
ನವದೆಹಲಿ(ಜು.21): ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರದಲ್ಲಿ ಇಳಿಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಗಗನಕ್ಕೇರಿದ್ದ ತೈಲದರ ಇಳಿಕೆಯಾಗುವ ಮುನ್ಸೂಚನೆ ದೊರೆತಿದೆ.
ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಗಣನೀಯ ಇಳಿಕೆಯಾಗುವ ಸಾಧ್ಯತೆ ಇದ್ದು, ಜಾಗತಿಕ ಕಚ್ಚಾ ತೈಲ ದರದಲ್ಲಿ ಕಳೆದ 9 ದಿನಗಳಲ್ಲಿ ಬ್ಯಾರೆಲ್‌ಗೆ 7 ಡಾಲರ್ ಇಳಿಕೆಯಾಗಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ.
ಇನ್ನು ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಪ್ರತಿ ಲೀಟರ್‌ಗೆ 6 ಪೈಸೆ ಹಾಗೂ 12 ಪೈಸೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀ.ಗೆ 79.30 ರೂ. ಹಾಗೂ ಡೀಸೆಲ್ ದರ 70.56 ರೂ. ಇತ್ತು. ಸಾರ್ವಜನಿಕ ತೈಲ ಕಂಪನಿಗಳು ಅಂತಾರಾಷ್ಟ್ರೀಯ ತೈಲ ದರವನ್ನು ಅವಲಂಬಿಸಿ, ದೇಶೀಯ ದರಗಳನ್ನು ನಿರ್ಧರಿಸುತ್ತವೆ.
ತೈಲೋತ್ಪಾದಕ ರಾಷ್ಟ್ರಗಳು ಉತ್ಪಾದನೆಯನ್ನು ಹೆಚ್ಚಿಸಿರುವುದು ದರ ಇಳಿಕೆಗೆ ಕಾರಣವಾದರೆ, ಅಮೆರಿಕ ಹಾಗೂ ಚೀನಾ ನಡುವಣ ವಾಣಿಜ್ಯ ಸಮರ ತೈಲದ ಬೇಡಿಕೆಯನ್ನು ತಗ್ಗಿಸಬಹುದು ಎಂದು ಅಂದಾಜಿಸಲಾಗಿದೆ.
ಇದೇ ವೇಳೆ ಅಮೆರಿಕ ಕೂಡ ಭಾರತ ಹಾಗೂ ಇತರ ಕೆಲ ರಾಷ್ಟ್ರಗಳಿಗೆ ಇರಾನ್ ನಿಂದ ತೈಲ ಆಮದನ್ನು ಮಾಡಿಕೊಳ್ಳಲು ಯಾವುದೇ ಅಡ್ಡಿ ಮಾಡದಿರುವ ಸಾಧ್ಯತೆ ಇದೆಸೌದಿ ಅರೇಬಿಯಾ, ರಷ್ಯಾ ಹಾಗೂ ಅಮೆರಿಕ ತೈಲೋತ್ಪಾದನೆ ಹೆಚ್ಚಿಸುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.