ಹೊಸ ವರ್ಷದ ಸಂಭ್ರಮಾಚರಣೆಗೆ ಜನರಿಗೆ ಆನ್ ಲೈನ್ ಫುಡ್ ಡೆಲಿವರಿ ಆ್ಯಪ್ಗಳು ಸಾಥ್ ನೀಡಿವೆ. ಸ್ವಿಗ್ಗಿ ನೀಡಿರುವ ಮಾಹಿತಿ ಪ್ರಕಾರ 2022ರ ಡಿಸೆಂಬರ್ 31ರಂದು ದೇಶಾದ್ಯಂತ 3.5 ಲಕ್ಷ ಬಿರಿಯಾನಿ ಹಾಗೂ 2.5ಲಕ್ಷ ಪಿಜ್ಜಾ ಡೆಲಿವರಿ ಮಾಡಲಾಗಿದೆ. ಅಂದ್ರೆ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಬಿರಿಯಾನಿಗೆ ಭಾರೀ ಬೇಡಿಕೆ ಕಂಡುಬಂದಿದೆ.
ನವದೆಹಲಿ (ಜ.5): ಕಳೆದ ವಾರಾಂತ್ಯದಲ್ಲಿ ಜಗತ್ತಿನಾದ್ಯಂತ ಹೊಸ ವರ್ಷವನ್ನು ಸಂಭ್ರಮದಿಂದ ಬರ ಮಾಡಿಕೊಳ್ಳಲಾಗಿದೆ. ಸ್ನೇಹಿತರು ಹಾಗೂ ಬಂಧುಗಳ ಜೊತೆಗೂಡಿ ಹೊಸ ವರ್ಷವನ್ನು ಸಂಭ್ರಮದಿಂದ ಬರ ಮಾಡಿಕೊಂಡಿದ್ದಾರೆ. ಹೊಸ ಕನಸು ಹಾಗೂ ಗುರಿಗಳೊಂದಿಗೆ ಹೊಸ ವರ್ಷಕ್ಕೆ ಸ್ವಾಗತ ಕೋರಿದ್ದಾರೆ. ಅದಕ್ಕಾಗಿ ಏರ್ಪಡಿಸಿದ್ದ ಪಾರ್ಟಿಗಳಿಂದ ಫುಡ್ ಡೆಲಿವರಿ ಆ್ಯಪ್ಗಳಿಗೆ ಸಿಕ್ಕಾಪಟ್ಟೆ ವ್ಯಾಪಾರವಾಗಿದೆ. ಅದರಲ್ಲೂ ಬಹುತೇಕ ಜನರು ಪಿಜ್ಜಾ ಹಾಗೂ ಬಿರಿಯಾನಿ ಆರ್ಡರ್ ಮಾಡಿದ್ದರು. ಈ ಎರಡೂ ಖಾದ್ಯಗಳಿಗೆ ಭಾರೀ ಸಂಖ್ಯೆಯಲ್ಲಿ ಆರ್ಡರ್ ಗಳು ಬಂದಿರೋದು ಸ್ವಿಗ್ಗಿ ಹಾಗೂ ಝೊಮ್ಯಾಟೋ ದಾಖಲೆಗಳಿಂದ ತಿಳಿದು ಬಂದಿದೆ. ಸ್ವಿಗ್ಗಿ ನೀಡಿರುವ ಮಾಹಿತಿ ಪ್ರಕಾರ 2022ರ ಡಿಸೆಂಬರ್ 31ರಂದು ಅದು ದೇಶಾದ್ಯಂತ 3.5 ಲಕ್ಷ ಬಿರಿಯಾನಿ ಹಾಗೂ 2.5ಲಕ್ಷ ಪಿಜ್ಜಾ ಡೆಲಿವರಿ ಮಾಡಿದೆ. ಹೌದು, ಅಧಿಕ ಜನರು ಬಿರಿಯಾನಿಗೆ ಆರ್ಡರ್ ಮಾಡಿದ್ದಾರೆ. ಸ್ವಿಗ್ಗಿ ನೀಡಿರುವ ಮಾಹಿತಿ ಅನ್ವಯ ಹೈದರಾಬಾದಿ ಬಿರಿಯಾನಿಗಾಗಿಯೇ ಶೇ.75.4 ಆರ್ಡರ್ ಗಳು ಬಂದಿವೆ. ಬಳಿಕ ಲಕ್ನೋವಿ ಬಿರಿಯಾನಿಗೆ ಶೇ. 14.2 ಮತ್ತು ಕೋಲ್ಕತ್ತಾ ಬಿರಿಯಾನಿಗೆ ಶೇ. 10.4 ಆರ್ಡರ್‌ಗಳು ಸ್ವಿಗ್ಗಿಗೆ ಬಂದಿವೆ. ಶನಿವಾರ ಸಂಜೆ 7.20ರ ವೇಳೆಗೆ 1.65 ಲಕ್ಷ ಬಿರಿಯಾನಿ ಆರ್ಡರ್‌ಗಳನ್ನು ಸ್ವಿಗ್ಗಿ ಜನರಿಗೆ ತಲುಪಿಸಿದೆ. ಹೈದರಾಬಾದ್‌ನ ಟಾಪ್ ಬಿರಿಯಾನಿ ಮಾರಾಟ ರೆಸ್ಟೋರೆಂಟ್‌ಗಳಲ್ಲಿ ಒಂದಾಗಿರುವ ಬವರ್ಚಿ, 2021 ರ ಹೊಸ ವರ್ಷದ ಹಿಂದಿನ ದಿನದಂದು ನಿಮಿಷಕ್ಕೆ ಎರಡು ಬಿರಿಯಾನಿಗಳನ್ನು ವಿತರಿಸಿದೆ ಮತ್ತು 2022 ಡಿಸೆಂಬರ್ 31ಕ್ಕೆ ಗ್ರಾಹಕರ ಬೇಡಿಕೆಯನ್ನು ಪೂರೈಸಲು 15 ಟನ್ ಬಿರಿಯಾನಿಯನ್ನು ಸಿದ್ಧಪಡಿಸಿತ್ತು ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.
61,287 ಪಿಜ್ಜಾ ವಿತರಣೆ
ಡೋಮಿನೊಸ್ 61,287 ಪಿಜ್ಜಾ ಗಳನ್ನು ವಿತರಿಸಿದೆ. ಇನ್ನು ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಲ್ಲಿ ಜನರು 5,920 ಈರುಳ್ಳಿ ಪಿಜ್ಜಾಗಳು, 7,622 ಈರುಳ್ಳಿ ಕಚೋರಿಗಳು, 5,498 ಈರುಳ್ಳಿ ಉತ್ತಪ್ಪಗಳು, 9,692 ಈರುಳ್ಳಿ ದೋಸೆಗಳು, 6,357 ಈರುಳ್ಳಿ ಪರಾಠಗಳನ್ನು ಕೂಡ ಜನರು ಆರ್ಡರ್ ಮಾಡಿದ್ದಾರೆ.
ಭಾರತದ ಸುರಕ್ಷಿತ ಬ್ಯಾಂಕ್ ಗಳು ಯಾವುವು? ಇಲ್ಲಿದೆ ನೋಡಿ ಆರ್ ಬಿಐ ಲಿಸ್ಟ್
ಚಿಪ್ಸ್ ಗೆ ಬೇಡಿಕೆ
ಹೊಸ ವರ್ಷದ ಸಂಭ್ರಮಾಚರಣೆ ದಿನ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಲ್ಲಿ 1.76 ಲಕ್ಷ ಚಿಪ್ಸ್ ಪ್ಯಾಕೆಟ್ ಗಳನ್ನು ಕೂಡ ಆರ್ಡರ್ ಮಾಡಲಾಗಿದೆ.
2,757 ಪ್ಯಾಕೆಟ್ ಕಾಂಡೋಮ್ಸ್ ವಿತರಣೆ
ಬರೀ ಆಹಾರ ವಸ್ತುಗಳಿಗಾಗಿ ಮಾತ್ರ ಜನರು ಆರ್ಡರ್ ಮಾಡಿಲ್ಲ. ಬದಲಿಗೆ ಕಾಂಡೋಮ್ಸ್ ಆರ್ಡರ್ ಕೂಡ ಮಾಡಿದ್ದಾರೆ. ಸ್ವಿಗ್ಗಿ ಇನ್‌ಸ್ಟಾಮಾರ್ಟ್ 2,757 ಡುರೆಕ್ಸ್ ಕಾಂಡೋಮ್ಸ್ ಪ್ಯಾಕೆಟ್ ಗಳನ್ನು ಡೆಲಿವರಿ ಮಾಡಿದೆ.
ಕಿಚಡಿಗೆ ಬೇಡಿಕೆ
ಭಾರತದಾದ್ಯಂತ 12,344 ಜನರು ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕಿಚಡಿ (Khichdis) ಆರ್ಡರ್ ಮಾಡಿದ್ದಾರೆ. ಇನ್ನು ಇಟಲಿಯನ್ ಹಾಗೂ ಕೊರಿಯಾ ಫುಡ್ ಗಳಿಗೆ ಕೂಡ ಆರ್ಡರ್ (Order) ಮಾಡಲಾಗಿದೆ.
ಜಾಗತಿಕ ವಿಮಾನ ನಿಲ್ದಾಣಗಳಲ್ಲಿ ಬೆಂಗಳೂರು ಏರ್‌ಪೋರ್ಟ್‌ಗೆ 2ನೇ ಸ್ಥಾನ..!
ಸ್ವಿಗ್ಗಿ (Swiggy) ಹಾಗೂ ಝೊಮ್ಯಾಟೋ ( Zomato) ತ್ವರಿತ ಸೇವೆಗಳಲ್ಲಿ ಕೂಡ ಹೆಚ್ಚಳವಾಗಿದ್ದು, ಹಾಲು (Milk), ಸೋಡ (soda), ಟಾನಿಕ್ ವಾಟರ್ (Tonic water), ಕೋಲ್ಡ್ ಡ್ರಿಂಕ್ಸ್ (Cold drinks) ಹಾಗೂ ಮೊಸರಿಗೆ (Curd)ಕೂಡ ಆರ್ಡರ್ ಹೆಚ್ಚಾಗಿ ಇತ್ತು.ಆನ್ ಲೈನ್ ಫುಡ್ ಡೆಲಿವರಿ ಆ್ಯಪ್ಗಳಿಗೆ ಕೋವಿಡ್ -19 ಬಳಿಕ ಬೇಡಿಕೆ ಇನ್ನಷ್ಟು ಹೆಚ್ಚಿದೆ. ಜನರು ರೆಸ್ಟೋರೆಂಟ್ ಗಳು ಅಥವಾ ಸೂಪರ್ ಮಾರ್ಕೆಟ್ ಗಳಿಗೆ ಹೋಗದೆ ಮನೆಯಲ್ಲೇ ಕುಳಿತು ಆಹಾರ ಸೇವಿಸಲು ಅಥವಾ ಅಗತ್ಯ ವಸ್ತುಗಳನ್ನು ಖರೀದಿಸಲು ಇಷ್ಟಪಡುತ್ತಿದ್ದಾರೆ. ಇದೇ ಕಾರಣಕ್ಕೆ ಏನಾದ್ರೂ ತಿನ್ನುವ ಅಥವಾ ಪಾರ್ಟಿ ಮಾಡುವ ಯೋಚನೆ ಬಂದ ತಕ್ಷಣ ಆನ್ ಲೈನ್ ಆನ್ ಲೈನ್ ಫುಡ್ ಡೆಲಿವರಿ ಆ್ಯಪ್ಗಳ ಮೂಲಕ ಇಷ್ಟವಾದ ಖಾದ್ಯಗಳನ್ನು ಬುಕ್ ಮಾಡುತ್ತಿದ್ದಾರೆ.