ವಿಶ್ವಬ್ಯಾಂಕ್‌ ಪಟ್ಟಿಯಲ್ಲಿ ಮೇಲ್ಮಧ್ಯಮ ಆದಾಯದ ಗಡಿ ದಾಟಿದ ಭಾರತದ 5 ರಾಜ್ಯಗಳು, ಖುಷಿಪಟ್ಟ ಕರ್ನಾಟಕ

Published : Jul 06, 2026, 04:42 PM IST
five indian states cross world bank

ಸಾರಾಂಶ

ಭಾರತವು 'ಕೆಳ-ಮಧ್ಯಮ ಆದಾಯ'ದ ದೇಶವಾಗಿದ್ದರೂ, ದೆಹಲಿ ಮತ್ತು ಕರ್ನಾಟಕ ಸೇರಿದಂತೆ ಐದು ರಾಜ್ಯಗಳು ವಿಶ್ವಬ್ಯಾಂಕ್‌ನ 'ಮೇಲ್ಮಧ್ಯಮ ಆದಾಯ'ದ ಮಟ್ಟವನ್ನು ದಾಟಿವೆ. ಆದರೆ, ಬಿಹಾರ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳು ಅತ್ಯಂತ ಹಿಂದುಳಿದಿದ್ದು, ದೇಶದ ರಾಜ್ಯಗಳ ನಡುವಿನ ಆರ್ಥಿಕ ಅಸಮಾನತೆ ಹೆಚ್ಚುತ್ತಿದೆ.

ಬೆಂಗಳೂರು (ಜು.6): ಭಾರತವು ಒಟ್ಟಾರೆಯಾಗಿ ಇನ್ನೂ 'ಕೆಳ-ಮಧ್ಯಮ ಆದಾಯ'ದ (Lower-Middle-Income) ಆರ್ಥಿಕತೆಯಾಗಿಯೇ ಉಳಿದಿದ್ದರೂ, ದೇಶದ ಐದು ಪ್ರಮುಖ ರಾಜ್ಯಗಳು ಮಾತ್ರ ಜಾಗತಿಕ ಮಟ್ಟದಲ್ಲಿ ಭಾರಿ ಸಾಧನೆ ಮಾಡಿದ್ದು, ವಿಶ್ವಬ್ಯಾಂಕ್‌ನ 'ಮೇಲ್ಮಧ್ಯಮ ಆದಾಯ'ದ (Upper-Middle-Income) ಗಡಿಯನ್ನು ಯಶಸ್ವಿಯಾಗಿ ದಾಟಿವೆ. ವಿಶ್ವಬ್ಯಾಂಕ್‌ನ ಇತ್ತೀಚಿನ ಅಪ್‌ಡೇಟ್‌ ಮತ್ತು ಭಾರತದ ರಾಜ್ಯಗಳ ಆದಾಯದ ದತ್ತಾಂಶಗಳನ್ನು ಆಧರಿಸಿ ನಡೆಸಿರುವ ವಿಶ್ಲೇಷಣೆಯಿಂದ ಈ ಕುರಿತಾದ ಆಸಕ್ತಿದಾಯಕ ಆರ್ಥಿಕ ಚಿತ್ರಣ ಹೊರಬಿದ್ದಿದೆ.

ಇದೇ ವಾರ ವಿಶ್ವಬ್ಯಾಂಕ್ ಸ್ಥಿರ ಆದಾಯ ಸುಧಾರಣೆಯ ಆಧಾರದ ಮೇಲೆ ಶ್ರೀಲಂಕಾ, ವಿಯೆಟ್ನಾಂ ಮತ್ತು ಫಿಲಿಪೈನ್ಸ್ ದೇಶಗಳನ್ನು ಉನ್ನತ ಆದಾಯದ ವಿಭಾಗಗಳಿಗೆ ಮೇಲ್ದರ್ಜೆಗೇರಿಸಿದೆ. ಆದರೆ ಭಾರತವು ಅಟ್ಲಾಸ್ ವಿಧಾನದ (Atlas-method) ಪ್ರಕಾರ $2,760 (ಸುಮಾರು 2.30 ಲಕ್ಷ ರೂ.) ತಲಾದಾಯದೊಂದಿಗೆ ಕೆಳ-ಮಧ್ಯಮ ಆದಾಯದ ದೇಶವಾಗಿಯೇ ಮುಂದುವರಿದಿದೆ. ಇದು ಈ ವಿಭಾಗದ ಸರಾಸರಿ ಆದಾಯವಾದ $2,488 ಕ್ಕಿಂತ ಸ್ವಲ್ಪ ಹೆಚ್ಚಿದೆಯಷ್ಟೆ. ವಿಶ್ವಬ್ಯಾಂಕ್‌ನ ನಿಯಮಾವಳಿಗಳ ಪ್ರಕಾರ ಮೇಲ್ಮಧ್ಯಮ ಆದಾಯದ ದೇಶ ಎನಿಸಿಕೊಳ್ಳಲು ಕನಿಷ್ಠ $4,636 ತಲಾದಾಯ ಇರಬೇಕು. ಆದರೆ, ಭಾರತದ ಆಂತರಿಕ ರಾಜ್ಯಗಳ ಆರ್ಥಿಕ ಪರಿಸ್ಥಿತಿಯೇ ಬೇರೆ ಕಥೆ ಹೇಳುತ್ತಿದೆ.

ದೇಶದಲ್ಲೇ ದಿಲ್ಲಿ ಫಸ್ಟ್, ಕರ್ನಾಟಕಕ್ಕೆ ಸೆಕೆಂಡ್!; 5 ರಾಜ್ಯಗಳ ಜಾಗತಿಕ ಸಾಧನೆ

ಭಾರತದ ಐದು ರಾಜ್ಯಗಳು ವಿಶ್ವಬ್ಯಾಂಕ್‌ನ ಮೇಲ್ಮಧ್ಯಮ ಆದಾಯದ ಕಟ್‌ಆಫ್ ($4,636) ಗಡಿಯನ್ನು ಅತ್ಯಂತ ಸುಲಭವಾಗಿ ದಾಟಿ ಮುನ್ನಡೆದಿವೆ. ದೇಶದ ರಾಜಧಾನಿ ದೆಹಲಿ $6,217 ತಲಾದಾಯದೊಂದಿಗೆ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಇದರ ಬೆನ್ನಲ್ಲೇ ಕರ್ನಾಟಕ $5,579 ತಲಾದಾಯದೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದು, ಆರ್ಥಿಕ ಸದೃಢತೆಯನ್ನು ಸಾಬೀತುಪಡಿಸಿದೆ. ಉಳಿದಂತೆ ತೆಲಂಗಾಣ ($5,407), ತಮಿಳುನಾಡು ($5,329) ಮತ್ತು ಗುಜರಾತ್ ($4,734) ನಂತರದ ಸ್ಥಾನಗಳಲ್ಲಿವೆ.

ಕೂದಲೆಳೆ ಅಂತರದಲ್ಲಿ ಅವಕಾಶ ತಪ್ಪಿಸಿಕೊಂಡ ಮೂರು ರಾಜ್ಯಗಳು

ಭಾರತದ ಇನ್ನುಳಿದ ಮೂರು ಪ್ರಮುಖ ರಾಜ್ಯಗಳು ಅತ್ಯಂತ ಸಣ್ಣ ಅಂತರದಲ್ಲಿ ಈ ಜಾಗತಿಕ ಗಡಿಯನ್ನು ತಲುಪಲು ವಿಫಲವಾಗಿವೆ. ಮಹಾರಾಷ್ಟ್ರ $4,628 ತಲಾದಾಯ ಹೊಂದಿದ್ದು, ಕೇವಲ $8 ಗಳಷ್ಟು ಕಡಿಮೆ ಬಿದ್ದಿದ್ದರಿಂದ ಈ ಸ್ಥಾನವನ್ನು ಮಿಸ್ ಮಾಡಿಕೊಂಡಿದೆ. ಹರಿಯಾಣ $4,627 ಆದಾಯದೊಂದಿಗೆ ಕೇವಲ $9 ರ ಅಂತರದಲ್ಲಿ ಮತ್ತು ಕೇರಳ $4,610 ತಲಾದಾಯದೊಂದಿಗೆ ಬದ್ಧ ಅಂತರಕ್ಕಿಂತ ಕೇವಲ $26 ರಷ್ಟು ಹಿಂದೆ ಬಿದ್ದು ಕೂದಲೆಳೆ ಅಂತರದಲ್ಲಿ ಮೇಲ್ಮಧ್ಯಮ ಆದಾಯದ ಪಟ್ಟಿಯಿಂದ ಹೊರಗುಳಿದಿವೆ.

ನೇಪಾಳ, ಆಫ್ರಿಕಾ ದೇಶಗಳಿಗಿಂತಲೂ ಬಡವಾಗಿವೆ ಬಿಹಾರ, ಉತ್ತರ ಪ್ರದೇಶ!

ಆರ್ಥಿಕತೆಯ ಮತ್ತೊಂದು ತುದಿಯಲ್ಲಿ ಭಾರತದ ಕೆಲವು ರಾಜ್ಯಗಳು ಅತ್ಯಂತ ಹಿಂದುಳಿದಿವೆ. ಬಿಹಾರ $984 ತಲಾದಾಯದೊಂದಿಗೆ ದೇಶದ ಅತ್ಯಂತ ಬಡ ರಾಜ್ಯವಾಗಿ ಮುಂದುವರಿದಿದೆ. ಇದರ ನಂತರದ ಸ್ಥಾನಗಳಲ್ಲಿ ಉತ್ತರ ಪ್ರದೇಶ ($1,403) ಮತ್ತು ಜಾರ್ಖಂಡ್ ($1,470) ಇವೆ. ಅತ್ಯಂತ ಆಘಾತಕಾರಿ ವಿಷಯವೆಂದರೆ, ಭಾರತದ ಈ ಮೂರು ರಾಜ್ಯಗಳ ತಲಾದಾಯವು ನಮ್ಮ ನೆರೆಹೊರೆಯ ಬಡ ರಾಷ್ಟ್ರವಾದ ನೇಪಾಳ ಮತ್ತು ಆಫ್ರಿಕಾದ ಸಬ್‌ ಸಹಾರ ದೇಶಗಳಿಗಿಂತಲೂ ಅತ್ಯಂತ ಕಡಿಮೆಯಾಗಿದೆ.

ಕಳೆದ ಮೂರು ದಶಕಗಳಲ್ಲಿ ಭಾರತದ ರಾಜ್ಯಗಳು ಕಂಡಿರುವ ಆರ್ಥಿಕ ಪರಿವರ್ತನೆ ನಿಜಕ್ಕೂ ಶ್ಲಾಘನೀಯ. 1994 ರಲ್ಲಿ ಭಾರತದ ಯಾವುದೇ ಒಂದು ರಾಜ್ಯವೂ ವಿಶ್ವಬ್ಯಾಂಕ್‌ನ ಇಂದಿನ ಮಧ್ಯಮ ಆದಾಯದ ಅರ್ಹತೆಯನ್ನು ಹೊಂದಿರಲಿಲ್ಲ. ಆದರೆ ಇಂದು ಭಾರತದ ದೆಹಲಿಯಂತಹ ರಾಜ್ಯಗಳ ಆದಾಯವು ದಕ್ಷಿಣ ಆಫ್ರಿಕಾ ($6,270), ಫಿಜಿ ($6,230) ಮತ್ತು ಮಂಗೋಲಿಯಾ ($6,210) ದೇಶಗಳಿಗೆ ಸಮನಾಗಿದೆ. ಇನ್ನು ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳ ತಲಾದಾಯವು ಈಗಾಗಲೇ ಉದಯೋನ್ಮುಖ ಆರ್ಥಿಕತೆಗಳಾದ ಇಂಡೋನೇಷ್ಯಾ ($5,120) ಮತ್ತು ವಿಯೆಟ್ನಾಂ ($4,970) ದೇಶಗಳಿಗಿಂತಲೂ ಮೇಲಿದೆ.

ಹೆಚ್ಚುತ್ತಿದೆ ರಾಜ್ಯಗಳ ನಡುವಿನ ಅಸಮಾನತೆ; ಗೆದ್ದವರು ಯಾರು? ಬಿದ್ದವರು ಯಾರು?

ಒಟ್ಟಾರೆ ದೇಶದ ಆರ್ಥಿಕ ಪ್ರಗತಿಯಾಗುತ್ತಿದ್ದರೂ, ರಾಜ್ಯಗಳ ನಡುವಿನ ಆರ್ಥಿಕ ಅಸಮಾನತೆ (Interstate Inequality) ಮಾತ್ರ ತೀವ್ರವಾಗಿ ಹೆಚ್ಚಾಗುತ್ತಿದೆ. ರಾಜ್ಯಗಳ ನಡುವಿನ ಆದಾಯದ ಅಸಮಾನತೆಯನ್ನು ಅಳೆಯುವ 'ಗಿನಿ ಕೋಯಿಫಿಷಿಯಂಟ್' (Gini coefficient) ಸೂಚ್ಯಂಕವು 1994-95 ರಲ್ಲಿ 0.230 ರಷ್ಟಿದ್ದುದು, ಪ್ರಸ್ತುತ 2025-26 ರ ವೇಳೆಗೆ 0.261 ಕ್ಕೆ ಏರಿಕೆಯಾಗಿದೆ. ಅತಿ ಶ್ರೀಮಂತ ಮತ್ತು ಅತಿ ಬಡ ರಾಜ್ಯಗಳ ನಡುವಿನ ಆದಾಯದ ವ್ಯತ್ಯಾಸದ ಅನುಪಾತವು 2.38 ಪಟ್ಟಿಯಿಂದ 3.73 ಪಟ್ಟಿಗೆ ವಿಸ್ತರಿಸಿದೆ.

ಕಳೆದ ಮೂರು ದಶಕಗಳಲ್ಲಿ ಮಧ್ಯಮ ಆದಾಯದ ರಾಜ್ಯಗಳು ಅತ್ಯಂತ ವೇಗವಾಗಿ ಬೆಳೆದಿದ್ದು, ತಮ್ಮ ಆದಾಯವನ್ನು 36.7 ಪಟ್ಟು ಹೆಚ್ಚಿಸಿಕೊಂಡಿವೆ. ಆದರೆ ಅತ್ಯಂತ ಶ್ರೀಮಂತ ಗುಂಪಿನ ರಾಜ್ಯಗಳು 28.3 ಪಟ್ಟು ಮತ್ತು ಬಡ ರಾಜ್ಯಗಳು ಕೇವಲ 26.6 ಪಟ್ಟು ಮಾತ್ರ ಪ್ರಗತಿ ಕಂಡಿವೆ. ಕರ್ನಾಟಕ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳು ಈ ಆರ್ಥಿಕ ಬೆಳವಣಿಗೆಯ ನೇತೃತ್ವ ವಹಿಸಿದ್ದರೆ, ಬಿಹಾರ, ಯುಪಿ ಮತ್ತು ಜಾರ್ಖಂಡ್ ನಿರಂತರ ಬೆಳವಣಿಗೆಯ ಹೊರತಾಗಿಯೂ ಹಿಂದೆ ಬಿದ್ದಿವೆ.

ವಿಶ್ವ ಬ್ಯಾಂಕ್‌ ಪಟ್ಟಿಯಲ್ಲಿನ ಪ್ರಮುಖ ಬದಲಾವಣೆಗಳು

ಉತ್ತರ ಪ್ರದೇಶ vs ಒಡಿಶಾ: ಮೂರು ದಶಕಗಳ ಹಿಂದೆ ಯುಪಿ ಮತ್ತು ಒಡಿಶಾ ಒಂದೇ ಆದಾಯ ಮಟ್ಟದಲ್ಲಿದ್ದವು. ಆದರೆ ಇಂದು ಒಡಿಶಾ ರಾಜ್ಯದ ತಲಾದಾಯವು ಉತ್ತರ ಪ್ರದೇಶಕ್ಕಿಂತ ಶೇಕಡಾ 75 ರಷ್ಟು ಹೆಚ್ಚಾಗಿದೆ.

ಜಾರ್ಖಂಡ್ vs ಅಸ್ಸಾಂ: ಹಿಂದೆ ಜಾರ್ಖಂಡ್ ಮತ್ತು ಅಸ್ಸಾಂ ಸಮಾನ ಸ್ಥಿತಿಯಲ್ಲಿದ್ದವು. ಆದರೆ 2025-26ರ ಅಂಕಿ-ಅಂಶಗಳ ಪ್ರಕಾರ ಅಸ್ಸಾಂನ ತಲಾದಾಯವು ಜಾರ್ಖಂಡ್‌ಗಿಂತ ಶೇಕಡಾ 48 ರಷ್ಟು ಹೆಚ್ಚಾಗಿದೆ.

ಪಂಜಾಬ್ ಹಿನ್ನಡೆ: 1994-95 ರಲ್ಲಿ ಭಾರತದ ಎಲ್ಲಾ ದೊಡ್ಡ ರಾಜ್ಯಗಳ ಪೈಕಿ ಅತಿ ಹೆಚ್ಚು ತಲಾದಾಯ ಹೊಂದಿದ್ದ ಪಂಜಾಬ್, ಇಂದು ತೀವ್ರ ಹಿನ್ನಡೆ ಅನುಭವಿಸಿದ್ದು ರಾಜಸ್ಥಾನಕ್ಕೆ ಸಮನಾಗಿದೆ ಹಾಗೂ ದೇಶದ ಇತರ ಏಳು ದೊಡ್ಡ ರಾಜ್ಯಗಳಿಗಿಂತ ಕೆಳಮಟ್ಟದಲ್ಲಿದೆ.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಹಳೆ ಬಟ್ಟೆ ಕೊಟ್ಟು ನೀವೂ ಪಾತ್ರೆ ಖರೀದಿ ಮಾಡ್ತಿದ್ರೆ ನಿಮ್ಮ ಬಟ್ಟೆ ಎಲ್ಲಿ ಹೋಗುತ್ತೆ ತಿಳಿದ್ಕೊಳ್ಳಿ
ಟಾಟಾ ಸಾಮ್ರಾಜ್ಯದಲ್ಲಿ ದಿಡೀರ್ ಬದಲಾವಣೆ, ವೆಸ್ಟ್‌ಸೈಡ್‌ನ ಗ್ಲೋಬಲ್ ಡಿಜಿಟಲ್ ಬಿಸಿನೆಸ್ ಹೆಡ್ ಆಗಿ ಮಾಯಾ ಎಂಟ್ರಿ!