ಇಟ್ಸ್ ಸಿಂಗ್ VS ಸೀತಾರಾಮನ್: ಶತಮಾನದ ಟ್ರೆಂಡಿಂಗ್ ಟಾಕ್ ವಾರ್!

By nikhil vk  |  First Published Oct 18, 2019, 5:26 PM IST

ಮನಮೋಹನ್ ಸಿಂಗ್-ನಿರ್ಮಾಲಾ ಸೀತಾರಾಮನ್ ನಡುವೆ ಟಾಕ್ ವಾರ್| ದೇಶದ ಆರ್ಥಿಕ ಸ್ಥಿತಿ ಹದಗಡೆಲು ಕಾರಣ ಯಾರು ಎಂಬ ಚರ್ಚೆ ಜೋರು| ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ನಿರತರಾಗಿದ್ದಾರೆ ಡಾ.ಸಿಂಗ್ ಹಾಗೂ ಸೀತಾರಾಮನ್| ಆರ್ಥಿಕ ಸ್ಥಿತಿ ಸುಧಾರಿಸಲು ಸರ್ಕಾರಕ್ಕೆ ಮನಸ್ಸಿಲ್ಲ ಎಂದು ಆರೋಪಿಸಿದ ಡಾ. ಸಿಂಗ್| ಸಿಂಗ್ ಅವಧಿಯಲ್ಲಿ ಕೈಗೊಂಡ ತಪ್ಪು ನಿರ್ಧಾರಗಳೇ ಆರ್ಥಿಕ ಸ್ಥಿತಿ ಹದಗೆಡಲು ಕಾರಣ ಎಂದ ಸೀತಾರಾಮನ್| ಕೇಂದ್ರ ಸರ್ಕಾರದ ಮೇಲಿದೆ ಆರ್ಥಿಕ ಸ್ಥಿತಿ ಸರಿದಾರಿಗೆ ತರುವ ಮಹತ್ತರವಾದ ಹೊಣೆ|


ನವದೆಹಲಿ(ಅ.18): ಆರ್ಥಿಕ ಹಿಂಜರಿಕೆಯಿಂದಾಗಿ ಇಡೀ ದೇಶ ಆತಂಕ ಮನೆ ಮಾಡಿದೆ. ಹಿಂಜರಿಕೆ ಪರಿಣಾಮವಾಗಿ ದೇಶದ ಉದ್ಯಮ ವಲಯದಲ್ಲಿ ಮಂಕು ಕವಿದಿದ್ದು, ಈಗಾಗಲೇ ಕೇಂದ್ರ ಸರ್ಕಾರ ಪುನಶ್ಚೇತನಕ್ಕೆ ಹಲವು ಕ್ರಮಗಳನ್ನು ಕೈಗೊಂಡಿದೆ.

ಅಲ್ಲದೇ ಆರ್ಥಿಕ ಪುನಶ್ಚೇತನಕ್ಕೆ ವಿತ್ತ ವಿದ್ವಾಂಸರಿಂದ ಸಲಹೆ ಸೂಚನೆಗಳು ನಿರಂತರವಾಗಿ ಬರುತ್ತಲೇ ಇವೆ. ಈ ಮಧ್ಯೆ ಆರ್ಥಿಕ ಹಿಂಜರಿಕೆಗೆ ಕಾರಣ ಏನು ಎಂಬುದರ ಕುರಿತು ಕೇಂದ್ರ ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್ ಹಾಗೂ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನಡುವೆ ಟಾಕ್ ವಾರ್ ನಡೆಯುತ್ತಿದೆ.

Tap to resize

Latest Videos

ಆರ್ಥಿಕ ಹಿಂಜರಿಕೆಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಜೋಡಿಯ ತಪ್ಪು ಆರ್ಥಿಕ ನೀತಿಗಳೇ ಕಾರಣ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರೋಪಿಸಿದ್ದಾರೆ.

ಸಿಂಗ್-ರಾಜನ್ ಕಾಲದಲ್ಲೇ ವಿನಾಶ: ನಿರ್ಮಲಾ ಹೇಳಿಕೆಗೆ ನಡುಗಿತು ಆಕಾಶ!

ನಿರ್ಮಲಾ ಆರೋಪಕ್ಕೆ ತಿರುಗೇಟು ನೀಡಿದ್ದ ಡಾ. ಸಿಂಗ್, ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರ ಹಿಂದಿನ ಸರ್ಕಾರಗಳ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದೆ ಎಂದು ಹರಿಹಾಯ್ದಿದ್ದರು.

ಆರ್ಥಿಕ ಪುನಶ್ಚೇತನಕ್ಕೆ ತಮ್ಮದೇ ಆದ ಸಲಹೆ ನೀಡಿರುವ ಡಾ. ಸಿಂಗ್, ಆರೋಪ-ಪ್ರತ್ಯಾರೋಪದ ರಾಜಕಾರಣ ಬಿಟ್ಟು, ಆರ್ಥಿಕ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು.

ಬ್ಯಾಂಕ್‌ಗಳಿಗೆ ಕೆಟ್ಟಕಾಲ ಅಂದ ಸಚಿವೆ ನಿರ್ಮಲಾಗೆ ಡಾ. ಸಿಂಗ್‌ ತಿರುಗೇಟು!

ಸರ್ಕಾರಕ್ಕೆ ಆರ್ಥಿಕ ಸ್ಥಿತಿ ಸುಧಾರಿಸುವ ಮನಸ್ಸಿಲ್ಲ. ಇದೇ ಕಾರಣಕ್ಕೆ ವಿನಾಕಾರಣ ತಮ್ಮ ಮೇಲೆ ಗೂಬೆ ಕೂರಿಸುತ್ತ ಕಾಲಹರಣ ಮಾಡುತ್ತಿದೆ ಎಂದು ಸಿಂಗ್ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು.

ಇದೀಗ ಮನಮೋಹನ್ ಸಿಂಗ್ ತಿರುಗೇಟಿಗೆ ಮತ್ತೆ ಪ್ರತ್ಯುತ್ತರ ನೀಡಿರುವ ನಿರ್ಮಲಾ ಸೀತಾರಾಮನ್, ಸಿಂಗ್ ತಮ್ಮ ದೌರ್ಬಲ್ಯಗಳ ಕುರಿತು ಮಾತನಾಡಲು ಸಿದ್ಧರಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಸಿಂಗ್ ಅವಧಿಯಲ್ಲಿ ಹಳಿ ತಪ್ಪಿದ್ದ ಆರ್ಥಿಕ ಸ್ಥಿತಿಯನ್ನು ಸರಿದಾರಿಗೆ ತರಲು ತಾವು ನಿರಂತರವಾಗಿ ಪ್ರಯತ್ನಿಸುತ್ತಿದ್ದು, ಹಿಂದಿನ ಸರ್ಕಾರದ ಅವಧಿಯಲ್ಲಾದ ತಪ್ಪು ನಿರ್ಧಾರಗಳ ಕುರಿತು ಮಾತನಾಡಲು ಅವರಿಗೆ ಧೈರ್ಯವಿಲ್ಲವೇ ಎಂದು ನಿರ್ಮಲಾ ಪ್ರಶ್ನಿಸಿದ್ದಾರೆ.

ನಾನು ಈ ಹಿಂದಿನ ಸರ್ಕಾರದ ತಪ್ಪು ಆರ್ಥಿಕ ನೀತಿಗಳಿಂದಾಗಿ ದೇಶ ಇಂದು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾತನಾಡಿದ್ದೇನೆ. ಈ ಸತ್ಯವನ್ನು ಸಹಿಸಿಕೊಳ್ಳುವ ಮನನೋಭಾವ ಸಿಂಗ್ ಅವರಲ್ಲಿ ಇಲ್ಲವೇ ಎಂದು ಸೀತಾರಾಮನ್ ಪ್ರಶ್ನಿಸಿದ್ದಾರೆ.

ದೇಶದ ಅರ್ಥ ವ್ಯವಸ್ಥೆ ಹದಗೆಡಲು ಕಾರಣ ಯಾರು ಎಂಬುದಕ್ಕಿಂತ ಹೆಚ್ಚಾಗಿ ಕಾರಣ ಏನು ಎಂಬುದನ್ನು ಪತ್ತೆ ಹಚ್ಚಿ ಅದಕ್ಕೆ ಮದ್ದು ನೀಡಬೇಕಾದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಎರಡೂ ಪಕ್ಷದ ನಾಯಕರ ಆರೋಪ-ಪ್ರತ್ಯಾರೋಪಗಳನ್ನು ಬದಿಗಿರಿಸಿ ಆರ್ಥಿಕ ಸ್ಥಿತಿಯನ್ನು ಮತ್ತೆ ಸರಿದಾರಿಗೆ ತರುವ ಮಹತ್ತರ ಹೊಣೆ ಕೇಂದ್ರ ಸರ್ಕಾರದ ಮೇಲಿದೆ ಎಂದು ಹೇಳಬಹುದು.

click me!