ಭಾರತದಲ್ಲಿ ಆರ್ಥಿಕ ಕುಸಿತ ಇಲ್ಲ, ಹಿಂಜರಿಕೆ ಅಷ್ಟೇ: ನಿರ್ಮಲಾ ಸೀತಾರಾಮನ್

By Web Desk  |  First Published Nov 28, 2019, 7:58 AM IST

ಭಾರತದಲ್ಲಿ ಆರ್ಥಿಕ ಕುಸಿತ ಇಲ್ಲ: ನಿರ್ಮಲಾ| ಆರ್ಥಿಕತೆ ಮಂದಗತಿಯಲ್ಲಿ ಸಾಗಿದರೆ ಅದು ಆರ್ಥಿಕ ಕುಸಿತವಲ್ಲ| ಆರ್ಥಿಕತೆಯ ಉತ್ತೇಜನಕ್ಕೆ ಸಾಕಷ್ಟುಕ್ರಮ ಕೈಗೊಂಡಿದ್ದೇವೆ, ಅದೀಗ ಫಲಿಸುತ್ತಿದೆ| ಯುಪಿಎ ಅವಧಿಗಿಂತ ಈಗ ಜಿಡಿಪಿ ಹೆಚ್ಚಳ| ಬ್ಯಾಂಕ್‌ಗಳ ಅನುತ್ಪಾದಕ ಸಾಲಕ್ಕೆ ಯುಪಿಎ ನೀತಿ ಕಾರಣ| ರಾಜ್ಯಸಭೆಯಲ್ಲಿ ವಿತ್ತ ಸಚಿವೆ ಸ್ಪಷ್ಟನೆ


ನವದೆಹಲಿ[ನ.28]: ‘ಭಾರತದಲ್ಲಿ ಆರ್ಥಿಕ ಕುಸಿತವಾಗುತ್ತಿದೆ’ ಎಂಬ ಪ್ರತಿಪಕ್ಷಗಳ ಆರೋಪವನ್ನು ತಿರಸ್ಕರಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ‘ಬೆಳವಣಿಗೆ ಮಂದಗತಿಯಲ್ಲಿ ಸಾಗುತ್ತಿರಬಹುದು. ಆದರೆ ಆರ್ಥಿಕ ಕುಸಿತ ಆಗಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಆರ್ಥಿಕ ಪರಿಸ್ಥಿತಿಯ ಬಗ್ಗೆ ಬುಧವಾರ ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಸದಸ್ಯರ ಕಳವಳಿಗೆ ಉತ್ತರ ನೀಡಿದ ನಿರ್ಮಲಾ, ‘ನಾನು ಮಂಡಿಸಿದ ಮೊದಲ ಬಜೆಟ್‌ ಈಗ ಫಲ ಕೊಡಲು ಆರಂಭಿಸಿದೆ. ಆಟೋಮೊಬೈಲ್‌ನಂತಹ ವಲಯಗಳಲ್ಲಿ ಚೇತರಿಕೆಯ ಲಕ್ಷಣ ಕಾಣಲಾರಂಭಿಸಿದೆ’ ಎಂದು ಹೇಳಿದರು.

Tap to resize

Latest Videos

41,020 ಅಂಕಗಳಲ್ಲಿ ಮುಕ್ತಾಯ: ಸೆನ್ಸೆಕ್ಸ್‌ ಹೊಸ ದಾಖಲೆ ನಿರ್ಮಾಣ

‘ನೇರ ತೆರಿಗೆ ಹಾಗೂ ಜಿಎಸ್‌ಟಿ ಸಂಗ್ರಹ ಕಳೆದ 7 ತಿಂಗಳಲ್ಲಿ ಏರಿಕೆ ಕಂಡಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದರ ಸಂಗ್ರಹ ಹೆಚ್ಚಿದೆ. ಬೆಳವಣಿಗೆ ಮಂದಗತಿಯಲ್ಲಿ ಸಾಗುತ್ತಿರಬಹುದು. ಆದರೆ ಅದು ಆರ್ಥಿಕ ಕುಸಿತವಾಗಿ ಪರಿವರ್ತನೆಗೊಂಡಿಲ್ಲ. ಆರ್ಥಿಕ ಕುಸಿತ ಆಗುವುದೂ ಇಲ್ಲ’ ಎಂದು ಅವರು ಖಚಿತವಾಗಿ ತಿಳಿಸಿದರು.

ನಿರ್ಮಲಾ ಅವರ ಉತ್ತರಕ್ಕೆ ಸಮಾಧಾನಗೊಳ್ಳದೇ ಕಾಂಗ್ರೆಸ್‌, ತೃಣಮೂಲ ಕಾಂಗ್ರೆಸ್‌ ಹಾಗೂ ಎಡಪಕ್ಷಗಳು ಸಭಾತ್ಯಾಗ ಮಾಡಿದವು. ‘ಸಚಿವರು ಸ್ಪಷ್ಟನೆ ನೀಡುವುದಕ್ಕಿಂತ ತಾವು ಮಂಡಿಸಿದ ಬಜೆಟ್ಟನ್ನೇ ಹೆಚ್ಚು ಓದುತ್ತಿದ್ದಾರೆ’ ಎಂದು ಈ ಪಕ್ಷಗಳು ಆರೋಪಿಸಿದವು.

ಕಾಂಗ್ರೆಸ್‌-ಮೋದಿ ಅವಧಿ ತುಲನೆ:

2014ರಲ್ಲಿ ಮೋದಿ ಸರ್ಕಾರ ಬಂದ ನಂತರದ ಜಿಡಿಪಿ ಬೆಳವಣಿಗೆ ಹಾಗೂ ಅದಕ್ಕಿಂತ ಮುಂಚಿನ ಯುಪಿಎ ಸರ್ಕಾರದ ಅವಧಿಯ ಜಿಡಿಪಿಯ ತುಲನೆ ಮಾಡಿದ ಅವರು, ‘2014-15ರಲ್ಲಿ ಜಿಡಿಪಿ ಶೇ.5.5 ಇತ್ತು. ಅದು 2018-19ರಲ್ಲಿ ಶೇ.5.98ಕ್ಕೇರಿದೆ. ಹಣದುಬ್ಬರ ನಿಗದಿತ ಮಟ್ಟಕ್ಕಿಂತ ಕಡಿಮೆ ಇದೆ. ಆರ್ಥಿಕ ವಿಸ್ತರಣೆ ಉತ್ತಮವಾಗಿದೆ. ಆದರೆ ಕಳೆದ 2 ವರ್ಷಗಳ ಜಿಡಿಪಿ ದರ ಇಳಿದಿರುವುದು ಯುಪಿಎ ಅವಧಿಯಲ್ಲಿನ ಬ್ಯಾಂಕಿಂಗ್‌ ಸಾಲ ವಿತರಣೆಯ ಫಲ. ಯುಪಿಎ ನೀತಿಯಿಂದ ಬ್ಯಾಂಕ್‌ಗಳ ಅನುತ್ಪಾದಕ ಆಸ್ತಿ ಹೆಚ್ಚಿದೆ. ಆದರೆ ಬ್ಯಾಂಕ್‌ಗಳಿಗೆ ನಾವು 70 ಸಾವಿರ ಕೋಟಿ ರು. ನೆರವು ನೀಡಿದ್ದು, ಇದರಿಂದ ಅವುಗಳ ಸಾಲ ನೀಡಿಕೆ ಸಾಮರ್ಥ್ಯ 2.5 ಲಕ್ಷ ಕೋಟಿ ರು.ಗೆ ಹೆಚ್ಚಿದೆ’ ಎಂದರು.

ವಿದೇಶೀ ನೇರ ಬಂಡವಾಳ ಹೂಡಿಕೆ 2009-14ರ ಯುಪಿಎ ಅವಧಿಯಲ್ಲಿ 189.5 ಶತಕೋಟಿ ಡಾಲರ್‌ ಇತ್ತು. ಆದರೆ 2014ರ ನಂತರದ ಬಿಜೆಪಿ ಅವಧಿಯಲ್ಲಿ 283.9 ಶತಕೋಟಿ ಡಾಲರ್‌ಗೆ ಏರಿತು ಎಂದು ಅವರು ಉದಾಹರಿಸಿದರು.

click me!