ನೀರವ್‌ ಸೋದರನ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌!

By Web DeskFirst Published Sep 14, 2019, 10:26 AM IST
Highlights

ನೀರವ್‌ ಸೋದರನ ವಿರುದ್ಧ ರೆಡ್‌ಕಾರ್ನರ್‌ ನೋಟಿಸ್‌| ನೇಹಲ್‌ ಮೋದಿಗೆ ಈಗ ಬಂಧನ ಭೀತಿ| ಹಗರಣ ಬೆಳಕಿಗೆ ಬರುತ್ತಿದ್ದಂತೆ ದುಬೈನಿಂದ 50 ಕೆ.ಜಿ. ಚಿನ್ನ ಹಾಗೂ ಭಾರಿ ಪ್ರಮಾಣದ ಹಣವನ್ನು ಸಾಗಿಸಿದ ಆಪಾದನೆ

ನವದೆಹಲಿ[ಸೆ.14]: ಪಂಜಾಬ್‌ ನ್ಯಾಷನಲ್‌ ಬ್ಯಾಂಕಿಗೆ 13 ಸಾವಿರ ಕೋಟಿ ರು. ವಂಚಿಸಿದ ಆರೋಪ ಎದುರಿಸುತ್ತಿರುವ ವಜ್ರೋದ್ಯಮಿ ನೀರವ್‌ ಮೋದಿ ಸೋದರನ ವಿರುದ್ಧ ಜಾಗತಿಕ ಪೊಲೀಸ್‌ ಸಂಸ್ಥೆ ಇಂಟರ್‌ಪೋಲ್‌ ಇದೀಗ ರೆಡ್‌ಕಾರ್ನರ್‌ ನೋಟಿಸ್‌ ಹೊರಡಿಸಿದೆ. ಹಗರಣ ಬೆಳಕಿಗೆ ಬರುತ್ತಿದ್ದಂತೆ ದುಬೈನಿಂದ 50 ಕೆ.ಜಿ. ಚಿನ್ನ ಹಾಗೂ ಭಾರಿ ಪ್ರಮಾಣದ ಹಣವನ್ನು ಸಾಗಿಸಿದ ಆಪಾದನೆಯನ್ನು ಈತ ಎದುರಿಸುತ್ತಿದ್ದಾನೆ.

ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿರುವ ಅಕ್ರಮ ಹಣ ವರ್ಗಾವಣೆ ಆರೋಪ ಸಂಬಂಧ ಬೆಲ್ಜಿಯಂ ಪ್ರಜೆಯಾಗಿರುವ, ನೀರವ್‌ನ ತಮ್ಮ ನೇಹಲ್‌ (40) ವಿರುದ್ಧ ನೋಟಿಸ್‌ ಜಾರಿಯಾಗಿದೆ. ನೇಹಲ್‌ ಕಂಡರೆ ಬಂಧಿಸುವಂತೆ ಅಥವಾ ವಶಕ್ಕೆ ಪಡೆಯುವಂತೆ ಈ ನೋಟಿಸ್‌ ಮೂಲಕ 192 ದೇಶಗಳಿಗೆ ಇಂಟರ್‌ಪೋಲ್‌ ಸೂಚನೆ ನೀಡಿದಂತಾಗಿದೆ. ಆ ಪ್ರಕ್ರಿಯೆ ನಡೆದರೆ, ಆತನನ್ನು ಭಾರತಕ್ಕೆ ಗಡೀಪಾರು ಮಾಡಿಸಿಕೊಂಡು ಬರುವ ಕೆಲಸ ಆರಂಭವಾಗಲಿದೆ.

ಬೆಲ್ಜಿಯಂನ ಆಂಟ್ವಪ್‌ರ್‍ನಲ್ಲಿ 1979ರ ಮಾ.3ರಂದು ಜನಿಸಿದ ನೇಹಲ್‌ ದೀಪಕ್‌ ಮೋದಿಗೆ ಇಂಗ್ಲಿಷ್‌, ಗುಜರಾತಿ ಹಾಗೂ ಹಿಂದಿ ಭಾಷೆ ಗೊತ್ತಿದೆ ಎಂದು ನೋಟಿಸ್‌ನಲ್ಲಿ ವಿವರಿಸಲಾಗಿದೆ. ಉದ್ದೇಶಪೂರ್ವಕವಾಗಿ, ಗೊತ್ತಿದ್ದೂ ಸಾಕ್ಷ್ಯ ನಾಶಕ್ಕೆ ಯತ್ನಿಸಿದ ಆರೋಪವನ್ನು ಜಾರಿ ನಿರ್ದೇಶನಾಲಯವು ತನ್ನ ಚಾಜ್‌ರ್‍ಶೀಟ್‌ನಲ್ಲಿ ನೇಹಲ್‌ ವಿರುದ್ಧ ಮಾಡಿದೆ.

click me!