
ನವದೆಹಲಿ (ಜು.2): ಮಕ್ಕಳಿಂದ ಮುದುಕರವರೆಗೂ ಫೇವರಿಟ್ ಆಗಿರುವ ಹಾಜ್‌ಮುಲಾ ಮಾತ್ರೆಗೆ ಈಗ ಜಿಎಸ್‌ಟಿ ನೋಟಿಸ್ ಎದುರಾಗಿದೆ. ಡಾಬರ್‌ನ ಜನಪ್ರಿಯ ಉತ್ಪನ್ನವಾದ ಹಾಜ್‌ಮುಲಾವನ್ನು ಸಾಮಾನ್ಯ ಕ್ಯಾಂಡಿಯಾಗಿ ಪರಿಗಣಿಸಬೇಕೇ ಅಥವಾ ಆಯುರ್ವೇದ ಉತ್ಪನ್ನವಾಗಿ ಪರಿಗಣಿಸಬೇಕೇ ಎಂಬುದರ ಕುರಿತು ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯ (ಡಿಜಿಜಿಐ) ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಮತ್ತೊಮ್ಮೆ ಈಗ ಸುದ್ದಿಯಲ್ಲಿದೆ.
ತನಿಖೆ ಪೂರ್ಣಗೊಂಡ ನಂತರ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೂ ಮೊದಲು, ಕಂಪನಿಗೆ ಸಮನ್ಸ್ ಜಾರಿ ಮಾಡಲಾಗಿತ್ತು ಮತ್ತು ಹಾಜ್‌ಮುಲಾ ಎನ್ನುವುದು ಆಯುರ್ವೇದ ಉತ್ಪನ್ನ ಎಂದು ಕಂಪನಿ ಕೆಲವು ಸಲ್ಲಿಕೆಗಳನ್ನು ಡಿಜಿಜಿಐ ಎದುರು ಮಾಡಿತ್ತು. ಸಾಮಾನ್ಯ ಕ್ಯಾಂಡಿಗೆ ಜಿಎಸ್‌ಟಿ ದರ ಶೇ. 18 ರಷ್ಟಿದ್ದರೆ, ಆಯುರ್ವೇದ ಉತ್ಪನ್ನಗಳಿಗೆ ಶೇ.6ರಷ್ಟು ಕಡಿಮೆ ಇದ್ದು, ಶೇ. 12 ರಷ್ಟಿದೆ.
ಜಿಎಸ್‌ಟಿ ಜಾರಿಗೆ ಬರುವ ಮುನ್ನ, ಹಾಜ್‌ಮುಲಾ ಮಾತ್ರೆಗಳು ಆಯುರ್ವೇದಿಕ್ ಔಷಧಿಗಳು ಎಂಬ ಹಿಂದಿನ ಸಿಇಜಿಎಟಿ (ಸೆಂಟ್ರಲ್ ಕಸ್ಟಮ್, ಎಕ್ಸೈಸ್ & ಗೋಲ್ಡ್ ಅಪೀಲ್ ಟ್ರಿಬ್ಯೂನಲ್, ಈಗ ಕಸ್ಟಮ್ಸ್ ಅಬ್ಲೀಟ್ ಮತ್ತು ಸರ್ವಿಸ್ ಟ್ರಿಬ್ಯೂನಲ್ ಟ್ಯಾಕ್ಸ್ ಅಬ್ಲೀಟ್ ಸೆಸ್ಟಾಟ್) ತೀರ್ಪಿನ ವಿರುದ್ಧ ಚಂಡೀಗಢದ ಕೇಂದ್ರ ಅಬಕಾರಿ ಆಯುಕ್ತರು ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ 2002 ರಲ್ಲಿ ವಜಾಗೊಳಿಸಿದಾಗ ಇದೇ ರೀತಿಯ ಪ್ರಶ್ನೆ ಉದ್ಭವಿಸಿತ್ತು.
2016 ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪಿನ ನಂತರ, ಉತ್ತರ ಪ್ರದೇಶದ ವಾಣಿಜ್ಯ ತೆರಿಗೆ ಇಲಾಖೆಯು 'ಚವನ್‌ಪ್ರಾಶ್, 'ಹಾಜ್‌ಮುಲಾ' ಮತ್ತು 'ಹಾಜ್‌ಮುಲಾ ಕ್ಯಾಂಡಿ' ಗಳು ತೆರಿಗೆ ಉದ್ದೇಶಕ್ಕಾಗಿ ಔಷಧಗಳಾಗಿವೆ ಎಂದು ನ್ಯಾಯಮಂಡಳಿ ನೀಡಿದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿತು.
"ಪ್ರಕರಣದ ಸತ್ಯಗಳು ಮತ್ತು ಸನ್ನಿವೇಶಗಳ ಆಧಾರದ ಮೇಲೆ, ಈ ಉತ್ಪನ್ನಗಳನ್ನು ವೈದ್ಯಕೀಯ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿಲ್ಲ. ಸಾಮಾನ್ಯ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಅವುಗಳನ್ನು ಔಷಧಿಗಳೆಂದು ಪರಿಗಣಿಸುವಲ್ಲಿ ನ್ಯಾಯಮಂಡಳಿ ಕಾನೂನುಬದ್ಧವಾಗಿ ಸಮರ್ಥನೆ ನೀಡುತ್ತದೆಯೇ?" ಎಂದು ಪ್ರಶ್ನಿಸುವ ಮೂಲಕ ಇಲಾಖೆ ತೀರ್ಪನ್ನು ಪ್ರಶ್ನಿಸಿತು.
1940 ರ ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆಯ ಅಡಿಯಲ್ಲಿ ಆಯುರ್ವೇದ ಮತ್ತು ಯುನಾನಿ ಸೇವೆಗಳ ಪರವಾನಗಿ ಅಧಿಕಾರಿ ನೀಡಿದ ಪರವಾನಗಿಯ ಅಡಿಯಲ್ಲಿ ಡಾಬರ್ ಇಂಡಿಯಾ ಹಲವು ವರ್ಷಗಳ ಕಾಲ ಈ ಮೂರು ಉತ್ಪನ್ನಗಳನ್ನು ತಯಾರಿಸುತ್ತಿದೆ ಎಂದು ಹೇಳುವ ನ್ಯಾಯಮಂಡಳಿಯ ಅವಲೋಕನವನ್ನು ನ್ಯಾಯಾಲಯವು ಗಮನಿಸಿತು.
ಔಷಧದ ಪರವಾನಗಿಯಡಿಯಲ್ಲಿ ತಯಾರಿಸಿದ ಯಾವುದೇ ಉತ್ಪನ್ನಕ್ಕೆ, ಉತ್ಪನ್ನದ ಸ್ವರೂಪವು ಔಷಧದ್ದಾಗಿರುತ್ತದೆ ಎಂದು ನ್ಯಾಯಮಂಡಳಿ ಅಭಿಪ್ರಾಯಪಟ್ಟಿದೆ. ಮಾರಾಟದ ಸ್ಥಳವು ಸಂಬಂಧಿತ ಮಾನದಂಡವಲ್ಲ ಎಂದು ಅದು ಹೇಳಿದೆ.
ಉತ್ಪನ್ನಗಳ ವರ್ಗೀಕರಣದ ವಿಷಯದ ಅಡಿಯಲ್ಲಿ ಹಾಜ್‌ಮುಲಾ ಕ್ಯಾಂಡಿ ಇತ್ತೀಚಿನ ಪ್ರಕರಣವಾಗಿದೆ. ಮುಂಬೈ ಮೂಲದ MOD ತನ್ನ ಡೋನಟ್ ಅನ್ನು ತಪ್ಪಾಗಿ ವರ್ಗೀಕರಿಸಿದ ಆರೋಪದ ಮೇಲೆ DGGI ನಿಂದ 100 ಕೋಟಿ ತೆರಿಗೆ ನೋಟಿಸ್ಅನ್ನು ಈಗಾಗಲೇ ಪಡೆದಿದೆ.
ಮೆಕ್‌ಡೊನಾಲ್ಡ್ಸ್ ಬೇಕರಿ ವಸ್ತುಗಳಿಗೆ ಅನ್ವಯವಾಗುವ ಶೇಕಡಾ 18 ರಷ್ಟು ತೆರಿಗೆಯ ಬದಲಿಗೆ, ರೆಸ್ಟೋರೆಂಟ್ ಸೇವೆಗಳೆಂದು ಅರ್ಹತೆ ಪಡೆದಿವೆ ಎಂದು ಹೇಳಿಕೊಂಡು, ಡೋನಟ್‌ಗಳ ಮೇಲೆ ಶೇಕಡಾ 5 ರಷ್ಟು ಜಿಎಸ್‌ಟಿ ದರವನ್ನು ಪಾವತಿ ಮಾಡಿತ್ತು. ಈ ವಿಷಯವು ಬಾಂಬೆ ಹೈಕೋರ್ಟ್‌ನಲ್ಲಿ ಬಾಕಿ ಇದೆ, ಆದರೂ ನೋಟಿಸ್‌ಗೆ ತಡೆ ನೀಡಲಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.