ಎಲಾನ್ ಮಸ್ಕ್ ಮಾಲೀಕತ್ವದ ಟ್ವಿಟರ್ ಮಾಧ್ಯಮಕ್ಕೆ ಹೊಸ ಲಾಂಛನ. ನೀಲಿ ಹಕ್ಕಿಯನ್ನು ಹಾರಿ ಬಿಟ್ಟ ಎಲಾನ್ ಮಸ್ಕ್, ಈ ಜಾಗದಲ್ಲಿ X ಲೋಗೋ ಬಳಸಿದ್ದಾರೆ.
ಸ್ಯಾನ್‌ಫ್ರಾನ್ಸಿಸ್ಕೋ(ಜು.24): ಟ್ವಿಟ್ಟರ್ ಮಾಲೀಕತ್ವ ವಹಿಸಿಕೊಂಡಾಗಿನಿಂದಲೂ ಒಂದಲ್ಲ, ಒಂದು ಬದಲಾವಣೆ ಮಾಡುತ್ತಿರುವ ಉದ್ಯಮಿ ಎಲಾನ್ ಮಸ್ಕ್ ಈಗ ಟ್ವಿಟ್ಟರ್ ಲೋಗೋವನ್ನು ಬದಲಾಯಿಸಿದ್ದಾರೆ. ಟ್ವಿಟ್ಟರ್ ಲೋಗೊ ಹಾಗೂ ಅದರ ಹೆಸರನ್ನು ಬದಲಾಯಿಸಲಾಗುತ್ತದೆ ಎಂದು ದಿನಗಳ ಹಿಂದಷ್ಟೇ ಸುದ್ದಿ ಹಬ್ಬಿತ್ತು. ಈಗ ಅದು ನಿಜವಾಗಿದ್ದು, ಹಕ್ಕಿ ಇದ್ದ ಜಾಗದಲ್ಲಿ ಎಕ್ಸ್ ಚಿಹ್ನೆ ಬಂದಿದೆ. ಟ್ವಿಟ್ಟರ್ ಕಂಪನಿಯ ಮಾಲೀಕ ಹಾಗೂ ಜಗತ್ತಿನ ಶ್ರೀಮಂತ ಉದ್ಯಮಿ, ಸ್ಪೇಸ್ ಎಕ್ಸ್ ಸಂಸ್ಥಾಪಕನೂ ಆದ ಎಲಾನ್ ಮಸ್ಕ್ ಅವರೇ ಈ ಬಗ್ಗೆ ಕೆಲ ದಿನಗಳ ಹಿಂದಷ್ಟೇ ಸ್ಪಷ್ಟ ಸುಳಿವು ನೀಡಿದ್ದರು. ಶೀಘ್ರದಲ್ಲೇ ಟ್ವೀಟರ್ ಬ್ರ್ಯಾಂಡ್, ಬಳಿಕ ಹಂತಹಂತವಾಗಿ ಎಲ್ಲ ಹಕ್ಕಿಗಳಿಗೂ ವಿದಾಯ ಹೇಳುತ್ತೇವೆ ಎಂದು ಮಸ್ಕ್ ಅವರು ಟ್ವೀಟ್ ಮಾಡಿದ್ದರು.
ಟ್ವಿಟರ್ ಮಾಲೀಕ ಎಲಾನ್ ಮಸ್ಕ್, ಸಿಇಒ ಲಿಂಡಾ ಯಕಾರಿನೋ ನೂತನ ಲೋಗೋವನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಲೋಗೋ ಬಿಡುಗಡೆ ಸಮಾರಂಭದ ಅಂಗವಾಗಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಟ್ವಿಟರ್ ಪ್ರಧಾನ ಕಚೇರಿ ಎಲ್ಇಡಿ ಲೈಟಿಂಗ್ ಮೂಲಕ ಲೋಗೋ ಹಾಕಲಾಗಿದೆ. ಎರಡು ದಿನಗಳ ಹಿಂದೆ ಲಿಂಡಾ ಯಕಾರಿನೋ ಟ್ವಿಟರ್ ರಿಬ್ರ್ಯಾಂಡಿಂಗ್ ಮಾಡುತ್ತಿರುವುದಾಗಿ ಮಾಹಿತಿ ನೀಡಿದ್ದರು.
ಬಳಕೆದಾರರ ಚಟುವಟಿಕೆಗೆ ಮಿತಿ ಹೇರಿದ ಥ್ರೆಡ್ಸ್; ಮತ್ತೊಮ್ಮೆ ವಾಗ್ದಾಳಿ ನಡೆಸಿದ ಎಲಾನ್ ಮಸ್ಕ್
ಎಲಾನ್ ಮಸ್ಕ್ ಮಾಲೀಕತ್ವ ಹೊಂದಿರುವ ಹಾಗೂ ಅತೀ ಹೆಚ್ಚಿನ ಪಾಲು ಹೊಂದಿರುವ ಬಹುತೇಕ ಕಂಪನಿಗಳ ಹೆಸರು ಅಥವಾ ಲೋಗೋದಲ್ಲಿ X ಇದೆ. ಎಲಾನ್ ಮಸ್ಕ್ ಅವರ ಬಾಹ್ಯಾಕಾಶ ಕಂಪನಿ ಹೆಸರು ಸ್ಪೇಸ್ ಎಕ್ಸ್. ಇನ್ನು ಟ್ವಿಟರ್ ಕಂಪನಿಯನ್ನು ಈಗಾಗಲೇ ಎಕ್ಸ್ ಕಾರ್ಪ್ ಅನ್ನೋ ಶೆಲ್ ಕಂಪನಿ ಜೊತೆ ಮರ್ಜ್ ಮಾಡಿದ್ದಾರೆ. ಇದೀಗ ಟ್ವಿಟರ್ ಲೋಗೋವನ್ನು ಎಕ್ಸ್ ಎಂದು ರಿ ಬ್ರ್ಯಾಂಡ್ ಮಾಡಲಾಗಿದೆ.
ಟ್ವಿಟರ್ ಖರೀದಿಸಿದ ಬಳಿಕ ಎಲಾನ್ ಮಸ್ಕ್ ರಾತ್ರೋರಾತ್ರಿ ಲೋಗೋವನ್ನು ಬದಲಿಸಿದ್ದರು. ಟ್ವಿಟರ್‌ನ ವೆಬ್ ಆವೃತ್ತಿಯಲ್ಲಿ ನೀಲಿ ಹಕ್ಕಿ ಬದಲು ನಾಯಿ ಚಿತ್ರವನ್ನು ಬಳಸಲಾಗಿತ್ತು. ಕೇವಲ 4 ದಿನದ ಮಟ್ಟಿದೆ ಈ ಚಿಹ್ನೆ ಬಳಸಲಾಗಿತ್ತು. ಆದರೆ ಮೊಬೈಲ್ ಆವೃತ್ತಿಯಲ್ಲಿ ಲೋಗೊ ಬದಲಾವಣೆ ಆಗಿರಲಿಲ್ಲ.ನಾಲ್ಕು ದಿನ ನೀಲಿ ಹಕ್ಕಿ ಬದಲು ನಾಯಿ ಲೋಗೋ ಹಾಕಿದ್ದ ಮಸ್ಕ್ ಬಳಿಕ ನೀಲಿ ಹಕ್ಕಿಯನ್ನೇ ಮರಳಿ ತಂದಿದ್ದರು. ಅನಾಮಿಕ ವ್ಯಕ್ತಿಯೊಬ್ಬರು ಟ್ವೀಟರನ ಲೋಗೊವನ್ನು ನೀಲಿ ಹಕ್ಕಿಯಿಂದ ನಾಯಿಗೆ ಬದಲಾಯಿಸುವಂತೆ ಕೇಳಿದ್ದರು. ಇದರೊಂದಿಗೆ ‘ಭರವಸೆ ನೀಡಿದಂತೆ’ ಎಂದು ಮಸ್ಕ್ ಬರೆದುಕೊಂಡಿದ್ದರು. ಇದೀಗ ಅಧಿಕೃತವಾಗಿ ನೀಲಿ ಹಕ್ಕಿ ಬದಲು ಎಕ್ಸ್ ಚಿಹ್ನೆಯನ್ನು ಲೋಗೋ ಆಗಿ ಬಳಸಲಾಗಿದೆ.
ಫ್ರೀ ಡೇಟಾ ಇದ್ದರೂ ಬೇಕಾದಷ್ಟು ಟ್ವೀಟ್ ವೀಕ್ಷಣೆಗಿಲ್ಲ ಅನುಮತಿ, ಟೀಕೆ ಬಳಿಕ ಲಿಮಿಟ್ ಹೆಚ್ಚಿಸಿದ ಮಸ್ಕ್!
ಟ್ವಿಟರ್ ಈಗಾಗಲೇ ಹಲವು ಬದಲಾವಣೆ ಮಾಡಿದೆ. ಟ್ವೀಟರ್ ಬಳಕೆದಾರರಿಗೆ ದೈನಂದಿನ ವೀಕ್ಷಣೆಯ ಮಿತಿ ಹೇರಿದ್ದಾರೆ. ಬ್ಲೂಟಿಕ್ ಇಲ್ಲದ ಉಚಿತ ಖಾತೆ ಹೊಂದಿದವರು, ಹೊಸದಾಗಿ ಖಾತೆ ಹೊಂದಿದವರು ಮಾತ್ರವಲ್ಲದೇ, ಮಾಸಿಕ ಚಂದಾ ಪಾವತಿ ಮಾಡಿ ಬ್ಲೂಟಿಕ್ ಹೊಂದಿದವರಿಗೂ ದೈನಂದಿನ ಇಷ್ಟೇ ಟ್ವೀಟ್‌ಗಳನ್ನು ವೀಕ್ಷಣೆ ಮಾಡಬಹುದು ಎಂಬ ಮಿತಿ ಹೇರಿದ್ದಾರೆ.