ಕೋಟ್ಯಾಧೀಶ ಉದ್ಯಮಿ ಸುಬ್ರತಾ ರಾಯ್ ಅಂತ್ಯ ಸಂಸ್ಕಾರಕ್ಕೆ ಬಾರದ ಮಕ್ಕಳು, ಮೊಮ್ಮಗನಿಂದ ಅಗ್ನಿ ಸ್ಪರ್ಶ!

By Suvarna News  |  First Published Nov 17, 2023, 3:16 PM IST

ಭಾರತದ ಶ್ರೀಮಂತ ಉದ್ಯಮಿಗಳಲ್ಲೊಬ್ಬರಾಗಿರುವ ಸಹರಾ ಗ್ರೂಪ್ ಮುಖ್ಯಸ್ಥ ಸುಬ್ರತಾ ರಾಯ್ ಅವರ ಅಂತ್ಯಸಂಸ್ಕಾರ ನಿನ್ನೆ ನಡೆದಿದೆ. ಆದರೆ, ಇದರಲ್ಲಿ ಅವರ ಮಕ್ಕಳು ಪಾಲ್ಗೊಳ್ಳದಿರೋದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. 


ಲಖ್ನೋ (ನ.17):  ಯಶಸ್ವಿ ಉದ್ಯಮಿ, ಸಹರಾ ಗ್ರೂಪ್ ಸ್ಥಾಪಕ ಸುಬ್ರತಾ ರಾಯ್ ಅಂತ್ಯಸಂಸ್ಕಾರ ಉತ್ತರ ಪ್ರದೇಶದ ಲಖ್ನೋ ಜಿಲ್ಲೆಯ ಭೈಸಕುಂಡ್ ನಲ್ಲಿ ಗುರುವಾರ ಸಂಜೆ ನಡೆಯಿತು. 16 ವರ್ಷದ ಮೊಮ್ಮಗ ರಾಯ್ ಅವರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದ್ದಾನೆ. ರಾಯ್ ಅವರಿಗೆ ಇಬ್ಬರು ಪುತ್ರರಿದ್ದು, ವಿದೇಶದಲ್ಲಿ ನೆಲೆಸಿದ್ದಾರೆ. ಎರಡು ದಿನಗಳ ಕಾಲ ಕಳೆಬರವನ್ನು ಇಟ್ಟರೂ ಪುತ್ರರು ಮಾತ್ರ ಅಪ್ಪನ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲಿಲ್ಲ. ಈ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ದುಡ್ಡಿನಿಂದ ಎಲ್ಲವನ್ನೂ ಕೊಳ್ಳಲು ಸಾಧ್ಯವಿಲ್ಲ ಎಂಬ ಮಾತು ಈ ಸಂದರ್ಭಕ್ಕೆ ಅನ್ವಯಿಸುವಂತಿದೆ. ದುಡ್ಡಿನಿಂದಾನೇ ಸಂಬಂಧ ಹಾಳಾಗಿತ್ತಾ? ಮಕ್ಕಳಿಗೆ ವಿದೇಶದಿಂದ ಅಪ್ಪನ ಸಂಸ್ಕಾರಕ್ಕೆ ಬಾರದಿರುಷ್ಟು ಕಷ್ಟನಾ? ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.

ಭಾರತೀಯ ಸಮಾಜದಲ್ಲಿ ತಮ್ಮ ಅಂತಿಮ ವಿಧಿ ವಿಧಾನಗಳನ್ನು ಮಕ್ಕಳು ನೆರವೇರಿಸಬೇಕು ಎಂಬುದು ಸಹಜವಾಗಿ ಹೆತ್ತವರ ಬಯಕೆಯಾಗಿರುತ್ತದೆ. ಆದರೆ, ಬದುಕಿನಲ್ಲಿ ಹಣ, ಹೆಸರು, ಗೌರವ ಎಲ್ಲ ಸಂಪಾದಿಸಿದರೂ ಅಂತಿಮ ಯಾತ್ರೆಯಲ್ಲಿ ಮಕ್ಕಳ ಹೆಗಲೇರುವ ಭಾಗ್ಯ ತಂದೆಗೆ ಸಿಕ್ಕಿಲ್ಲ ಎಂದರೆ ಅದಕ್ಕಿಂತ ದೌರ್ಭಾಗ್ಯವಿದೆಯಾ ಎಂಬ ಪ್ರಶ್ನೆಯನ್ನು ಕೆಲವರು ಕೇಳುತ್ತಿದ್ದಾರೆ ಕೂಡ.

Tap to resize

Latest Videos

ಸುಬ್ರತಾ ರಾಯ್  ಪುತ್ರರಾದ ಸುಶಾಂತೋ ಹಾಗೂ ಸೀಮಂತೋ ವಿದೇಶದಲ್ಲಿ ನೆಲೆಸಿದ್ದಾರೆ. ಗೋಮತಿ ನಗರದಲ್ಲಿರುವ ಸಹರಾ ಗ್ರೂಪ್ ಸಂಸ್ಥೆಯಿಂದ ರಾಯ್ ಅವರ ಅಂತಿಮಯಾತ್ರೆ ಸಂಜೆ ಸುಮಾರು 4.30ಕ್ಕೆ ಪ್ರಾರಂಭವಾಯಿತು. ಗಾಯಕರಾದ ಸೋನು ನಿಗಮ್, ಸಿನಿಮಾ ತಯಾರಕರಾದ ಬೋನಿ ಕಪೂರ್ ಸೇರಿದಂತೆ ಸೆಲೆಬ್ರಿಟಿಗಳು, ರಾಯ್ ಅವರ ಆಪ್ತ ಸ್ನೇಹಿತರು, ಸಿಬ್ಬಂದಿ ಅಂತಿಮ ಯಾತ್ರೆಯಲ್ಲಿ ಭಾಗವಹಿಸಿದ್ದರು. ಆದರೆ, ಇದರಲ್ಲಿ ಪುತ್ರರು ಪಾಲ್ಗೊಳ್ಳದಿರೋದು, ಸಂಬಂಧಗಳ ಬೆಲೆ ಇಷ್ಟೇನಾ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. 

ಸುಬ್ರತಾ ರಾಯ್‌ ನಿಧನ, ಹಂಚಿಕೆಯಾಗದೇ ಉಳಿದ 25 ಸಾವಿರ ಕೋಟಿ ರೂಪಾಯಿಯ ಕಥೆಯೇನು?

'ಸುಬ್ರತಾ ರಾಯ್ ಅವರ ಜೊತೆಗೆ ನಾನು ದೀರ್ಘಕಾಲದ ಒಡನಾಟ ಹೊಂದಿದ್ದೇನೆ. ಅವರು ತಂದೆ ಸಮಾನರು. ನನಗೆ ಸಹೋದರನಂತೆ ಪ್ರೀತಿ ತೋರುತ್ತಿದ್ದರು ಹಾಗೂ ಮಾರ್ಗದರ್ಶನ ನೀಡುತ್ತಿದ್ದರು. 1997ರಿಂದಲೂ ನನಗೆ ಅವರ ಪರಿಚಯವಿದೆ. ಅವರು ನಿಜವಾದ ದೇಶಭಕ್ತರಾಗಿದ್ದರು. ಅವರ ಸಾವಿನ ಸುದ್ದಿ ತಿಳಿದಾಗ ನಾನು ದುಬೈನಲ್ಲಿದ್ದೆ. ಅವರಿಗೆ ಅಂತಿಮ ವಿದಾಯ ಹೇಳಲು ನಾನು ದುಬೈನಿಂದ ನೇರವಾಗಿ ಲಖ್ನೋಗೆ ಬಂದಿದ್ದೇನೆ' ಎಂದು ಗಾಯಕ ಸೋನು ನಿಗಮ್ ತಿಳಿಸಿದ್ದಾರೆ.

75 ವರ್ಷದ ಸುಬ್ರತಾ ರಾಯ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಸುಬ್ರತಾ ರಾಯ್ ಅವರನ್ನು ಭಾನುವಾರ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಸಂಸ್ಥೆಗೆ (ಕೆಡಿಎಎಚ್) ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸುಬ್ರತಾ ರಾಯ್ ಅವರು ಮಂಗಳವಾರ ಇಹಲೋಕ ತ್ಯಜಿಸಿದ್ದಾರೆ. ಆಂಬಿ ವ್ಯಾಲಿ ಸಿಟಿ, ಸಹಾರಾ ಮೂವೀ ಸ್ಟುಡಿಯೋಸ್, ಏರ್ ಸಹಾರಾ, ಉತ್ತರ ಪ್ರದೇಶ ವಿಝಾರ್ಡ್ಸ್ ಮತ್ತು ಫಿಲ್ಮಿ ಸೇರಿದಂತೆ ಹಲವಾರು ಕಂಪನಿಗಳನ್ನು ಸುಬ್ರತಾ ರಾಯ್‌ ಮಾಲೀಕತ್ವದ ಸಹರಾ ಇಂಡಿಯಾ ಪರಿವಾರ್ ನಡೆಸುತ್ತಿದೆ. 

ಸುಬ್ರತಾ ರಾಯ್ ಅವರ ದೇಹವನ್ನು ಮುಂಬೈನಿಂದ ಲಖ್ನೋಗೆ ಸ್ಥಳಾಂತರಿಸಲಾಗಿತ್ತು. ರಾಯ್ ಅವರಿಗೆ ಅಂತಿಮ ನಮನ ಸಲ್ಲಿಸಿದವರಲ್ಲಿ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಿಜೇಶ್ ಪಾಠಕ್, ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ , ಕಾಂಗ್ರೆಸ್ ನಾಯಕಿ ಆರಾಧನಾ ಮಿಶ್ರಾ ಮೋನ ಹಾಗೂ ಇತರ ನಾಯಕರು ಸೇರಿದ್ದಾರೆ. 

ಗಲ್ಲಿಯಲ್ಲಿ ಸ್ಕೂಟರ್‌ನಲ್ಲೇ ಬಿಸ್ಕೆಟ್ ಮಾರಿ ಬಹುಕೋಟಿ ಆಸ್ತಿಯ ಒಡೆಯನಾದ ಸುಬ್ರತೋ ರಾಯ್‌

ಸುಬ್ರತಾ ರಾಯ್ ಅವರ ನಿಧನಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ವ್ಯಕ್ತಪಡಿಸಿದ್ದಾರೆ. ಎಕ್ಸ್ ನಲ್ಲಿ (ಹಿಂದಿನ ಟ್ವಿಟ್ಟರ್ ) ಈ ಬಗ್ಗೆ ಪೋಸ್ಟ್ ಮಾಡಿರುವ ಯೋಗಿ, 'ಸಹರಾ ಗ್ರೂಪ್ ಮುಖ್ಯಸ್ಥ ಸುಬ್ರತಾ ರಾಯ್ ಅವರ ನಿಧನ ತುಂಬಾ ಬೇಸರದ ಸಂಗತಿಯಾಗಿದೆ. ಶ್ರೀರಾಮನ ಪಾದಾರವಿಂದಗಳಲ್ಲಿ ಅಗಲಿದ ಆತ್ಮಕ್ಕೆ ನೆಲೆ ಸಿಗಲಿ ಎಂದು ಬೇಡಿಕೊಳ್ಳುವೆ. ಅವರ ಕುಟುಂಬಕ್ಕೆ ಈ ನೋವನ್ನು ತಾಳುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುವೆ' ಎಂದು ಬರೆದುಕೊಂಡಿದ್ದಾರೆ. 

click me!