ನಿಮಗೆ ವಯಸ್ಸು 40 ಆಯ್ತಾ? ಹಾಗಾದ್ರೆ ಈ ಹಣಕಾಸು ಸಂಗತಿಗಳನ್ನು ತಪ್ಪದೇ ಪರಿಶೀಲಿಸಿ

By Suvarna NewsFirst Published May 28, 2023, 6:02 PM IST
Highlights

ವಯಸ್ಸಿನ ಜೊತೆಗೆ ನಮ್ಮ ಹಣಕಾಸಿನ ಸ್ಥಿತಿಗತಿಗಳು ಕೂಡ ಬದಲಾಗುತ್ತವೆ. ಹೀಗಾಗಿ 40ನೇ ವಯಸ್ಸಿಗೆ ತಲುಪಿದ ತಕ್ಷಣ ಹಣಕಾಸು ವಿಚಾರಗಳಿಗೆ ಸಂಬಂಧಿಸಿ ಒಂದಿಷ್ಟು ಪರಾಮರ್ಶೆ ನಡೆಸೋದು ಅಗತ್ಯ. ಹಾಗಾದ್ರೆ ಯಾವೆಲ್ಲ ಸಂಗತಿಗಳ ಬಗ್ಗೆ ಪರಿಶೀಲನೆ ನಡೆಸಬೇಕು? ಇಲ್ಲಿದೆ ಮಾಹಿತಿ.

Business Desk: ಜೀವನದಲ್ಲಿ ಬದಲಾವಣೆಗಳು ಸಹಜ. ಹಣಕಾಸು ವಿಚಾರದಲ್ಲಿ ಕೂಡ ಬದಲಾವಣೆಗಳಾಗುತ್ತವೆ. ವಯಸ್ಸಾಗುತ್ತಿದ್ದಂತೆ ವ್ಯಕ್ತಿಯ ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯ ತಗ್ಗಲು ಪ್ರಾರಂಭವಾಗುತ್ತದೆ. ನೀವು 20 ಅಥವಾ 30 ವರ್ಷದವರಾಗಿರುವಾಗ ನಿಮ್ಮಲ್ಲಿ ಹಣಕಾಸು ವಿಚಾರಗಳಿಗೆ ಸಂಬಂಧಿಸಿ ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯ ಹೆಚ್ಚಿರುತ್ತದೆ. ಇದಕ್ಕೆ ಕಾರಣ ಈ ವಯಸ್ಸಿನಲ್ಲಿ ನೀವು ವೃತ್ತಿ ಜೀವನದ ಆರಂಭಿಕ ಹಂತದಲ್ಲಿರುತ್ತೀರಿ. ಹೀಗಾಗಿ ದುಡಿಯಲು ಇನ್ನೂ ಸಾಕಷ್ಟು ಸಮಯವಿದೆ ಎಂಬ ಧೈರ್ಯ ಇರುತ್ತದೆ. ಆದರೆ, ನೀವು 40ನೇ ವಯಸ್ಸಿಗೆ ಕಾಲಿಟ್ಟ ಬಳಿಕ ಹಣಕಾಸಿನ ವಿಚಾರಗಳಲ್ಲಿ ರಿಸ್ಕ್ ತೆಗೆದುಕೊಳ್ಳುವ ಬದಲು ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲು ಪ್ರಾರಂಭಿಸಬೇಕಾಗುತ್ತದೆ. ನಿವೃತ್ತಿ ನಂತರದ ಬದುಕಿಗಾಗಿ ನೀವು ಎಷ್ಟು ಉಳಿತಾಯ ಮಾಡಿಟ್ಟಿದ್ದೀರಿ ಎಂಬುದು ಸೇರಿದಂತೆ ಮಕ್ಕಳ ಶೈಕ್ಷಣಿಕ ವೆಚ್ಚ, ಆರೋಗ್ಯ ವಿಮೆ ಮುಂತಾದ ವಿಚಾರಗಳಿಗೆ ಸಂಬಂಧಿಸಿ ನಿಮ್ಮ ತಯಾರಿ ಹೇಗಿದೆ ಎಂಬುದನ್ನು ಪರಿಶೀಲಿಸಿಕೊಳ್ಳಬೇಕಾಗುತ್ತದೆ. ಹೀಗೆ 40ನೇ ವಯಸ್ಸಿನಲ್ಲಿ ಭವಿಷ್ಯದ ಹಣಕಾಸಿನ ಸುರಕ್ಷತೆ ಹಿತದೃಷ್ಟಿಯಿಂದ ಪ್ರತಿಯೊಬ್ಬರೂ ಹಣಕಾಸು ವಿಚಾರಗಳಿಗೆ ಸಂಬಂಧಿಸಿ ಪರಿಶೀಲನೆ ನಡೆಸೋದು ಅಗತ್ಯ. ಹಾಗಾದ್ರೆ ಯಾವೆಲ್ಲ ವಿಚಾರಗಳನ್ನು ಪರಿಶೀಲಿಸಬೇಕು? ಇಲ್ಲಿದೆ ಮಾಹಿತಿ.

ಆರೋಗ್ಯ ವಿಮೆ ಕವರೇಜ್ ಪರಿಶೀಲನೆ
ಬಹುತೇಕ ಆರೋಗ್ಯ ವಿಮಾ ಕಂಪನಿಗಳು 40-45 ವರ್ಷ ಮೇಲ್ಪಟ್ಟವರಿಗೆ ಪಾಲಿಸಿ ನೀಡಿಕೆ ಪ್ರಕ್ರಿಯೆ ಭಾಗವಾಗಿ ಆರೋಗ್ಯ ಪರಿಶೀಲನೆಗೆ ಒಳಪಡುವಂತೆ ಸೂಚಿಸುತ್ತವೆ. ಹೀಗಾಗಿ 40 ವರ್ಷಕ್ಕೂ ಮುನ್ನವೇ ಆರೋಗ್ಯ ವಿಮಾ ಪಾಲಿಸಿ ಮಾಡಿಸೋದು ಉತ್ತಮ. ಇನ್ನು ನಿಮ್ಮ ಆರೋಗ್ಯ ವಿಮಾ ಕವರೇಜ್ ಗೆ ಸಾಕಷ್ಟು ಮೊತ್ತ ಲಭಿಸುವಂತೆ ಲೆಕ್ಕಾಚಾರ ಹಾಕುವುದು ಕೂಡ ಅಗತ್ಯ. ಏಕೆಂದರೆ ಭವಿಷ್ಯದಲ್ಲಿ ವೈದ್ಯಕೀಯ ವೆಚ್ಚಗಳು ಇನ್ನಷ್ಟು ದುಬಾರಿಯಾಗುತ್ತವೆ. ಇನ್ನು ಯಾವುದೇ ಸಂದರ್ಭದಲ್ಲಿ ವಿಮಾ ಕವರೇಜ್ ಸಾಕಷ್ಟು ಪ್ರಮಾಣದಲ್ಲಿ ಇಲ್ಲ ಎಂಬುದು ತಿಳಿದು ಬಂದರೆ ನೀವು ಸೂಪರ್ ಟಾಪ್ -ಅಪ್ ಪಾಲಿಸಿ ಖರೀದಿಸುವ ಮೂಲಕ ಕವರೇಜ್ ಮೊತ್ತ ಹೆಚ್ಚಿಸಿಕೊಳ್ಳಬಹುದು.

Cheque Bounce ಬಗ್ಗೆ ನಿಮಗೆಷ್ಟು ಗೊತ್ತು? ಚೆಕ್ ಬೌನ್ಸ್ ಆದ್ರೆ ಜೈಲು ಶಿಕ್ಷೆಯಾಗುತ್ತಾ?

ಜೀವ ವಿಮಾ ಪಾಲಿಸಿ ಗಾತ್ರದ ಮರು ಮೌಲ್ಯಮಾಪನ ಮಾಡಿ
ಜೀವ ವಿಮೆ ಪಾಲಿಸಿ ಖರೀದಿದಾರರ ವಯಸ್ಸು ಹೆಚ್ಚಿದಂತೆ ಅವರ ಪಾಲಿಸಿ ಪ್ರೀಮಿಯಂ ಮೊತ್ತ ಕೂಡ ಹೆಚ್ಚುತ್ತದೆ. ಹೀಗಾಗಿ ನೀವು 40 ವರ್ಷಕ್ಕಿಂತಲೂ ಮುನ್ನಜೀವ ವಿಮಾ ಪಾಲಿಸಿ ಖರೀದಿಸಿದರೆ ಪ್ರೀಮಿಯಂಗಳ ಮೇಲೆ ಸಾಕಷ್ಟು ಹಣವನ್ನು ಉಳಿತಾಯ ಮಾಡಬಹುದು. ಹೀಗಾಗಿ ಒಮ್ಮೆ ನೀವು 40 ವರ್ಷ ತಲುಪಿದಾಗ ನಿಮ್ಮ ಜೀವ ವಿಮೆ ಕವರೇಜ್ ಅನ್ನು ನಿಮ್ಮ ಹಣಕಾಸಿನ ಜವಾಬ್ದಾರಿಗಳು ಹಾಗೂ ಅಗತ್ಯಗಳಿಗೆ ಅನುಗುಣವಾಗಿ ಮರು ಮೌಲ್ಯಮಾಪನ ಮಾಡಿ.

ಹೂಡಿಕೆ ಪೋರ್ಟ್ ಫೋಲಿಯೋ ಮರುಹೊಂದಾಣಿಕೆ ಮಾಡಿ
ನಿಮಗೆ 40 ವರ್ಷವಾದಾಗ ನಿಮ್ಮ ಹೂಡಿಕೆ ಪೋರ್ಟ್ ಫೋಲಿಯೋ ಅನ್ನು ಪರಿಶೀಲಿಸೋದು ಅಗತ್ಯ. ನಿಮಗೆ ವಯಸ್ಸಾದಂತೆ ನಿಮ್ಮ ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯ ತಗ್ಗುತ್ತದೆ. ಹಾಗೆಯೇ ರಿಟರ್ನ್ ಕುರಿತ ನಿಮ್ಮ ನಿರೀಕ್ಷೆಗಳು ಕೂಡ ಬದಲಾಗುತ್ತವೆ. ಈ ಎರಡೂ ವಿಚಾರಗಳು ಸಂಪತ್ತು ಸೃಷ್ಟಿ ಹಾಗೂ ಅಗತ್ಯಗಳ ಮರುಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಬದಲಾವಣೆ ತರಬಲ್ಲವು. 40ನೇ ವಯಸ್ಸಿಗೆ ಸಮೀಪಿಸುತ್ತಿದ್ದಂತೆ  ಆರ್ಥಿಕ ಜವಾಬ್ದಾರಿಗಳು ಹೆಚ್ಚುತ್ತವೆ. ಮನೆ ಖರೀದಿ, ಕಾರು ಖರೀದಿ, ಮಕ್ಕಳ ಶೈಕ್ಷಣಿಕ ವೆಚ್ಚ ಮುಂತಾದ ಜವಾಬ್ದಾರಿಗಳು ಖರ್ಚನ್ನು ಹೆಚ್ಚಿಸುತ್ತವೆ. ಹೀಗಾಗಿ ಹೂಡಿಕೆ ಮಾಡುವಾಗ ಎಚ್ಚರ ವಹಿಸೋದು ಅಗತ್ಯ.

ತುರ್ತು ನಿಧಿ ಸಾಕಷ್ಟಿದೆಯಾ?
ಇನ್ನು ನಿಮ್ಮ ಹಣಕಾಸಿನ ಬಾಧ್ಯತೆಗಳಿಗೆ ಅನುಗುಣವಾಗಿ ತುರ್ತುನಿಧಿ ರಚಿಸಬೇಕು. 25ನೇ ವಯಸ್ಸಿನಲ್ಲಿ ಅಗತ್ಯವಿರುವ ತುರ್ತುನಿಧಿ 40ನೇ ವಯಸ್ಸಿಗೆ ಸಾಕಾಗದು. ಏಕೆಂದರೆ ಸಮಯದ ಜೊತೆಗೆ ಜವಾಬ್ದಾರಿಗಳು ಹಾಗೂ ಬಾಧ್ಯತೆಗಳು ಕೂಡ ಹೆಚ್ಚುತ್ತವೆ. ಹೀಗಾಗಿ ನಿಮ್ಮ ಹಾಗೂ ನಿಮ್ಮ ಕುಟುಂಬದ ಮೂಲ ಅಗತ್ಯಗಳನ್ನು ನೋಡಿಕೊಳ್ಳಲು ಅಗತ್ಯವಾದ ಹಣದ ಅವಶ್ಯಕತೆ ಕೂಡ ಹೆಚ್ಚುತ್ತದೆ. ಹೀಗಾಗಿ ನಿಮ್ಮ ಬಳಿಯಿರುವ ತುರ್ತುನಿಧಿ ಅಗತ್ಯ ಪ್ರಮಾಣದಲ್ಲಿ ಇದೆಯಾ ಎಂಬುದನ್ನು ಪರಿಶೀಲಿಸಿ.

ITR ಫೈಲ್ ಮಾಡುವಾಗ ಯಾವುದೇ ಕಾರಣಕ್ಕೂ ಈ 5 ತಪ್ಪುಗಳನ್ನು ಮಾಡ್ಬೇಡಿ

ನಿಮ್ಮ ವಿಲ್ ಮರುಪರಿಶೀಲಿಸಿ
ನಿಮ್ಮ ಪಿತ್ರಾರ್ಜಿತ ಆಸ್ತಿಯನ್ನು ನಿಮ್ಮ ಆಯ್ದ ವಾರಸುದಾರರಿಗೆ ಹಸ್ತಾಂತರಿಸಲು ವಿಲ್ ಅಗತ್ಯ. ಸಮಯದ ಜೊತೆಗೆ ನಿಮ್ಮ ಕುಟುಂಬ ಬೆಳೆಯುತ್ತದೆ. ಹಾಗೆಯೇ ನಿಮ್ಮ ಆರ್ಥಿಕ ಪರಿಸ್ಥಿತಿ ಕೂಡ ಬದಲಾಗುತ್ತದೆ. ಹೀಗಾಗಿ ನಿಮ್ಮ ವಿಲ್ ಅನ್ನು ನಿಯಮಿತವಾಗಿ ಅಪ್ಡೇಟ್ ಮಾಡಲು ಮರೆಯಬೇಡಿ. 40ನೇ ವಯಸ್ಸಿನಲ್ಲಿ ಉದ್ಯೋಗದಲ್ಲಿ ನೀವು ಉನ್ನತ ಸ್ಥಾನಕ್ಕೇರಿರುತ್ತೀರಿ. ಹೀಗಾಗಿ ವಿಲ್ ಬರೆಯಲು ಇದು ಸೂಕ್ತ ಸಮಯ.

click me!