
ಭಾರತೀಯ ಮತ್ತು ಜಾಗತಿಕ ಹೂಡಿಕೆದಾರರಲ್ಲಿ ದುಬೈಯ ವಾಣಿಜ್ಯ ದರ್ಜೆ–ಎ (Grade-A) ಕಚೇರಿ ಸ್ಥಳಗಳ ಮೇಲಿನ ಆಕರ್ಷಣೆ ದಿನೇ ದಿನೇ ಹೆಚ್ಚುತ್ತಿರುವುದಕ್ಕೆ ಮತ್ತೊಂದು ಬಲವಾದ ಸಾಕ್ಷಿ ಸಿಕ್ಕಿದೆ. ದುಬೈ ಮೂಲದ ರಿಯಲ್ ಎಸ್ಟೇಟ್ ಡೆವಲಪರ್ ಡ್ಯಾನ್ಯೂಬ್ ಗ್ರೂಪ್ ತನ್ನ ಹೊಸದಾಗಿ ಅನಾವರಣಗೊಳಿಸಿದ ಒಂದು ಮಿಲಿಯನ್ ಚದರ ಅಡಿ ವಿಸ್ತೀರ್ಣದ ಪ್ರೀಮಿಯಂ ವಾಣಿಜ್ಯ ಗೋಪುರ ‘ಡ್ಯಾನ್ಯೂಬ್‌ನ ಶಾರುಖ್ಜ್’ ಅನ್ನು ಕೇವಲ ಕೆಲವೇ ವಾರಗಳಲ್ಲಿ 5,000 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದಲ್ಲಿ ಸಂಪೂರ್ಣವಾಗಿ ಮಾರಾಟ ಮಾಡಿದೆ.
ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ (Shah Rukh Khan) ಅವರ ಹೆಸರಿನಲ್ಲಿ ನಿರ್ಮಿಸಲಾಗುತ್ತಿರುವ 55 ಅಂತಸ್ತಿನ ಐಕಾನಿಕ್ ವಾಣಿಜ್ಯ ಕಟ್ಟಡದ ಎಲ್ಲಾ ಆಫೀಸ್ ಸ್ಪೇಸ್ಗಳೂ ಮಾರಾಟವಾಗಿವೆ. ಇತ್ತೀಚಿನ ವರ್ಷಗಳಲ್ಲಿ ದುಬೈನಲ್ಲಿ ಅತಿವೇಗವಾಗಿ ಮಾರಾಟವಾದ ವಾಣಿಜ್ಯ ಯೋಜನೆಗಳ ಪೈಕಿ ಒಂದಾಗಿದೆ. ಇದು ಎಮಿರೇಟ್‌ನಲ್ಲಿ ಹೆಚ್ಚಿನ ಇಳುವರಿ ನೀಡುವ ಕಚೇರಿ ಆಸ್ತಿಗಳ ಮೇಲಿನ ಭಾರೀ ಬೇಡಿಕೆಯನ್ನು ಸ್ಪಷ್ಟಪಡಿಸುತ್ತದೆ.
ಕಳೆದ ತಿಂಗಳು ಅಧಿಕೃತವಾಗಿ ಅನಾವರಣಗೊಂಡ ಈ ಯೋಜನೆಗೆ ವ್ಯಾಪಾರ ಮಾಲೀಕರು, ವೃತ್ತಿಪರರು, ಫ್ಯಾಮಿಲಿ ಆಫೀಸ್‌ಗಳು ಮತ್ತು ಚಿಲ್ಲರೆ ಹೂಡಿಕೆದಾರರಿಂದ ಭಾರೀ ಪ್ರತಿಕ್ರಿಯೆ ದೊರಕಿದೆ. ಸ್ಥಿರ ಬಾಡಿಗೆ ಆದಾಯ, ಯುಎಇ ನಿವಾಸ ಸಂಬಂಧಿತ ಅವಕಾಶಗಳು ಹಾಗೂ ಪ್ರತಿಷ್ಠಿತ ವಾಣಿಜ್ಯ ವ್ಯವಹಾರಕ್ಕೆ ಆಕರ್ಷಣೆ ಈ ಯೋಜನೆಯ ಯಶಸ್ಸಿಗೆ ಪ್ರಮುಖ ಕಾರಣಗಳಾಗಿವೆ. ತಜ್ಞರ ಪ್ರಕಾರ, ಭಾರತೀಯ ಮೆಟ್ರೋ ನಗರಗಳಿಗಿಂತ ಹೆಚ್ಚಿನ ಇಳುವರಿ, ಪಾರದರ್ಶಕ ನಿಯಮಾವಳಿ, ತೆರಿಗೆ ಅನುಕೂಲತೆಗಳು ಹಾಗೂ ಯುಎಇಯಲ್ಲಿ ವ್ಯವಹಾರ ಆರಂಭಿಸುವ ಸುಲಭ ಪ್ರಕ್ರಿಯೆಗಳು ಭಾರತೀಯ ಮತ್ತು ಅನಿವಾಸಿ ಭಾರತೀಯ (NRI) ಹೂಡಿಕೆದಾರರನ್ನು ದುಬೈ ವಾಣಿಜ್ಯ ಆಸ್ತಿಗಳತ್ತ ಹೆಚ್ಚು ಆಕರ್ಷಿಸುತ್ತಿವೆ.
ಡ್ಯಾನ್ಯೂಬ್ ಗ್ರೂಪ್ ಮಾಹಿತಿ ಪ್ರಕಾರ, ‘ಶಾರುಖ್’ ಯೋಜನೆಯಲ್ಲಿನ ಕಚೇರಿ ಘಟಕಗಳ ಬೆಲೆಗಳು 2 ಮಿಲಿಯನ್ ದಿರ್ಹಮ್‌ಗಳಿಂದ ( ಅಂದರೆ ಸುಮಾರು 4.92 ಕೋಟಿ ರೂ.) ಆರಂಭವಾಗುತ್ತದೆ. ಈ ಯೋಜನೆ ಒಟ್ಟು 488 ಪ್ರೀಮಿಯಂ ಕಚೇರಿ ಘಟಕಗಳನ್ನು ಒಳಗೊಂಡಿದ್ದು, 2029ರಲ್ಲಿ ಇದು ಪೂರ್ಣಗೊಳ್ಳಲಿದೆ. ಇನ್ನೂ ವಿಶೇಷವೆಂದರೆ ಈ ಯೋಜನೆಯ ಖರೀದಿದಾರರಲ್ಲಿ ಸುಮಾರು 30 ಶೇಕಡಾ ಮಂದಿ ಭಾರತೀಯ ವಲಸೆಗಾರರು ಎಂದು ಕಂಪನಿ ತಿಳಿಸಿದೆ. ಇದು ದುಬೈ ವಾಣಿಜ್ಯ ಮಾರುಕಟ್ಟೆಯಲ್ಲಿ ಭಾರತೀಯ ಹೂಡಿಕೆದಾರರ ಬಲಿಷ್ಠತೆಯನ್ನು ಎತ್ತಿ ತೋರಿಸುತ್ತದೆ.
ಸುಮಾರು 3,500 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಈ ವಾಣಿಜ್ಯ ಗೋಪುರವು ದುಬೈಯ ಪ್ರತಿಷ್ಠಿತ ಶೇಖ್ ಜಾಯೆದ್ ರಸ್ತೆಯಲ್ಲಿ ಇದೆ. ಐಷಾರಾಮಿ ವಾಸ್ತುಶಿಲ್ಪವನ್ನು ಸೆಲೆಬ್ರಿಟಿ ಬ್ರ್ಯಾಂಡಿಂಗ್‌ನೊಂದಿಗೆ ಸಂಯೋಜಿಸಿರುವುದು, ವಿಶೇಷವಾಗಿ ಉನ್ನತ ಆದಾಯದ NRI ಹೂಡಿಕೆದಾರರಲ್ಲಿ ಈ ಯೋಜನೆಗೆ ಬಲವಾದ ಸ್ಪಂದನೆ ದೊರಕುವಂತೆ ಮಾಡಿದೆ ಎಂದು ಉದ್ಯಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ದುಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಡ್ಯಾನ್ಯೂಬ್ ಗ್ರೂಪ್ ಸಂಸ್ಥಾಪಕ ರಿಜ್ವಾನ್ ಸಜನ್ ಯೋಜನೆಯ ಸಂಪೂರ್ಣ ಮಾರಾಟವನ್ನು ಅಧಿಕೃತವಾಗಿ ಘೋಷಿಸಿದರು. ಈ ಯೋಜನೆಯಿಂದ ಒಟ್ಟು 2.1 ಬಿಲಿಯನ್ ದಿರ್ಹಮ್‌ಗಳ (ಸುಮಾರು 5,000 ಕೋಟಿ ರೂ.) ಬುಕಿಂಗ್‌ಗಳು ದಾಖಲಾಗಿವೆ ಎಂದು ಬಹಿರಂಗಪಡಿಸಿದರು.
ಈ ಯೋಜನೆಗೆ ಅಗತ್ಯವಿರುವ ಹಣಕಾಸು ವ್ಯವಸ್ಥೆಯನ್ನು ಆಂತರಿಕ ಸಂಚಯಗಳು ಮತ್ತು ಗ್ರಾಹಕರ ಮುಂಗಡ ಪಾವತಿಗಳ ಮೂಲಕಲೇ ನಿರ್ವಹಿಸಲಾಗುವುದು ಎಂದು ಸಜನ್ ಹೇಳಿದರು. ದುಬೈನಲ್ಲಿ ವಸತಿ ಮತ್ತು ವಾಣಿಜ್ಯ ಆಸ್ತಿಗಳ ಮೇಲಿನ ಬೇಡಿಕೆ ಮುಂದಿನ ಹಲವು ವರ್ಷಗಳವರೆಗೆ ದೃಢವಾಗಿ ಮುಂದುವರಿಯುವ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು.
ಶಾರುಖ್ ಖಾನ್ ಮತ್ತು ಡ್ಯಾನ್ಯೂಬ್ ಗ್ರೂಪ್ ನಡುವಿನ ಸಹಭಾಗಿತ್ವ ಕೇವಲ ಬ್ರ್ಯಾಂಡಿಂಗ್‌ಗೆ ಸೀಮಿತವಲ್ಲ, ಅದು ಒಂದು ಸಮಾನಾಂತರ ಯಶೋಗಾಥೆಯ ಪ್ರತಿಬಿಂಬವಾಗಿದೆ ಎಂದು ರಿಜ್ವಾನ್ ಸಜನ್ ಹೇಳಿದರು. ಮೂರು ದಶಕಗಳ ಹಿಂದೆ ನಾವು ಇಬ್ಬರೂ ಸಾಧಾರಣ ಆರಂಭದಿಂದ ಈ ಪಯಣ ಹೊರಟೆವು. ಉತ್ಸಾಹ, ಪರಿಶ್ರಮ ಮತ್ತು ಕನಸುಗಳ ಮೇಲೆ ನಂಬಿಕೆ ಇಟ್ಟರೆ ಭವಿಷ್ಯವನ್ನು ರೂಪಿಸಬಹುದು ಎಂಬುದೇ ನಮ್ಮಿಬ್ಬರ ಸಾರ ಎಂದು ಅವರು ಹೇಳಿದರು.
ಶಾರುಖ್ ಖಾನ್ ತಮ್ಮ ಕನಸುಗಳನ್ನು ಜಾಗತಿಕ ಪರಂಪರೆಯಾಗಿ ರೂಪಿಸಿದ್ದಾರೆ. ಡ್ಯಾನ್ಯೂಬ್‌ನ ಬೆಳವಣಿಗೆಯಲ್ಲಿಯೂ ಇದೇ ನೀತಿಯನ್ನು ಅಳವಡಿಸಿಕೊಳ್ಳಲಾಗಿದೆ. ‘ಡ್ಯಾನ್ಯೂಬ್‌ನ ಶಾರುಖ್ಜ್’ ಎಂಬುದು ದೃಷ್ಟಿ, ಮೌಲ್ಯ ಮತ್ತು ಮಿತಿಗಳಿಲ್ಲದೆ ಕನಸು ಕಾಣುವ ಶಕ್ತಿಗೆ ಜಾಗತಿಕ ಸಾಕ್ಷಿಯಾಗಿದೆ,” ಎಂದು ಸಜನ್ ಅಭಿಪ್ರಾಯಪಟ್ಟರು.
1993ರಲ್ಲಿ ಸ್ಥಾಪಿತವಾದ ಡ್ಯಾನ್ಯೂಬ್ ಗ್ರೂಪ್, ಆರಂಭದಲ್ಲಿ ಕಟ್ಟಡ ಸಾಮಗ್ರಿಗಳ ವ್ಯವಹಾರದಲ್ಲಿ ತನ್ನನ್ನು ಗುರುತಿಸಿಕೊಂಡಿತು. 2014ರಲ್ಲಿ ರಿಯಲ್ ಎಸ್ಟೇಟ್ ಅಭಿವೃದ್ಧಿ ಕ್ಷೇತ್ರಕ್ಕೆ ಪ್ರವೇಶಿಸಿದ ಬಳಿಕ, ಸಂಸ್ಥೆ ಈಗಾಗಲೇ 40 ಯೋಜನೆಗಳನ್ನು ಪ್ರಾರಂಭಿಸಿದ್ದು, ಅವುಗಳಲ್ಲಿ 18 ಯೋಜನೆಗಳು ಪೂರ್ಣಗೊಂಡಿವೆ, ಉಳಿದವು ನಿರ್ಮಾಣ ಹಂತದಲ್ಲಿದೆ. ಒಟ್ಟಿನಲ್ಲಿ, ‘ಡ್ಯಾನ್ಯೂಬ್‌ನ ಶಾರುಖ್ಜ್’ ಯೋಜನೆಯ ಭರ್ಜರಿ ಯಶಸ್ಸು ದುಬೈ ವಾಣಿಜ್ಯ ರಿಯಲ್ ಎಸ್ಟೇಟ್ ಮಾರುಕಟ್ಟೆಯ ಬಲ, ಹೂಡಿಕೆದಾರರ ವಿಶ್ವಾಸ ಮತ್ತು ಭಾರತೀಯ ಹೂಡಿಕೆದಾರರ ಹೆಚ್ಚುತ್ತಿರುವ ಪಾತ್ರವನ್ನು ತೋರಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.