
ಲಂಡನ್ (ಜು.13): ದೃಢ ಸಂಕಲ್ಪ, ಆತ್ಮವಿಶ್ವಾಸ ಹಾಗೂ ಕಠಿಣ ಪರಿಶ್ರಮದಿಂದ ಅದೆಷ್ಟೇ ದೊಡ್ಡ ಕನಸನ್ನಾದರೂ ಸಾಕಾರಗೊಳಿಸಬಹುದು ಎಂಬುದಕ್ಕೆ ವೇದಾಂತಾ ಸಂಸ್ಥೆಯ ಮುಖ್ಯಸ್ಥ ಅನಿಲ್ ಅಗರ್ವಾಲ್ ಅತ್ಯುತ್ತಮ ನಿದರ್ಶನ. ಬಹುತೇಕರಿಗೆ ಈ ವಿಷಯ ಗೊತ್ತಿರಲಿಕ್ಕಿಲ್ಲ, ಲಂಡನ್ ಷೇರು ವಿನಿಮಯ ಕೇಂದ್ರದಲ್ಲಿ ಸಂಸ್ಥೆಯೊಂದನ್ನು ಲಿಸ್ಟ್ ಮಾಡಿದ ಮೊಟ್ಟ ಮೊದಲ ಭಾರತೀಯ ಅನಿಲ್ ಅಗರ್ವಾಲ್ ಅನಿಲ್ ಅಗರ್ವಾಲ್ ಅವರ ವೇದಾಂತಾ ಸಂಸ್ಥೆ ಲಂಡನ್ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ 2003ರಲ್ಲಿ ಲಿಸ್ಟ್ ಆಗಿತ್ತು. ಅದು ಹೇಗೆ ಸಾಧ್ಯವಾಯಿತು? ಆ ಜರ್ನಿ ಹೇಗಿತ್ತು? ಎಂಬ ಸ್ಫೂರ್ತಿದಾಯಕ ಕಥೆಯನ್ನು ಟ್ವಿಟರ್ ನಲ್ಲಿ ಅನಿಲ್ ಅಗರ್ವಾಲ್ ಹಂಚಿಕೊಂಡಿದ್ದಾರೆ. ಬಿಹಾರದ ಸಣ್ಣ ಹಳ್ಳಿಯಿಂದ ಪ್ರಸ್ತುತ ಲಂಡನ್ ನಲ್ಲಿ ನೆಲೆಗೊಳ್ಳುವ ತನಕ ಅನಿಲ್ ಅಗರ್ವಾಲ್ ಸವೆಸಿದ ಹಾದಿ ಹೂವಿನಿಂದ ಕೂಡಿರಲಿಲ್ಲ. ಬದಲಿಗೆ ಅದೆಷ್ಟೋ ಕಲ್ಲು, ಮುಳ್ಳುಗಳು, ಅಡೆತಡೆಗಳು ಎದುರಾಗಿದ್ದವು. ಆದರೆ, ಅವೆಲ್ಲವನ್ನೂ ದೃಢಸಂಕಲ್ಪ, ಪರಿಶ್ರಮ ಹಾಗೂ ತಾಳ್ಮೆಯಿಂದ ಎದುರಿಸಿದ ಅನಿಲ್ ಅಗರ್ವಾಲ್, ಇಂದು ಕಾರ್ಪೊರೇಟ್ ಜಗತ್ತಿನ ಪ್ರಖ್ಯಾತ ವ್ಯಕ್ತಿಗಳಲ್ಲಿ ಒಬ್ಬರಾಗಿ ಬೆಳೆದು ನಿಂತಿದ್ದಾರೆ.
ರಾತ್ರೋರಾತ್ರಿ ನಿರ್ಧಾರ
ವೇದಾಂತಾ ಸಂಸ್ಥೆಯನ್ನು (Vedanta Resources Ltd.) ಲಂಡನ್ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ(LSE) ಲಿಸ್ಟ್ (List) ಮಾಡಬೇಕು ಎಂಬ ದೊಡ್ಡ ಕನಸನ್ನು ಅನಿಲ್ ಅಗರ್ವಾಲ್ ಕಂಡಿದ್ದರು. ಆ ಕನಸನ್ನು ನನಸಾಗಿಸಿಕೊಳ್ಳಲು ಅವರು ರಾತ್ರೋರಾತ್ರಿ ಲಂಡನ್ ಗೆ (London) ಶಿಫ್ಟ್ ಆಗುವ ನಿರ್ಧಾರ ಕೈಗೊಳ್ಳುತ್ತಾರೆ. ಅವರ ಈ ನಿರ್ಧಾರದ ಹಿಂದೆ ಪತ್ನಿಯ ಬೆಂಬಲ ಕೂಡ ಇತ್ತು. ಅಗರ್ವಾಲ್ ಪತ್ನಿ ಲಂಡನ್ ಗೆ ಹೋಗಲು ಅವರ ಪುತ್ರಿ ಪ್ರಿಯಾ ಅವರ ಶಾಲೆಗೆ ತೆರಳಿ 6 ತಿಂಗಳ ರಜೆ ಕೋರಿದ್ದರು. ಅಂದರೆ 6 ತಿಂಗಳ ಬಳಿಕ ಮರಳಿ ಭಾರತಕ್ಕೆ ಹಿಂತಿರುಗುವ ವಿಶ್ವಾಸ ಪತ್ನಿಯಲ್ಲಿತ್ತು ಎಂದು ಅಂದಿನ ದಿನಗಳನ್ನು ಅನಿಲ್ ಅಗರ್ವಾಲ್ ಮೆಲುಕು ಹಾಕಿದ್ದಾರೆ.
'ನಿಮ್ಮಲ್ಲಿ ಬಹುತೇಕರು ನನ್ನನ್ನು ಲಂಡನ್ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ2003 ರಲ್ಲಿ ಕಂಪನಿಯನ್ನು ಲಿಸ್ಟ್ ಮಾಡಿದ ಮೊದಲ ಭಾರತೀಯ ಎಂದು ತಿಳಿದುಕೊಂಡಿದ್ದೀರಿ.ಇದು ಹೇಗೆ ಆರಂಭವಾಯಿತು ಎಂಬುದನ್ನು ತಿಳಿಯಲು ಈ ಕೆಳಗಿನ ಪೂರ್ತಿ ಕಥೆ ಓದಿ' ಎಂದು ಅನಿಲ್ ಅಗರ್ವಾಲ್ ಟ್ವೀಟ್ ಮಾಡಿದ್ದಾರೆ.
'ಜಾಗತಿಕ ಕಂಪನಿಗಳು ಲಂಡನ್ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ (LSE) ಲಿಸ್ಟ್ ಆಗುತ್ತಿದ್ದವು. ನಾನು ಕೂಡ ಆ ಪಟ್ಟಿಯಲ್ಲಿರಬೇಕು ಎಂದು ಬಯಸಿದ್ದೆ. ನಾನು ದೊಡ್ಡ ಕನಸು ಕಂಡಿದ್ದೆ. ಅದೇ ಕಾರಣಕ್ಕೆ ಲಂಡನ್ ಗೆ ತೆರಳಲು ನಿರ್ಧರಿಸಿದೆ' ಎಂದು ಅಗರ್ವಾಲ್ ಹೇಳಿದ್ದಾರೆ.
ಪತ್ನಿಯನ್ನು ತನ್ನ ಅತೀದೊಡ್ಡ ಸರ್ಪೋರ್ಟ್ ಸಿಸ್ಟ್ಂ (support system) ಎಂದು ಬಣ್ಣಿಸಿರುವ ಅಗರ್ವಾಲ್, 'ಇಂದಿಗೂ ಕೂಡ ಆಕೆ ಯಾವುದೇ ಅನುಮಾನವಿಲ್ಲದೆ ಎಲ್ಲ ವ್ಯವಸ್ಥೆ ಮಾಡುತ್ತಾಳೆ. ಲಂಡನ್ ಗೆ ತೆರಳುವಾಗ ನಾನು ಹೆಚ್ಚೇನೂ ಪ್ಯಾಕ್ ಮಾಡಿಕೊಂಡಿರಲಿಲ್ಲ. ನನ್ನ ತಾಯಿ ನೀಡಿದ ಪರೋಟಗಳು ಹಾಗೂ ತಂದೆಯ ಶಾಲನ್ನು ಅವರ ಆಶೀರ್ವಾದ ಎಂದು ಭಾವಿಸಿ ತೆಗೆದುಕೊಂಡು ಹೋಗಿದ್ದೆ'ಎಂದು ಅವರು ಹೇಳಿದ್ದಾರೆ.
ಲಂಡನ್ ಹಿಥ್ರೋ ವಿಮಾನ ನಿಲ್ದಾಣದಲ್ಲಿ (Heathrow airport) ಇಳಿದ ತಕ್ಷಣ ಅವರಿಗಾದ ಅನುಭವಗಳನ್ನು ಕೂಡ ಹಂಚಿಕೊಂಡಿದ್ದಾರೆ.'ನನಗೆ ಭಿನ್ನವಾದ ಪ್ರಪಂಚಕ್ಕೆ ಕಾಲಿಟ್ಟ ಅನುಭವವಾಯಿತು. ವಿಭಿನ್ನ ಉಚ್ಚಾರಣೆಗಳ ಜನರು, ಚಳಿ ಹಾಗೂ ಮಳೆಯ ವಾತಾವರಣ, ದೊಡ್ಡ ಬಿಳಿ ಕಟ್ಟಡಗಳು. ಈ ಸಮಯದಲ್ಲಿ ನನಗೆ ಪ್ರತಿಯೊಬ್ಬರು ಹೇಳಿದ ಮಾತು ನೆನಪಾಯಿತು- ಚಿಕ್ಕ ಹಕ್ಕಿಗಳು ದೊಡ್ಡ ಆಗಸದಲ್ಲಿ ಹಾರಾಟ ನಡೆಸಲಾರವು. ದೀರ್ಘ ಸಮಯದ ಬಳಿಕ ಮೊದಲ ಬಾರಿಗೆ ನನಗೆ ಭಯದ ಅನುಭವವಾಯಿತು' ಎಂದು ಅಗರ್ವಾಲ್ ವಿವರಿಸಿದ್ದಾರೆ. 'ಲಂಡನ್ ಗೆ ಬಂದಾಗ ನನ್ನ ಬಳಿ ಹೆಚ್ಚೇನೂ ಇರಲಿಲ್ಲ. ಆದ್ರೆ ನನ್ನ ಹೆತ್ತವರ ಆಶೀರ್ವಾದ ಹಾಗೂ ನಂಬಿಕೆ ಇತ್ತು. ಹೀಗಾಗಿ ನನ್ನ ಪತ್ನಿ ಹಾಗೂ ಮಕ್ಕಳ ಜೊತೆಗೆ ಇಲ್ಲಿನ ಪಯಣವನ್ನು ನಾನು ಆನಂದಿಸಿದೆ' ಎಂದಿದ್ದಾರೆ.
Dollar Vs Rupee: ದಿನದಿಂದ ದಿನಕ್ಕೆ ಡಾಲರ್ ಎದುರು ರೂಪಾಯಿ ದುರ್ಬಲ;ಶೀಘ್ರದಲ್ಲೇ 80ರ ಗಡಿ ದಾಟಲಿದೆಯಾ?
ಕಳೆದ ತಿಂಗಳು ಲಂಡನ್ ಆಕ್ಸ್ ಫರ್ಡ್ ಯೂನಿಯನ್ (Oxford Union) ವಿದ್ಯಾರ್ಥಿಗಳ ಜೊತೆಗೆ ಸಂವಹನ ನಡೆಸಿದ ಅನಿಲ್ ಅಗರ್ವಾಲ್, ದೊಡ್ಡ ಕನಸುಗಳನ್ನು ಕಾಣುವಂತೆ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಿದ್ದಾರೆ.'ಬಿಹಾರದ ಸಣ್ಣ ಹಳ್ಳಿಯಿಂದ ಲಂಡನ್ ಸ್ಟಾಕ್ ಎಕ್ಸ್ ಚೇಂಜ್ ತನಕದ ನನ್ನ ಪಯಣ ಅನೇಕ ಕಲಿಕೆಗಳು, ಕಠಿಣ ಪರಿಶ್ರಮ ಹಾಗೂ ಆತ್ಮವಿಶ್ವಾಸದಿಂದ ಕೂಡಿತ್ತು. ಹೆದರಬೇಡಿ (ಏಕೆಂದ್ರೆ ಅದೃಷ್ಟ ಧೈರ್ಯವಂತರಿಗೆ ಮಾತ್ರ ಸಾಥ್ ನೀಡುತ್ತದೆ), ನಮ್ರರಾಗಿರಿ (ನೀವು ಒಳನೋಟ ಹೊಂದಿದ್ರೆ ಮಾತ್ರ ಪ್ರಗತಿ ಸಾಧ್ಯ) ಹಾಗೂ ಹೊಂದಿಕೆಯ ಸ್ವಭಾವ ಹೊಂದಿರಿ ಎಂದು ವಿದ್ಯಾರ್ಥಿಗಳಿಗೆ ಅಗರ್ವಾಲ್ ಕಿವಿಮಾತು ಹೇಳಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.