ಏಪ್ರಿಲ್ ಬಳಿಕ ಆರ್ಥಿಕತೆ ಚೇತರಿಕೆ, ಜಿಡಿಪಿ ಶೇ.6.5ಕ್ಕೆ| ಕೇಂದ್ರ ಸರ್ಕಾರದ ಆರ್ಥಿಕ ಸಮೀಕ್ಷಾ ವರದಿ ಮಂಡನೆ| ರಫ್ತು ಕ್ಷೇತ್ರ ಉತ್ತೇಜನಕ್ಕೆ ‘ಅಸೆಂಬಲ್ ಇನ್ ಇಂಡಿಯಾ’
ನವದೆಹಲಿ[ಫೆ.01]: 11 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿರುವ ದೇಶದ ಆರ್ಥಿಕಾಭಿವೃದ್ಧಿ ದರ (ಜಿಡಿಪಿ) ಶೀಘ್ರದಲ್ಲೇ ಪುಟಿದೇಳಲಿದೆ. ಏ.1ರಿಂದ ಆರಂಭವಾಗಲಿರುವ ಮುಂದಿನ ವಿತ್ತೀಯ ವರ್ಷದಲ್ಲಿ ಜಿಡಿಪಿ ಶೇ.6ರಿಂದ ಶೇ.6.5ರವರೆಗೂ ಏರಿಕೆಯಾಗಲಿದೆ ಎಂದು 2019-2020ನೇ ಸಾಲಿನ ಆರ್ಥಿಕ ಸಮೀಕ್ಷಾ ವರದಿ ಭವಿಷ್ಯ ನುಡಿದಿದೆ. ಜಿಡಿಪಿ ಶೇ.5ಕ್ಕೆ ಕುಸಿದಿರುವ ಹಿನ್ನೆಲೆಯಲ್ಲಿ ಆತಂಕಕ್ಕೆ ಒಳಗಾಗಿರುವ ಜನರಲ್ಲಿ ಭರವಸೆ ತುಂಬುವ ಮಾತುಗಳನ್ನು ಆಡಿದೆ.
ಉದ್ಯಮಿಗಳು ಸಂಪತ್ತು ಹಾಗೂ ಉದ್ಯೋಗದ ಸೃಷ್ಟಿಕರ್ತರು. ಅವರನ್ನು ಗೌರವದಿಂದ ಕಾಣಬೇಕು. ಆಹಾರ ಸಬ್ಸಿಡಿಯನ್ನು ಕಡಿತಗೊಳಿಸಬೇಕು. ಉದ್ಯಮ ಆರಂಭಿಸುವಿಕೆ, ಆಸ್ತಿ ನೋಂದಣಿ, ತೆರಿಗೆ ಪಾವತಿ ಹಾಗೂ ಗುತ್ತಿಗೆ ಒಪ್ಪಂದಗಳನ್ನು ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಸರಳಗೊಳಿಸಬೇಕು ಎಂದು ಸಲಹೆ ಮಾಡಿದೆ. ಕೇಂದ್ರ ಸರ್ಕಾರ ಪ್ರಗತಿಗೆ ಆದ್ಯತೆ ನೀಡಬೇಕು. ಇದಕ್ಕಾಗಿ ವಿತ್ತೀಯ ಕೊರತೆ ಗುರಿಯನ್ನು ಸಡಿಲಗೊಳಿಸಬೇಕು ಎಂದೂ ಸೂಚಿಸಿದೆ.
undefined
ದೇಶದಲ್ಲಿ ರಫ್ತು ಹಾಗೂ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಲು ಮೇಕ್ ಇನ್ ಇಂಡಿಯಾ ಕಾರ್ಯಕ್ರಮದ ಜತೆ ‘ವಿಶ್ವಕ್ಕಾಗಿ ಭಾರತದಲ್ಲಿ ಅಸೆಂಬಲ್ (ಜೋಡಣೆ) ಮಾಡಿ’ ಕಾರ್ಯಕ್ರಮವನ್ನು ಸಂಯೋಜಿಸಬೇಕು. ಇದರಿಂದ ಭಾರತದ ರಫ್ತು ಮಾರುಕಟ್ಟೆಪಾಲು 2025ರೊಳಗೆ ಶೇ.3.5ರಷ್ಟುಹೆಚ್ಚಾಗಲಿದೆ. 4 ಕೋಟಿ ಹೆಚ್ಚು ಸಂಬಳದ ಉದ್ಯೋಗಗಳು ಸಿಗಲಿವೆ ಎಂದು ವಿವರಿಸಿದೆ.
ದೇಶದ ಆರ್ಥಿಕ ಸ್ಥಿತಿಯ ರಿಪೋರ್ಟ್ ಕಾರ್ಡ್ ಎಂದೇ ಬಣ್ಣಿಸಲಾಗುವ ಆರ್ಥಿಕ ಸಮೀಕ್ಷೆಯನ್ನು ಸಂಸತ್ತಿನ ಉಭಯ ಸದನಗಳನ್ನೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮುನ್ನಾ ದಿನವಾದ ಶುಕ್ರವಾರ ಮಂಡಿಸಿದರು. ಈ ಬಾರಿಯ ಆರ್ಥಿಕ ಸಮೀಕ್ಷೆಯ ವಿಷಯ ಸಂಪತ್ತು ಸೃಷ್ಟಿ. ಆದ ಕಾರಣ ಆರ್ಥಿಕ ಸಮೀಕ್ಷೆಯನ್ನು ನಸುನೀಲಿ (ಲ್ಯಾವೆಂಡರ್) ವರ್ಣದಲ್ಲಿ ಮುದ್ರಿಸಲಾಗಿದೆ. ದೇಶದಲ್ಲಿ ಚಲಾವಣೆಯಲ್ಲಿರುವ ಹಾಗೂ ಅತ್ಯಂತ ಹಳೆಯ ಮುಖಬೆಲೆಯ ನೋಟು ಎನಿಸಿಕೊಂಡಿರುವ 100 ರು.ನ ಬಣ್ಣ ಕೂಡ ನಸುನೀಲಿ ಎಂಬುದು ಗಮನಾರ್ಹ.
ದೇಶದ ಮುಖ್ಯ ಹಣಕಾಸು ಸಲಹೆಗಾರರಾಗಿರುವ ಕೃಷ್ಣಮೂರ್ತಿ ಸುಬ್ರಮಣಿಯನ್ ಅವರು ಸಮೀಕ್ಷೆಯ ಲೇಖಕರಾಗಿದ್ದಾರೆ. ಜಿಡಿಪಿಯನ್ನು 2011ರ ಬಳಿಕ 2.7%ನಷ್ಟುಅತಿಯಾಗಿ ಅಂದಾಜಿಸಲಾಗಿದೆ ಎಂಬ ಹಿಂದಿನ ಹಣಕಾಸು ಸಲಹೆಗಾರ ಅರವಿಂದ ಸುಬ್ರಮಣಿಯನ್ ವಾದವನ್ನು ಅವರು ಅಲ್ಲಗಳೆದಿದ್ದಾರೆ. ಇದು ಆಧಾರರಹಿತ ಎಂದು ವಾದಿಸಿದ್ದಾರೆ.
ಆರ್ಥಿಕ ಸಮೀಕ್ಷೆಯಲ್ಲಿ ಏನೇನಿದೆ?
- ‘ವಿಶ್ವಕ್ಕಾಗಿ ಭಾರತದಲ್ಲಿ ಅಸೆಂಬಲ್ ಮಾಡಿ’ ಕಾರ್ಯಕ್ರಮವನ್ನು ಮೇಕ್ ಇನ್ ಇಂಡಿಯಾ ಜತೆ ಸಂಯೋಜಿಸಬೇಕು
- ಉದ್ಯಮ ಸ್ಥಾಪನೆ, ಆಸ್ತಿ ನೋಂದಣಿ, ತೆರಿಗೆ ಪಾವತಿ ಸರಳಗೊಳಿಸಬೇಕು
- ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಆಡಳಿತವನ್ನು ಸುಧಾರಣೆ ತರಬೇಕು
- .1.84 ಲಕ್ಷ ಕೋಟಿ ಆಹಾರ ಸಬ್ಸಿಡಿ ನೀಡಲಾಗುತ್ತಿದ್ದು, ಕಡಿತಗೊಳಿಸಬೇಕು. ಬೆಲೆ ಪರಿಷ್ಕರಿಸಬೇಕು.
- ಸಂಪತ್ತು ಸೃಷ್ಟಿಗೆ ಆದಾಯ ವೆಚ್ಚ ಕಡಿತಗೊಳಿಸಿ, ಬಂಡವಾಳ ವೆಚ್ಚ ಹೆಚ್ಚಿಸಬೇಕು
- ಗ್ರಾಹಕರ ವೆಚ್ಚವೇ ಆರ್ಥಿಕ ಪ್ರಗತಿಗೆ ಶಕ್ತಿ. ಇದಕ್ಕಾಗಿ ಹೂಡಿಕೆ ಹೆಚ್ಚಾಗಬೇಕು
- ರಫ್ತು ಹೆಚ್ಚಿಸಲು ಬಂದರುಗಳಲ್ಲಿ ಅಧಿಕಾರಶಾಹಿ ವ್ಯವಸ್ಥೆ ತೆಗೆದುಹಾಕಬೇಕು
5 ಟ್ರಿಲಿಯನ್ ಗುರಿ
ಉದ್ಯಮ ಸ್ನೇಹಿ ನೀತಿಗಳನ್ನು ಕೈಗೊಂಡು ಉದ್ಯಮಗಳು, ರಫ್ತುಗಳನ್ನು ಹೆಚ್ಚಿಸುವ ಮೂಲಕ ದೇಶದ ಆರ್ಥಿಕತೆಯನ್ನು 5 ಲಕ್ಷ ಕೋಟಿ ಡಾಲರ್ ಗುರಿ ತಲುಪಿಸುವ ಹಾಗೂ ದೇಶದ 130 ಕೋಟಿ ಜನರ ಸಂಪತ್ತನ್ನು ಹೆಚ್ಚಿಸುವ ದಿಕ್ಕಿನತ್ತ 2019-20ರ ಆರ್ಥಿಕ ಸಮೀಕ್ಷೆ ಚಿತ್ತ ನೆಟ್ಟಿದೆ.
- ನರೇಂದ್ರ ಮೋದಿ, ಪ್ರಧಾನಮಂತ್ರಿ