* ಪೆಟ್ರೋಲ್, ಡೀಸೆಲ್ ದರ ಇಳಿಕೆಗೆ ಚಿಂತನೆ?
* ಹಣಕಾಸು ಸ್ಥಿತಿ ನೋಡಿಕೊಂಡು ನಿರ್ಧಾರ: ಸಿಎಂ
* ಮೊದಲ ಬಾರಿ ಸುಂಕ ಇಳಿಕೆ ಬಗ್ಗೆ ಸಿಎಂ ಮಾತು
ಬೆಂಗಳೂರು(ಅ.11): ರಾಜ್ಯದ ಹಣಕಾಸು ಪರಿಸ್ಥಿತಿಯನ್ನು ನೋಡಿಕೊಂಡು ಪೆಟ್ರೋಲ್(Petrol) ಡೀಸೆಲ್(Diesel) ಮೇಲಿನ ಮೇಲಿನ ಸುಂಕ ಇಳಿಕೆ ಮಾಡುವ ಕುರಿತು ನಿರ್ಧಾರ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Chief Minister Basavaraj Bommai) ಹೇಳಿದ್ದಾರೆ.
ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೈಲದ ಮೇಲಿನ ಸುಂಕ ಕಡಿಮೆ ಮಾಡುವ ನಿರ್ಧಾರ ಏಕಾಏಕಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹಣಕಾಸು ಸ್ಥಿತಿಗತಿ, ಆದಾಯದ ಪ್ರಮಾಣ ಎಲ್ಲವನ್ನೂ ನೋಡಿಕೊಂಡು ನಿರ್ಧರಿಸಬೇಕಾಗುತ್ತದೆ. ಹೀಗಾಗಿ ಸರ್ಕಾರವು ರಾಜ್ಯದ ಹಣಕಾಸು ಸ್ಥಿತಿಯನ್ನು ನೋಡಿಕೊಂಡು ಬಳಿಕ ಸೂಕ್ತ ನಿರ್ಧಾರ ಮಾಡಲಿದೆ ಎಂದು ಹೇಳಿದರು.
undefined
ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಈಗಾಗಲೇ 110 ರು. ಸಮೀಪಿಸಿದ್ದು, ಡೀಸೆಲ್ ಬೆಲೆ ಹಲವೆಡೆ 100 ರು. ದಾಟಿದೆ. ಹೀಗಾಗಿ ಜನಾಕ್ರೋಶ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿಗಳ ಈ ಹೇಳಿಕೆ ಬಂದಿದೆ.
ರಾಜ್ಯದ 6 ಕಡೆ ಡೀಸೆಲ್ 100 ರೂ.
ಭಾನುವಾರ ಮತ್ತೆ ಡೀಸೆಲ್ ಬೆಲೆ ಲೀಟರ್‌ಗೆ 35 ಪೈಸೆ ಹೆಚ್ಚಳವಾದ ಹಿನ್ನೆಲೆಯಲ್ಲಿ ರಾಜ್ಯದ ಇನ್ನೆರಡು ಕಡೆಗಳಲ್ಲಿ ಡೀಸೆಲ್ ಬೆಲೆ ಶತಕದ ಗಡಿ ದಾಟಿದೆ. ಶನಿವಾರ ಉತ್ತರ ಕನ್ನಡ ಜಿಲ್ಲೆಯ ಶಿರಸಿ (100.12 ರೂ.), ಬಳ್ಳಾರಿ (100.03ರೂ.) ಮತ್ತು ವಿಜಯನಗರ (100.03 ರೂ.) ಜಿಲ್ಲೆಗಳಲ್ಲಿ ಲೀಟರ್‌ಗೆ ನೂರು ರುಪಾಯಿ ಆಗಿತ್ತು. ಭಾನುವಾರ ಕಾರವಾರದಲ್ಲಿ 100.16ರೂ. ಮತ್ತು ದಾವಣಗೆರೆಯಲ್ಲಿ 100.05ರೂ. ಆಗಿದೆ. ಈ ಮೂಲಕ ಒಟ್ಟು ನಾಲ್ಕು ಜಿಲ್ಲೆಗಳಲ್ಲಿ ಡೀಸೆಲ್ ದರ ನೂರರ ಗಡಿ ದಾಟಿದಂತಾಗಿದೆ.
ಇನ್ನು ಚಿಕ್ಕಮಗಳೂರಿನಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 99.96ರೂ., ಚಿತ್ರದುರ್ಗ 99.93ರೂ., ಕೊಪ್ಪಳ 99.80ರೂ., ಶಿವಮೊಗ್ಗ 99.75ರೂ., ಬೀದರ್ 99.34ರೂ., ಬಾಗಲಕೋಟೆಯಲ್ಲಿ 99.05ರೂ. ಆಗಿದ್ದು ಶೀಘ್ರವೇ ನೂರು ರು. ದಾಟುವ ಸಂಭವವಿದೆ.
ರಾಜ್ಯದಲ್ಲಿ ಕಳೆದ 10 ದಿನಗಳಲ್ಲಿ ಡೀಸೆಲ್ ಲೀಟರ್‌ಗೆ 3.44ರೂ. ಮತ್ತು ಪೆಟ್ರೋಲ್‌ಗೆ 2.84ರೂ. ಹೆಚ್ಚಳವಾಗಿದೆ. ಪರಿಣಾಮ ರಾಜಧಾನಿ ಬೆಂಗಳೂರಿನಲ್ಲಿ ಡೀಸೆಲ್ ಬೆಲೆ 98.52ರೂ. ಮತ್ತು ಪೆಟ್ರೋಲ್ ಬೆಲೆ 107.77ರೂ.ಗೆ ಹೆಚ್ಚಳವಾಗಿದೆ. ಭಾನುವಾರ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 30 ಪೈಸೆ ಹೆಚ್ಚಿರುವುದರಿಂದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಅತಿ ಹೆಚ್ಚು 109.96ರೂ. ದಾಖಲಾಗಿದೆ. ಇಲ್ಲಿ ಡೀಸೆಲ್ ಬೆಲೆ 100.43ರೂ.ಕ್ಕೇರಿದೆ.
ಸಾಗಣೆ ವೆಚ್ಚ ಹೆಚ್ಚಿರುವುದರಿಂದ ಡೀಸೆಲ್ ದರವೂ ಹೆಚ್ಚಿದೆ. ದಿನದಿಂದ ದಿನಕ್ಕೆ ಇಂಧನ ಬೆಲೆಯಲ್ಲಿ ಹೆಚ್ಚಳ ಆಗುತ್ತಿರುವುದು ಜನಸಾಮಾನ್ಯರಿಗೆ ತೀವ್ರ ಹೊರೆಯಾಗಿ ಪರಿಣಮಿಸಿದೆ. ಜತೆಗೆ ದಿನಸಿ, ದಿನಬಳಕೆ ವಸ್ತುಗಳು, ತರಕಾರಿ ಬೆಲೆಯಲ್ಲೂ ಹೆಚ್ಚಳ ಆಗುವ ಸಾಧ್ಯತೆ ಇದೆ.