Deadline Alert: 2,000ರೂ. ನೋಟು ಬದಲಾವಣೆಗೆ ನಾಳೆ ಕೊನೆಯ ದಿನ; ಗಡುವು ವಿಸ್ತರಣೆಯಾಗುತ್ತಾ?

By Suvarna News  |  First Published Sep 29, 2023, 5:01 PM IST

2,000ರೂ. ನೋಟುಗಳ ಬದಲಾವಣೆಗೆ ನಾಳೆ ಅಂತಿಮ ಗಡುವು. ಆದರೆ, ಶೇ.100ರಷ್ಟು ನೋಟುಗಳು ಬ್ಯಾಂಕುಗಳಿಗೆ ಇನ್ನೂ ಹಿಂತಿರುಗದ ಕಾರಣ ಈ ಗಡುವನ್ನು ಆರ್ ಬಿಐ ಮತ್ತೆ ವಿಸ್ತರಿಸುವ ಸಾಧ್ಯತೆಯಿದೆ ಎಂದು ವರದಿಗಳು ಹೇಳಿವೆ. 


ನವದೆಹಲಿ (ಸೆ.29): 2,000ರೂ. ಮುಖಬೆಲೆಯ ನೋಟುಗಳನ್ನು ಬ್ಯಾಂಕುಗಳಲ್ಲಿ ವಿನಿಮಯ ಮಾಡಿಕೊಳ್ಳಲು ಅಥವಾ ಠೇವಣಿಯಿಡಲು ನೀಡಿರುವ ಅಂತಿಮ ಗಡುವನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ)  ವಿಸ್ತರಿಸುವ ಸಾಧ್ಯತೆಯಿದೆ. ಈ ನೋಟುಗಳನ್ನು ಬ್ಯಾಂಕುಗಳಿಗೆ ಹಿಂತಿರುಗಿಸಲು ಅಕ್ಟೋಬರ್ ಕೊನೆಯ ತನಕ ಕಾಲಾವಕಾಶ ನೀಡುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ. ಪ್ರಸ್ತುತ ಬ್ಯಾಂಕುಗಳಲ್ಲಿ 2000ರೂ. ನೋಟುಗಳ ವಿನಿಮಯ ಅಥವಾ ಠೇವಣಿಗೆ ಆರ್ ಬಿಐ ನೀಡಿರುವ ಗಡುವು ನಾಳೆ (ಸೆ.30). ಹೀಗಾಗಿ ಈಗಿನ ಪರಿಸ್ಥಿತಿಲ್ಲಿ 2,000ರೂ. ನೋಟು ವಿನಿಮಯಕ್ಕೆ ನಾಳೆ ಒಂದೇ ದಿನ ಉಳಿದಿರೋದು. ಆದರೆ, ಈ ನಡುವೆ ಹಿರಿಯ ಅಧಿಕಾರಿಯೊಬ್ಬರು ಆರ್ ಬಿಐ 2,000ರೂ. ನೋಟು ವಿನಿಮಯದ ಅಂತಿಮ ಗಡುವನ್ನು ವಿಸ್ತರಣೆ ಮಾಡುವ ಸಾಧ್ಯತೆಯಿದೆ ಎಂಬ ಮಾಹಿತಿ ನೀಡಿದ್ದಾರೆ. ನೋಟುಗಳು ಪೂರ್ಣ ಪ್ರಮಾಣದಲ್ಲಿ ಇನ್ನೂ ಬ್ಯಾಂಕುಗಳಿಗೆ ಹಿಂತಿರುಗಿಲ್ಲ. ಹೀಗಾಗಿ ಶೇ.100ರಷ್ಟು 2,000ರೂ. ನೋಟುಗಳನ್ನು ಹಿಂಪಡೆಯುವ ನಿಟ್ಟಿನಲ್ಲಿ ಆರ್ ಬಿಐ ಈ ನೋಟುಗಳ ವಿನಿಮಯಕ್ಕೆ ಇನ್ನಷ್ಟು ಕಾಲಾವಕಾಶ ನೀಡುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ. 

ಶೇ.93ರಷ್ಟು ನೋಟು ವಾಪಸ್
ಚಲಾವಣೆಯಿಂದ 2 ಸಾವಿರ ರೂಪಾಯಿ ನೋಟುಗಳನ್ನು ಹಿಂತೆಗೆದುಕೊಳ್ಳುವ ನಿರ್ಧಾರ ಕೈಗೊಂಡ ಬಳಿಕ ಆಗಸ್ಟ್ 31ರ ತನಕ ಶೇ.93ರಷ್ಟು ನೋಟುಗಳು ವಾಪಸ್ ಆಗಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.  ಇನ್ನು 24,000 ಕೋಟಿ ಮೌಲ್ಯದ 2 ಸಾವಿರ ರೂ. ನೋಟುಗಳು ಚಲಾವಣೆಯಲ್ಲಿವೆ ಎಂಬ ಮಾಹಿತಿಯನ್ನು ಕೂಡ ನೀಡಿದೆ. ಬ್ಯಾಂಕ್ ಗಳಿಂದ ಪಡೆದಿರುವ ಮಾಹಿತಿ ಅನ್ವಯ ಆಗಸ್ಟ್ 31, 2023ರ ತನಕ ಚಲಾವಣೆಯಲ್ಲಿದ್ದ 3.32 ಲಕ್ಷ ಕೋಟಿ ರೂ. ಮೌಲ್ಯದ  2 ಸಾವಿರ ರೂಪಾಯಿ ನೋಟುಗಳನ್ನು ವಾಪಸ್ ಪಡೆಯಲಾಗಿದೆ. ಹಾಗೆಯೇ ಚಲಾವಣೆಯಲ್ಲಿರುವ  2 ಸಾವಿರ ರೂಪಾಯಿ ನೋಟುಗಳ ಮೌಲ್ಯ 24,000 ಕೋಟಿ ರೂ. ಇದೆ ಎಂದು ಆರ್ ಬಿಐ ಈ ಹಿಂದೆ ಮಾಹಿತಿ ನೀಡಿತ್ತು.

Tap to resize

Latest Videos

ಅಕ್ಟೋಬರ್ ತಿಂಗಳಲ್ಲಿ ಈ 5 ಹಣಕಾಸು ನಿಯಮಗಳಲ್ಲಿ ಬದಲಾವಣೆ;ಜನಸಾಮಾನ್ಯರ ಜೇಬಿನ ಮೇಲೆ ಹೆಚ್ಚಲಿದೆ ಹೊರೆ!

'ಯಾರಿಗೆ 2 ಸಾವಿರ ರೂ. ನೋಟನ್ನು ವಿನಿಮಯ ಮಾಡಿಕೊಳ್ಳಲು ಈ ತನಕ ಸಾಧ್ಯವಾಗಿಲ್ಲವೋ ಅಂಥವರಿಗೆ ಆರ್ ಬಿಐ ಇನ್ನೊಂದು ಅವಕಾಶ ನೀಡಲು ಮುಂದಾಗಿದೆ. ನೋಟು ವಿನಿಮಯಕ್ಕೆ ಅವಕಾಶ ನೀಡುವ ಸಂದರ್ಭದಲ್ಲಿ ಕೆಲವರು ವಿದೇಶದಲ್ಲಿದ್ದರು. ಇನ್ನೂ ಕೆಲವರು ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಇಂಥವರಿಗೆ ನೋಟುಗಳ ವಿನಿಮಯಕ್ಕೆ ವಿಶೇಷ ಅವಕಾಶ ನೀಡಬಹುದು' ಎಂದು ಸೌತ್ ಇಂಡಿಯನ್ ಬ್ಯಾಂಕ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

'ಹಲವು ತಿಂಗಳ ಕಾಲ ವಿದೇಶದಲ್ಲಿದ್ದವರಿಗೆ ಆರ್ ಬಿಐ ಅವಕಾಶ ವಿಸ್ತರಿಸಬಹುದು' ಎಂದು ಆರ್ ಬಿಐ ಮಾಜಿ ಡೆಪ್ಯೂಟಿ ಗವರ್ನರ್ ಆರ್. ಗಾಂಧಿ ಅಭಿಪ್ರಾಯಪಟ್ಟಿದ್ದಾರೆ. '2 ಸಾವಿರ ರೂ. ನೋಟುಗಳನ್ನು ಇನ್ನಷ್ಟು ಪ್ರಮಾಣದಲ್ಲಿ ಹಿಂಪಡೆಯಲು ಆರ್ ಬಿಐ ಗಡುವು ವಿಸ್ತರಿಸುವ ಸಾಧ್ಯತೆಯಿದೆ ಎಂಬುದು ನನ್ನ ಅಭಿಪ್ರಾಯ' ಎಂದು ಆರ್ ಬಿಐ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಚಂದನ್ ಸಿನ್ಹಾ ತಿಳಿಸಿದ್ದಾರೆ. 

ಚಲಾವಣೆಯಲ್ಲಿರುವ 2,000ರೂ. ನೋಟುಗಳನ್ನು ವಿತ್ ಡ್ರಾ ಮಾಡುವ ನಿರ್ಧಾರವನ್ನು ಆರ್ ಬಿಐ ಮೇ 19ರಂದೇ ಪ್ರಕಟಿಸಿತ್ತು. ಆದರೆ, ಸಾರ್ವಜನಿಕರಿಗೆ ಬ್ಯಾಂಕ್ ಗಳಲ್ಲಿ ಠೇವಣಿಯಿಡಲು ಅಥವಾ ವಿನಿಮಯ ಮಾಡಲು ಸೆಪ್ಟೆಂಬರ್ 30ರ ತನಕ ನಾಲ್ಕು ತಿಂಗಳ ಕಾಲಾವಕಾಶ ನೀಡಿತ್ತು.

ನಿಮ್ಮಲ್ಲಿ ಇನ್ನೂ ಇದೆಯಾ 2000 ರೂ ನೋಟು, ವಿನಿಮಯಕ್ಕಿರುವ ನಿಯಮವೇನು? 

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಳೆಯ 500 ರೂ. ಹಾಗೂ 1,000 ರೂ. ನೋಟುಗಳನ್ನು ಬ್ಯಾನ್‌ ಮಾಡಿದ ಬಳಿಕ 2016 ರಲ್ಲಿ ಹೊಸ 500 ರೂ. ನೋಟುಗಳ ಜತೆಗೆ 2 ಸಾವಿರ ರೂ. ನೋಟುಗಳನ್ನು ದೇಶದಲ್ಲಿ ಪರಿಚಯಿಸಲಾಯ್ತು. ಕಪ್ಪು ಹಣ, ಭಯೋತ್ಪಾದನೆ ಹಾಗೂ ಇತರೆ ಗುರಿಗಳನ್ನು ಈಡೇರಿಸಲು ಈ ರೀತಿ ಮಾಡಲಾಗಿತ್ತು ಎಂದು ಆಗ ವರದಿಯಾಗಿತ್ತು. ಕ್ಲೀನ್ ನೋಟ್ ಪಾಲಿಸಿ ಅಡಿಯಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ತೀರ್ಮಾನವನ್ನು ಕೈಗೊಂಡಿರೋದಾಗಿ  ಆರ್ ಬಿಐ ತಿಳಿಸಿತ್ತು.ಮಾರ್ಚ್‌ 31ರ ವೇಳೆಗೆ ಮಾರುಕಟ್ಟೆಯಲ್ಲಿ 3.62 ಲಕ್ಷ ಕೋಟಿ ರೂಪಾಯಿ ಮೌಲ್ಯದ 2 ಸಾವಿರ ರೂಪಾಯಿ ನೋಟುಗಳಿದ್ದವು. 

click me!