* ಭಾರತದ ರೇಟಿಂಗ್ ಏರಿಸಿದ ಫಿಚ್
* 2 ವರ್ಷಗಳ ಬಳಿಕ ‘ಋುಣಾತ್ಮಕ’ದಿಂದ ‘ಸ್ಥಿರ’ ಪಟ್ಟ
* 2020ರ ಜೂನ್ ನಲ್ಲಿ ಭಾರತದ ರೇಟಿಂಗ್ ಅನ್ನು ನೆಗೆಟಿವ್ ಗೆ ಇಳಿಸಿದ ಫಿಚ್
ನವದೆಹಲಿ (ಜೂನ್ 11): ಕೋವಿಡ್ (Covid-19) ಹೊಡೆತದಿಂದ ಅತ್ಯಂತ ಕ್ಷಿಪ್ರಗತಿಯಲ್ಲಿ ಭಾರತದ ಆರ್ಥಿಕತೆ (India's economy) ಚೇತರಿಸಿಕೊಂಡಿರುವ ಹಿನ್ನೆಲೆಯಲ್ಲಿ ದೇಶದ ಸಾರ್ವಭೌಮ ರೇಟಿಂಗ್ ಅನ್ನು ‘ಋುಣಾತ್ಮಕ’ದಿಂದ ‘ಸ್ಥಿರ’ಕ್ಕೆ ಜಾಗತಿಕ ರೇಟಿಂಗ್ ಸಂಸ್ಥೆ ಫಿಚ್ (Fitch ) ಏರಿಸಿದೆ. ಭಾರತದ ಆರ್ಥಿಕ ಪ್ರಗತಿ ಮಧ್ಯಮಾವಧಿಯಲ್ಲಿ ಕುಸಿಯುವಂತಹ ಸಾಧ್ಯತೆ ಕ್ಷೀಣವಾಗಿದೆ ಎಂದು ಬಣ್ಣಿಸಿದೆ.
ಇದೇ ವೇಳೆ, 2022- 23ನೇ ವಿತ್ತೀಯ ವರ್ಷದಲ್ಲಿ ಭಾರತ ಶೇ.7.8ರ ದರದಲ್ಲಿ ಪ್ರಗತಿ ಸಾಧಿಸುವ ಸಾಧ್ಯತೆ ಇದೆ ಎಂದೂ ಹೇಳಿದೆ. ಕಳೆದ ಮಾರ್ಚ್ ನಲ್ಲಿ ಶೇ.8.5ರ ಜಿಡಿಪಿ (GDP) ಇರಬಹುದು ಎಂದು ಇದೇ ಸಂಸ್ಥೆ ಊಹಿಸಿತ್ತು. ಕೊರೋನಾದಿಂದ (Corona Virus) ದೇಶದ ಆರ್ಥಿಕ ಪ್ರಗತಿಯ ಮುನ್ನೋಟ ದುರ್ಬಲವಾಗಿದ್ದು ಹಾಗೂ ಅತ್ಯಧಿಕ ಸಾಲ ಹೊರೆ ಹಿನ್ನೆಲೆಯಲ್ಲಿ 2020ರ ಜೂನ್‌ನಲ್ಲಿ ಭಾರತದ ರೇಟಿಂಗ್ ಅನ್ನು ಸ್ಥಿರದಿಂದ ಋುಣಾತ್ಮಕಕ್ಕೆ ಫಿಚ್ ಇಳಿಸಿತ್ತು. ಈ ನಡುವೆ, ಕೇಂದ್ರ ಸರ್ಕಾರ ಕಳೆದ ಮೇ ತಿಂಗಳಿನಲ್ಲಿ ಘೋಷಣೆ ಮಾಡಿದ ತೈಲ ಅಬಕಾರಿ ಸುಂಕ ಕಡಿತ ಹಾಗೂ ಸಬ್ಸಿಡಿ ಹೆಚ್ಚಳದಂತಹ ಕ್ರಮಗಳಿಂದಾಗಿ ದೇಶದ ವಿತ್ತೀಯ ಕೊರತೆ ಶೇ.6.4ರ ಬದಲಿಗೆ ಶೇ.6.8ಕ್ಕೆ ಹೆಚ್ಚಲಿದೆ ಎಂದು ಫಿಚ್ ಹೇಳಿದೆ.
"ಔಟ್‌ಲುಕ್ ಪರಿಷ್ಕರಣೆಯು ಭಾರತದ ತ್ವರಿತ ಆರ್ಥಿಕ ಚೇತರಿಕೆ ಮತ್ತು ಆರ್ಥಿಕ ವಲಯದ ದೌರ್ಬಲ್ಯಗಳನ್ನು ಸರಾಗಗೊಳಿಸುವ ಕಾರಣದಿಂದಾಗಿ ಮಧ್ಯಮ-ಅವಧಿಯ ಬೆಳವಣಿಗೆಯ ಅಪಾಯಗಳು ಕಡಿಮೆಯಾಗಿವೆ ಎಂದು ನಮ್ಮ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ, ಜಾಗತಿಕ ಸರಕುಗಳ ಬೆಲೆ ಏರಿಕೆಗಳ ಸಮೀಪದ-ಅವಧಿಯ ಆಘಾತದ ಹೊರತಾಗಿಯೂ ಇದು ಸಾಧ್ಯವಾಗಲಿದೆ' ಎಂದು ಫಿಚ್ ಜೂನ್ 10 ರಂದು ನೀಡಿದ ಹೇಳಿಕೆಯಲ್ಲಿ ತಿಳಿಸಿದೆ.
BBB ಅನ್ನು ರೇಟ್ ಮಾಡುವ ದೇಶಗಳಿಗೆ 3.4 ಶೇಕಡಾದ ಸರಾಸರಿ ಮುನ್ಸೂಚನೆಯೊಂದಿಗೆ ಹೋಲಿಸಿದರೆ, FY23 ರಲ್ಲಿ ಭಾರತದ GDP 7.8 ರಷ್ಟು ಬೆಳವಣಿಗೆಯಾಗಲಿದೆ ಎಂದು ಫಿಚ್ ನಿರೀಕ್ಷೆ ಮಾಡಿದೆ.
ಭಾರತದ ಆರ್ಥಿಕತೆ ಉತ್ತಮ ಚೇತರಿಕೆ: ಕೋವಿಡ್-19 ನ ಮೂರು ಅಲೆಗಳ ಹೊಡೆತದ ನಡುವೆಯೂ ಭಾರತದ ಆರ್ಥಿಕತೆ ಅದ್ಭುತವಾಗಿ ಹಾಗೂ ಪ್ರಬಲವಾಗಿ ಚೇತರಿಕೆ ಕಂಡಿದೆ ಎಂದು ಅಮೆರಿಕದ ಖಜಾನೆ (US Treasury report) ತನ್ನ ಕಾಂಗ್ರೆಸ್ ಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ. ಭಾರತದ (India) ಪಾಲಿಗೆ ಸಾಕಷ್ಟು ಆಘಾತ ನೀಡಿದ ಕೋವಿಡ್-19 ಎರಡನೇ ತರಂಗವು 2021 ರ ಮಧ್ಯದವರೆಗೆ ಬೆಳವಣಿಗೆಯ ಮೇಲೆ ಹೆಚ್ಚು ಪ್ರಭಾವವನ್ನು ಬೀರಿತ್ತು ಇದರಿಂದಾಗಿ ದೇಶದ ಆರ್ಥಿಕ ಚೇತರಿಕೆಯನ್ನು ವಿಳಂಬವಾಗಿತ್ತು ಎಂದು ಖಜಾನೆಯು ಅರೆ-ವಾರ್ಷಿಕ ವರದಿಯಲ್ಲಿ ತಿಳಿಸಿದೆ.
"ಆದಾಗ್ಯೂ, ಭಾರತದ ವ್ಯಾಕ್ಸಿನೇಷನ್ ಹಾಕುವ ಪ್ರಕ್ರಿಯೆ ವೇಗವಾದಂತೆ ಆರ್ಥಿಕ ಚಟುವಟಿಕೆಯು ವರ್ಷದ ದ್ವಿತೀಯಾರ್ಧದಲ್ಲಿ ಬಲವಾಗಿ ಮರುಕಳಿಸಿತು" ಎಂದು ಖಜಾನೆಯು ಭಾರತದ ಲಸಿಕೆ ಪ್ರಯತ್ನಗಳನ್ನು ಶ್ಲಾಘಿಸುವ ವೇಳೆ ತಿಳಿಸಿದೆ. 2021 ರ ಅಂತ್ಯದ ವೇಳೆಗೆ, ಭಾರತದ ಜನಸಂಖ್ಯೆಯ ಸುಮಾರು 44 ಪ್ರತಿಶತದಷ್ಟು ಜನರು ಸಂಪೂರ್ಣವಾಗಿ ಲಸಿಕೆಗೆ ಒಳಗಾಗಿದ್ದಾರೆ ಎಂದು ಅದು ಹೇಳಿದೆ, 2020 ರಲ್ಲಿ ಏಳು ಪ್ರತಿಶತದಷ್ಟು ಕುಗ್ಗಿದ ನಂತರ, ಉತ್ಪಾದನೆಯು 2021 ರ ಎರಡನೇ ತ್ರೈಮಾಸಿಕದ ವೇಳೆಗೆ ಪೂರ್ವ-ಸಾಂಕ್ರಾಮಿಕ ಮಟ್ಟಕ್ಕೆ ಮರಳಿದೆ.
ಉತ್ತಮ ಹೆದ್ದಾರಿ 5 ಟ್ರಿಲಿಯನ್ ಆರ್ಥಿಕತೆಗೆ ಸಹಕಾರಿ, ಆತ್ಮ ನಿರ್ಭರ ಭಾರತದ ಭದ್ರ ಬುನಾದಿ
2022 ರ ಆರಂಭದಿಂದ, ಓಮಿಕ್ರಾನ್ ರೂಪಾಂತರದಿಂದ ಎದುರಾದ ಮೂರನೇ ಅಲೆಯ ಆತಂಕವನ್ನು ಭಾರತ ಏಕಾಏಕಿ ಎದುರಿಸಿತ್ತು. ಆದರೆ ಸಾವಿನ ಸಂಖ್ಯೆ ಮತ್ತು ದೊಡ್ಡ ಮಟ್ಟದ ಆರ್ಥಿಕ ಹಿಂಜರಿತ ಈ ಸಮಯದಲ್ಲಿ ಆಗಿರಲಿಲ್ಲ ಎಂದಿದೆ.
ಜಿಗಿ ಜಿಗಿದು ಕುಣಿಯುತ್ತಿದೆ ದೇಶದ ಜಿಡಿಪಿ: ಮೋದಿ ಮೋಡಿ ವರ್ಕ್ ಔಟ್ ಆಯ್ತಾ?
2021 ರಲ್ಲಿ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಆರ್ಥಿಕತೆಗೆ ಹಣಕಾಸಿನ ಬೆಂಬಲವನ್ನು ನೀಡುವುದನ್ನು ಮುಂದುವರೆಸಿದೆ ಎಂದು ಅದು ಹೇಳಿದೆ. 2022 ರ ಹಣಕಾಸು ವರ್ಷದಲ್ಲಿ ಒಟ್ಟಾರೆ ವಿತ್ತೀಯ ಕೊರತೆಯು ಜಿಡಿಪಿಯ ಶೇಕಡಾ 6.9 ಕ್ಕೆ ತಲುಪುತ್ತದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ, ಇದು ಸಾಂಕ್ರಾಮಿಕ ರೋಗಕ್ಕೆ ಮುಂಚಿನ ಕೊರತೆಗಳಿಗಿಂತ ಹೆಚ್ಚಾಗಿದೆ ಎಂದು ಅದು ಹೇಳಿದೆ.