
ವಿಶ್ವಸಂಸ್ಥೆ(ಮೇ.20): ಉಕ್ರೇನ್-ರಷ್ಯಾ ನಡುವಿನ ಯುದ್ಧ ಜಾಗತಿಕ ಆರ್ಥಿಕತೆ ಮೇಲೆ ಪರಿಣಾಮ ಬೀರಿದರೂ ಭಾರತ ವಿಶ್ವದಲ್ಲೇ ಅತಿ ವೇಗದ ಆರ್ಥಿಕ ಪ್ರಗತಿ ಕಾಣಲಿರುವ ದೇಶವಾಗಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ. 2022ನೇ ಸಾಲಿನಲ್ಲಿ ಭಾರತ ಶೇ.6.4ರ ದರದಲ್ಲಿ ಪ್ರಗತಿ ಕಾಣಲಿದೆ ಎಂದು ಅದು ತಿಳಿಸಿದೆ.
ಬುಧವಾರ ವಿಶ್ವಸಂಸ್ಥೆಯ ಆರ್ಥಿಕ ಹಾಗೂ ಸಾಮಾಜಿಕ ವ್ಯವಹಾರಗಳ ಇಲಾಖೆ ‘ವಿಶ್ವ ಆರ್ಥಿಕ ಪರಿಸ್ಥಿತಿ ಹಾಗೂ ಮುನ್ನೋಟ’ ಎಂಬ ವರದಿ ಬಿಡುಗಡೆ ಮಾಡಿದೆ. ಅದರಲ್ಲಿ 2022ರಲ್ಲಿ ವಿಶ್ವವು ಕೇವಲ ಶೇ.3.1ರ ದರದಲ್ಲಿ ಆರ್ಥಿಕ ಪ್ರಗತಿ ಕಾಣಲಿದೆ ಎಂದು ತಿಳಿಸಿದೆ. ಇದಕ್ಕೂ ಮುನ್ನ ಜನವರಿಯಲ್ಲಿ ವಿಶ್ವವು ಶೇ.4ರ ದರದಲ್ಲಿ ಆರ್ಥಿಕ ಪ್ರಗತಿ ಕಾಣಲಿದೆ ಎಂದು ವರದಿ ಅಂದಾಜಿಸಲಾಗಿತ್ತು.
Russia-Ukraine War: ಭಾರತದ ಆರ್ಥಿಕತೆ ಮೇಲೆ ಉಕ್ರೇನ್ ಪರಿಣಾಮ: ಕೇಂದ್ರ ಸಚಿವೆ ನಿರ್ಮಲಾ
ಭಾರತವು ಈ ಮುನ್ನ ಶೇ.8.8ರ ಬೆಳವಣಿಗೆ ದರ ಕಾಣಲಿದೆ ಎಂದು ಅಂದಾಜು ಮಾಡಲಾಗಿತ್ತು. ಆದರೆ ಪ್ರಗತಿ ದರದ ಅಂದಾಜು ಶೇ.6.4ಕ್ಕೆ ಇಳಿದರೂ ಇಷ್ಟುವೇಗದ ಜಿಡಿಪಿ ಬೆಳವಣಿಗೆ ದರ ದಾಖಲಿಸುವ ಏಕೈಕ ದೇಶವಾಗಲಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ. ಈ ನಡುವೆ 2023ನೇ ಸಾಲಿನಲ್ಲಿ ಭಾರತ ಶೇ.6ರ ದರದಲ್ಲಿ ಪ್ರಗತಿ ಸಾಧಿಸಲಿದೆ ಎಂದು ಅದು ಅಂದಾಜಿಸಿದೆ.
ಭಾರತದ ಬಗ್ಗೆ ಪ್ರಶಂಸೆ:
ಈ ಬಗ್ಗೆ ಮಾತನಾಡಿದ ವಿಶ್ವಸಂಸ್ಥೆ ಆರ್ಥಿಕ ಹಾಗೂ ಸಾಮಾಜಿಕ ವ್ಯವಹಾರಗಳ ಇಲಾಖೆ ಮುಖ್ಯಸ್ಥ ಹಮೀದ್ ರಷೀದ್, ‘ಪೂರ್ವ ಏಷ್ಯಾ ಹಾಗೂ ದಕ್ಷಿಣ ಏಷ್ಯಾ ಹೊರತುಪಡಿಸಿ ಮಿಕ್ಕೆಲ್ಲ ವಿಶ್ವವು ಹಣದುಬ್ಬರದಿಂದ ದುಷ್ಪರಿಣಾಮ ಎದುರಿಸುತ್ತಿವೆ. ಆದರೆ ಭಾರತದ ಮೇಲೆ ಹಣದುಬ್ಬರದ ಪ್ರಭಾವ ಕಡಿಮೆ ಇದ್ದು, ಇದ್ದುದಲ್ಲೇ ಉತ್ತಮ ಸ್ಥಾನದಲ್ಲಿದೆ. ಇನ್ನೂ 1-2 ವರ್ಷ ಭಾರತದ ಆರ್ಥಿಕತೆ ಬಲಿಷ್ಠವಾಗಿಯೇ ಮುಂದುವರಿಯಲಿದೆ. ಆದಾಗ್ಯೂ ವಿದೇಶಿ ಪರಿಣಾಮಗಳಿಂದ ಅಪಾಯ ಇದ್ದೇ ಇದೆ’ ಎಂದರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.