
ಬೆಂಗಳೂರು(ಜೂ.8): ರಾಜಧಾನಿ ಬೆಂಗಳೂರು ಮೂಲದ ಹಸಿರು ಇಂಧನ ದೈತ್ಯ ‘ಎಮ್ವಿ ಗ್ರೂಪ್’ (Emmvee Group) ತನ್ನ ವ್ಯವಹಾರವನ್ನು ಮತ್ತಷ್ಟು ವಿಸ್ತರಿಸಲು ಮುಂದಾಗಿದ್ದು, ಬೆಂಗಳೂರಿನ ದೇವನಹಳ್ಳಿಯಲ್ಲಿ ಬರೋಬ್ಬರಿ 5,500 ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ ಬೃಹತ್ ‘ಗಿಗಾಫ್ಯಾಕ್ಟರಿ’ (Greenfield Gigafactory) ಸ್ಥಾಪಿಸುತ್ತಿದೆ. ಈ ಹೊಸ ಘಟಕವು ಸದ್ಯದ ಮಾರುಕಟ್ಟೆಯಲ್ಲಿ ಕಂಪನಿಯ ಸಾಮರ್ಥ್ಯವನ್ನು ಐದು ಪಟ್ಟು ಹೆಚ್ಚಿಸಲಿದೆ.
ಈ ಬಗ್ಗೆ ಮಾತನಾಡಿರುವ ಕಂಪನಿಯ ಸಂಸ್ಥಾಪಕ ಅಧ್ಯಕ್ಷರಾದ ಡಿ.ವಿ. ಮಂಜುನಾಥ ದೊಂತಿ, ದೇವನಹಳ್ಳಿಯ 100 ಎಕರೆ ಪ್ರದೇಶದಲ್ಲಿ ಈ ಹೊಸ ಬೃಹತ್ ಘಟಕ ತಲೆಯೆತ್ತುತ್ತಿದ್ದು, ಇದು ಎಮ್ವಿ ಗ್ರೂಪ್ ಅನ್ನು ದೇಶದ ಅತಿ ದೊಡ್ಡ ಸಂಯೋಜಿತ ಸೋಲಾರ್ ಸಂಸ್ಥೆಯನ್ನಾಗಿ ಮಾಡಲಿದೆ. ಪ್ರಸ್ತುತ 10.3 ಗಿಗಾವ್ಯಾಟ್ (gw) ಇರುವ ಸೋಲಾರ್ ಮಾಡ್ಯೂಲ್ ಉತ್ಪಾದನೆಯನ್ನು ಈ ಡಿಸೆಂಬರ್ ವೇಳೆಗೆ 16.3 ಗಿಗಾವ್ಯಾಟ್‌ಗೆ ಹೆಚ್ಚಿಸಲಾಗುತ್ತಿದೆ. ಹಾಗೆಯೇ, ಪ್ರಸ್ತುತ 2.9 ಗಿಗಾವ್ಯಾಟ್ ಇರುವ ಸೋಲಾರ್ ಸೆಲ್ ಉತ್ಪಾದನೆಯನ್ನು ಮಾರ್ಚ್ 2027 ರ ವೇಳೆಗೆ ಮೂರು ಪಟ್ಟು ಅಂದರೆ 8.90 ಗಿಗಾವ್ಯಾಟ್‌ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ.
ಈ 5,500 ಕೋಟಿ ರೂಪಾಯಿಗಳ ಬೃಹತ್ ಯೋಜನೆಗೆ ಕಂಪನಿಯು ಸಾಲಮುಕ್ತ (Zero Debt) ಸಂಸ್ಥೆಯಾಗಿರುವುದರಿಂದ ಶೇ. 40 ರಷ್ಟು ಅಂದರೆ 2,200 ಕೋಟಿ ರೂಪಾಯಿಗಳನ್ನು ಇಕ್ವಿಟಿ ಮೂಲಕ ಭರಿಸುತ್ತಿದೆ. ಉಳಿದ 3,300 ಕೋಟಿ ರೂಪಾಯಿಗಳ ಸಂಪೂರ್ಣ ಸಾಲದ ಮೊತ್ತವನ್ನು ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ (IREDA) ಧನಸಹಾಯ ಮಾಡುತ್ತಿದೆ.
ಇರಾನ್ ಯುದ್ಧದ ಜಾಗತಿಕ ಬಿಕ್ಕಟ್ಟಿನಿಂದಾಗಿ ಎಮ್ವಿ ಗ್ರೂಪ್‌ನ ಕಾರ್ಯಾಚರಣೆಗೆ ಯಾವುದೇ ಧಕ್ಕೆಯಾಗಿಲ್ಲ. ಕಂಪನಿಯು ಶೇ. 35 ರಷ್ಟು ಕಚ್ಚಾ ವಸ್ತುಗಳನ್ನು (ವೇಫರ್ಸ್, ಇಂಗಾಟ್ಸ್ ಮತ್ತು ಗ್ಲಾಸ್) ಚೀನಾದಿಂದ ಆಮದು ಮಾಡಿಕೊಳ್ಳುತ್ತಿದ್ದು, ಅಲ್ಲಿಂದ ಯಾವುದೇ ಪೂರೈಕೆ ವ್ಯತ್ಯಯವಾಗಿಲ್ಲ ಎಂದಿದ್ದಾರೆ.
ಈ ಹಿಂದೆ ಭಾರತವು ಸೋಲಾರ್ ಉತ್ಪನ್ನಗಳಿಗಾಗಿ ಸಂಪೂರ್ಣವಾಗಿ ಚೀನಾದ ಆಮದನ್ನು ಅವಲಂಬಿಸಿತ್ತು. ಆದರೆ ಈಗ ದೇಶೀಯ ಉತ್ಪಾದನೆ ವೇಗ ಪಡೆದುಕೊಂಡಿದೆ. ಚೀನಾದ ಉತ್ಪನ್ನಗಳಿಗೆ ಹೋಲಿಸಿದರೆ ಎಮ್ವಿ ಗ್ರೂಪ್‌ನ ಕ್ಲೈಮ್ ರೇಶಿಯೋ (Claim Ratio) ಜಾಗತಿಕ ಮಟ್ಟದಲ್ಲೇ ಅತ್ಯಂತ ಕಡಿಮೆ ಅಂದರೆ ಕೇವಲ 0.008 ರಷ್ಟಿದೆ. ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಎಮ್ವಿ ಗ್ರೂಪ್ ಮಹತ್ವದ ಹೆಜ್ಜೆ ಇಟ್ಟಿದ್ದು, 2028 ರ ವೇಳೆಗೆ ಭಾರತದಲ್ಲೇ ಅತ್ಯಂತ ನಿರ್ಣಾಯಕವಾಗಿರುವ ಸಿಲಿಕಾನ್ ವೇಫರ್ಸ್ ಮತ್ತು ಇಂಗಾಟ್ಸ್ ಉತ್ಪಾದನೆಯನ್ನು ಆರಂಭಿಸಲು ಯೋಜನೆ ರೂಪಿಸಿದೆ. ಸರ್ಕಾರದಿಂದ ಸೂಕ್ತ ರಕ್ಷಣೆ ಮತ್ತು ರಿಸ್ಕ್ ಮ್ಯಾನೇಜ್‌ಮೆಂಟ್ ಬೆಂಬಲ ಸಿಕ್ಕರೆ ಚೀನಾದ ಮಾರುಕಟ್ಟೆ ದರಕ್ಕೆ ಭಾರತೀಯ ಕಂಪನಿಗಳು ಸುಲಭವಾಗಿ ಪೈಪೋಟಿ ನೀಡಬಲ್ಲವು ಎಂದು ಮಂಜುನಾಥ ದೊಂತಿ ತಿಳಿಸಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.