* ಸಹಕಾರ ಬ್ಯಾಂಕ್ ಹುದ್ದೆ ಶಾಸಕ, ಸಂಸದರಿಗೆ ಬೇಡ
* ಹುದ್ದೆ ಹೊಂದುವವರಿಗೆ ಸ್ನಾತಕೋತ್ತರ ಶಿಕ್ಷಣ ಕಡ್ಡಾಯ
* ಆರ್ಬಿಐ ಹೊಸ ಮಾರ್ಗಸೂಚಿ
ಮುಂಬೈ(ಜೂ.28): ಸಹಕಾರ ಬ್ಯಾಂಕ್ ಮುಖ್ಯಸ್ಥರ ಹುದ್ದೆಗಳಿಗೆ ಸಂಬಂಧಿಸಿದಂತೆ ರಿಸವ್ರ್ ಬ್ಯಾಂಕ್ (ಆರ್ಬಿಐ) ಮಹತ್ತರ ಬದಲಾವಣೆ ಮಾಡಿದೆ. ಪ್ರಾಥಮಿಕ ಪಟ್ಟಣ ಸಹಕಾರಿ ಬ್ಯಾಂಕ್ಗಳಿಗೆ ವ್ಯವಸ್ಥಾಪಕ ನಿರ್ದೇಶಕರು (ಎಂಡಿ) ಮತ್ತು ಪೂರ್ಣಾವಧಿಯ ನಿರ್ದೇಶಕ (ಡಬ್ಲ್ಯುಟಿಡಿ)ರ ಹುದ್ದೆಗಳಿಗೆ ನೇಮಕವಾಗುವವರಿಗೆ ಇರಬೇಕಾದ ಶೈಕ್ಷಣಿಕ ಮತ್ತು ವಯೋಮಿತಿ ಅರ್ಹತೆಗಳ ಬಗ್ಗೆ ಮಾರ್ಗಸೂಚಿ ಹೊರಡಿಸಿದೆ. ಇದೇ ವೇಳೆ, ಸಂಸದರು, ಶಾಸಕರು ಮತ್ತು ನಗರಾಡಳಿತದ ಸದಸ್ಯರಿಗೆ ಈ ಹುದ್ದೆಗಳನ್ನು ನೀಡದಂತೆ ನಿರ್ಬಂಧ ವಿಧಿಸಿದೆ.
ಈ ಪ್ರಕಾರ, ‘ಈ ಹುದ್ದೆಗಳನ್ನು ಅಲಂಕರಿಸುವವರು ಆರ್ಥಿಕತೆಗೆ ಸಂಬಂಧಿಸಿದ ಶಿಕ್ಷಣದಲ್ಲಿ ಸ್ನಾತಕೋತ್ತರರ ಪದವೀಧರರಾಗಿರಬೇಕು. ಚಾರ್ಟರ್ಡ್/ಕಾಸ್ಟ್ ಅಕೌಂಟೆಂಟ್ ಅಥವಾ ಎಂಬಿಎ ಅಥವಾ ಬ್ಯಾಂಕಿಂಗ್ನಲ್ಲಿ ಡಿಪ್ಲೋಮಾ ಅಥವಾ ಸಹಕಾರಿ ಉದ್ಯಮ ವ್ಯವಸ್ಥಾಪನೆಯಲ್ಲಿ ಡಿಪ್ಲೋಮಾ ಪೂರ್ಣಗೊಳಿಸಿರಬೇಕು. ಜೊತೆಗೆ ಈ ಹುದ್ದೆಗಳಿಗೆ ನೇಮಕವಾಗುವ ವ್ಯಕ್ತಿಯು 35 ವರ್ಷಕ್ಕಿಂತ ಕಡಿಮೆ ಅಥವಾ 70 ವರ್ಷ ಮೇಲಿರಬಾರದು. ಬ್ಯಾಂಕಿಂಗ್ ವಲಯದಲ್ಲಿ ಅಥವಾ ಬ್ಯಾಂಕೇತರ ಹಣಕಾಸು ಕಂಪನಿಗಳ ಮಧ್ಯಮ ಸ್ತರದ ಆಡಳಿತದಲ್ಲಿ 8 ವರ್ಷ ಅನುಭವ ಹೊಂದಿರಬೇಕು’ ಎಂದು ತಿಳಿಸಲಾಗಿದೆ.
ಸಂಸದ, ಶಾಸಕರು ಹಾಗೂ ನಗರಾಡಳಿತದ ಸದಸ್ಯರಲ್ಲದೇ. ವ್ಯಾಪಾರ, ವಾಣಿಜ್ಯ ಅಥವಾ ಕಂಪನಿಗಳಲ್ಲಿ ಹೂಡಿಕೆ ಹೊಂದಿದವರು ಕೂಡ ಈ ಹುದ್ದೆಗಳಿಗೆ ಅರ್ಹರಲ್ಲ ಎಂದು ಆರ್ಬಿಐ ಹೇಳಿದೆ.
ನೇಮಕ ಆದವರು 5 ವರ್ಷ ಹುದ್ದೆ ಹೊಂದಿರಬಹುದು ಹಾಗೂ ಮರುನೇಮಕಕ್ಕೆ ಅರ್ಹರು. ಎಂಡಿ ಹಾಗೂ ಪೂರ್ಣಾವಧಿ ನಿರ್ದೇಶಕರ ಅವಧಿ 15 ವರ್ಷ ಮೀರಕೂಡದು. ಒಂದು ವೇಳೆ ಅಗತ್ಯ ಬಿದ್ದರೆ 3 ವರ್ಷದ ಅಂತರದ ಬಳಿಕ ನೇಮಕಗೊಳ್ಳಬಹುದು ಎಂದು ತಿಳಿಸಲಾಗಿದೆ.