* ಪೆಟ್ರೋಲ್ 4.46 ಲೀಟರ್‌ಗೆ, ಡೀಸೆಲ್ 5.18 ಏರಿಕೆ
* ಉತ್ಕೃಷ್ಟ ತೈಲ ನೀಡುವ ಶೇಲ್, ಸೂಪರ್, ಸ್ಪೀಡ್ ಬೆಲೆ ಇದಕ್ಕಿಂತ ನಾಲ್ಕೈದು ರುಪಾಯಿ ಅಧಿಕ
* ನಿರ್ವಹಣೆ ವೆಚ್ಚ ಮಾತ್ರ ಅಷ್ಟೇ ಇದೆ. ಇದು ಬಂಕ್‌ಗಳಿಗೂ ಸಮಸ್ಯೆ
ಶಿವಾನಂದ ಗೊಂಬಿ
ಹುಬ್ಬಳ್ಳಿ(ಜೂ.06): ಬರೀ 35 ದಿನದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಬರೋಬ್ಬರಿ 18 ಬಾರಿ ಏರಿಕೆಯಾಗಿದೆ! ಪ್ರತಿ ಲೀಟರ್‌ಗೆ 4ಗೂ ಅಧಿಕ ಹೆಚ್ಚಳವಾಗಿದ್ದು, ಇದರಿಂದಾಗಿ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ಕೊರೋನಾದಿಂದ ಮೊದಲೇ ತತ್ತರಿಸಿರುವ ಜನತೆಗೆ ಈ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
undefined
ಜಿಲ್ಲೆಯಲ್ಲಿ ಏಪ್ರಿಲ್ 30ರಂದು ಪೆಟ್ರೋಲ್ ಪ್ರತಿ ಲೀಟರ್‌ಗೆ 93.27 ಇತ್ತು, ಇದೀಗ (ಜೂ.5) 97.73ಗೆ ಏರಿಕೆಯಾಗಿದೆ. ಇನ್ನೂ ಪ್ರತಿ ಲೀಟರ್ ಡೀಸೆಲ್‌ಗೆ 85.48 ಇತ್ತು, ಅದೀಗ (ಜೂ.6) 90.66ಗೆ ಏರಿಕೆಯಾಗಿದೆ. ಪ್ರತಿ ಎರಡ್ಮೂರು ದಿನಗಳಿಗೊಮ್ಮೆ ತೈಲೋತ್ಪನ್ನಗಳ ಬೆಲೆ ಏರಿಕೆಯಾಗುತ್ತಿದೆ. ಪೈಸೆಗಳ ಲೆಕ್ಕದಲ್ಲಿ ಏರಿಕೆಯಾಗುತ್ತಿದೆ. ಒಂದು ತಿಂಗಳಲ್ಲಿ ಬರೋಬ್ಬರಿ ಪೆಟ್ರೋಲ್ 4.46 ಲೀಟರ್‌ಗೆ ಹೆಚ್ಚಳವಾಗಿದ್ದರೆ, ಡೀಸೆಲ್ 5.18 ಪ್ರತಿ ಲೀಟರ್‌ಗೆ ಏರಿಕೆಯಾಗಿದೆ. ಇದು ನಾರ್ಮಲ್ ಪೆಟ್ರೋಲ್, ಡೀಸೆಲ್ ಬೆಲೆಯಾದರೆ, ಉತ್ಕೃಷ್ಟ ತೈಲ ನೀಡುವ ಶೇಲ್, ಸೂಪರ್, ಸ್ಪೀಡ್ ಬೆಲೆ ಇದಕ್ಕಿಂತ ನಾಲ್ಕೈದು ರುಪಾಯಿ ಅಧಿಕವಿದೆ.
ಸದ್ಯ ಲಾಕ್‌ಡೌನ್ ಇರುವುದರಿಂದ ಹೆಚ್ಚಿನ ವಾಹನಗಳು ರಸ್ತೆಗೆ ಇಳಿಯುತ್ತಿಲ್ಲ. ಹೀಗಾಗಿ, ಅದರ ಬಿಸಿ ಇನ್ನೂ ಹೆಚ್ಚಿನ ಸಾರ್ವಜನಿಕರಿಗೆ ತಟ್ಟಿಲ್ಲ. ಕೋವಿಡ್ ಸಂಕಷ್ಟದ ವೇಳೆ ತೈಲ ಬೆಲೆಯಲ್ಲಿ ಹೆಚ್ಚಳವಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಮಂಗಳೂರಿನಲ್ಲಿ ಶತಕದತ್ತ ಪೆಟ್ರೋಲ್-ಡೀಸೆಲ್ ಬೆಲೆ; ಇದು ಆತ್ಮಹತ್ಯೆ ನಿರ್ಭರ ಎಂದ ಜನ!
ಶೇ. 60ರಷ್ಟು ಕಮ್ಮಿ ಸೇಲ್:
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಜನಸಾಮಾನ್ಯರಿಗೆ ಹೊರೆಯಾಗಿದ್ದರೆ, ಲಾಕ್‌ಡೌನ್ ಬಂಕ್‌ಗಳ ಮಾಲೀಕರಿಗೆ ಸಂಕಷ್ಟತಂದಿಟ್ಟಿದೆ. ಬಹುತೇಕ ಅಂಗಡಿಗಳು ಬಂದ್ ಇದ್ದರೂ, ಪೆಟ್ರೋಲ್ ಬಂಕ್‌ಗಳನ್ನು ತೆರೆಯಲು ಅವಕಾಶ ಕೊಡಲಾಗಿದೆ. ಆದರೆ, ವಾಹನ ಸಂಚಾರ ನಿರ್ಬಂಧಿಸಿರುವುದರಿಂದ ಲಾಕ್‌ಡೌನ್‌ಗಿಂತ ಮುಂಚೆ ಮಾರಾಟವಾಗುತ್ತಿದ್ದ ಪ್ರಮಾಣದ ಶೇ 50ರಿಂದ 60ರಷ್ಟುಪೆಟ್ರೋಲ್ ಹಾಗೂ ಡೀಸೆಲ್ ಮಾರಾಟ ಕಡಿಮೆಯಾಗಿದೆ. ವಹಿವಾಟು ಕುಗ್ಗಿದ್ದರೂ ನೌಕರರನ್ನು ಬೇಡ ಎನ್ನುವಂತಿಲ್ಲ. ನಿರ್ವಹಣೆಯ ವೆಚ್ಚವೂ ಅಷ್ಟೇ ಇದೆ. ಹಲವಾರು ವರ್ಷಗಳಿಂದ ಕೆಲಸ ಮಾಡುವವರನ್ನು ಕೈಬಿಡದೇ ಸಂಬಳ ನೀಡಲಾಗುತ್ತಿದೆ ಎಂದು ಪೆಟ್ರೋಲ್ ಬಂಕ್ ಮಾಲೀಕರೊಬ್ಬರು ತಮ್ಮ ಅಳಲು ತೋಡಿಕೊಂಡರು.
ಅಗತ್ಯ ವಸ್ತುಗಳ ಬೆಲೆ ಏರಿಕೆ:
ವಾಹನಗಳು ರಸ್ತೆಗಿಳಿಯದ ಕಾರಣ ಇದರ ಬಿಸಿ ಇನ್ನೂ ಜನರಿಗೆ ತಟ್ಟಿಲ್ಲವಾದರೂ ಅಗತ್ಯ ವಸ್ತುಗಳ ಬೆಲೆಯಲ್ಲಿ ಮಾತ್ರ ವಿಪರೀತ ಹೆಚ್ಚಳವಾಗುತ್ತಿದೆ. ಕಳೆದ ಬಾರಿಯೂ ಕೊರೋನಾ ಸೋಂಕು ಹೆಚ್ಚಾದ ಸಮಯದಲ್ಲಿಯೇ ಪೆಟ್ರೋಲ್ ಬೆಲೆ ಹೆಚ್ಚಳವಾಗಿತ್ತು. ಈ ಬಾರಿಯೂ ಅದೇ ರೀತಿಯಾಗುತ್ತಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಳದಿಂದ ಸಾಗಾಣಿಕೆ ವೆಚ್ಚ ಹೆಚ್ಚಾಗುತ್ತಿದೆ. ಇದರಿಂದ ಸಹಜವಾಗಿ ಅಗತ್ಯ ವಸ್ತುಗಳ ಬೆಲೆಯೂ ಹೆಚ್ಚಳವಾಗುತ್ತಿದೆ. ಅಡುಗೆ ಎಣ್ಣೆ ಬೆಲೆ ಈಗಾಗಲೇ ಹೆಚ್ಚಳವಾಗಿತ್ತು. ಮತ್ತೆ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಶೇಂಗಾ, ಹೆಸರು, ಹೆಸರುಕಾಳು, ಅಕ್ಕಿ ಸೇರಿದಂತೆ ಬಹುತೇಕ ದಿನಸಿಗಳ ಬೆಲೆಯಲ್ಲಿ ಶೇ.15 ರಿಂದ ಶೇ.20ರಷ್ಟುಹೆಚ್ಚಳವಾಗುತ್ತಿದೆ ಎಂದು ವ್ಯಾಪಾರಸ್ಥರು ನುಡಿಯುತ್ತಾರೆ.
ತರಕಾರಿ ಬೆಲೆಯಲ್ಲೂ ಸಾಕಷ್ಟು ಹೆಚ್ಚಳವಾಗಿದೆ. ಲಾಕ್‌ಡೌನ್ ಇರುವುದರಿಂದ ಮಾರುಕಟ್ಟೆಸೇರುತ್ತಿಲ್ಲ. ಆದರೆ ಮನೆಯ ಮುಂದೆ ಬರುವ ತಳ್ಳುವ ಗಾಡಿಗಳಲ್ಲೇ ತರಕಾರಿಗಳನ್ನು ಜನತೆ ಖರೀದಿಸುತ್ತಿದ್ದಾರೆ. ಎಲ್ಲ ತರಕಾರಿ ಬೆಲೆಯೂ ಶೇ.25ರಿಂದ 30ರಷ್ಟು ಹೆಚ್ಚಳವಾಗಿರುವುದು ಕಂಡು ಬರುತ್ತಿದೆ.
ಹೋಟೆಲ್, ಆಟೋ ದರ ಹೆಚ್ಚಳ:
ಎಲ್ಲ ವಸ್ತುಗಳ ಬೆಲೆ ಏರುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಹೋಟೆಲ್‌ಗಳಲ್ಲಿನ ಊಟ, ಉಪಾಹಾರಗಳ ಬೆಲೆಯಲ್ಲೂ ಹೆಚ್ಚಳವಾಗಲಿದೆ. ಕಳೆದ ಬಾರಿ ಪ್ರತಿ ತಿಂಡಿಯ ದರ ಶೇ.5ರಷ್ಟುಹೆಚ್ಚಾಗಿತ್ತು. ಸದ್ಯ ಹೋಟೆಲ್‌ಗಳು ಲಾಕ್‌ಡೌನ್‌ನಿಂದ ತೆರೆದಿಲ್ಲ. ತೆರೆದರೂ ಬರೀ ಪಾರ್ಸಲ್‌ಗಷ್ಟೇ ಸೀಮಿತ. ಲಾಕ್‌ಡೌನ್ ಮುಗಿದ ಬಳಿಕ ಎಲ್ಲ ಹೋಟೆಲ್‌ಗಳು ಪ್ರಾರಂಭವಾದ ಬಳಿಕ ಉಪಾಹಾರಗಳ ಬೆಲೆಯಲ್ಲಿ ಇನ್ನಷ್ಟು ಹೆಚ್ಚಳ ಮಾಡುವುದು ಅನಿವಾರ್ಯವಾಗಲಿದೆ ಎಂಬ ಮಾತು ಹೋಟೆಲ್ ಉದ್ಯಮಿಗಳದ್ದು.
ಏಪ್ರಿಲ್ 30ರಿಂದ ಈ ವರೆಗೆ ಪೆಟ್ರೋಲ್ ಹಾಗೂ ಡೀಸೆಲ್‌ನಲ್ಲಿ 16-18 ಸಲ ಬೆಲೆ ಏರಿಕೆಯಾಗಿದೆ. ಲಾಕ್‌ಡೌನ್ ಇರುವುದರಿಂದ ಆಟೋ, ಟ್ಯಾಕ್ಸಿ ಸೇರಿದಂತೆ ಹಲವಾರು ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಇದರಿಂದ ಶೇ.50-60ರಷ್ಟು ಪೆಟ್ರೋಲ್, ಡೀಸೆಲ್ ಮಾರಾಟ ಕಡಿಮೆಯಾಗಿದೆ. ಆದರೆ ನಿರ್ವಹಣೆ ವೆಚ್ಚ ಮಾತ್ರ ಅಷ್ಟೇ ಇದೆ. ಇದು ಬಂಕ್‌ಗಳಿಗೂ ಸಮಸ್ಯೆಯಾಗಿದೆ ಎಂದು ಕರ್ನಾಟಕ ರಾಜ್ಯ ಪೆಟ್ರೋಲಿಯಂ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಶಾಂತರಾಜ ಪೋಳ ತಿಳಿಸಿದ್ದಾರೆ.