* ಮೀನುಗಾರಿಕೆಗೆ ಮೂಲ ಕಚ್ಛಾವಸ್ತುವೇ ಈ ಬಲೆಗಳು
* ಬಲೆ ನೇಯ್ಗೆ ಏನಿಲ್ಲಾ ಅಂದ್ರೂ ಕೋಟ್ಯಂತರ ವಹಿವಟು ನಡೆಸುವ ಒಂದು ಉದ್ಯಮ
* ಮಳೆಗಾಲ ಬಂದ್ರೆ ಈ ಯಾಂತ್ರೀಕೃತ ಬೋಟುಗಳಿಗೆ ವಿಶ್ರಾಂತಿ
ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್, ಉಡುಪಿ
ಉಡುಪಿ(ಜು.05): ದುಡಿಮೆಯೇ ಜೀವನ, ಸಾಹಸ ಪ್ರವೃತ್ತಿಯ ಇವರು ಅಲೆಗಳೊಂದಿಗೆ ಹೋರಾಡಿ ಮೀನು ಹಿಡಿಯುತ್ತಾರೆ. ಮಳೆಗಾಲದ ರಜೆಯಲ್ಲಿ ಬಣ್ಣ ಬಣ್ಣದ ಬಲೆ ನೇಯುತ್ತಾರೆ. ನೋಡುಗರನ್ನು ಮೋಡಿ ಮಾಡುವ ಈ ಬಣ್ಣ ಬಣ್ಣದ ಮೀನು ಬಲೆಗಳು, ಮೀನುಗಾರರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಟ್ಟಿದೆ.
ಕರಾವಳಿ ತೀರದಲ್ಲಿ ವ್ಯಾಪಕ ಗಾಳಿ ಮಳೆ ಬೀಸುತ್ತಿದೆ. ಆಳಸಮುದ್ರ ಮೀನುಗಾರಿಕೆಗೆ ಇದು ನಿಷೇಧಿತ ಅವಧಿ. ಹಾಗಾಗಿ ಮೀನುಗಾರಿಕಾ ಬಂದರಿನಲ್ಲಿ, ಸದ್ಯ ಯಾವುದೇ ಬಿರುಸಿನ ಚಟುವಟಿಕೆಗಳು ನಡೆಯುವುದಿಲ್ಲ. ಈಗ ನೀವು ಮಲ್ಪೆ ಬಂದರಿಗೆ ಭೇಟಿ ನೀಡಬೇಕು. ಮಳೆಗಾಲದ ಮೀನುಗಾರಿಕಾ ಬಂದರಿನ ನೋಟ ಮುದ ನೀಡುತ್ತದೆ.
ಸಾಫ್ಟ್‌ವೇರ್ ದೋಷದಿಂದ ಸಿಗದ ಎಣ್ಣೆ: ಚಡಪಡಿಸಿದ ಮದ್ಯ ಪ್ರಿಯರು
ಕಣ್ಣು ಹಾಯಿಸಿದಲ್ಲೆಲ್ಲಾ ಸಾಲು ಸಾಲು ಬೋಟುಗಳು, ಮಳೆಗಾಲ ಬಂದ್ರೆ ಈ ಯಾಂತ್ರೀಕೃತ ಬೋಟುಗಳಿಗೆ ವಿಶ್ರಾಂತಿ. ಆದರೆ ಇದರಲ್ಲಿ ದುಡಿಯುವ ಮೀನುಗಾರರದ್ದು ಮಾತ್ರ ದಣಿವಿಲ್ಲದ ಬದುಕು. ಮಳೆಗಾಲದಲ್ಲಿ ಹೊಟ್ಟೆಪಾಡಿಗಾಗಿ ಮಲ್ಪೆ ಬಂದರಿನಲ್ಲಿ ಒಂದು ಬಣ್ಣದ ಲೋಕ ಸೃಷ್ಟಿಯಾಗುತ್ತದೆ. ಇದು ಬಲೆಗಳ ಮಾಯಾಲೋಕ. ಮೀನು ಹಿಡಿಯಲು ಬಳಸುದ ಭಾರೀ ಗಾತ್ರದ ಬಲೆಗಳು ಮಲ್ಪೆ ಬಂದರಿನಲ್ಲಿ ಸಿದ್ದವಾಗುತ್ತಿದೆ. ಮುಂದಿನ ಮೀನುಗಾರಿಕಾ ಋತುವಿಗೆ ಬೇಕಾದ ಬಲೆಗಳ ನೇಯ್ಗೆಯಲ್ಲಿ ಮೀನುಗಾರ ಸಮುದಾಯ ನಿರತವಾಗಿರುತ್ತದೆ.
ಮಲ್ಪೆ ಬಂದರೊಂದರಲ್ಲೇ ಎರಡು ಸಾವಿರಕ್ಕೂ ಅಧಿಕ ಬೋಟುಗಳಿವೆ. ಈ ಬೋಟುಗಳಿಗೆ ಲಕ್ಷಾಂತರ ಮೀಟರ್ ಉದ್ದದ ಬಲೆ ಬೇಕು. ಮಳೆಗಾಲದ ರಜಾ ಅವಧಿಯಲ್ಲಿ ಖಾಲಿ ಕುಳಿತುಕೊಳ್ಳದ ಮೀನುಗಾರರು ರಾತ್ರಿ ಹಗಲು ಬಲೆ ನೇಯ್ಗೆಯಲ್ಲಿ ನಿರತರಾಗುತ್ತಾರೆ.
ಸ್ಟಾರ್ಟಪ್‌ಗೆ ಒಳ್ಳೆಯ ವಾತಾವರಣ: ಗುಜರಾತ್, ಕರ್ನಾಟಕ ಅತ್ಯುತ್ತಮ
ಮೀನುಗಾರ ಸಮುದಾಯವನ್ನು ಕಡಲ ಮಕ್ಕಳು ಎಂದೇ ಕರೆಯುತ್ತಾರೆ. ರಟ್ಟೆಯಲ್ಲಿ ಶಕ್ತಿ ಇರುವವರೆಗೂ ಅಲೆಗಳೊಂದಿಗೆ ಹೋರಾಡಿ ಮೀನು ಹಿಡಿಯುವ ಇವರು ಇಳಿವಯಸ್ಸು ಬಂದ ನಂತರವೂ ದುಡಿಮೆ ನಿಲ್ಲಿಸುವುದಿಲ್ಲ. ಒಂದು ಕ್ಷಣವೂ ವಿರಮಿಸುವುದಿಲ್ಲ. ನಿವೃತ್ತ ಜೀವನದಲ್ಲೂ ಬಲೆ ನೇಯ್ಗೆಯ ಮೂಲಕ ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳುತ್ತಾರೆ. ಇಳಿವಯಸ್ಸಿನಲ್ಲೂ ದುಡಿಮೆಗೆ ತಕ್ಕ ಪ್ರತಿಫಲ ಪಡೆಯುತ್ತಾರೆ.
ಹೊಸ ಬಲೆ ನೇಯ್ಗೆಯ ಜೊತೆಗೆ ತಮ್ಮ ಅನುಭವವನ್ನೆಲ್ಲಾ ಧಾರೆ ಎರೆದು ಹಾಳಾದ ಹಳೆಯ ಬಲೆಗಳನ್ನು ಮರುಜೋಡಿಸಿ ಸಿದ್ದಗೊಳಿಸುತ್ತಾರೆ. ಈ ಬಲೆ ನೇಯ್ಗೆ ಏನಿಲ್ಲಾ ಅಂದ್ರೂ ಕೋಟ್ಯಂತರ ವಹಿವಟು ನಡೆಸುವ ಒಂದು ಉದ್ಯಮ.
ಮೀನುಗಾರಿಕೆಗೆ ಮೂಲ ಕಚ್ಛಾವಸ್ತುವೇ ಈ ಬಲೆಗಳು. ಈ ಬಣ್ಣದ ಬಲೆಗಳು ಮೀನುಗಾರ ಸಮುದಾಯದ ಜೀವನಕ್ಕೂ ಬಣ್ಣ ತುಂಬುವ ಕೆಲಸ ಮಾಡುತ್ತಿದೆ ಅಂದ್ರೆ ತಪ್ಪಲ್ಲ.