ನೀವು ಡಿಮ್ಯಾಟ್ ಖಾತೆ ಹೊಂದಿದ್ರೆ ಸೆ.30ರೊಳಗೆ 2-ಫ್ಯಾಕ್ಟರ್ ಅಥೆಂಟಿಕೇಶನ್' ಸಕ್ರಿಯಗೊಳಿಸೋದು ಅಗತ್ಯ.ಇಲ್ಲವಾದ್ರೆ ನಿಮ್ಮ ಖಾತೆಗೆ ಲಾಗಿ ಇನ್ ಆಗಲು ಸಾಧ್ಯವಿಲ್ಲ. ಈ ಬಗ್ಗೆ ಎಸ್ ಎಸ್ಇ ಮೂರು ತಿಂಗಳ ಹಿಂದೆಯೇ ಸುತ್ತೋಲೆ ಹೊರಡಿಸಿತ್ತು.
ನವದೆಹಲಿ (ಸೆ.8): ಡಿಮ್ಯಾಟ್ ಖಾತೆ ಹೊಂದಿರೋರಿಗೆ ಈ ಮಾಹಿತಿ ಗೊತ್ತಿರೋದು ಅಗತ್ಯ. ಡಿಮ್ಯಾಟ್ ಖಾತೆ ಹೊಂದಿರೋರು ಈ ತಿಂಗಳ ಅಂತ್ಯದೊಳಗೆ (ಸೆ. 30ರೊಳಗೆ) '2-ಫ್ಯಾಕ್ಟರ್ ಅಥೆಂಟಿಕೇಶನ್' ಸಕ್ರಿಯಗೊಳಿಸದಿದ್ರೆ ಖಾತೆಗೆ ಲಾಗಿ ಇನ್ ಆಗಲು ಸಾಧ್ಯವಾಗೋದಿಲ್ಲ. ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ (ಎನ್ ಎಸ್ ಇ) ಜೂನ್ 14ರಂದು ಜಾರಿಗೊಳಿಸಿರುವ ಸುತ್ತೋಲೆಯಲ್ಲಿ ಈ ವಿಚಾರವನ್ನು ಸ್ಪಷ್ಟಪಡಿಸಲಾಗಿದೆ. ಈ ಸುತ್ತೋಲೆ ಪ್ರಕಾರ ಸದಸ್ಯರು ಬಯೋಮೆಟ್ರಿಕ್ ಅನ್ನು ತಮ್ಮ ಡಿಮ್ಯಾಟ್ ಖಾತೆಗಳಿಗೆ ಲಾಗಿ ಇನ್ ಆಗಲು ಒಂದು ದೃಢೀಕರಣ ಅಂಶವನ್ನಾಗಿ ಪರಿಗಣಿಸಬೇಕು. ಇದನ್ನು ಹೊರತುಪಡಿಸಿದ್ರೆ ಇನ್ನೊಂದು ದೃಢೀಕರಣ ಪಾಸ್ ವರ್ಡ್ ಅಥವಾ ಪಿನ್ ರೀತಿಯಲ್ಲಿ ಬಳಕೆದಾರನಿಗೆ ಮಾತ್ರ ತಿಳಿದಿರುವಂತಹದ್ದು ಆಗಿರಬೇಕು ಅಥವಾ ಆತನ ಸ್ವಾಧೀನದಲ್ಲಿ ಇರುವಂತಹ ಅಂಶ ಅಂದ್ರೆ ಒನ್ ಟೈಮ್ ಪಾಸ್ ವರ್ಡ್ (ಒಟಿಪಿ), ಸೆಕ್ಯುರಿಟಿ ಟೋಕನ್ ಅಥವಾ ಸ್ಮಾರ್ಟ್ ಫೋನ್ ಇಲ್ಲವೇ ಡೆಸ್ಕ್ ಟಾಪ್ ಗಳಲ್ಲಿರುವ ದೃಢೀಕರಣ ಅಪ್ಲಿಕೇಷನ್ ಗಳು ಆಗಿರಬೇಕು. ಗ್ರಾಹಕರಿಗೆ ಒಟಿಪಿ ಇ-ಮೇಲ್ ಹಾಗೂ ಮೆಸೇಜ್ ಎರಡರ ಮೂಲಕವೂ ಲಭ್ಯವಾಗಬೇಕು. ಹೀಗಾಗಿ ಬಯೋಮೆಟ್ರಿಕ್ ದೃಢೀಕರಣ ಸಾಧ್ಯವಾಗದ ಸಂದರ್ಭದಲ್ಲಿ ಸುತ್ತೋಲೆಯಲ್ಲಿ ತಿಳಿಸಿರುವಂತೆ ಬಳಕೆದಾರ ತನ್ನ ಯೂಸರ್ ಐಡಿ ಜೊತೆಗೆ ಪಾಸ್ ವರ್ಡ್ ಅಥವಾ ಪಿನ್, ಒಟಿಪಿ ಅಥವಾ ಸೆಕ್ಯುರಿಟಿ ಟೋಕನ್ ಬಳಸಿ ಡಿಮ್ಯಾಟ್ ಖಾತೆಗೆ ಲಾಗಿ ಇನ್ ಆಗಬೇಕು.
ಏನಿದು 2-ಫ್ಯಾಕ್ಟರ್ ಅಥೆಂಟಿಕೇಶನ್?
ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ತಾಣಗಳಲ್ಲಿ ಮಾಹಿತಿ ಗೌಪ್ಯತೆಯನ್ನು ಪಾಸ್ ವರ್ಡ್ ಒಂದರಿಂದಲೇ ಕಾಪಾಡಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇದೇ ಕಾರಣಕ್ಕೆ ಯಾವುದೇ ಆನ್ ಲೈನ್ ಖಾತೆಗೆ ಲಾಗಿ ಇನ್ ಆಗುವಾಗ ಪಾಸ್ ವರ್ಡ್ ಜೊತೆಗೆ ಇನ್ನೊಂದು ಹೆಚ್ಚುವರಿ ಅಂಶ ಬಳಸುವ ಪದ್ಧತಿ ಜಾರಿಗೆ ಬರುತ್ತಿದೆ. ಗ್ರಾಹಕರ ಗುರುತಿನ ದೃಢೀಕರಣಕ್ಕೆ ಎರಡು ವಿಭಿನ್ನ ಅಂಶಗಳನ್ನು ಬಳಸುವ ವಿಧಾನಕ್ಕೆ 2-ಫ್ಯಾಕ್ಟರ್ ಅಥೆಂಟಿಕೇಶನ್ ಎಂದು ಕರೆಯಲಾಗುತ್ತದೆ. ಇದು ನಿಮ್ಮ ಆನ್ ಲೈನ್ ಖಾತೆಗೆ ಹೆಚ್ಚುವರಿ ಭದ್ರತೆಯನ್ನು ಒದಗಿಸುವ ಮೂಲಕ ಹ್ಯಾಕರ್ ಗಳ ಪ್ರವೇಶವನ್ನು ಎರಡು ಪಟ್ಟು ಹೆಚ್ಚು ತಡೆಯಬಲ್ಲದು.
ಸೀಟ್‌ಬೆಲ್ಟ್ ಅಲಾರಂ ನಿಷ್ಕ್ರಿಯಗೊಳಿಸುವ ಸಾಧನಗಳ ಮಾರಾಟ ನಿಲ್ಲಿಸಲು Amazonಗೆ ಕೇಂದ್ರ ಸರ್ಕಾರ ಸೂಚನೆ
'ಹೊಸ ವಿನಿಮಯ ನೀತಿಗಳ ಪ್ರಕಾರ 2022ರ ಸೆಪ್ಟೆಂಬರ್ 30ರ ಮುನ್ನ ನಿಮ್ಮ ಖಾತೆಗೆ ಟೈಮ್ ಬೇಸ್ಡ್ ಒನ್ ಟೈಮ್ ಪಾಸ್ ವರ್ಡ್ (TOTP) ಎರಡು ಅಂಶಗಳ ಲಾಗಿ ಇನ್ ಸಕ್ರಿಯಗೊಳಿಸೋದು ಕಡ್ಡಾಯ. ನಿಮಗೆ ಎಸ್ ಎಂಎಸ್ ಅಥವಾ ಇ-ಮೇಲ್ ಮೂಲಕ ರವಾನೆಯಾಗುತ್ತಿದ್ದ ಸಾಂಪ್ರದಾಯಿಕ ಒಟಿಪಿ ಬದಲು ಟಿಒಟಿಪಿ (TOTP) ಅಪ್ಲಿಕೇಷನ್ ಮೂಲಕ ಟಿಒಟಿಪಿ ಸೃಷ್ಟಿಸಲಾಗುತ್ತದೆ. ಇದು 30 ಸೆಕೆಂಡ್ಸ್ ಅಷ್ಟೇ ಲಭ್ಯವಾಗಲಿದೆ. ಅಲ್ಲದೆ, ಪ್ರತಿ 30 ಸೆಕೆಂಡ್ಸ್ ಗೆ ಇದು ಸೃಷ್ಟಿಯಾಗುತ್ತದೆ' ಎಂದು ಆನ್ ಲೈನ್ ಸ್ಟಾಕ್ ಬ್ರೋಕರ್ ಝೆರೋಧ (Zerodha) ತನ್ನ ವೆಬ್ ಸೈಟ್ ನಲ್ಲಿ ತಿಳಿಸಿದೆ.
ಏನಿದು ಕಿಸಾನ್ ಕ್ರೆಡಿಟ್ ಕಾರ್ಡ್? ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸೋದು ಹೇಗೆ? ಇಲ್ಲಿದೆ ಮಾಹಿತಿ
ಡಿಮ್ಯಾಟ್ ಖಾತೆಗೆ 2-ಫ್ಯಾಕ್ಟರ್ ಅಥೆಂಟಿಕೇಶನ್ ಆಕ್ಟೀವ್ ಮಾಡೋದು ಹೇಗೆ?
ಡಿಮ್ಯಾಟ್ ಖಾತೆಗೆ ಪ್ರತಿ ಬಾರಿ ಲಾಗಿ ಇನ್ ಆಗೋವಾಗ ಬಯೋಮೆಟ್ರಿಕ್ ದೃಢೀಕರಣ ನೀಡೋದು ಅಸಾಧ್ಯ. ಅದರಲ್ಲೂ ಡೆಸ್ಕ್ ಟಾಪ್ ಮೂಲಕ ಲಾಗಿ ಇನ್ ಆಗೋವಾಗ ಇದು ಸಾಧ್ಯವಿಲ್ಲ. ಇಂಥ ಸಮಯದಲ್ಲಿ ಸ್ಟಾಕ್ ಬ್ರೋಕರ್ ಗಳು ಪಾಸ್ ವರ್ಡ್ ಹಾಗೂ ಒಟಿಪಿ ಎರಡನ್ನೂ ಬಳಸಿ ಲಾಗಿ ಇನ್ ಆಗಲು ಗ್ರಾಹಕರಿಗೆ ಅವಕಾಶ ನೀಡುವ ಸಾಧ್ಯತೆಯಿದೆ. ಹೀಗಾಗಿ ಡಿಮ್ಯಾಟ್ ಖಾತೆ ಹೊಂದಿರೋರು ಅವರ ಬ್ರೋಕರ್ ಸಂಸ್ಥೆಗಳಿಂದ ಈ ಬಗ್ಗೆ ಮಾಹಿತಿ ಪಡೆಯೋದು ಒಳ್ಳೆಯದು.