ಮನೆ ಖರೀದಿಯಲ್ಲಿ ಪತ್ನಿ ಪಾಲುದಾರಳೇ? ಹಾಗಿದ್ರೆ ಆಸ್ತಿ ಆದಾಯ ತೆರಿಗೆಯಲ್ಲೂ ಆಕೆಗೆ ಪಾಲಿದೆ!
ಮನೆ ಖರೀದಿಸುವ ಸಂದರ್ಭದಲ್ಲಿ ಪತಿ ಹಾಗೂ ಪತ್ನಿ ಜಂಟಿಯಾಗಿ ಖರೀದಿಸೋದು ಸಾಮಾನ್ಯ. ಆದ್ರೆ, ಈ ರೀತಿ ಮನೆ ಖರೀದಿಯಲ್ಲಿ ಪತ್ನಿಯೂ ಪಾಲುದಾರಳಾಗಿದ್ರೆ ಅದರಿಂದ ಬರುವ ಆದಾಯ ಮೇಲೆ ವಿಧಿಸುವ ತೆರಿಗೆಯಲ್ಲಿ ಕೂಡ ಶೇ.50ರಷ್ಟನ್ನು ಆಕೆ ಭರಿಸಬೇಕು ಎಂದು ಐಟಿಎಟಿ ದೆಹಲಿ ಪೀಠ ತೀರ್ಪು ನೀಡಿದೆ. ಪತ್ನಿ ಕೂಡ ಆದಾಯದ ಮೂಲ ಹೊಂದಿದ್ರೆ ಮಾತ್ರ ಇದು ಅನ್ವಯಿಸುತ್ತದೆ.
ಮುಂಬೈ (ಫೆ.21): ಮನೆ ಆಸ್ತಿಯಲ್ಲಿ ಪತಿ ಹಾಗೂ ಪತ್ನಿ ಪಾಲಿನ ಪ್ರಮಾಣ ಎಷ್ಟೆಂದು ನೋಂದಾಯಿತ ಮಾರಾಟ ಪತ್ರದಲ್ಲಿ ಉಲ್ಲೇಖಿಸದ ಸಂದರ್ಭದಲ್ಲಿ ಇಬ್ಬರೂ ಅದರಲ್ಲಿ ಸಮಾನ ಪಾಲು ಹೊಂದಿದ್ದಾರೆ ಎಂದೇ ಪರಿಗಣಿಸುವ ನಿರ್ಧಾರವನ್ನು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ (ಐಟಿಎಟಿ) ದೆಹಲಿ ಪೀಠ ಎತ್ತಿ ಹಿಡಿದಿದೆ. ತೆರಿಗೆದಾರರಾದ ಶಿವಾನಿ ಮದನ್ ಪ್ರಕರಣದಲ್ಲಿಐಟಿಎಟಿ ಈ ತೀರ್ಪು ನೀಡಿದೆ. 2014-15ನೇ ಹಣಕಾಸು ಸಾಲಿನಲ್ಲಿ ಮನೆ ಆಸ್ತಿಯ ಆದಾಯಕ್ಕೆ ಸಂಬಂಧಿಸಿ 9.8 ಲಕ್ಷ ರೂ. ತೆರಿಗೆ ವಿಧಿಸಲಾಗಿತ್ತು. ಇದನ್ನು ಪ್ರಶ್ನಿಸಿ ಐಟಿಎಟಿಗೆ ತೆರಿಗೆದಾರರು ಮೇಲ್ಮನವಿ ಸಲ್ಲಿಸಿದ್ದರು. ಆದರೆ, ಐಟಿಎಟಿ ತೆರಿಗೆ ವಿಧಿಸಿರೋದು ಸರಿಯಾಗಿಯೇ ಇದೆ ಎಂದು ಹೇಳುವ ಮೂಲಕ ಹಿಂದಿನ ಆದೇಶವನ್ನು ಎತ್ತಿ ಹಿಡಿದಿದೆ.ಈ ಆಸ್ತಿ ಖಾಲಿಯಿದ್ದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಕಾಯ್ದೆ ನಿಯಮಗಳಡಿಯಲ್ಲಿ ವಿಧಿಸಲಾಗಿದ್ದ ತೆರಿಗೆಯಲ್ಲಿ ಶೇ.50ರಷ್ಟು ಪತ್ನಿ ಪಾವತಿಸಬೇಕಿತ್ತು. ಶಿವಾನಿ ಮದನ್ ಮಾಲೀಕತ್ವದ ಉದ್ಯಮ ಸಂಸ್ಥೆಯೊಂದರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ಸಂದರ್ಭದಲ್ಲಿ 2011ನೇ ಸಾಲಿನಲ್ಲಿ ಆಕೆ ತಮ್ಮ ಪತಿ ಜೊತೆಗೆ ಜಂಟಿಯಾಗಿ 3.5 ಕೋಟಿ ರೂ. ಮೌಲ್ಯದ ಮನೆ ಖರೀದಿಸಿರೋದು ಪತ್ತೆಯಾಗಿತ್ತು. ಈ ಸಮಯದಲ್ಲಿ ಆಕೆ ತನ್ನ ಐಟಿ ರಿಟರ್ನ್ಸ್ ನಲ್ಲಿ ಮನೆಯಿಂದ ಬರುತ್ತಿರುವ ಆದಾಯದ ಬಗ್ಗೆ ಉಲ್ಲೇಖಿಸಿರಲಿಲ್ಲ. ಈ ಬಗ್ಗೆ ಪ್ರಶ್ನಿಸಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಆಕೆಗೆ ನೋಟಿಸ್ ಜಾರಿ ಮಾಡಿದ್ದರು.
ಆದಾಯ ತೆರಿಗೆ ಇಲಾಖೆಯ ನೋಟಿಸ್ ಗೆ ಉತ್ತರಿಸಿದ್ದ ಮಹಿಳೆ, ಆ ಆಸ್ತಿಯಲ್ಲಿ ತಾನು ಶೇ.20ರಷ್ಟನ್ನು ಮಾತ್ರ ಹೂಡಿಕೆ ಮಾಡಿದ್ದೆ. ಅದು ಆಸ್ತಿ ಖರೀದಿ ಬೆಲೆಯ ಅಂದಾಜು ಶೇ.5.4ರಷ್ಟಿದೆ ಎಂದು ತಿಳಿಸಿದ್ದರು. ಅಲ್ಲದೆ, ಆಕೆಯ ಪಾಲಿಗೆ ಅನುಗುಣವಾಗಿ ಮನೆಯಿಂದ ಬರುತ್ತಿರುವ ಆದಾಯವನ್ನು ಆಕೆ ಬಹಿರಂಗಪಡಿಸಿದ್ದರು. ಅಲ್ಲದೆ, ಈ ಬಗ್ಗೆ ಮೇಲ್ಮನವಿ ಕೂಡ ಸಲ್ಲಿಸಿದ್ದರು. ಅನೇಕ ಹಂತಗಳಲ್ಲಿ ಈ ಮೇಲ್ಮನವಿಯನ್ನು ತಿರಸ್ಕರಿಸಲಾಗಿತ್ತು. ಹೀಗಾಗಿ ಅಂತಿಮವಾಗಿ ಶಿವಾನಿ ಮದನ್, ಐಟಿಎಟಿಗೆ ಮೇಲ್ಮನವಿ ಸಲ್ಲಿಸಿದ್ದರು. ಇದರಲ್ಲಿ ಆಕೆ ಮನೆ ಖರೀದಿ ಸಂದರ್ಭದಲ್ಲಿ ಮಾರಾಟ ಪತ್ರದಲ್ಲಿ (Sale deed) ಪತ್ನಿಯ ಹೆಸರನ್ನು ನಮೂದಿಸೋದು ಸಂಪ್ರದಾಯ. ಹೀಗಿರುವಾಗ ಮನೆ ಆಸ್ತಿಯಿಂದ ಬಂದ ಆದಾಯದ ಮೇಲಿನ ತೆರಿಗೆಯಲ್ಲಿ ಶೇ.50ರಷ್ಟನ್ನು ಆಕೆ ಮೇಲೆ ವಿಧಿಸೋದು ಸರಿಯಲ್ಲ ಎಂದು ತಿಳಿಸಿದ್ದರು. ಅಲ್ಲದೆ, ಈ ವಾದಕ್ಕೆ ಪುಷ್ಟಿ ನೀಡಲು ನ್ಯಾಯಾಲಯದ ಅನೇಕ ಆದೇಶಗಳನ್ನು ಕೂಡ ಉಲ್ಲೇಖಿಸಿದ್ದರು.
ಪ್ಯಾನ್ ಕಾರ್ಡ್ ಕಳೆದು ಹೋಗಿದೆಯಾ? ಡೋಂಟ್ ವರಿ, ಮರು ಅರ್ಜಿ ಸಲ್ಲಿಕೆ ಮಾಡಿ
ಈ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿದ ಐಟಿಎಟಿ, ಈ ಮೇಲ್ಮನವಿಯನ್ನು ತಿರಸ್ಕರಿಸಿತ್ತು. ಇನ್ನು ತೆರಿಗೆ ನ್ಯಾಯಮಂಡಳಿ ಕೋಲ್ಕತ್ತ ಹೈಕೋರ್ಟ್ ನೀಡಿದ ತೀರ್ಪೊಂದನ್ನು ಉಲ್ಲೇಖಿಸಿ, ಆಸ್ತಿಯಿಂದ ಬಂದ ಆದಾಯಕ್ಕೆ ಪತಿಯ ಹೆಸರಿನಲ್ಲಿ ತೆರಿಗೆ ವಿಧಿಸಬೇಕು ಎಂದು ತಿಳಿಸಿದೆ. ಆದರೆ, ಈ ಪ್ರಕರಣದಲ್ಲಿ ಪತ್ನಿ ಯಾವುದೇ ಉದ್ಯೋಗ ಹೊಂದಿಲ್ಲ. ಆಕೆಗೆ ಯಾವುದೇ ಆದಾಯದ ಮೂಲವೂ ಇಲ್ಲ. ಆದರೆ, ಶಿವಾನಿ ಮದನ್ ಪ್ರಕರಣದಲ್ಲಿ ಆಕೆ ಕೂಡ ವೇತನ ಗಳಿಸುತ್ತಾಳೆ. ಹೀಗಾಗಿ ತೆರಿಗೆಯಲ್ಲಿ ಆಕೆಗೆ ಶೇ.50ರಷ್ಟನ್ನು ವಿಧಿಸಿರೋದರಲ್ಲಿ ತಪ್ಪಿಲ್ಲ ಎಂದು ತಿಳಿಸಿದೆ. ಇನ್ನು ಮನೆ ಖರೀದಿಸುವಾಗ ಪತ್ನಿ ಹೆಸರನ್ನು ಕೂಡ ಸೇರ್ಪಡೆಗೊಳಿಸೋದು ಸರ್ವೇಸಾಮಾನ್ಯ ಎಂದು ತೆರಿಗೆ ತಜ್ಞರು ತಿಳಿಸಿದ್ದಾರೆ.
ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹೊಂದಿದ್ದೀರಾ? ಹಾಗಾದ್ರೆ ಈ 8 ಸೇವಾ ಶುಲ್ಕಗಳ ಬಗ್ಗೆ ತಿಳಿದಿರಲಿ
ಒಟ್ಟಾರೆ ಪತ್ನಿ ಕೂಡ ಆದಾಯದ ಮೂಲವನ್ನು ಹೊಂದಿದ್ದ ಸಂದರ್ಭದಲ್ಲಿ ಮನೆ ಆಸ್ತಿಯಿಂದ ಗಳಿಕೆಯದ ಆದಾಯ ಮೇಲೆ ವಿಧಿಸುವ ತೆರಿಗೆಯಲ್ಲಿ ಆಕೆ ಕೂಡ ಅರ್ಧ ಪಾಲು ಹೊಂದಿದ್ದಾಳೆ ಎಂಬುದನ್ನು ಈ ತೀರ್ಪು ಸ್ಪಷ್ಟಪಡಿಸಿದೆ.