ಜಿಎಸ್‌ಟಿ ಜಾರಿಯಿಂದ ರಾಜ್ಯಗಳಿಗೆ ಆಗುವ ನಷ್ಟಭರಿಸಲು ಸಂಗ್ರಹಿಸಲಾಗಿದ್ದ ಪರಿಹಾರ | ಜಿಎಸ್‌ಟಿ ಪರಿಹಾರ ಬೇರೆಡೆ ಬಳಸಿದ ಕೇಂದ್ರ
ನವದೆಹಲಿ(ಸೆ.26): ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಿಂದ ರಾಜ್ಯಗಳಿಗೆ ಆಗುವ ನಷ್ಟಭರಿಸಲು ಸಂಗ್ರಹಿಸಲಾಗಿದ್ದ ಪರಿಹಾರ ಸೆಸ್ ಪೈಕಿ 47,272 ಕೋಟಿ ರು. ಅನ್ನು ಕೇಂದ್ರ ಸರ್ಕಾರ ಅನ್ಯ ಉದ್ದೇಶಕ್ಕೆ ಬಳಕೆ ಮಾಡಿದೆ. ತನ್ಮೂಲಕ ನಿಯಮ ಉಲ್ಲಂಘನೆ ಮಾಡಿದೆ ಎಂದು ಮಹಾಲೇಖಪಾಲರು (ಸಿಎಜಿ) ಚಾಟಿ ಬೀಸಿದ್ದಾರೆ.
2017ನೇ ಸಾಲಿನಲ್ಲಿ ಜಿಎಸ್‌ಟಿ ಜಾರಿಗೆ ಬಂತು. ಮೊದಲ 2 ವರ್ಷದಲ್ಲಿ ಈ ರೀತಿ ನಿಯಮ ಉಲ್ಲಂಘನೆ ಆಗಿದೆ. 2017-18ರಲ್ಲಿ 61,612 ಕೋಟಿ ರು. ಸೆಸ್ ಸಂಗ್ರಹವಾಗಿತ್ತು. ಆ ಪೈಕಿ 56,146 ಕೋಟಿ ರು. ಹಣವನ್ನು ಮಾತ್ರ ಪರಿಹಾರ ನಿಧಿಗೆ ವರ್ಗಾಯಿಸಲಾಗಿದೆ.
2018-19ರಲ್ಲಿ ಸಂಗ್ರಹವಾಗಿದ್ದ 95,081 ಕೋಟಿ ರು. ಪೈಕಿ 54,275 ಕೋಟಿ ರು.ಗಳನ್ನು ಮಾತ್ರ ನಿಧಿಗೆ ವರ್ಗಾವಣೆ ಮಾಡಲಾಗಿದೆ. ಎರಡೂ ವರ್ಷಗಳಿಂದ ಸಂಗ್ರಹವಾದ 47,212 ಕೋಟಿ ರು.ಗಳನ್ನು ಬೇರೆ ಉದ್ದೇಶಕ್ಕೆ ಬಳಸಲಾಗಿದೆ ಎಂದು ಸಿಎಜಿ ತಿಳಿಸಿದೆ.