ದೀಪಾವಳಿಗೆ ಮತ್ತೊಂದು ಪ್ಯಾಕೇಜ್| ಶೀಘ್ರದಲ್ಲೇ ಪ್ರಕಟವಾಗುತ್ತೆ, ದಿನಾಂಕ ಹೇಳಲು ಆಗದು| ಹಣಕಾಸು ಇಲಾಖೆ ಕಾರ್ಯದರ್ಶಿ ತರುಣ್ ಬಜಾಜ್
ನವದೆಹಲಿ(ನ.04): ಕೊರೋನಾ ವೈರಸ್ ದಾಳಿಯಿಂದಾಗಿ ಜರ್ಜರಿತವಾಗಿರುವ ಆರ್ಥಿಕತೆಗೆ ಉತ್ತೇಜನ ನೀಡಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶೀಘ್ರದಲ್ಲೇ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಲಿದ್ದಾರೆ ಎಂದು ಹಣಕಾಸು ವ್ಯವಹಾರಗಳ ಕಾರ್ಯದರ್ಶಿ ತರುಣ್ ಬಜಾಜ್ ತಿಳಿಸಿದ್ದಾರೆ. ಇದು ದೀಪಾವಳಿ ಸಂದರ್ಭದಲ್ಲೇ ಘೋಷಣೆಯಾಗುವ ಸಾಧ್ಯತೆ ಅಧಿಕವಾಗಿದೆ.
ಆರ್ಥಿಕತೆಗೆ ಸಂಬಂಧಿಸಿದಂತೆ ವಿವಿಧ ವಲಯಗಳಿಂದ ಬಂದಿರುವ ಸಲಹೆ ಹಾಗೂ ಕೋರಿಕೆಗಳನ್ನು ಹಣಕಾಸು ಸಚಿವಾಲಯ ಪರಿಶೀಲಿಸುತ್ತಿದೆ. ಆ ಬಗ್ಗೆ ಚರ್ಚೆ ನಡೆಯುತ್ತಿದೆ. ಇದನ್ನು ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ. ಇಂತಹದ್ದೇ ದಿನ ಘೋಷಣೆಯಾಗಲಿದೆ ಎಂದು ಹೇಳಲು ಕಷ್ಟ. ಶೀಘ್ರದಲ್ಲೇ ಹಣಕಾಸು ಸಚಿವರೇ ಮುಂದೆ ಬಂದು ಎಲ್ಲವನ್ನೂ ಹೇಳುತ್ತಾರೆ ಎಂದು ವಿಡಿಯೋ ಕಾನ್ಪರೆನ್ಸ್ ಮೂಲಕ ನಡೆದ ಸಭೆಯೊಂದರಲ್ಲಿ ಅವರು ತಿಳಿಸಿದರು.
ನಿರ್ಮಲಾ ಅವರು ಇನ್ನೊಂದು ಪ್ಯಾಕೇಜ್ ಘೋಷಣೆ ಮಾಡಿದರೆ, ಕೊರೋನಾ ವೈರಸ್ ಉಪಟಳ ಆರಂಭವಾದ ಬಳಿಕ ಕೇಂದ್ರ ಸರ್ಕಾರ ಪ್ರಕಟಿಸುತ್ತಿರುವ ನಾಲ್ಕನೇ ಪ್ಯಾಕೇಜ್ ಅದಾಗಲಿದೆ. ಕಳೆದ ತಿಂಗಳಷ್ಟೇ ನಿರ್ಮಲಾ ಅವರು ಎಲ್‌ಟಿಸಿ, ಬೋನಸ್ ಒಳಗೊಂಡ ಮೂರನೇ ಪ್ಯಾಕೇಜ್ ಪ್ರಕಟಿಸಿದ್ದರು. ಅದಕ್ಕೂ ಮುನ್ನ ಮೇ ತಿಂಗಳಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 20.97 ಲಕ್ಷ ಕೋಟಿ ರು.ನ ಆತ್ಮನಿರ್ಭರ ಅಭಿಯಾನ್ ಪ್ಯಾಕೇಜ್ ಘೋಷಿಸಿದ್ದರು. ಮಾಚ್‌ರ್‍ನಲ್ಲಿ 1.70 ಲಕ್ಷ ಕೋಟಿ ರು. ಮೊತ್ತದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯನ್ನು ಘೋಷಿಸಲಾಗಿತ್ತು.