6.3 ಲಕ್ಷ ಕೋಟಿ ರೂ. ಪ್ಯಾಕೇಜ್‌: ಪ್ರವಾಸೋದ್ಯಮ, ಉದ್ದಿಮೆ, ಆರೋಗ್ಯಕ್ಕೆ ಆದ್ಯತೆ!

By Kannadaprabha NewsFirst Published Jun 29, 2021, 8:17 AM IST
Highlights

* ಕೊರೋನಾ ಹೊಡೆತಕ್ಕೆ ತತ್ತರಿಸಿದ ಪ್ರವಾಸೋದ್ಯಮ, ಉದ್ದಿಮೆಗೆ ಆದ್ಯತೆ

* 3ನೇ ಅಲೆ ಎದುರಿಸಲು ಆರೋಗ್ಯ ಕ್ಷೇತ್ರಕ್ಕೂ ಉತ್ತಮ ಕೊಡುಗೆ

* ಹಲವು ಹೊಸ ಯೋಜನೆಗಳ ಜೊತೆಗೆ ಈಗಾಗಲೇ ಜಾರಿಯಲ್ಲಿದ್ದ ಕೆಲ ಯೋಜನೆಗಳನ್ನು ಮತ್ತಷ್ಟುವಿಸ್ತರಿಸಲಾಗಿದೆ

ನವದೆಹಲಿ(ಜೂ.29): ಕೋವಿಡ್‌ನಿಂದ ನಲುಗಿರುವ ದೇಶದ ಆರ್ಥಿಕತೆಗೆ ಚೇತರಿಕೆ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸೋಮವಾರ 6.29 ಲಕ್ಷ ಕೋಟಿ ರು. ಮೊತ್ತದ ಹೊಸ ಆರ್ಥಿಕ ಪ್ಯಾಕೇಜ್‌ ಘೋಷಿಸಿದೆ. ಕೋವಿಡ್‌ನಿಂದ ನಲುಗಿದ ಪ್ರವಾಸೋದ್ಯಮ, ಔದ್ಯಮಿಕ ವಲಯಕ್ಕೆ ಮೊದಲ ಆದ್ಯತೆ ನೀಡಲಾಗಿದ್ದರೆ, ಆರೋಗ್ಯ ಕ್ಷೇತ್ರಕ್ಕೂ ಅಷ್ಟೇ ಮಹತ್ವ ನೀಡಲಾಗಿದೆ.

ಇದರಲ್ಲಿ ಹಲವು ಹೊಸ ಯೋಜನೆಗಳ ಜೊತೆಗೆ ಈಗಾಗಲೇ ಜಾರಿಯಲ್ಲಿದ್ದ ಕೆಲ ಯೋಜನೆಗಳನ್ನು ಮತ್ತಷ್ಟುವಿಸ್ತರಿಸಲಾಗಿದೆ. ಅಲ್ಲದೆ ಆರೋಗ್ಯ ಕ್ಷೇತ್ರದಲ್ಲಿನ ಮೂಲಸೌಕರ್ಯ ಉನ್ನತೀಕರಿಸಲು 50 ಸಾವಿರ ಕೋಟಿ ರು.ವರೆಗೆ ಸಾಲಕ್ಕೆ ಸ್ವತಃ ಕೇಂದ್ರ ಸರ್ಕಾರವೇ ಖಾತರಿ ನೀಡುವ ಯೋಜನೆಯನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರಕಟಸಿದ್ದಾರೆ.

ಕೊರೋನಾಗೆ ನಲುಗಿದ ದೇಶಕ್ಕೆ ಆರ್ಥಿಕ ಮದ್ದು, ಪ್ಯಾಕೇಜ್‌ ಘೋಷಿಸಿದ ನಿರ್ಮಲಾ!

1.1 ಲಕ್ಷ ಕೋಟಿ ರು. ಖಾತರಿರಹಿತ ಸಾಲ

ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಕ್ಕಿದ ವಲಯಗಳಿಗೆ 1.1 ಲಕ್ಷ ಕೋಟಿ ರು.ವರೆಗೆ ಖಾತರಿ ಸಹಿತ ಸಾಲ. ಆರೋಗ್ಯ ವಲಯ ಹೊರತುಪಡಿಸಿ ಇತರೆ ವಲಯಗಳಿಗೆ ಶೇ.8.25ರಷ್ಟುಬಡ್ಡಿದರ. 3 ವರ್ಷಗಳವರೆಗೆ ಸಾಲಕ್ಕೆ ಸರ್ಕಾರದಿಂದ ಖಾತರಿ. ಹೊಸ ಯೋಜನೆ ಮತ್ತು ಹಾಲಿ ಯೋಜನೆಗಳ ವಿಸ್ತರಣೆಗೆ ಸಾಲ ಸೌಲಭ್ಯ.

ಉದ್ಯಮಕ್ಕೆ ಹೆಚ್ಚುವರಿ 1.5 ಲಕ್ಷ ಕೋಟಿ

ತುರ್ತು ಸಾಲ ನಿಧಿ ಯೋಜನೆಯಡಿ ಸಣ್ಣ ಮತ್ತು ಮಧ್ಯಮ ವಲಯ ಉದ್ಯಮಗಳಿಗೆ ಸಾಲ ವಿತರಣೆ ಗುರಿಗೆ ಹೆಚ್ಚುವರಿಯಾಗಿ 1.5 ಲಕ್ಷ ಕೋಟಿ ರು.ಮೀಸಲು. 2020ರ ಮೇ ನಲ್ಲಿ ಘೋಷಿಸಿದ್ದ 20 ಲಕ್ಷ ಕೋಟಿ ರು. ಪ್ಯಾಕೇಜ್‌ ವೇಳೆ ಈ ಯೋಜನೆಗೆ 3 ಲಕ್ಷ ಕೋಟಿ ರು.ಮೀಸಲಿಡಲಾಗಿತ್ತು. ಅದಕ್ಕೆ ಮತ್ತೆ 1.50 ಲಕ್ಷ ಕೋಟಿ ರು.ಮೀಸಲು. ಜೊತೆಗೆ ಯೋಜನೆ ಅವಧಿ ಡಿ.31ರವರೆಗೆ ವಿಸ್ತರಣೆ.. ಈ ಯೋಜನೆಯಡಿ ಆಸ್ಪತ್ರೆ, ನರ್ಸಿಂಗ್‌ ಹೋಮ್‌, ಕ್ಲಿನಿಕ್‌, ಮೆಡಿಕಲ್‌ ಕಾಲೇಜುಗಳಿಗೆ ಸ್ಥಳದಲ್ಲೇ ಆಕ್ಸಿಜನ್‌ ಘಟಕ ಸ್ಥಾಪನೆಗೆ 2 ಕೋಟಿ ರು.ವರೆಗೆ ಸಾಲ. ಇದಕ್ಕೆ ಸರ್ಕಾರದಿಂದಲೇ ಖಾತರಿ. ಈ ಸಾಲಕ್ಕೆ ಶೇ.7.5ರ ಬಡ್ಡಿದರ. 25 ಲಕ್ಷ ಸಣ್ಣ ಉದ್ಯಮಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲು 1.25 ಲಕ್ಷ ಕೋಟಿ ರು. ಮೀಸಲು. ಇದು ಹೊಸ ಯೋಜನೆ.

ಪ್ರವಾಸೋದ್ಯಮಿಗಳಿಗೆ 10 ಲಕ್ಷ ರು. ಸಾಲ

ಟ್ರಾವೆಲ್‌ ಮತ್ತು ಪ್ರವಾಸೋದ್ಯಮ ವಲಯದಲ್ಲಿ ತೊಡಗಿರುವವರಿಗೆ 10 ಲಕ್ಷ ರು.ವರೆಗೆ ಸಾಲ. ಈ ಸಾಲಕ್ಕೂ ಸರ್ಕಾರವೇ ಖಾತರಿ ನೀಡಲಿದೆ. ಈ ಸಾಲಕ್ಕೆ ಯಾವುದೇ ಸಂಸ್ಕರಣಾ ಶುಲ್ಕ ಇಲ್ಲ. ನೋಂದಾಯಿತ ಪ್ರವಾಸಿ ಗೈಡ್‌ಗಳಿಗೆ 1 ಲಕ್ಷ ರು.ವರೆಗೆ ಖಾತರಿ ರಹಿತ ಸಾಲ. ಈ ಸಾಲಕ್ಕೆ ಯಾವುದೇ ಸಂಸ್ಕರಣಾ ಶುಲ್ಕ ಇಲ್ಲ. ಕೋವಿಡ್‌ ನಿರ್ಬಂಧ ತೆರವಾಗುತ್ತಲೇ ಭಾರತಕ್ಕೆ ಪ್ರವಾಸಕ್ಕೆ ಆಗಮಿಸುವ ಮೊದಲ 5 ಲಕ್ಷ ವಿದೇಶಿಯರಿಗೆ ವೀಸಾ ಶುಲ್ಕ ರದ್ದು. ಇದರಿಂದ ಸರ್ಕಾರಕ್ಕೆ 100 ಕೋಟಿ ರು. ಹೊರೆ. ಯೋಜನೆ ಮೊದಲ 5 ಲಕ್ಷ ಪ್ರವಾಸಿಗರಿಗೆ ಇಲ್ಲವೇ 20221 ಮಾ.31ರವರೆಗೆ ಜಾರಿಯಲ್ಲಿರಲಿದೆ.

ರಸಗೊಬ್ಬರಕ್ಕೆ 14775 ಕೋಟಿ ರು. ಸಬ್ಸಿಡಿ:

ರಸಗೊಬ್ಬರ ವಲಯಕ್ಕೆ ಹೆಚ್ಚುವರಿ 14755 ಕೋಟಿ ರು. ಸಬ್ಸಿಡಿ ನಿಗದಿ. ಇದು ಈಗಾಗಲೇ ನಿಗದಿ ಮಾಡಲಾಗಿದ್ದ 85413 ಕೋಟಿ ರು.ಗಿಂತ ಹೆಚ್ಚುವರಿ.

ನವೆಂಬರ್‌ವರೆಗೆ ಉಚಿತ ಪಡಿತರಕ್ಕೆ 2.2 ಲಕ್ಷ ಕೋಟಿ

ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನೆಯಡಿ 2021ರ ನವೆಂಬರ್‌ವರೆಗೂ ಬಡವರಿಗೆ ಉಚಿತ ಪಡಿತರ. ಇದಕ್ಕಾಗಿ ಒಟ್ಟು 2.27 ಲಕ್ಷ ಕೋಟಿ ರು. ವಿನಿಯೋಗ.

ಗ್ರಾಮಗಳ ಬ್ರಾಡ್‌ಬ್ಯಾಂಡ್‌ಗೆ 19 ಸಾವಿರ ಕೋಟಿ

ಗ್ರಾಮ ಪಂಚಾಯತ್‌ಗಳಿಗೆ ಬ್ರ್ಯಾಡ್‌ಬಾಂಡ್‌ ಸಂಪರ್ಕ ನೀಡಲು ಹೆಚ್ಚುವರಿ 19041 ಕೋಟಿ ರು. ವಿನಿಯೋಗ. ದೊಡ್ಡ ಮಟ್ಟದ ಎಲೆಕ್ಟ್ರಾನಿಕ್‌ ಉತ್ಪಾದನಾ ಕಂಪನಿಗಳಿಗೆ ನೀಡಲಾಗುವ ಉತ್ಪಾದನೆ ಆಧರಿತ ಪ್ರೋತ್ಸಾಹಕ 2025-26ರವರೆಗೆ ವಿಸ್ತರಣೆ.

ಕೊರೋನಾ 3ನೇ ಅಲೆ: ಮಕ್ಕಳ ಚಿಕಿತ್ಸೆಗೆ 23 ಸಾವಿರ ಕೋಟಿ

3ನೇ ಕೊರೋನಾ ಅಲೆ ಮಕ್ಕಳಿಗೆ ಬಾಧೆ ತರಬಹುದು ಎಂಬುದು ತಜ್ಞರ ಅಂದಾಜು. ಇದೇ ಕಾರಣಕ್ಕೆ, ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚುವರಿಯಾಗಿ 23220 ಕೋಟಿ ರು. ವಿನಿಯೋಗ ಮಾಡಲಾಗುವುದ. ಈ ಹಣವನ್ನು ಮುಖ್ಯವಾಗಿ ಮಕ್ಕಳು/ ಮಕ್ಕಳ ಚಿಕಿತ್ಸೆ/ ಮಕ್ಕಳ ಬೆಡ್‌ ನಿರ್ಮಾಣ ಮುಂತಾದವುಗಳಿಗೆ ಬಳಸಿಕೊಳ್ಳಲಾಗುವುದು.

ಇದೇ ವೇಳೆ ಖಾಸಗಿ ಆಸ್ಪತ್ರೆಗಳ ಮೂಲಸೌಕರ‍್ಯ ಅಭಿವೃದ್ಧಿಗೆ 50000 ಕೋಟಿ ರು. ನೀಡಲಾಗುವುದು. ಇದರಲ್ಲಿ ಒಬ್ಬರಿಗೆ 100 ಕೋಟಿ ರು.ವರೆಗೆ ಸಾಲ ವಿತರಣೆ ಮಾಡಲಾಗುವುದು ಹಾಗೂ ಗರಿಷ್ಠ ಶೇ.7.95ರಷ್ಟುಬಡ್ಡಿದರ ವಿಧಿಸಲಾಗುವುದು.

click me!