
ನವದೆಹಲಿ: ಕೆಲವು ಕನಸುಗಳು ಶುರುವಾಗುವುದೇ ಹಾಗೆ, ಶೂನ್ಯದಿಂದ. ಏನು ಇಲ್ಲದೆಯೇ ಶುರುವಾಗುವ ಕನಸೊಂದು ನಂತರ ಬೃಹದಾಕಾರವಾಗಿ ಬೆಳೆಯುತ್ತದೆ. ತಾನು ಬೆಳೆಯುವ ಜೊತೆಗೆ ಹಲವರಿಗೆ ಬದುಕು ನೀಡುತ್ತದೆ. ಹಾಗೆಯೇ ಶೂನ್ಯದಿಂದ ತಮ್ಮ ಉದ್ಯಮವನ್ನು ಆರಂಭಿಸಿದ ಸವ್ಜಿ ಧೋಲಕಿಯ ಅವರ ಕತೆ ಇಲ್ಲಿದೆ.
ಸವ್ಜಿ ಧೋಲಕಿಯಾ ಆಗ ಗುಜರಾತ್‌ನ ನವ ತರುಣ. ಅವರು ಭಾರತದ ಡೈಮಂಡ್ ಸಿಟಿ ಎನಿಸಿರುವ ಗುಜರಾತ್‌ನ ಸೂರತ್‌ಗೆ ಬಂದಿಳಿದಾಗ ಅವರ ಬಳಿ ಇದ್ದಿದ್ದು ಕೇವಲ 12 ರೂಪಾಯಿಗಳು. ಅದೂ ಅವರ ಚಿಕ್ಕಪ್ಪನ ಬಳಿಯಿಂದ ಕೇಳಿಕೊಂಡು ಬಂದಂತಹ ಹಣ ಆಗಿತ್ತು. ಸೂರತ್‌ಗೆ ಬಂದು ತಲುಪಿದಾಗ ಅವರ ಬಳಿ ಬದುಕು ಕಟ್ಟಿಕೊಳ್ಳುವುದಕ್ಕಾಗಿ ಉದ್ಯೋಗವೊಂದನ್ನು ಅರಸುವುದರ ಹೊರತಾಗಿ ಬೇರೆ ಯಾವುದೇ ಕೆಲಸಗಳಿರಲಿಲ್ಲ. ಆದರೆ ನಂತರದಲ್ಲಿ ಅವರು ಕಟ್ಟಿದ ಸಾಮ್ರಾಜ್ಯವಾದ ಹರಿ ಕೃಷ್ಣ ಎಕ್ಸ್‌ಫೋರ್ಟ್ ಇಂದು ಭಾರತದ ಅತ್ಯಂತ ದೊಡ್ಡ ಡೈಮಂಡ್ ಎಕ್ಸ್‌ಫೋರ್ಟ್ ಕಂಪನಿಯಾಗಿ ಬದಲಾಗಿದೆ. ಅವರು ಕಟ್ಟಿದ ಆ ಡೈಮಂಡ್ ಸಾಮ್ರಾಜ್ಯದ ಇಂದಿನ ಮೌಲ್ಯ ಬರೋಬ್ಬರಿ 15 ಸಾವಿರ ಕೋಟಿ ರೂಪಾಯಿಗಳು. ಅವರ ಉದ್ಯಮ ಲೋಕದಲ್ಲಿ ಭಾರತದ ಡೈಮಂಡ್ ಕಿಂಗ್ ಎಂದೇ ಪರಿಚಿತರಾಗಿದ್ದಾರೆ.
ಉದ್ಯೋಗಿಗಳಿಗೆ ಕಾರು-ಮನೆ ಉಡುಗೊರೆ ನೀಡುವ ಕುಬೇರ:
ಈ ಹೆಸರು ಕೇವಲ ಅವರ ಈ ಉದ್ಯಮದಿಂದ ಬಂದಿದ್ದಲ್ಲ ಬದಲಾಗಿ ಅವರು ಮಾಡುತ್ತಿರುವ ಕೆಲಸಗಳಿಂದಾಗಿದೆ. ಪ್ರತಿ ವರ್ಷವೂ ದೀಪಾವಳಿ ಸಮಯದಲ್ಲಿ ಹರಿಕೃಷ್ಣ ಡೈಮಂಡ್ ಎಕ್ಸ್‌ಪೋರ್ಟ್ ಸಂಸ್ಥೆ ತನ್ನ ಉದ್ಯೋಗಿಗಳಿಗಾಗಿ ದೊಡ್ಡ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸುತ್ತದೆ. ಅವರ ಕಂಪನಿಯೂ ತನ್ನ ಉದ್ಯೋಗಿಗಳಿಗೆ ನೀಡುವ ಉಡುಗೊರೆ ಕೇವಲ ಗಿಫ್ಟ್ ವೋಚರ್‌ಗಳಿಗೋ ಅಥವಾ ಬೋನಸ್ ಚೆಕ್‌ಗಳಿಗೋ ಸೀಮಿತವಾಗಿಲ್ಲ. ಬದಲಾಗಿ ಅವರು ತಮ್ಮ ಉದ್ಯೋಗಿಗಳಿಗೆ ಕಾರುಗಳನ್ನು ನಿವೇಶನಗಳನ್ನು ವಜ್ರದ ಆಭರಣಗಳನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆ. ಕೇವಲ ಒಂದು ಕಾರ್ಯಕ್ರಮದಲ್ಲಿ ಧೋಲಕಿಯಾ ಅವರು 1200 ಕಾರುಗಳನ್ನು ಹಾಗೂ 400 ಉದ್ಯೋಗಿಗಳಿಗೆ ಮನೆ ನಿವೇಶನಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಅವರಲ್ಲಿ ಅನೇಕರು ವರ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಡೈಮಂಡ್ ಕಟ್ಟರ್‌ಗಳು ಪಾಲಿಶ್ ಮಾಡುವವರು ಆಗಿದ್ದಾರೆ. ಅವರಾರು ಮ್ಯಾನೇಜರ್‌ಗಳೋ, ಕಾರ್ಯನಿರ್ವಹಣಾಧಿಕಾರಿಗಳೋ ಆಗಿಲ್ಲ ಎಂಬುದು ಇನ್ನೂ ವಿಶೇಷ.
ಇದನ್ನೂ ಓದಿ: ಟ್ರಾಫಿಕ್ ಚಲನ್ ನೀಡಿದ ಸುಳಿವು: ಕದ್ದ ವಾಹನವನ್ನು ರಾಜಾರೋಷವಾಗಿ ಓಡಿಸ್ತಿದ್ದ ಕಳ್ಳನ ಕಡೆಗೂ ಬಂಧಿಸಿದ ಪೊಲೀಸರು
ಹಲವು ವರ್ಷಗಳಿಂದ ಅವರ ಈ ಉದಾರ ದಾನ ಮುಂದುವರಿಯುತ್ತಲೇ ಬಂದಿದ್ದು, ತನ್ನ ಬಳಿ ಕೆಲಸ ಮಾಡುವ ಪ್ರತಿಯೊಬ್ಬ ವ್ಯಕ್ತಿಯು ಮನೆ ಮತ್ತು ವಾಹನವನ್ನು ಹೊಂದಬೇಕೆಂಬುದು ಅವರ ಆಶಯವಾಗಿದೆ. ಇದು ತನ್ನ ಔದಾರ್ಯ ಅವರ ಇದು ಅನೇಕರ ಅಗತ್ಯ ಎಂಬಂತೆ ಅವರು ನೋಡುತ್ತಾರೆ. ನೀವು ಹೆಚ್ಚು ಕೊಟ್ಟಷ್ಟೂ, ನೀವು ಹೆಚ್ಚು ಪಡೆಯುತ್ತೀರಿ ಎಂದು ಅವರು ಹೇಳುತ್ತಾರೆ. ತನ್ನ ಕಾರ್ಮಿಕರು ಜೀವನ ನಿರ್ವಹಣೆಗೆ ಹೆಣಗಾಡುತ್ತಿದ್ದರೆ ಅಂತಹ ಕಂಪನಿಗಳು ಯಶಸ್ವಿಯಾಗುವುದಕ್ಕೆ ಸಾಧ್ಯವಿಲ್ಲ ಎಂಬುದು ಅವರ ಅಭಿಪ್ರಾಯವಾಗಿದೆ. ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕದನ ವಿರಾಮದ ಬೆನ್ನಲ್ಲೇ 'ಟ್ರೈಟಾನ್' ನಾಪತ್ತೆ: ಇರಾನ್ ಗಡಿಯಲ್ಲಿ ಅಮೆರಿಕದ ಅತ್ಯಂತ ದುಬಾರಿ ಡ್ರೋನ್ ಪತನ?
ಅವರ ಇಂತಹ ಯೋಚನೆಯೇ ಅವರ ಕಂಪನಿ ದಿನನಿತ್ಯ ಹೇಗೆ ನಡೆಯುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ಇಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಉದ್ಯೋಗಿಗಳಿಗೆ ಹಂತಹಂತವಾಗಿ ಉಡುಗೊರೆ ರೂಪದಲ್ಲಿ ಪ್ರತಿಫಲ ನೀಡಲಾಗುತ್ತದೆ. ಉತ್ಪಾದನಾ ವ್ಯವಹಾರದಲ್ಲಿ ಸಿಬ್ಬಂದಿ ವಹಿವಾಟು ಕಡಿಮೆ. ಹೀಗಾಗಿ ಒಳ್ಳೆಯ ವ್ಯಕ್ತಿತ್ವದ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಾಗುತ್ತದೆ ಹಾಗೂ ಇದು ವ್ಯವಹಾರವನ್ನು ಬಲಪಡಿಸುತ್ತದೆ.
ಗ್ರಾಮೀಣ ಭಾಗದಲ್ಲಿ ಕೆರೆ ನಿರ್ಮಾಣಕ್ಕೂ ಸಹಾಯ
ತಮ್ಮ ಉದ್ಯಮದ ಹೊರತಾಗಿ ಧೋಲಕಿಯಾ ಅವರು ಗುಜರಾತ್‌ನ ಗ್ರಾಮೀಣ ಭಾಗದಲ್ಲಿ ಕೆರೆಗಳ ನಿರ್ಮಾಣಕ್ಕೆ ಧನಸಹಾಯ ಮಾಡುತ್ತಿದ್ದಾರೆ. ಇದು ಅವರು ಬೆಳೆದ ಪ್ರದೇಶದಲ್ಲಿನ ಪ್ರಾಯೋಗಿಕ ಸಮಸ್ಯೆಯಾಗಿದ್ದು, ಇದು ಅಲ್ಲಿನ ರೈತ ಸಮುದಾಯಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಹೀಗೆ ಕೆರೆಯ ನೀರನ್ನು ಕೆರೆಗೆ ಚೆಲ್ಲು ಎಂಬ ಗಾದೆಯಂತೆ ಧೋಲಕಿಯಾ ಅವರು ತಮ್ಮ ಉದ್ಯಮದಿಂದ ಬಂದ ಒಂದು ಭಾಗವನ್ನು ಸಮಾಜದ ಶ್ರೇಯಸ್ಸಿಗೆ ತೆಗೆದಿಡುವ ಮೂಲಕ ಕೇವಲ ಉದ್ಯಮಿ ಎಂದಷ್ಟೇ ಗುರುತಿಸಿಕೊಂಡಿಲ್ಲ, ಮಾನವೀಯತೆಯ ಸಕಾರಮೂರ್ತಿಯಾಗಿ ಅವರು ಕಾಣಿಸುತ್ತಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.