ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಸೇರಿ ರಾಜ್ಯಾದ್ಯಂತ ಕೈಗಾರಿಕೆಗಳು ಏಕರೂಪವಾಗಿ ಬೆಳವಣಿಗೆ ಆಗಲು ಸರ್ಕಾರ ಬದ್ಧವಾಗಿದೆ.
ಹುಬ್ಬಳ್ಳಿ(ಜು.17): ನವೆಂಬರ್‌ನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೂ ಮೊದಲು ರಾಜ್ಯದ ಎಲ್ಲ ಹಳೆ ಕೈಗಾರಿಕಾ ವಸಾಹತು ಪ್ರದೇಶಗಳನ್ನು ನವೀಕರಣ ಮಾಡಲು ತೀರ್ಮಾನಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು. ಬೆಂಗಳೂರು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಹಾಗೂ ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಶನಿವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಗಳ ರಾಜ್ಯಮಟ್ಟದ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಸೇರಿ ರಾಜ್ಯಾದ್ಯಂತ ಕೈಗಾರಿಕೆಗಳು ಏಕರೂಪವಾಗಿ ಬೆಳವಣಿಗೆ ಆಗಲು ಸರ್ಕಾರ ಬದ್ಧವಾಗಿದೆ. ಕೈಗಾರಿಕೆ ಸ್ಥಾಪನೆಗಾಗಿ ಗುರುತು ಮಾಡಲಾಗುವುದು. ಜತೆಗೆ 100 ಕಿಮೀ ಅಂತರದಲ್ಲಿ ಏರ್‌ಸ್ಟ್ರಿಪ್ ಸೌಕರ್ಯ ಇರುವಂತೆ ನೋಡಿಕೊಳ್ಳಲಾಗುವುದು. ಜಿಮ್ ಹಾಗೂ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ನವೆಂಬರ್ ಮೊದಲು ಹಳೆ ಕೈಗಾರಿಕೆ ವಸಾಹತುದಲ್ಲಿ ರಸ್ತೆ, ಒಳಚರಂಡಿ, ವಿದ್ಯುತ್ ಸೌಕರ್ಯವನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದರು.
ಕೈಗಾರಿಕೆಗಳಿಗೂ ಸ್ವಯಂ ಘೋಷಿತ ತೆರಿಗೆ: ಸಿಎಂ ಬೊಮ್ಮಾಯಿ
ರಾಜ್ಯದಲ್ಲಿ ಏರೋಸ್ಪೆಸ್ ಇಂಡಸ್ಟ್ರಿಗೆ ಇನ್ನಷ್ಟು ಪ್ರೋತ್ಸಾಹ ನೀಡಲು ಎರಡು ಕಡೆ 1600 ಹಾಗೂ 1500 ಎಕರೆ ಸ್ಥಳವನ್ನು ಗುರುತಿಸಲಾಗುತ್ತಿದೆ. ಇದಕ್ಕೆ ಕೈಗಾರಿಕೋದ್ಯಮಿಗಳಿಂದ ಈಗಾಗಲೆ ಸಾಕಷ್ಟುಬೇಡಿಕೆ ಇದೆ. ಆಯಾ ಜಿಲ್ಲೆಯ ಕೈಗಾರಿಕಾ ಸಂಸ್ಥೆಗಳು ಈ ಕುರಿತು ಮನವಿ ನೀಡಿದರೆ ಕ್ರಮ ತೆಗೆದುಕೊಳ್ಳುತ್ತೇವೆ. ಎಸ್‌ಸಿಎಸ್‌ಟಿ ಸಮುದಾಯದ ಜತೆಗೆ ಆರ್ಥಿಕವಾಗಿ ಹಿಂದುಳಿದವರಿಗೆ 2 ಎಕರೆ ಖರೀದಿಗೆ ಸಹಾಯಧನ ನೀಡಲಾಗುವುದು ಎಂದು ತಿಳಿಸಿದರು.
ಧಾರವಾಡದಲ್ಲಿ ಸ್ಟಾರ್ ಏರ್‌ಲೈನ್ಸ್ ಕಂಪನಿಗೆ 15 ಎಕರೆ ಪ್ರದೇಶ ನೀಡಲಾಗಿದ್ದು, ಆರಂಭಿಕವಾಗಿ 250 ಕೋಟಿ ಮೊತ್ತದ ಫುಡ್ ಪ್ರಾಸೆಸಿಂಗ್ ಯೂನಿಟ್ ಇಲ್ಲಿ ಸ್ಥಾಪನೆ ಆಗುತ್ತಿದೆ. 1200 ಜನತೆಗೆ ಇಲ್ಲಿ ಉದ್ಯೋಗ ದೊರೆಯಲಿದೆ. ಮುಂದುವರಿದು ಇಲ್ಲಿ . 1 ಸಾವಿರ ಕೋಟಿ ಹೂಡಿಕೆ ಆಗಲಿದೆ. ಈ ರೀತಿ ಜೂನ್ ಒಂದೇ ತಿಂಗಳಲ್ಲಿ ಕೈಗಾರಿಕೆ ಸ್ಥಾಪನೆಗೆ ರಾಜ್ಯದಲ್ಲಿ . 95 ಸಾವಿರ ಕೋಟಿ ಒಪ್ಪಂದವಾಗಿದೆ. ಜುಲೈ-ಆಗಸ್ಟ್‌ನಲ್ಲಿ ಕಾರ್ಯಾರಂಭ ಮಾಡಲಾಗುವುದು. ಅಲ್ಲದೆ, 5 ಲಕ್ಷ ಉದ್ಯೋಗ ಸೃಜಿಸುವಷ್ಟುಕೈಗಾರಿಕೆ, ಉದ್ಯಮ ಸ್ಥಾಪನೆಯ ಯೋಜನೆ ಹಮ್ಮಿಕೊಂಡಿದ್ದು ಇದರ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಸಾಧ್ಯತೆ ಇದೆ ಎಂದು ನಿರಾಣಿ ಹೇಳಿದರು.
ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣರೆಡ್ಡಿ ಮಾತನಾಡಿ, ಹಿಂದೆ ಕೈಗಾರಿಕಾ ಸ್ಥಾಪನೆ ಮಾಡಲು ಮುಂದಾದ ಉದ್ಯಮಿಗಳು ಅಧಿಕಾರಿಗಳನ್ನು ಹುಡುಕಬೇಕಿತ್ತು. ಆದರೆ ಈಗ ಸರ್ಕಾರ ಉದ್ಯಮಿಗಳನ್ನು ಹುಡುಕಿ ಹೋಗುತ್ತಿದೆ. ಈಡಿ ದೇಶದಲ್ಲಿ ಕೈಗಾರಿಕಾ ಜತೆಗೆ ಪೂರಕವಾಗಿ ಹೊಸ ನೀತಿಗಳನ್ನು ಕರ್ನಾಟಕ ಮೊದಲು ಸೃಜಿಸುತ್ತಿದೆ. ಸ್ಟಾರ್ಚ್ ಅಪ್, ಸೆಮಿಕಂಡಕ್ಟರ್, ಗ್ರೀನ್ ಎನರ್ಜಿ, ಇ ವೆಹಿಕಲ್, ನವೀಕರಿಸುವ ಇಂಧನ, ರಾಜ್ಯ ರಫ್ತು ದಾಖಲೆಯ 128 ಬಿಲಿಯನ್ ವಹಿವಾಟನ್ನು ನಡೆಸಿದೆ. ಬಿಯಾಂಡ್ ಬೆಂಗಳೂರು ಕಲ್ಪನೆಯಲ್ಲಿ ಎಲ್ಲ ವಲಯದಲ್ಲಿ ಅನುದಾನವನ್ನು ಸಮಾನವಾಗಿ ಹಂಚಿಕೆ ಮಾಡಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ಇದರ ಪರಣಾಮ ಕಾಣಲಿದೆ ಎಂದರು.
ಅಮೇಜಾನ್‌ನ ಉದಯ ಸಿಂಗ್ ಮೆಹತಾ, ದೇಶದಲ್ಲಿ ಅಮೇಜಾನ್ ಐದು ಮಿಲಿಯನ್ ಡಾಲರ್ ವಹಿವಾಟು ನಡೆಸುತ್ತಿದೆ. 11 ಲಕ್ಷ ಉದ್ಯೋಗ ಸೃಷ್ಟಿಮಾಡಲಾಗಿದೆ. ಗ್ರಾಹಕರಿಗೆ ಸ್ಪಂದಿಸಲು ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿದ್ದೇವೆ. ವೆಬ್‌ಸೈಟ್‌ನಲ್ಲಿ ಕನ್ನಡದಲ್ಲಿ ಕೂಡ ಖರೀದಿ ಮಾಡಲು ಅನುವಾಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಎಫ್‌ಕೆಸಿಸಿಐ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಡಿಜಿಟಲ್ ಮಾರ್ಕೆಟಿಂಗ್ ಇನ್ನಷ್ಟುಜನತೆಗೆ ಹತ್ತಿರುವಾಗಲು ಹೆಚ್ಚು ಒತ್ತು ನೀಡಲಾಗುತ್ತದೆ ಎಂದರು.