ಭಾರತದಲ್ಲಿ ಟೆಸ್ಲಾ ಉತ್ಪಾದನಾ ಘಟಕ ಸ್ಥಾಪನೆಗೆ ಸಂಬಂಧಿಸಿ ಎಲಾನ್ ಮಸ್ಕ್ ನೇಮಿಸಿರುವ ತಂಡ ಭಾರತದಿಂದ ಹೊರನಡೆದಿದೆ ಎಂಬ ವರದಿಗಳ ಬೆನ್ನಲ್ಲೇ ಪುಣೆ ಮೂಲದ ಸೀರಂ ಇನ್‌ಸ್ಟಿಟ್ಯೂಟ್ ಮುಖ್ಯಸ್ಥ ಅದಾರ್ ಪೂನಾವಾಲಾ ಎಲಾನ್ ಮಸ್ಕ್ ಅವರಿಗೆ ಟ್ವಿಟರ್ ನಲ್ಲಿ ನೀಡಿರುವ ಸಲಹೆ ಸಾಕಷ್ಟು ಗಮನ ಸೆಳೆಯುತ್ತಿದೆ. ಜೊತೆಗೆ ಇದಕ್ಕೆ ಎಲಾನ್ ಮಸ್ಕ್ ಪ್ರತಿಕ್ರಿಯೆ ನೀಡುತ್ತಾರಾ ಎಂಬ ಕುತೂಹಲವೂ ಕಾಡುತ್ತಿದೆ.
ನವದೆಹಲಿ (ಮೇ 9): ಟ್ವಿಟರ್ (Twitter) ಖರೀದಿ ಒಪ್ಪಂದದ ಬೆನ್ನಲ್ಲೇ ಟೆಸ್ಲಾ(Tesla) ಸಿಇಒ ಎಲಾನ್ ಮಸ್ಕ್ (Elon Musk) ಅವರಿಗೆ ಪುಣೆ ಮೂಲದ ಲಸಿಕೆ ಉತ್ಪಾದಕ ಕಂಪನಿ ಸೀರಂ ಇನ್‌ಸ್ಟಿಟ್ಯೂಟ್ (Serum Institute) ಮುಖ್ಯಸ್ಥ ಅದಾರ್ ಪೂನಾವಾಲಾ (Adar Poonawalla) ಮನವಿಯೊಂದನ್ನು ಮಾಡಿದ್ದಾರೆ. ಅದೇನಪ್ಪ ಅಂದ್ರೆ ಅಕಸ್ಮಾತ್ ಆಗಿ ಟ್ವಿಟರ್ ಒಪ್ಪಂದ ಯಶಸ್ವಿಯಾಗದಿದ್ರೆ ಮಸ್ಕ್ ಭಾರತದಲ್ಲಿ (India) ಟೆಸ್ಲಾ ಕಾರು ಉತ್ಪಾದನಾ ಘಟಕ (Manufacturing plant) ಸ್ಥಾಪಿಸಲು ಆ ಹಣದ ಒಂದು ಭಾಗವನ್ನು ಹೂಡಿಕೆ (Invest) ಮಾಡಬೇಕೆಂದು ಟ್ವಿಟರ್ ನಲ್ಲಿ ಪೂನಾವಾಲಾ ವಿಶ್ವದ ನಂ.1 ಸಿರಿವಂತನಿಗೆ ಸಲಹೆ ನೀಡಿದ್ದಾರೆ. ಭಾರತದಲ್ಲಿ ಟೆಸ್ಲಾ ಉತ್ಪಾದನಾ ಘಟಕ ಸ್ಥಾಪನೆಗೆ ಸಂಬಂಧಿಸಿ ಕಳೆದ ವರ್ಷ ಮಸ್ಕ್ ನೇಮಿಸಿದ್ದ ತಂಡ ಭಾರತದಿಂದ ಹೊರನಡೆದಿದೆ ಎಂಬ ವರದಿಗಳ ಬೆನ್ನಲ್ಲೇ ಅದರ್ ಪೂನಾವಾಲಾ ಟ್ವೀಟ್ (Tweet) ಮಹತ್ವ ಪಡೆದುಕೊಂಡಿದೆ.
ಟ್ವಿಟರ್ ಖರೀದಿಗೆ 44 ಬಿಲಿನ್ ಡಾಲರ್ ಒಪ್ಪಂದ ಮಾಡಿಕೊಂಡಿರುವ ಎಲಾನ್ ಮಸ್ಕ್ ಸದ್ಯ ಸುದ್ದಿಯಲ್ಲಿದ್ದಾರೆ. ಟ್ವಿಟರ್ (Twitter) ಖರೀದಿ ಒಪ್ಪಂದಕ್ಕೆ ಆ ಸಂಸ್ಥೆಯ ಎಲ್ಲ ಪಾಲುದಾರರ ಒಪ್ಪಿಗೆಯ ಅಗತ್ಯವಿರುವ ಕಾರಣ ಖರೀದಿ ಪ್ರಕ್ರಿಯೆ ಇನ್ನೂ ಪ್ರಗತಿಯಲ್ಲಿದೆ. ಭಾರತದಲ್ಲಿ ಟೆಸ್ಲಾ ಕಾರುಗಳ ಉತ್ಪಾದನಾ ಘಟಕವನ್ನು ತೆರೆಯಲು ಎಲಾನ್ ಮಸ್ಕ್ ಕಳೆದ ವರ್ಷ ಪ್ರಯತ್ನಿಸಿದ್ದರು. ಬಹುತೇಕ ಏರೋಸ್ಪೇಸ್ (Aerospace) ಹಾಗೂ ಎಲೆಕ್ಟ್ರಿಕ್ (electric) ವಾಹನ ಘಟಕಗಳು ಈಗಾಗಲೇ ದೇಶದ ದಕ್ಷಿಣ ಭಾಗದಲ್ಲಿರುವ ಕಾರಣ ಸರ್ಕಾರ ಕೂಡ ಇದಕ್ಕಾಗಿ ಕರ್ನಾಟಕದಲ್ಲಿ ಸ್ಥಳ ಮೀಸಲಿಡಲು ನಿರ್ಧರಿಸಿತ್ತು.
Elon Musk:ಅಕಸ್ಮಾತ್ ನಾನು ಅನುಮಾನಾಸ್ಪದವಾಗಿ ಸತ್ತರೆ; ಸಂಚಲನ ಸೃಷ್ಟಿಸಿದ ಎಲಾನ್ ಮಸ್ಕ್ ಟ್ವೀಟ್
ತಮಿಳುನಾಡು (Tamilnadu), ಪಂಜಾಬ್ (Punjab), ಪಶ್ಚಿಮ ಬಂಗಾಳ (West Bengal), ತೆಲಂಗಣ (Telangana) ಹಾಗೂ ಮಹಾರಾಷ್ಟ್ರ (Maharashtra) ಸೇರಿದಂತೆ ಭಾರತದ ಅನೇಕ ರಾಜ್ಯ ಸರ್ಕಾರಗಳು ತಮ್ಮ ರಾಜ್ಯಗಳಲ್ಲಿ ಹೂಡಿಕೆ (Invest) ಮಾಡಲು ಎಲಾನ್ ಮಸ್ಕ್ ಅವರನ್ನು ಆಹ್ವಾನಿಸಿದ್ದವು. ಟೆಸ್ಲಾ ಮೋಟಾರ್ಸ್ ಅನ್ನು ಸ್ವಾಗತಿಸಲು ಭಾರತ ಸಿದ್ಧವಿದೆ ಎಂದು ಹೇಳಿರುವ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ( Nitin Gadkari),ದೇಶದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲು ಅಗತ್ಯವಾದ ಎಲ್ಲ ಸೌಲಭ್ಯಗಳು ಲಭ್ಯವಿವೆ ಎಂದಿದ್ದರು.
ಭಾರತದಿಂದ ಹೊರನಡೆದ ಟೆಸ್ಲಾ ತಂಡ?
ಭಾರತದಲ್ಲಿ ಟೆಸ್ಲಾ ಉತ್ಪಾದನಾ ಘಟಕ ಸ್ಥಾಪನೆ ಕುರಿತು ಭಾರತ ಸರ್ಕಾರದ ಜೊತೆಗೆ ಮಾತುಕತೆಯಲ್ಲಿ ತೊಡಗಿರೋದಾಗಿ ಈ ಹಿಂದೆ ಎಲಾನ್ ಮಸ್ಕ್ ತಿಳಿಸಿದ್ದರು.'ಸರ್ಕಾರದ ಜೊತೆಗಿನ ಅನೇಕ ಸವಾಲುಗಳನ್ನು ನಿಭಾಯಿಸಲು ಪ್ರಯತ್ನಿಸುತ್ತಿರುವುದಾಗಿ' ಹೇಳಿದ್ದರು ಕೂಡ. ನಂತರ 'ಸರ್ಕಾರದೊಂದಿಗಿನ ಸವಾಲುಗಳಿಂದ ಟೆಸ್ಲಾ ಇನ್ನೂ ಭಾರತದಲ್ಲಿಲ್ಲ' ಎಂದು ಮಸ್ಕ್ ಟ್ವೀಟ್ ಮಾಡಿದ್ದರು.
Elon Musk Tips ಕಾರ್ಮಿಕರ ದಿನದಂದು ಸಂಪತ್ತು ಹೆಚ್ಚಿಸುವ ಟಿಪ್ಸ್ ನೀಡಿದ ವಿಶ್ವದ ನಂ.1 ಶ್ರೀಮಂತ ಮಸ್ಕ್!
ಭಾರತದಲ್ಲಿ ಟೆಸ್ಲಾ ಕಾರುಗಳ ಉತ್ಪಾದನಾ ಘಟಕ ಸ್ಥಾಪಿಸುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಅನೇಕ ಸಚಿವರು ಮಸ್ಕ್ ಅವರಿಗೆ ಮನವಿ ಮಾಡುತ್ತಲೇ ಬಂದಿದ್ದರು. ಅಲ್ಲದೆ, ಉತ್ಪಾದನೆಗೆ ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸುವುದಾಗಿಯೂ ಹೇಳಿದ್ದರು. ಟೆಸ್ಲಾ ಉತ್ಪಾದನಾ ಘಟಕ ಸ್ಥಾಪನೆಗೆ ಸಂಬಂಧಿಸಿ ಮಸ್ಕ್ ಭಾರತದಲ್ಲಿ ನೇಮಿಸಿದ ತಂಡವು ಈಗ ಪೂರ್ವ ಮತ್ತು ದೊಡ್ಡ ಏಷ್ಯಾ -ಪೆಸಿಫಿಕ್ ಮಾರುಕಟ್ಟೆಗಳತ್ತ ಗಮನ ಹರಿಸಲು ಮುಂದಾಗಿವೆ ಎಂಬ ಬಗ್ಗೆ ವರದಿಗಳು ಬಂದಿವೆ. ಟೆಸ್ಲಾ ವಾಹನಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡುವ ಬೇಡಿಕೆಯನ್ನು ಭಾರತ ಸರ್ಕಾರ ಸ್ವೀಕರಿಸದ ಕಾರಣ ಮಸ್ಕ್ ನೇತೃತ್ವದ ತಂಡ ಭಾರತದಿಂದ ಹೊರನಡೆಯುವ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗಿದೆ.