
ಬೆಂಗಳೂರು (ಮೇ.21): ಒಟ್ಟು ಐದು ದಿನಗಳ ಕಾಲ ಪ್ರವಾಸ ಕೈಗೊಳ್ಳಲಿರುವ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ವಿದೇಶ ಪ್ರವಾಸಕ್ಕೆ ತೆರಳುತ್ತಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 10.35ಕ್ಕೆ ಹೊರಡುವ ವಿಮಾನದಲ್ಲಿ ದುಬೈಗೆ ತೆರಳಲಿದ್ದಾರೆ. ಮಧ್ಯಾಹ್ನ 12.45ಕ್ಕೆ ದುಬೈಗೆ ತಲುಪಲಿದ್ದು, ಅಲ್ಲಿಂದ ಮಧ್ಯಾಹ್ನ 3.35ರ ವಿಮಾನದಲ್ಲಿ ಪ್ರಯಾಣಿಸಿ ರಾತ್ರಿ 9 ಗಂಟೆಗೆ ಜೂರಿಚ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಲಿದ್ದಾರೆ. ನಂತರ ರಸ್ತೆಯ ಮೂಲಕ ದಾವೋಸ್‌ಗೆ ತೆರಳಲಿದ್ದಾರೆ.
ಸೋಮವಾರದಿಂದ ನಡೆಯುವ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಐದು ದಿನಗಳ ಕಾಲ ಶೃಂಗಸಭೆಯಲ್ಲಿ ಭಾಗವಹಿಸಿ ಮೇ 25ರಂದು ಬೆಳಗ್ಗೆ 11ಗಂಟೆಗೆ ದಾವೋಸ್‌ನಿಂದ ಹೊರಟು ರಸ್ತೆಯ ಮೂಲಕ ಪ್ರಯಾಣಿಸಿ ಮಧ್ಯಾಹ್ನ 2 ಗಂಟೆಗೆ ಜೂರಿಚ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದ್ದಾರೆ. ಅಲ್ಲಿಂದ ಮಧ್ಯಾಹ್ನ 3.25ರ ವಿಮಾನದ ಮೂಲಕ ಹೊರಟು ರಾತ್ರಿ 11.45ಕ್ಕೆ ದುಬೈಗೆ ಆಗಮಿಸಲಿದ್ದಾರೆ. ನಂತರ ಮುಂಜಾನೆ 3.30ರ ವಿಮಾನದಲ್ಲಿ ಹೊರಟು ಮೇ 26ರಂದು ಬೆಳಗ್ಗೆ 9.05 ಗಂಟೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.
Bengaluru Rains: ಸಿಎಂ ಮುಂದೆ ಮಳೆ ಸಂತ್ರಸ್ತರ ಗೋಳಾಟ: ಜನರ ಆಕ್ರೋಶ
ಮುಖ್ಯಮಂತ್ರಿಗಳ ಜತೆ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್, ವಿಶೇಷ ಕರ್ತವ್ಯ ಅಧಿಕಾರಿ ರೋಹನ್ ಬಿರಾದಾರ್, ಕೈಗಾರಿಕಾ ಸಚಿವರ ಆಪ್ತ ಸಹಾಯಕ ಶರಣಬಸಪ್ಪ ತೆರಳಲಿದ್ದಾರೆ. ಐಟಿ-ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಈಗಾಗಲೇ ದಾವೋಸ್‌ಗೆ ತೆರಳಿದ್ದಾರೆ. ಸಮ್ಮೇಳನದಲ್ಲಿ ಭಾಗವಹಿಸುವ ಕಂಪನಿಗಳೊಂದಿಗೆ ಚರ್ಚಿಸಿ ಹೂಡಿಕೆಗೆ ಸೆಳೆಯುವ ಪ್ರಯತ್ನ ನಡೆಸಲಾಗುತ್ತದೆ.
ದಾವೋಸ್‌ನಲ್ಲಿ ಭಾರತದ ಆರ್ಥಿಕ ಶಕ್ತಿ ತೋರಿಸುವೆ: ಭಾರತ ವಿಶ್ವದ ಬಹುದೊಡ್ಡ ಆರ್ಥಿಕ ಶಕ್ತಿಯಾಗಿದ್ದು, ಇದನ್ನು ವಿಶ್ವಕ್ಕೆ ಬಿಂಬಿಸುವ ಕೆಲಸವನ್ನು ದಾವೋಸ್‌ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ದಾವೋಸ್ ವಿಶ್ವ ಆರ್ಥಿಕ ಶೃಂಗ ಸಭೆಗೆ ಸಂಬಂಧಿಸಿದಂತೆ ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಪೂರ್ವಭಾವಿ ವರ್ಚುಯಲ್ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾಫಿನಾಡಿನಲ್ಲಿ ಸಿಎಂ: ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ ಬೊಮ್ಮಾಯಿ
ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಭಾರತದಲ್ಲಿ ಹೂಡಿಕೆಯನ್ನು ಆಕರ್ಷಿಸುವುದಲ್ಲದೆ, ಹೂಡಿಕೆಗೆ ಯೋಗ್ಯವಾದ ದೇಶದ ಪರಿಸರ ಮತ್ತು ವಾತಾವರಣವನ್ನು ಪರಿಚಯಿಸಬೇಕಿದೆ. ದೇಶ ಹಾಗೂ ರಾಜ್ಯದ ಆರ್ಥಿಕ, ಕೈಗಾರಿಕಾ ನೀತಿಗಳು, ನಮ್ಮ ಶಕ್ತಿ. ಪರಿಸರ ಹಾಗೂ ಆರ್ಥಿಕತೆ ಜೊತೆಯಾಗಿಯೇ ಹೋಗುತ್ತವೆ. ಆದ್ದರಿಂದ ಈ ಎಲ್ಲ ಅಂಶಗಳನ್ನು ದಾವೋಸ್‌ನಲ್ಲಿ ಎತ್ತಿಹಿಡಿಯಲಾಗುವುದು ಎಂದು ಹೇಳಿದರು. ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ.ರಮಣರೆಡ್ಡಿ, ಮುಖ್ಯ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಕೈಗಾರಿಕೆ ಇಲಾಖೆ ಆಯುಕ್ತರಾದ ಗುಂಜನ್ ಕೃಷ್ಣ ಹಾಜರಿದ್ದರು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.