ್ 6ರ ತನಕ ಅಂದರೆ ಅರ್ಧ ವರ್ಷಕ್ಕೆ ಅನ್ವಯವಾಗಲಿದೆ.ನಿನ್ನೆ ಈ ಬಗ್ಗೆ ಆರ್ ಬಿಐ ಮಾಧ್ಯಮ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಫ್ಲೋಟಿಂಗ್ ರೇಟ್ ಉಳಿತಾಯ ಬಾಂಡ್ ಗಳು ಭದ್ರತಾ ಬಾಂಡ್ ಗಳಾಗಿದ್ದು, ಸ್ಥಿರವಾದ ಕೂಪನ್ ದರ ಹೊಂದಿಲ್ಲ. ಕೂಪನ್ ದರವನ್ನು ಆಗಾಗ ನಿಗದಿಪಡಿಸಲಾಗುತ್ತದೆ. ಎಫ್ ಆರ್ ಬಿ ಬಾಂಡ್ ಗಳು 182 ದಿನಗಳ ಅವಧಿಯ ಟ್ರೆಷರ್ ಬಿಲ್ ಗಳಾಗಿದ್ದು, ಕಳೆದ ಮೂರು ಹರಾಜುಗಳಲ್ಲಿ ಗಳಿಸಿದ ಸರಾಸರಿ ಮೂಲದರಕ್ಕೆ ಸಮವಾಗಿರುತ್ತವೆ. ಜೊತೆಗೆ ಹರಾಜಿನ ಮೂಲಕ ಗಳಿಸಿದ ದರ ಆಧರಿಸಿ ಕೂಡ ನಿರ್ಧರಿಸಲಾಗುತ್ತದೆ. ಕೇಂದ್ರ ಸರ್ಕಾರ 2020ರ ಜುಲೈ 1ರಂದು ಫ್ಲೋಟಿಂಗ್ ರೇಟ್ ಉಳಿತಾಯ ಬಾಂಡ್ ಪ್ರಾರಂಭಿಸಿತು.
ಯಾರು ಹೂಡಿಕೆ ಮಾಡಬಹುದು?
ಭಾರತದ ಯಾವುದೇ ನಾಗರಿಕ ಇದರಲ್ಲಿ ಹೂಡಿಕೆ ಮಾಡಬಹುದು. ಹಿಂದೂ ಅವಿಭಜಿತ ಕುಟುಂಬ ಕೂಡ ಇದರಲ್ಲಿ ಹೂಡಿಕೆ ಮಾಡಬಹುದು. ಆದ್ರೆ ಅನಿವಾಸಿ ಭಾರತೀಯರಿಗೆ (ಎನ್ಆರ್ ಐಗಳು) ಮಾತ್ರ ಈ ಬಾಂಡ್ ಗಳಲ್ಲಿ ಹೂಡಿಕೆ ಮಾಡಲು ಅವಕಾಶವಿಲ್ಲ.
ಸರ್ಕಾರದ ಬಿಗ್ ಅನೌನ್ಸ್‌ಮೆಂಟ್, 40 ಸಾವಿರ ಕೋಟಿಯ ಬಾಂಡ್ Buy Back ಮಾಡಲಿದೆ ಆರ್‌ಬಿಐ!
ಬಾಂಡ್ ಅವಧಿ ಎಷ್ಟು?
ಫ್ಲೋಟಿಂಗ್ ರೇಟ್ ಉಳಿತಾಯ ಬಾಂಡ್ ಏಳು ವರ್ಷಗಳ ಅವಧಿಯನ್ನು ಹೊಂದಿದೆ. ಈ ಅವಧಿ ಪೂರ್ಣಗೊಂಡ ಬಳಿಕವಷ್ಟೇ ಬಾಂಡ್ ಗಳಲ್ಲಿ ಹೂಡಿಕೆ ಮಾಡಿದ ಹಣ ಮರುಪಾವತಿ ಮಾಡಲಾಗುತ್ತದೆ. ಹಾಗೆಯೇ ಮೆಚ್ಯುರಿಟಿ ಅವಧಿ ಮುಗಿದ ಬಳಿಕ ಈ ಹೂಡಿಕೆಗೆ ಯಾವುದೇ ಬಡ್ಡಿ ಸಂದಾಯ ಮಾಡೋದಿಲ್ಲ. ಆದರೆ, ನಿರ್ದಿಷ್ಟ ವರ್ಗದ ಹಿರಿಯ ನಾಗರಿಕರಿಗೆ ಅವಧಿಗೂ ಮುನ್ನ ವಿತ್ ಡ್ರಾ ಮಾಡಲು ಅವಕಾಶ ಕಲ್ಪಿಸಲಾಗಿದೆ. 60-70 ವಯಸ್ಸಿನವರಿಗೆ 6 ವರ್ಷ, 70-80 ವರ್ಷದವರಿಗೆ 5 ವರ್ಷ ಹಾಗೂ 80 ಹಾಗೂ ಅದಕ್ಕಿಂತ ಮೇಲ್ಪಟ್ಟವರಿಗೆ 4 ವರ್ಷಗಳ ಅವಧಿಯಾದ ಬಳಿಕ ವಿತ್ ಡ್ರಾ ಮಾಡಲು ಅವಕಾಶವಿದೆ.
ಆರು ತಿಂಗಳಿಗೊಮ್ಮೆ ಬಡ್ಡಿ ಪಾವತಿ
ಪ್ರತಿ ಆರು ತಿಂಗಳಿಗೊಮ್ಮೆ ಫ್ಲೋಟಿಂಗ್ ರೇಟ್ ಉಳಿತಾಯ ಬಾಂಡ್ ಗಳಿಗೆ ಬಡ್ಡಿ ಪಾವತಿಸಲಾಗುತ್ತದೆ. ಫ್ಲೋಟಿಂಗ್ ರೇಟ್ ಬಾಂಡ್ ಗಳ ಬಡ್ಡಿದರ ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರಕ್ಕೆ (NSC) ಲಿಂಕ್ ಆಗಿರುತ್ತದೆ. ಎನ್ ಎಸ್ ಸಿ ಬಡ್ಡಿದರದಲ್ಲಿ ಬದಲಾವಣೆಯಾದಾಗ ಬಾಂಡ್ ಗಳ ಬಡ್ಡಿದರಲ್ಲೂ ಬದಲಾವಣೆಯಾಗುತ್ತದೆ. ಎನ್ ಎಸ್ ಸಿ ಬಡ್ಡಿಗಿಂತ ಈ ಬಾಂಡ್ ಗಳ ಬಡ್ಡಿದರ ಯಾವಾಗಲೂ 35 ಬೇಸಿಕ್ ಪಾಯಿಂಟ್ ಗಳಷ್ಟು ಹೆಚ್ಚಿರುತ್ತದೆ.
ಷೇರು ಮಾರುಕಟ್ಟೆಯಲ್ಲಿ ಕೋಲಾಹಲ; ಕುಸಿದ ಸೆನ್ಸೆಕ್ಸ್, ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ನಷ್ಟ
ಎಷ್ಟು ಹೂಡಿಕೆ ಮಾಡಬಹುದು?
ಫ್ಲೋಟಿಂಗ್ ರೇಟ್ ಉಳಿತಾಯ ಬಾಂಡ್ ಗಳಲ್ಲಿ ಕನಿಷ್ಠ ಹೂಡಿಕೆ 1000ರೂ. ಆಗಿದ್ದು, ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲ. ನಗದು ರೂಪದಲ್ಲಿ ಈ ಬಾಂಡ್ ಖರೀದಿಗೆ 20 ಸಾವಿರ ರೂ. ಮಿತಿ ನಿಗದಿಪಡಿಸಲಾಗಿದೆ. ಡ್ರಾಫ್ಟ್, ಚೆಕ್ ಅಥವಾ ಇತರ ಯಾವುದೇ ಎಲೆಕ್ಟ್ರಾನಿಕ್ ರೂಪದಲ್ಲಿ ಬಾಂಡ್ ಖರೀದಿಸಲು ಅವಕಾಶವಿದೆ. ಎಸ್ ಬಿಐ ಸೇರಿದಂತೆ ಸರ್ಕಾರಿ ಬ್ಯಾಂಕುಗಳು, ಐಡಿಬಿಐ (IDBI), ಐಸಿಐಸಿಐ (ICICI), ಎಚ್ ಡಿಎಫ್ ಸಿ (HDFC), ಎಕ್ಸಿಸ್ ( Axis) ಮುಂತಾದ ಖಾಸಗಿ ಬ್ಯಾಂಕುಗಳಲ್ಲಿ ಆರ್ ಬಿಐ ಫ್ಲೋಟಿಂಗ್ ರೇಟ್ ಉಳಿತಾಯ ಬಾಂಡ್ ಖರೀದಿಸಬಹುದು.