ಹಬ್ಬದ ಸಮಯದಲ್ಲಿ ಆನ್ ಲೈನ್, ಆಪ್ ಲೈನ್ ವ್ಯಾಪಾರಿಗಳು ನೋ ಕಾಸ್ಟ್ ಇಎಂಐ ಸೌಲಭ್ಯವನ್ನು ಗ್ರಾಹಕರಿಗೆ ಕಲ್ಪಿಸುತ್ತವೆ. ಈ ಇಎಂಐ ಮೇಲೆ ಯಾವುದೇ ಪ್ರೊಸೆಸಿಂಗ್ ಶುಲ್ಕ, ಬಡ್ಡಿ ಇಲ್ಲ. ಹಾಗಾದ್ರೆ ಇದು ಗ್ರಾಹಕರಿಗೆ ಲಾಭದಾಯಕವೇ? ಗ್ರಾಹಕರಿಗೆ ಇದ್ರಿಂದ ನಷ್ಟವಾಗೋದಿಲ್ಲವೆ? ಈ ಕುರಿತ ಮಾಹಿತಿ ಇಲ್ಲಿದೆ.
Business Desk:ಆನ್ ಲೈನ್ ಶಾಪಿಂಗ್ ಮಾಡೋರಿಗೆ ಶೂನ್ಯ ವೆಚ್ಚ ಅಥವಾ ನೋ ಕಾಸ್ಟ್ ಇಎಂಐ ಬಗ್ಗೆ ತಿಳಿದಿರುತ್ತದೆ. ಹಬ್ಬಗಳ ಸಮಯದಲ್ಲಿ ನೋ ಕಾಸ್ಟ್ ಇಎಂಐ ಆಫರ್ ಗಳನ್ನು ಆನ್ ಲೈನ್ ವ್ಯಾಪಾರಿಗಳು ಹೆಚ್ಚಾಗಿ ನೀಡುತ್ತಾರೆ. ಈ ಮೂಲಕ ಗ್ರಾಹಕರನ್ನು ದೊಡ್ಡ ಪ್ರಮಾಣದಲ್ಲಿ ಆಕರ್ಷಿಸಲು ಪ್ರಯತ್ನಿಸುತ್ತಾರೆ. ಅನೇಕರು ಗೃಹೋಪಯೋಗಿ ಸಾಮಗ್ರಿಗಳು, ಹೊಸ ವಾಹನಗಳು, ಬೈಕ್ ಗಳು ಹಾಗೂ ಗಜೆಟ್ ಗಳನ್ನು ಖರೀದಿಸಲು ಹಬ್ಬದ ಸೀಸನ್ ಅಥವಾ ವಿಶೇಷ ಮಾರಾಟದ ತನಕ ಕಾಯುತ್ತಾರೆ. ಏಕೆಂದರೆ ಈ ಸಮಯದಲ್ಲಿ ನೋ ಕಾಸ್ಟ್ ಇಎಂಐ ಸೌಲಭ್ಯವನ್ನು ಆನ್ ಲೈನ್ ಖರೀದಿ ತಾಣಗಳು ನೀಡುತ್ತವೆ? ಮೇಲ್ನೋಟಕ್ಕೆ ಗ್ರಾಹಕಸ್ನೇಹಿ ಯೋಜನೆಯಂತೆ ಕಾಣುವ ನೋ ಕಾಸ್ಟ್ ಇಎಂಐ ನಿಜಕ್ಕೂ ಖರೀದಿದಾರರಿಗೆ ಲಾಭದಾಯಕವೇ? ಯಾವುದೇ ಶುಲ್ಕ ಅಥವಾ ಬಡ್ಡಿದರವಿಲ್ಲದೆ ಇಎಂಐ ಸೌಲಭ್ಯ ನೀಡೋದ್ರಿಂದ ವ್ಯಾಪಾರಿಗಳಿಗೆ ನಷ್ಟವಾಗೋದಿಲ್ಲವೆ? ಇಂಥ ಪ್ರಶ್ನೆಗಳು ಕಾಡೋದು ಸಹಜ. ಯಾವ ವ್ಯಾಪಾರಿ ಕೂಡ ಲಾಭವಿಲ್ಲದೆ ವಸ್ತುಗಳನ್ನು ಮಾರಾಟ ಮಾಡಲು ಸಾಧ್ಯವೇ ಇಲ್ಲ. ಹೀಗಿರುವಾಗ ನೋ ಕಾಸ್ಟ್ ಇಎಂಐ ವ್ಯಾಪಾರಿಗಳಿಗೆ ಹೇಗೆ ಲಾಭ ನೀಡುತ್ತದೆ? ಗ್ರಾಹಕರಿಗೆ ಇದು ಲಾಭದಾಯಕವೇ? ಇಲ್ಲಿದೆ ಮಾಹಿತಿ.
ನೋ ಕಾಸ್ಟ್ ಇಎಂಐ ಅಂದ್ರೇನು?
ಗೃಹೋಪಯೋಗಿ ಸಾಮಗ್ರಿ, ಮೊಬೈಲ್ ಹೀಗೆ ಯಾವುದೇ ವಸ್ತು ಖರೀದಿಗೆ ನಿಮ್ಮ ಬಳಿ ಹಣವಿಲ್ಲದಿದ್ದಾಗ ನೀವು ಇಎಂಐ ಮೂಲಕ ಅದನ್ನು ಖರೀದಿಸಬಹುದು. ಪ್ರತಿ ತಿಂಗಳು ಇಎಂಐ ಭರಿಸುವ ಮೂಲಕ ಆ ಸಾಮಗ್ರಿಯ ಪೂರ್ಣ ಹಣವನ್ನು ಪಾವತಿಸಬಹುದು. ಆದ್ರೆ ಈ ಇಎಂಐ ಮೇಲೆ ಬಡ್ಡಿ ಪಾವತಿಸಬೇಕು. ಆದ್ರೆ ನೋ ಕಾಸ್ಟ್ ಅಥವಾ ಝೀರೋ ಕಾಸ್ಟ್ ಇಎಂಐ ಮೇಲೆ ಯಾವುದೇ ಬಡ್ಡಿ ಅಥವಾ ಶುಲ್ಕ ವಿಧಿಸೋದಿಲ್ಲ.
ಮ್ಯೂಚುವಲ್ ಫಂಡ್ ಲಾಭ-ನಷ್ಟ ಪರಿಶೀಲಿಸೋದು ಹೇಗೆ? ಯಾವಾಗ ಹೂಡಿಕೆ ಹಿಂತೆಗೆಯಬೇಕು?
ನೋ ಕಾಸ್ಟ್ ಇಎಂಐ ಯೋಜನೆ ಮೂಲಕ ಗ್ರಾಹಕ ಇಎಂಐ ಆಯ್ಕೆ ಬಳಸಿ ವಸ್ತುಗಳನ್ನು ಖರೀದಿಸಬಹುದು. ಇದಕ್ಕೆ ಆತ ಯಾವುದೇ ಡೌನ್ ಪೇಮೆಂಟ್ ಮಾಡಬೇಕಾಗಿಲ್ಲ. ಪ್ರೊಸೆಸಿಂಗ್ ಶುಲ್ಕ ಕೂಡ ಪಾವತಿಸಬೇಕಾಗಿಲ್ಲ. ಈ ಇಎಂಐ ಮೇಲೆ ಬಡ್ಡಿ ಕೂಡ ವಿಧಿಸೋದಿಲ್ಲ.
ವ್ಯಾಪಾರಿಗಳಿಗೆ ಲಾಭವಿಲ್ಲವೆ?
ಸಾಮಾನ್ಯವಾಗಿ ಇಎಂಐ ಮೂಲಕ ಯಾವುದೇ ವಸ್ತುವನ್ನು ಖರೀದಿಸಿದ್ರೆ ಆ ಮೊತ್ತದ ಮೇಲೆ ಬಡ್ಡಿ ವಿಧಿಸಲಾಗುತ್ತದೆ. ಆದರೆ, ನೋ ಕಾಸ್ಟ್ ಇಎಂಐಯಲ್ಲಿ ಬಡ್ಡಿ ಇಲ್ಲ, ಪ್ರೊಸೆಸಿಂಗ್ ಶುಲ್ಕ ಇಲ್ಲ. ಹಾಗಾದ್ರೆ ವ್ಯಾಪಾರಿಗೇನು ಲಾಭ? ಇತರ ಇಎಂಐಗಳಿಗೆ ಹೋಲಿಸಿದ್ರೆ ನೋ ಕಾಸ್ಟ್ ಇಎಂಐ ಅವಧಿ ಕಡಿಮೆ. ಈ ಅವಧಿ ಕನಿಷ್ಠ 3 ತಿಂಗಳಿಂದ ಗರಿಷ್ಠ ಒಂದು ವರ್ಷ ಆಗಿರುತ್ತದೆ. ಯಾವುದೇ ಹಣಕಾಸು ಸಂಸ್ಥೆಗಳು ಗ್ರಾಹಕರಿಗೆ ಝಿರೋ ಪರ್ಸೆಂಟ್ ಬಡ್ಡಿ ವಿಧಿಸುವಂತಿಲ್ಲ ಎಂದು ಆರ್ ಬಿಐ ಮಾರ್ಗಸೂಚಿಗಳು ತಿಳಿಸಿವೆ. ಈ ಇಎಂಐ ವಿಧಾನದಲ್ಲಿ ನೀವು ಬಡ್ಡಿ ಪಾವತಿಸದೆ ಇರಬಹುದು, ಆದರೆ ಆ ವಸ್ತುವಿಗೆ ಅದರ ರಿಟೇಲ್ ಬೆಲೆಯನ್ನೇ ಪಾವತಿಸುತ್ತೀರಿ. ಅಂದರೆ ಇತರ ಗ್ರಾಹಕರಿಗೆ ನೀಡಿದಂತೆ ವಸ್ತುವಿನ ಬೆಲೆ ಮೇಲೆ ನಿಮಗೆ ಯಾವುದೇ ಆಫರ್ ನೀಡಿರೋದಿಲ್ಲ. ಇನ್ನೂ ಕೆಲವು ವ್ಯಾಪಾರಿಗಳು ಬಡ್ಡಿ, ಪ್ರೊಸೆಸಿಂಗ್ ಶುಲ್ಕ ಎಲ್ಲವನ್ನೂ ಬೆಲೆಯಲ್ಲೇ ಸೇರಿಸಿರುತ್ತಾರೆ. ಹೀಗಾಗಿ ಗ್ರಾಹಕನಿಗೇನೂ ಲಾಭವಿಲ್ಲ. ಹಾಗೆಯೇ ವ್ಯಾಪಾರಿಗೆ ನಷ್ಟವೂ ಇಲ್ಲ.ಇದೊಂದು ಮಾರ್ಕೆಟಿಂಗ್ ಗಿಮಕ್ ಅಷ್ಟೆ.
SBI Vs Post Office: ಯಾವ ಎಫ್ ಡಿಯಲ್ಲಿ ಹೂಡಿಕೆ ಮಾಡಿದ್ರೆ ಉತ್ತಮ ರಿಟರ್ನ್ಸ್ ಸಿಗುತ್ತೆ?
ಈ ವಿಚಾರಗಳನ್ನು ಗಮನಿಸಿ
ನೀವು ನೋ ಕಾಸ್ಟ್ ಇಎಂಐ ಮೂಲಕ ವಸ್ತುಗಳನ್ನು ಖರೀದಿಸುವ ಮುನ್ನ ಆ ಇ-ಕಾಮರ್ಸ್ ವೆಬ್ ಸೈಟ್ ಅಥವಾ ಮಳಿಗೆಯ ಕುರಿತು ತಿಳಿದುಕೊಳ್ಳಿ. ಹಾಗೆಯೇ ಅದರ ಟರ್ಮ್ ಹಾಗೂ ಕಂಡೀಷನ್ ಗಳು, ಪ್ರೊಸೆಸಿಂಗ್ ಶುಲ್ಕ ಇತ್ಯಾದಿಗಳ ಬಗ್ಗೆ ತಿಳಿಯಿರಿ.