ಬೆಳಗ್ಗೆ ಇಬ್ಬರು ಮಕ್ಕಳು ಎದ್ದರೂ ತಾಯಿ ಏಳಲೇ ಇಲ್ಲ. ತಾಯಿ ಮಲಗಿದ್ದಲ್ಲೇ ಪ್ರಾಣಬಿಟ್ಟಿದ್ದಾರೆ. ಈ ಆಘಾತ ಇಬ್ಬರು ಪುತ್ರಿಯರ ಮೇಲೆ ತೀವ್ರ ಪರಿಣಾಮ ಬೀರಿದೆ. ಬಳಿಕ ನಡೆದಿದ್ದೇ ಮತ್ತಷ್ಟು ಹೃದಯವಿದ್ರಾವಕ ಘಟನೆ.
ಹೈದರಾಬಾದ್(ಫೆ.01) ಗಂಡನಿಲ್ಲ, ಇಬ್ಬರು ಮಕ್ಕಳ ಜೊತೆ ವಾಸವಿದ್ದ ತಾಯಿಯ ಆರ್ಥಿಕ ಪರಿಸ್ಥಿತಿ ನಿಧಾನವಾಗಿ ಸುಧಾರಿಸಿಕೊಳ್ಳುತ್ತಿತ್ತು. ತೀವ್ರ ಸಾಲದಿಂದ ಸಂಕಷ್ಟ ಅನುಭವಿಸಿದ ಕುಟುಂಬದ ಜವಾಬ್ದಾರಿಯನ್ನು ಇಬ್ಬರು ಪುತ್ರಿಯರು ವಹಿಸಿಕೊಂಡಿದ್ದರು. ಮಾರ್ಕೆಂಟಿಂಗ್ ಹಾಗೂ ಸೇಲ್ಸ್ ವಿಭಾಗದಲ್ಲಿ ಕೆಲಸಕ್ಕೆ ಸೇರಿ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ತಾಯಿ ಆರೋಗ್ಯ ಕೂಡ ಹದಗೆಟ್ಟಿತ್ತು. ಹೀಗಾಗಿ ಇಬ್ಬರು ಮಕ್ಕಳ ಆದಾಯ ತಾಯಿ ಆರೋಗ್ಯ ಖರ್ಚಿಗೆ ಸರಿ ಹೊಂದುತ್ತಿತ್ತು. ಇದರ ನಡುವೆ ದಿಢೀರ್ ತಾಯಿ ಮೃತಪಟ್ಟಿದ್ದಾಳೆ. ಬೆಳಗ್ಗೆ ಎದ್ದಾಗ ತಾಯಿ ಇನ್ನಿಲ್ಲ ಅನ್ನೋ ಆಘಾತ ಮಕ್ಕಳನ್ನು ತೀವ್ರವಾಗಿ ಕಾಡಿತ್ತು. ಇತ್ತ ಕೈಯಲ್ಲಿ ಒಂದು ನಯಾ ಪೈಸೆ ಇಲ್ಲ. ಇವೆಲ್ಲವೂ ಮಕ್ಕಳನ್ನು ಖಿನ್ನತೆಗೆ ತಳ್ಳಿದೆ. ಪರಿಣಾಮ ಒಂದು ವಾರ ತಾಯಿಯ ಮೃತದೇಹ ಜೊತೆ ಕಳೆದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ಇಬ್ಬರು ಮಕ್ಕಳ ತಾಯಿ ವಯಸ್ಸು 45. ಪತಿ ಇಲ್ಲದ ಕಾರಣ ಇಬ್ಬರೂ ಮಕ್ಕಳನ್ನು ತಾಯಿ ಏಕಾಂಗಿಯಾಗಿ ಹೋರಾಟ ಮಾಡಿ ಬೆಳೆಸಿದ್ದಳು. ಒಳ್ಳೆ ಶಾಲಾ ಕಾಲೇಜಿಗೆ ಕಳುಹಿಸಲು ಸಾಧ್ಯವಾಗಿಲ್ಲ. ಆದರೆ ಹೇಗೋ ದುಡಿದು, ಕಷ್ಟಪಟ್ಟು ಕನಿಷ್ಠ ವಿದ್ಯಾಭ್ಯಾಸ ಪೂರೈಸಿದ್ದಾರೆ. ಬಳಿಕ ನೇರವಾಗಿ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸಕ್ಕೆ ಸೇರಿದ್ದಾರೆ. ಬರುವ ತಿಂಗಳ ಸಂಬಳದಲ್ಲಿ ಮನೆಯ ಖರ್ಚು ವೆಚ್ಚ, ಸಾಲ, ಆರೋಗ್ಯದ ಖರ್ಚಿಗೆ ಸಾಲುತ್ತಿರಲಿಲ್ಲ.
ಪ್ರೀತಿಸಿ ಮದುವೆಯಾದ ಜೋಡಿ ಹತ್ಯೆಗೈದ 4 ಜನರಿಗೆ ಮರಣದಂಡನೆ ಕೊಟ್ಟ ಕೋರ್ಟ್!
25 ಹಾಗೂ 22 ವರ್ಷದ ಇಬ್ಬರು ಪುತ್ರಿಯರು ಕುಟುಂಬದ ನಿರ್ವಹಣೆಗೆ ಸಾಕಷ್ಟು ಪರಿಶ್ರಮವಹಿಸುತ್ತಿದ್ದರು. ಇದರ ನಡುವೆ ಊಟ ಮುಗಿಸಿ ತಾಯಿ ಹಾಗೂ ಇಬ್ಬರು ಮಕ್ಕಳು ರಾತ್ರಿ ಮಲಗಿದ್ದಾರೆ. ಸಾಮಾನ್ಯವಾಗಿ ತಾಯಿ ಮೊದಲೇ ಎದ್ದು ಕೆಲಸದಲ್ಲಿ ತೊಡಗುತ್ತಿದ್ದರು. ಆದರೆ ಮಕ್ಕಳು ಎದ್ದರೂ ತಾಯಿ ಏಳಲೇ ಇಲ್ಲ. ತಾಯಿ ಎದ್ದಿಲ್ಲ ಯಾಕೆ ಎಂದು ನೋಡಿದಾಗ ಇಬ್ಬರು ಮಕ್ಕಳಿಗೆ ಆಘಾತವಾಗಿದೆ. ತಾಯಿಯನ್ನು ಎಬ್ಬಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ತಾಯಿ ಎದ್ದಿಲ್ಲ. ಎದೆಬಡಿತ, ಉಸಿರಾಟ ನೋಡಿದರೆ ಎಲ್ಲವೂ ನಿಂತಿದೆ.
ತಾಯಿ ಮೃತಪಟ್ಟಿರುವುದು ಖಚಿತವಾಗುತ್ತಿದ್ದಂತೆ ಇಬ್ಬರು ಪುತ್ರಿಯರಿಗೆ ಆಘಾತವಾಗಿದೆ. ಒಂದೆಡೆ ಸಾಕಿ ಸಲಹಿದ ತಾಯಿ ಇನ್ನಿಲ್ಲ ಅನ್ನೋ ಆಘಾತ, ಮತ್ತೊಂದೆಡೆ ತಾಯಿ ಅಂತ್ಯಸಂಸ್ಕಾರಕ್ಕೂ ಒಂದು ರೂಪಾಯಿ ದುಡ್ಡಿಲ್ಲದ ಪರಿಸ್ಥಿತಿ. ಈಗಾಗಲೇ ಮಾಡಿರುವ ಸಾಲದಿಂದ ಯಾರಲ್ಲೂ ಕೇಳವಂತಿರಲಿಲ್ಲ. ಈ ಪರಿಸ್ಥಿತಿ ಇಬ್ಬರು ಮಕ್ಕಳನ್ನು ಖಿನ್ನತೆಗೆ ತಳ್ಳಿದೆ.ತಾಯಿ ಮೃತಪಟ್ಟ ದಿನಿಂದ ಬರೋಬ್ಬರ 7 ದಿನ ತಾಯಿ ಮೃತದೇಹ ಜೊತೆಗೆ ಕಳೆದಿದ್ದಾರೆ. ಕೆಲಸಕ್ಕೂ ಹೋಗಿಲ್ಲ. ಆಘಾತ, ಖಿನ್ನತೆ, ಆರ್ಥಿಕ ಸಂಕಷ್ಟ ಇವೆಲ್ಲವೂ ಮಕ್ಕಳನ್ನು ಮತ್ತಷ್ಟು ಕುಗ್ಗಿ ಹೋಗುವಂತ ಮಾಡಿದೆ.
7 ದಿನಗಳ ಬಳಿಕ ತಾಯಿ ಮೃತದೇಹ ದುರ್ವಾಸನೆ ಬೀರಲು ಆರಂಭಿಸಿದೆ. ಈ ವೇಳೆ ಇಬ್ಬರು ಮಕ್ಕಳಿಗೆ ಮನೆಯಲ್ಲಿ ಇರಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಈ ವೇಳೆ ಧೈರ್ಯ ಮಾಡಿದ ಹಿರಿಯ ಪುತ್ರಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪರಿಸ್ಥಿತಿಯನ್ನು ವಿವರಿಸಿದ್ದಾರೆ. ತಕ್ಷಣವೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಮಹಿಳೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇತ್ತ ಇಬ್ಬರು ಮಕ್ಕಳನ್ನು ಕೌನ್ಸಲಿಂಗ್ ನೀಡಲು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆ ಕುರಿತು ಮಾಹಿತಿ ನೀಡಿರುವ ಹೈದರಾಬಾದ್ ಪೊಲೀಸರು, ಮಹಿಳೆ ಹಾಗೂ ಇಬ್ಬರು ಮಕ್ಕಳು ಮಾತ್ರ ವಾಸವಾಗಿದ್ದರು. ಈ ಮಹಿಳೆಯ ಪತಿ ಕಳ ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದಾರೆ. ಎಲ್ಲಿದ್ದಾನೆ ಅನ್ನೋ ಮಾಹಿತಿ ಇಲ್ಲ. ಆದರೆ ಮಾಡಿರುವ ಸಾಲ ಹಾಗೇ ಇದೆ. ಇದು ಈ ಕುಟುಂಬವನ್ನು ಆರ್ಥಿಕವಾಗಿ ಸಂಕಷ್ಟಕ್ಕೆ ತಳ್ಳಿದೆ. ಘಟನೆ ಕುರಿತು ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
ರಾತ್ರಿ ಹೊತ್ತು ಅಂತಿಮ ಸಂಸ್ಕಾರ ಯಾಕೆ ಮಾಡಬಾರದು ಗೊತ್ತಾ?