
ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಜನಪ್ರಿಯ ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್ ಸಿಇಓ ಬಿನ್ನಿ ಬನ್ಸಲ್ ರಾಜೀನಾಮೆ ನೀಡುವುದಾಗಿ ಮಂಗಳವಾರ ಪ್ರಕಟಿಸಿದ್ದಾರೆ.
ಬಿನ್ನಿ ಬನ್ಸಲ್ ವಿರುದ್ಧ ಗಂಭೀರ ಅನುಚಿತ ವರ್ತನೆಯ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆಯೆಂದು ಫ್ಲಿಪ್‌ಕಾರ್ಟ್‌ನ ಮಾತೃಸಂಸ್ಥೆ ವಾಲ್‌ಮಾರ್ಟ್ ತಿಳಿಸಿದೆ.
ಆದರೆ ಆರೋಪದ ಬಗ್ಗೆ ಹೆಚ್ಚು ವಿವರಗಳನ್ನು ಬಹಿರಂಗಪಡಿಸದ ವಾಲ್‌ಮಾರ್ಟ್, ಬಿನ್ನಿ ತನ್ನ ವಿರುದ್ಧದ ಆರೋಪಗಳನ್ನು ಅಲ್ಲಗಳೆದಿದ್ದಾರೆಂದು ಹೇಳಿದೆ.
ಇದನ್ನೂ ಓದಿ: 5 ಲಕ್ಷ ಬಂಡವಾಳ ಹೂಡಿ ಸಾವಿರಾರು ಕೋಟಿಯ ಒಡೆಯರಾದವರ ರೋಚಕ ಕಥೆ
ಬಿನ್ನಿ ವಿರುದ್ಧ ಅನುಚಿತ ವರ್ತನೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಫ್ಲಿಪ್‌ಕಾರ್ಟ್ ಹಾಗೂ ವಾಲ್‌ಮಾರ್ಟ್ ಸ್ವತಂತ್ರ ತನಿಖೆಯನ್ನು ನಡೆಸಿದೆ. ಬಿನ್ನಿ ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸಿ, ರಾಜೀನಾಮೆ ನೀಡಿದ್ದಾರೆ.
ಬಿನ್ನಿ ವಿರುದ್ಧ ಮಾಡಿರುವ ಆರೋಪಗಳಿಗೆ ತನಿಖೆಯಲ್ಲಿ ಯಾವುದೇ ಸಾಕ್ಷಿಗಳು ಸಿಕ್ಕಿಲ್ಲ, ಆದರೆಸ ಪಾರದರ್ಶಕತೆಯ ಕೊರತೆ ಕಂಡುಬಂದಿದೆ. ಆದುದರಿಂದ ಬಿನ್ನಿ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ, ಎಂದು ವಾಲ್‌ಮಾರ್ಟ್ ಹೇಳಿದೆ.
ಇದನ್ನೂ ಓದಿ: ಗೂಗಲ್ ಮಾಡಿದ ಅವಮಾನ, ಫ್ಲಿಪ್ ಕಾರ್ಟ್ ಉಗಮಕ್ಕೆ ವರಮಾನ: ಬಿನ್ನಿ ಕತೆ ಕೇಳ ಬನ್ನಿ!
ಮೈಂತ್ರಾ, ಜಬಾಂಗ್‌ಗಳನ್ನೊಳಗೊಂಡ ಪ್ಲಿಪ್‌ಕಾರ್ಟ್‌ನ ಸಿಇಓ ಆಗಿ ಕಲ್ಯಾಣ್ ಕೃಷ್ಣಮೂರ್ತಿ ಮುಂದುವರಿಯಲಿದ್ದಾರೆ, ಎಂದು ವಾಲ್‌ಮಾರ್ಟ್ ಹೇಳಿದೆ.
ಕಳೆದ ಮೇ ತಿಂಗಳಿನಲ್ಲಿ ಭಾರತದ ಅತೀ ದೊಡ್ಡ ಇ-ಕಾಮರ್ಸ್ ಸಂಸ್ಥೆ ಫ್ಲಿಪ್'ಕಾರ್ಟ್'ನ ಶೇ.77 ಷೇರುಗಳನ್ನು, ವಿಶ್ವದ ಚಿಲ್ಲರೆ ಮಾರಾಟದ ದೈತ್ಯ ಸಂಸ್ಥೆ ಅಮೆರಿಕದ ವಾಲ್‌ಮಾರ್ಟ್ 1.7 ಲಕ್ಷ ಕೋಟಿಗೆ ಖರೀದಿಸಿತ್ತು.
ಐಐಟಿ ಪದವಿ ಪಡೆದ ಸಚಿನ್ ಬನ್ಸಾಲ್ ಹಾಗೂ ಬಿನ್ನಿ ಬನ್ಸಾಲ್ ಅಮೆಜಾನ್ ಸಂಸ್ಥೆಯಲ್ಲಿ ಒಂದಷ್ಟು ವರ್ಷ ಕೆಲಸ ನಿರ್ವಹಿಸಿದ ನಂತರ, 2007ರಲ್ಲಿ ಬೆಂಗಳೂರಿನ ಕೋರಮಂಗಲದ ಸಣ್ಣ ಕೊಠಡಿಯಲ್ಲಿ ಫ್ಲಿಪ್ಕಾರ್ಟ್ ಕಚೇರಿ ಆರಂಭಿಸಿದ್ದರು. ಕೆಲವೇ ವರ್ಷಗಳಲ್ಲಿ ಇದು ಸಂಸ್ಥೆಯಾಗಿ ಹೊರಹೊಮ್ಮಿತ್ತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.