ಆಭರಣ ವ್ಯಾಪಾರಿಗಳಿಗೆ ನೋಟ್‌ಬಂದಿ ಶಾಕ್‌!

By Kannadaprabha NewsFirst Published Feb 28, 2020, 7:21 AM IST
Highlights

ಅಪನಗದೀಕರಣ ಘೋಷಣೆಯಾದ ದಿನದ ರಾತ್ರಿ ಚಿನ್ನಾಭರಣ ವ್ಯಾಪಾರಿಗಳಿಗೆ ಕಂಡು ಕೇಳರಿಯದಷ್ಟುವ್ಯಾಪಾರ ನಡೆದಿತ್ತು ಎನ್ನಲಾಗಿದ್ದು, ಈ ಸಂಬಂಧ ಅವರಿಗೆ ಆದಾಯ ತೆರಿಗೆ ಇಲಾಖೆಯು ವಹಿವಾಟಿನ ವಿವರ ಅಚ್ಚರಿಯ ರೀತಿ ನೋಟಿಸ್‌ ಜಾರಿಗೊಳಿಸತೊಡಗಿದೆ.
 

"

ನವದೆಹಲಿ [ಫೆ.28]:  ಪ್ರಧಾನಿ ನರೇಂದ್ರ ಮೋದಿ ಅವರು 500 ರು. ಹಾಗೂ 1000 ರು. ನೋಟುಗಳ ಅಪನಗದೀಕರಣ ಮಾಡಿದ 3 ವರ್ಷದ ನಂತರವೂ ಅದರ ಭೂತ ಇನ್ನೂ ಜೀವಂತವಾಗಿದೆ. ಅಪನಗದೀಕರಣ ಘೋಷಣೆಯಾದ ದಿನದ ರಾತ್ರಿ ಚಿನ್ನಾಭರಣ ವ್ಯಾಪಾರಿಗಳಿಗೆ ಕಂಡು ಕೇಳರಿಯದಷ್ಟುವ್ಯಾಪಾರ ನಡೆದಿತ್ತು ಎನ್ನಲಾಗಿದ್ದು, ಈ ಸಂಬಂಧ ಅವರಿಗೆ ಆದಾಯ ತೆರಿಗೆ ಇಲಾಖೆಯು ವಹಿವಾಟಿನ ವಿವರ ಅಚ್ಚರಿಯ ರೀತಿ ನೋಟಿಸ್‌ ಜಾರಿಗೊಳಿಸತೊಡಗಿದೆ.

ಇದಲ್ಲದೆ, ಅಂದು ಗಳಿಸಿದ ಆದಾಯವನ್ನೂ ಪೂರ್ತಿ ತೆರಿಗೆ ಇಲಾಖೆಗೆ ಕಟ್ಟುವಂತೆಯೂ ಕೆಲವರಿಗೆ ನೋಟಿಸ್‌ ಜಾರಿಯಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಆರ್ಥಿಕ ಮಂದಗತಿಯ ಕಾರಣ ತೆರಿಗೆ ಸಂಗ್ರಹ ಕಡಿಮೆ ಆಗಿರುವ ಈ ದಿನಗಳಲ್ಲಿ, ಈ ತೆರಿಗೆ ಹಣದಿಂದ ಇಲಾಖೆಗೆ 2 ಲಕ್ಷ ಕೋಟಿ ರು. ಆದಾಯ ಹರಿದುಬರಬಹುದು ಎನ್ನಲಾಗಿದೆ.

ಈವರೆಗೆ ಸುಮಾರು 15 ಸಾವಿರ ಚಿನ್ನಾಭರಣ ವ್ಯಾಪಾರಿಗಳಿಗೆ ಆದಾಯ ತೆರಿಗೆ ನೋಟಿಸ್‌ ಜಾರಿಯಾಗಿದ್ದು, ಅಪನಗದೀಕರಣ ಘೋಷಣೆಯಾದ ದಿನದ ರಾತ್ರಿ ನಡೆದ ವಹಿವಾಟಿನ ಸಂಪೂರ್ಣ ಹಣವನ್ನು ತೆರಿಗೆ ರೂಪದಲ್ಲಿ ಕಟ್ಟುವಂತೆ ಹಾಗೂ ವಹಿವಾಟಿನ ವಿವರ ನೀಡುವಂತೆ ಸೂಚಿಸಲಾಗಿದೆ. ಇದು ಆಭರಣ ವರ್ತಕರನ್ನು ದಂಗು ಬಡಿಸಿದ್ದು, ಕೆಲವರು ನ್ಯಾಯಾಲಯದ ಮೆಟ್ಟಿಲನ್ನೂ ಏರಿದ್ದಾರೆ. ಒಂದು ವೇಳೆ ತೀರ್ಪು ತಮ್ಮ ವಿರುದ್ಧ ಬಂದಲ್ಲಿ ತಮ್ಮ ವಹಿವಾಟನ್ನೇ ಸಂಪೂರ್ಣ ಸ್ತಬ್ಧ ಮಾಡುವ ಸ್ಥಿತಿ ಬರಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ನೋಟ್‌ಬಂದಿ ಆಘಾತ:

2016ರ ನವೆಂಬರ್‌ 8ರ ರಾತ್ರಿ 8 ಗಂಟೆ ಸುಮಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರ ಉದ್ದೇಶಿಸಿ ಟೀವಿಯಲ್ಲಿ ಭಾಷಣ ಮಾಡಿದ್ದರು. ಆಗ ಅವರು ‘ನ.8ರ ಮಧ್ಯರಾತ್ರಿ 12 ಗಂಟೆಯಿಂದ 500 ರು. ಹಾಗೂ 1000 ರು. ನೋಟುಗಳ ಚಲಾವಣೆ ನಿಲ್ಲಲಿದೆ. ಇವನ್ನು ಬ್ಯಾಂಕ್‌ಗಳಲ್ಲಿ ವಿನಿಮಯ ಮಾಡಿಕೊಳ್ಳಿ’ ಎಂದು ಘೋಷಿಸಿದ್ದರು.

SBI ಗ್ರಾಹಕರೇ ನಿರ್ಲಕ್ಷ್ಯಿಸಿದರೆ ನಿಮ್ಮ ಖಾತೆ ಬ್ಲಾಕ್!...

ಈ ಘೋಷಣೆಯ ಬೆನ್ನಲ್ಲೇ 500 ರು. ಹಾಗೂ 1000 ರು. ಮೌಲ್ಯದ ನೋಟುಗಳ ಭಾರೀ ದಾಸ್ತಾನು ಹೊಂದಿದ್ದ ಕಾಳಧನಿಕರು ಚಿನ್ನಾಭರಣ ಅಂಗಡಿಗಳಿಗೆ ಧಾವಿಸಿದ್ದರು. ಬ್ಯಾಂಕ್‌ಗೆ 500 ರು. ಹಾಗೂ 1000 ರು. ನೋಟು ವಿನಿಮಯಕ್ಕೆ ಹೋದರೆ ಇದನ್ನು ಕಪ್ಪುಹಣ ಎಂದು ಜಪ್ತಿ ಮಾಡಲಾಗುತ್ತದೋ ಎಂದು ಹೆದರಿದ್ದ ಕಾಳಧನಿಕರು ಭಾರೀ ಪ್ರಮಾಣದಲ್ಲಿ ಈ ನೋಟುಗಳನ್ನು ಚಿನ್ನಾಭರಣ ಅಂಗಡಿಗಳಿಗೆ ನೀಡಿ ಚಿನ್ನ ಖರೀದಿ ಮಾಡಿದ್ದರು. ಈ ಮೂಲಕ ಕಪ್ಪುಹಣ ಬಿಳಿ ಮಾಡಿಕೊಂಡಿದ್ದರು.

15 ದಿನದ ಆದಾಯ ಒಂದೇ ರಾತ್ರಿಯಲ್ಲಿ!:

ಇದಕ್ಕೆ ಪೂರಕ ಪ್ರತಿಕ್ರಿಯೆ ನೀಡಿರುವ ಹೆಸರು ಹೇಳಲು ಇಚ್ಛಿಸದ ಚಿನ್ನದ ವ್ಯಾಪಾರಿಯೊಬ್ಬರು, ‘ನವೆಂಬರ್‌ 8ರ ರಾತ್ರಿ ಭರ್ಜರಿ ಚಿನ್ನದ ವಹಿವಾಟು ಮಾಡಿದೆವು. 15 ದಿನದಲ್ಲಿ ಬರುವ ಆದಾಯ ಒಂದೇ ದಿನದಲ್ಲಿ ಬಂತು. ನಮ್ಮಲ್ಲಿದ್ದ ಚಿನ್ನದ ಇಡೀ ದಾಸ್ತಾನು ಖಾಲಿ ಆಯಿತು’ ಎಂದಿದ್ದಾರೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.

‘ಆದರೆ 3 ತಿಂಗಳ ಹಿಂದೆ ನನಗೆ ಆದಾಯ ತೆರಿಗೆ ನೋಟಿಸ್‌ ಬಂದಿದೆ. 2016ರ ನ.8ರ ರಾತ್ರಿ ಗಳಿಸಿದ ಆದಾಯದ ಮೂಲ ತಿಳಿಸಿ ಎಂದು ಕೇಳಲಾಗಿದೆ. ಇದರ ವಿರುದ್ಧ ನಾನು ಕೋರ್ಟ್‌ ಮೊರೆ ಹೋಗಿದ್ದೇನೆ. ಆದರೆ ನಿಯಮಾನುಸಾರ ಅಂದಿನ ವಹಿವಾಟಿನ ಹಣದ ಶೇ.20ರಷ್ಟುಮೊತ್ತವನ್ನು ಠೇವಣಿ ಇರಿಸಿ ಕೋರ್ಟ್‌ ಮೊರೆ ಹೋಗಿದ್ದೇನೆ’ ಎಂದರು.

‘ಒಂದು ವೇಳೆ, ವಹಿವಾಟಿನ ಪೂರ್ಣ ಹಣವನ್ನು ಕಟ್ಟಬೇಕು ಎಂದು ಕೋರ್ಟ್‌ ಅದೇಶಿಸಿದರೆ ಆ ಹಣ ಕಟ್ಟಲು ನಮ್ಮ ವ್ಯಾಪಾರವನ್ನೇ ನಿಲ್ಲಿಸಬೇಕಾಗುತ್ತದೆ’ ಎಂದು ಅವರು ಅಳಲು ತೋಡಿಕೊಂಡರು. ಇನ್ನು ಕೆಲವು ಆಭರಣ ವರ್ತಕರು ಪ್ರತಿಕ್ರಿಯಿಸಿ, ‘ನ.8ರಂದು ಮಾಡಿದ ವಹಿವಾಟಿನ ಪೂರ್ತಿ ಹಣ ಕಟ್ಟಿಎಂದು ಸೂಚಿಸಲಾಗಿದೆ’ ಎಂದು ತಿಳಿಸಿದ್ದಾರೆ.

click me!