
ಭಾರತದಲ್ಲಿ ಬಡತನದ ಬಗ್ಗೆ ಸಾಕಷ್ಟು ಮಾತುಗಳು ಕೇಳಿಬರ್ತಿರೋ ನಡುವೆಯೇ, ಇಲ್ಲಿ ಪ್ರತಿವರ್ಷ ಮಾರಾಟವಾಗುವ ಚಿನ್ನದ ಮೌಲ್ಯ ಕೇಳಿದ್ರೆ ಶಾಕ್ ಆಗೋದು ಗ್ಯಾರೆಂಟಿ. ಭಾರತೀಯ ಆಭರಣ ಮಾರುಕಟ್ಟೆಯ ಮೌಲ್ಯ 2025 ರಲ್ಲಿ ಅಂದಾಜು 90 ಬಿಲಿಯನ್ ಡಾಲರ್ ಆಗಿದೆ ಎನ್ನುತ್ತದೆ ವರದಿ. ಇದರ ಅರ್ಥ ಬಿಲಿಯನ್ ಡಾಲರ್ಗಟ್ಟಲೆ ಚಿನ್ನಾಭರಣಗಳನ್ನು ಪ್ರತಿವರ್ಷ ಭಾರತೀಯರು ಖರೀದಿಸುತ್ತಾರೆ. ಚಿನ್ನದ ಬೆಲೆ 10 ಗ್ರಾಮ್ಗೆ ಲಕ್ಷದ ಗಡಿ ದಾಟಿದರೂ, ಹಬ್ಬದ ಸಂದರ್ಭಗಳಲ್ಲಿ ಚಿನ್ನಾಭರಣ ಅಂಗಡಿಗಳಿಗೆ ಮುಗಿಬೀಳುವವರ ಸಂಖ್ಯೆ ನೋಡಿದ್ರೆ ನಿಜಕ್ಕೂ ಇಷ್ಟೊಂದು ಸಿರಿವಂತರು ಇದ್ದಾರಾ ಎನ್ನಿಸುವುದು ಉಂಟು! ಇದೇ ಕಾರಣಕ್ಕೆ ಬೆಂಗಳೂರಿನಂಥ ಕೆಲವು ಮಹಾನಗರಗಳ ಪ್ರತಿಷ್ಠಿತ ಬೀದಿಗಳಲ್ಲಿ ಚಿನ್ನಾಭರಣ ಷೋರೂಮ್ಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವುದು ಕೂಡ ಮಧ್ಯಮ ವರ್ಗದವರಿಗೆ ವಿಚಿತ್ರ ಎನ್ನಿಸುವುದು ಉಂಟು.
ಇವುಗಳ ನಡುವೆಯೇ ಇದೀಗ ಶಾಕಿಂಗ್ ವಿಷಯವೊಂದು ಹೊರಬಂದಿದೆ. ಅದೇನೆಂದರೆ, ಬಾಂಗ್ಲಾದೇಶದಿಂದ ನಕಲಿ ಚಿನ್ನವು ವಿವಿಧ ದೇಶಗಳಿಗೆ ಮಾರಾಟ ಆಗುತ್ತಿದೆ ಎನ್ನುವುದು. ಇದಕ್ಕೆ ಬಾಂಗ್ಲಾ ರೆಡ್ ಗೋಲ್ಡ್ (Bangal Red Gold) ಎಂದು ಕರೆಯುತ್ತಾರೆ. ಅಸಲಿ ಚಿನ್ನದ ತಲೆಯ ಮೇಲೆ ಹೊಡೆದಂತೆ ಈ ಚಿನ್ನವಿದೆ. ಇದರ ಅರ್ಥ, ಅಸಲಿ ಚಿನ್ನಕ್ಕೆ ಏನೇನು ಗುಣಗಳು ಇರುತ್ತವೆಯೋ, ಅವೆಲ್ಲಾ ಗುಣಗಳು ಈ ಚಿನ್ನಕ್ಕೂ ಇದೆ. ಇದೇ ಕಾರಣದಿಂದ ಖುದ್ದು ಚಿನ್ನಾಭರಣ ಮಳಿಗೆಯವರಿಗೂ, ಚಿನ್ನದ ಎಕ್ಸ್ಪರ್ಟ್ಗಳಿಗೂ ಇದನ್ನು ಗುರುತಿಸುವುದು ಕಷ್ಟ ಎನ್ನಲಾಗಿದೆ.
ಇದು ಹಲವರಿಗೆ ತಲೆನೋವಾಗಿದ್ದರೂ, ಕೆಲವು ಚಿನ್ನಾಭರಣ ಮಾರಾಟ ಮಾಡುವವರಿಗೆ ಇದು ಸಹಜವಾಗಿ ಪ್ಲಸ್ ಪಾಯಿಂಟ್ ಆಗುತ್ತಿದೆ. ಇದಕ್ಕೆ ಕಾರಣ, ಚಿನ್ನದ ಎಕ್ಸ್ಪರ್ಟ್ಗಳೇ ಇದನ್ನು ಗುರುತಿಸುವುದು ಕಷ್ಟಸಾಧ್ಯ ಎಂದ ಮೇಲೆ ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುವ ಈ ಚಿನ್ನವನ್ನು ಕೊಂಡು, ಅದನ್ನು ಅಸಲಿ ಎಂದು ಮಾರಾಟ ಮಾಡುವುದು ಎಷ್ಟು ಸುಲಭ ಅಲ್ವಾ? ಕೆಲವೇ ಸಾವಿರ ರೂಪಾಯಿಗಳಲ್ಲಿ ಕೊಂಡು 10 ಗ್ರಾಮ್ಗೆ ಲಕ್ಷ ಲಕ್ಷ ರೂಪಾಯಿ ಬೆಲೆಯಲ್ಲಿ ಮಾರಾಟ ಮಾಡಿದ್ರೆ ಅಬ್ಬಾ ಕೆಲವೇ ದಿನಗಳಲ್ಲಿ ಕೋಟ್ಯಧಿಪತಿಗಳಾಗಬಹುದು ಮಾರಾಟಗಾರರು. ಹೀಗಿದ್ದ ಮೇಲೆ ಇದನ್ನು ಕೊಳ್ಳುವ ಗ್ರಾಹಕರ ಸ್ಥಿತಿ ಏನಾಗಬೇಡ?
ಅಷ್ಟಕ್ಕೂ ಅಸಲಿ ಚಿನ್ನ ಎಂದು ನಕಲಿ ಚಿನ್ನವನ್ನು ಕೊಂಡು ತಂದು, ಅದಕ್ಕೆ ಅಸಲಿ ಚಿನ್ನದ ಬೆಲೆ ಕೊಟ್ಟು ಖುಷಿ ಪಡುವ ಗ್ರಾಹಕರು ಇದಕ್ಕೆ ಬಲಿಪಶು ಆಗುತ್ತಿದ್ದಾರೆ ಎನ್ನುತ್ತಾರೆ ತಜ್ಞರು. ಏಕೆಂದರೆ ಈ ಬಾಂಗ್ಲಾದ ರೆಡ್ ಗೋಲ್ಡ್, ಮೊದಲೇ ಹೇಳಿದಂತೆ ಅಸಲಿನೋ, ನಕಲಿನೋ ಗುರುತಿಸುವುದು ಕಷ್ಟ. ಇದನ್ನು ಕರಗಿಸಿದರು ಕೂಡ ಅಸಲಿ ಚಿನ್ನದ ರೀತಿಯಲ್ಲಿಯೇ ಕಾಣಿಸುತ್ತದೆ. ಇದನ್ನು ದ್ರಾವಣದಲ್ಲಿ ಅದ್ದಿದರೂ ಅಸಲಿಗೂ, ನಕಲಿಗೂ ವ್ಯತ್ಯಾಸ ಅಷ್ಟೊಂದು ಗೊತ್ತಾಗುವುದಿಲ್ಲವಂತೆ! ಆದರೆ, ಗ್ರಾಹಕರು ಕೊಳ್ಳುವ ಚಿನ್ನವನ್ನು ಮುಂದೊಂದು ದಿನ ಅವರ ಯಾವುದಾದರೂ ಕಷ್ಟದ ಕಾಲದಲ್ಲಿ ಇಡಲು ಹೋದಾಗ ಮಾತ್ರ ಸಮಸ್ಯೆ ಬಂದರೂ ಬರಬಹುದಾದ ದೊಡ್ಡ ಅನಾಹುತಗಳ ಬಗ್ಗೆಯೂ ಅಲ್ಲಗಳೆಯುವಂತಿಲ್ಲ ಎನ್ನುವುದು ತಜ್ಞರ ಅಭಿಮತ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.