ಕೊರೋನಾ ಹೊಡೆತಕ್ಕೆ ನಲುಗಿದ ‘ಬಳ್ಳಾರಿ ಜೀನ್ಸ್‌’!

By Kannadaprabha NewsFirst Published Jun 6, 2021, 11:31 AM IST
Highlights

* ಜೀನ್ಸ್‌ ಕೈಗಾರಿಕೆಗಳು ಬಂದ್‌
* ಕಾರ್ಮಿಕರು ಬೀದಿ ಪಾಲು
* ಸ್ಕಿಲ್‌ ಲೇಬರ್‌ ವಲಸೆಯ ಸಮಸ್ಯೆ

ಕೆ.ಎಂ. ಮಂಜುನಾಥ್‌

ಬಳ್ಳಾರಿ(ಜೂ.06):  ಕೊರೋನಾ ಎರಡನೇ ಅಲೆ ವಿಶ್ವದ ವಿವಿಧ ದೇಶಗಳಲ್ಲಿ ಮಾರುಕಟ್ಟೆ ಕುದುರಿಸಿಕೊಂಡಿದ್ದ ‘ಬಳ್ಳಾರಿ ಜೀನ್ಸ್‌’ಗೆ ಕಂಟಕವಾಗಿ ಪರಿಣಮಿಸಿದೆ.

ದುಬೈ, ಶ್ರೀಲಂಕಾ, ಸಿಂಗಾಪುರ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ರಫ್ತು ಮಾಡುತ್ತಿದ್ದ ಬಳ್ಳಾರಿ ಜೀನ್ಸ್‌ ಕೈಗಾರಿಕೆಗಳು ಕೊರೋನಾ ಲಾಕ್‌ಡೌನ್‌ನಿಂದಾಗಿ ಸಂಪೂರ್ಣ ಸ್ಥಗಿತಗೊಂಡಿದ್ದು ಕೋಟ್ಯಂತರ ರು. ವಹಿವಾಟು ನಿಲುಗಡೆಯಾಗಿದೆ. ಜತೆಗೆ ಇದೇ ವನ್ನು ಆಶ್ರಯಿಸಿದ್ದ ಸುಮಾರು 10 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೆಲಸವಿಲ್ಲದೆ ಕುಟುಂಬ ನಿರ್ವಹಣೆಗೂ ಪರದಾಡುವ ಸ್ಥಿತಿ ತಲುಪಿದ್ದಾರೆ.

ಕಳೆದ ವರ್ಷ ಕೊರೋನಾ ಸೋಂಕು ಕಾಣಿಸಿಕೊಂಡಾಗಲೂ ಜೀನ್ಸ್‌ ಉದ್ಯಮಿಗಳು ತತ್ತರಿಸಿ ಹೋಗಿದ್ದರು. ಎರಡನೇ ವರ್ಷವೂ ಕೊರೋನಾ ಕಾಟ, ಜೀನ್ಸ್‌ ಕೈಗಾರಿಕೆಗಳ ಸದ್ದಡಗಿಸಿದ್ದು ಜಾಗತಿಕ ಮಾರುಕಟ್ಟೆಕಂಡಿದ್ದ ಈ ವಲಯ, ನುರಿತ ಕಾರ್ಮಿಕರ ವಲಸೆಯಿಂದ ಭವಿಷ್ಯದ ಯೋಚನೆಯ ತೊಳಲಾಟ ಎದುರಿಸುವಂತಾಗಿದೆ.

ಬಿಡದೆ ಕಾಡಿತು ಕೊರೋನಾ:

ಗುಣಮಟ್ಟ ಹಾಗೂ ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಿಂದಾಗಿಯೇ ವಿದೇಶಗಳಲ್ಲೂ ಬೇಡಿಕೆ ಹೆಚ್ಚಿಸಿಕೊಂಡಿರುವ ‘ಬಳ್ಳಾರಿ ಜೀನ್ಸ್‌’ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಗೆ ದೊಡ್ಡ ಪ್ರಮಾಣದಲ್ಲಿ ರಫ್ತಾಗುತ್ತಿತ್ತು. ಇದರಿಂದ ಅಂದಾಜು ತಿಂಗಳು ನೂರಕ್ಕೂ ಹೆಚ್ಚು ಕೋಟಿ ರು.ಗಳ ವ್ಯವಹಾರ ನಡೆಯುತ್ತಿತ್ತು. ಕಳೆದ ವರ್ಷ ಕೊರೋನಾದಿಂದ ಲಾಕ್‌ಡೌನ್‌ ಶುರುವಾದ ಬಳಿಕ ‘ಬಳ್ಳಾರಿ ಜೀನ್ಸ್‌’ಗೆ ಕೆಟ್ಟದಿನಗಳು ಶುರುವಾದವು. ಕೆಲ ತಿಂಗಳ ಬಳಿಕ ಲಾಕ್‌ಡೌನ್‌ ತೆರವಾಗಿ, ಇನ್ನೇನು ಈ ಉದ್ಯಮ ಚೇತರಿಸಿಕೊಳ್ಳುತ್ತಿದೆ ಎಂದು ಸಮಾಧಾನಗೊಳ್ಳುತ್ತಿರುವ ನಡುವೆ ಮತ್ತೆ ಇದೀಗ ಲಾಕ್‌ಡೌನ್‌ ಶುರುವಾಗಿ ನಿತ್ಯ ಕೋಟ್ಯಂತರ ರು.ಗಳ ವಹಿವಾಟು ಸ್ಥಗಿತಗೊಂಡಿದೆ.

ಕೊರೋನಾ ಸಮಯದಲ್ಲಿ ಗಾಯದ ಮೇಲೆ ಬರೆ: 35 ದಿನಗಳಲ್ಲಿ 18 ಬಾರಿ ಇಂಧನ ಬೆಲೆ ಏರಿಕೆ

ಸ್ಕಿಲ್‌ ಲೇಬರ್‌ ವಲಸೆಯ ಸಮಸ್ಯೆ:

ನುರಿತ ನಿಪುಣ ಕಾರ್ಮಿಕರ (ಸ್ಕಿಲ್‌ ಲೇಬರ್‌) ಸಮಸ್ಯೆ ಜೀನ್ಸ್‌ ಉದ್ಯಮ ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ. ಕಳೆದ ಬಾರಿ ಕೊರೋನಾ ಲಾಕ್‌ಡೌನ್‌ನಿಂದಾಗಿ ನೂರಾರು ನುರಿತ ಕಾರ್ಮಿಕರು ಜೀನ್ಸ್‌ ಉದ್ಯಮ ತೊರೆದು ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡರು. ಲಾಕ್‌ಡೌನ್‌ ತೆರವಿನ ಬಳಿಕ ಭಾಗಶಃ ಈ ಕಾರ್ಮಿಕರು ಮತ್ತೆ ಜೀನ್ಸ್‌ ಉದ್ಯಮದ ಕಡೆ ಸುಳಿಯಲಿಲ್ಲ. ಇದು ಜೀನ್ಸ್‌ ಉದ್ಯಮಿಗಳಿಗೆ ನುಂಗದ ತುತ್ತಾಗಿ ಪರಿಣಮಿಸಿತು. ಇದೀಗ ಮತ್ತೆ ಲಾಕ್‌ಡೌನ್‌ ಶುರುವಾಗಿದ್ದು ಕಾರ್ಮಿಕರು ಹೊಟ್ಟೆಪಾಡಿಗಾಗಿ ಬೇರೆ ಬೇರೆ ಕೆಲಸಗಳನ್ನು ಹುಡುಕಿಕೊಂಡು ವಲಸೆ ಹೋಗಿದ್ದಾರೆ. ಇನ್ನು ನಗರದ 87 ಜೀನ್‌ ವಾಷಿಂಗ್‌ ಯೂನಿಟ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಬಹುತೇಕ ಉತ್ತರಪ್ರದೇಶ, ಬಿಹಾರ ಮೂಲದ ಕಾರ್ಮಿಕರು ಕೋವಿಡ್‌ನಿಂದಾಗಿ ತಮ್ಮ ರಾಜ್ಯಗಳಿಗೆ ತೆರಳಿದ್ದು, ಮತ್ತೆ ಕೆಲಸಕ್ಕೆ ಬರುತ್ತಾರೆ ಎಂಬ ಖಚಿತವಿಲ್ಲ. ಇದು ಜೀನ್ಸ್‌ ಉದ್ಯಮಿಗಳಿಗೆ ನುಂಗದ ತುತ್ತಾಗಿ ಪರಿಣಮಿಸಿದೆ.

ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಬೆಳಿಗ್ಗೆ 6 ರಿಂದ 12 ಗಂಟೆವರೆಗೆ ವ್ಯಾಪಾರ ವಹಿವಾಟು ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ, ನಮ್ಮ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್‌ ಆಗಿದ್ದರಿಂದ ಇಡೀ ಜೀನ್ಸ್‌ ಉದ್ಯಮ ಸಂಪೂರ್ಣ ಸ್ಥಗಿತಗೊಂಡಿದೆ. ನುರಿತ ಕಾರ್ಮಿಕರ ಕೊರತೆ ತೀವ್ರವಾಗುತ್ತಿದ್ದು, ಬರುವ ದಿನಗಳಲ್ಲಿ ಉದ್ಯಮ ಉಳಿಸಿಕೊಳ್ಳುವುದೇ ಕಷ್ಟವಾಗಲಿದೆ ಎಂದು ಬಳ್ಳಾರಿ ಪೊಲ್ಯಾಕ್ಸ್‌ ಜೀನ್ಸ್‌ ಮಾಲೀಕ ಮಲ್ಲಿಕಾರ್ಜುನ ತಿಳಿಸಿದ್ದಾರೆ.  
 

click me!