ಸರ್ಕಾರಿ ಬ್ಯಾಂಕುಗಳ ವಿಲೀನ ಆಯ್ತು, ಈಗ ಖಾಸಗೀಕರಣ? ಯಾವೆಲ್ಲ ಬ್ಯಾಂಕ್?

By Kannadaprabha NewsFirst Published Jun 4, 2020, 7:44 AM IST
Highlights

ಸರ್ಕಾರಿ ಬ್ಯಾಂಕುಗಳ ವಿಲೀನ ಆಯ್ತು, ಈಗ ಖಾಸಗೀಕರಣ?| ಕೇಂದ್ರಕ್ಕೆ ನೀತಿ ಆಯೋಗದಿಂದ ಸಲಹೆ| ಸರ್ಕಾರ ಮಟ್ಟದಲ್ಲಿ ಈ ಬಗ್ಗೆ ಚರ್ಚೆ

ನವದೆಹಲಿ(ಜೂ.04): ಹಲವು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳನ್ನು ವಿಲೀನಗೊಳಿಸುವ ಮೂಲಕ ಅವುಗಳನ್ನು ಸಶಕ್ತಗೊಳಿಸಲು ಪ್ರಯತ್ನಿಸುತ್ತಿರುವ ಕೇಂದ್ರ ಸರ್ಕಾರ, ಇದೀಗ ಕೆಲ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸಲು ಚಿಂತನೆ ನಡೆಸಿದೆ.

ಪ್ರತಿ ಬಾರಿ ಬ್ಯಾಂಕ್‌ಗಳು ಸಂಕಷ್ಟಕ್ಕೆ ಈಡಾದಾಗ ಅವುಗಳಿಗೆ ತೆರಿಗೆದಾರರ ಹಣ ನೀಡಿ ರಕ್ಷಿಸುವ ಬದಲು, ಅವುಗಳನ್ನು ಮಾರುಕಟ್ಟೆಬೆಳವಣಿಗೆ ಅನುಗುಣವಾಗಿ ಸ್ಪರ್ಧಾತ್ಮಕವಾಗಿ ಮಾಡಲು ಖಾಸಗೀಕರಣ ಸೂಕ್ತ ಮದ್ದು ಎಂಬ ಸಲಹೆಯನ್ನು ಕೇಂದ್ರ ಸರ್ಕಾರದ ಚಿಂತಕರ ಚಾವಡಿಯಾದ ನೀತಿ ಆಯೋಗ ನೀಡಿದೆ ಎನ್ನಲಾಗಿದೆ.

ನೀತಿ ಆಯೋಗದ ಪ್ರಸ್ತಾವದ ಅನ್ವಯ ಮೊದಲ ಹಂತದಲ್ಲಿ ಪಂಜಾಬ್‌ ಅಂಡ್‌ ಸಿಂಧ್‌ ಬ್ಯಾಂಕ್‌, ಬ್ಯಾಂಕ್‌ ಆಫ್‌ ಮಹಾರಾಷ್ಟ್ರ, ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸುವ ಉದ್ದೇಶ ಸರ್ಕಾರಕ್ಕಿದೆ. ಈ ನಿಟ್ಟಿನಲ್ಲಿ ಈಗಾಗಲೇ ಮಾತುಕತೆ ಕೂಡ ಆರಂಭವಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

ಇದಲ್ಲದೆ ತಮ್ಮ ಕಂಪನಿಗಳಿಗೆ ಸಾಲ ನೀಡುವಂತಿಲ್ಲ ಎಂಬ ಷರತ್ತನ್ನು ಒಡ್ಡಿ, ಕೆಲ ದೊಡ್ಡ ಉದ್ಯಮ ಸಮೂಹಗಳಿಗೂ ಬ್ಯಾಂಕಿಂಗ್‌ ಲೈಸೆನ್ಸ್‌ ನೀಡುವಂತೆ ನೀತಿ ಆಯೋಗ ಸಲಹೆ ನೀಡಿದೆ. ಆದರೆ ಈ ನೀತಿ ಜಾರಿಗೆ ಸದ್ಯ ಕಾನೂನಿನ ಅಡ್ಡಿ ಇರುವ ಕಾರಣ, ಕಾಯ್ದೆ ತಿದ್ದುಪಡಿ ತರದ ಹೊರತು ಉದ್ಯಮಗಳು ಬ್ಯಾಂಕಿಂಗ್‌ ಲೈಸೆನ್ಸ್‌ಗೆ ಅರ್ಹತೆ ಪಡೆದುಕೊಳ್ಳುವುದಿಲ್ಲ ಎಂದು ವರದಿ ಹೇಳಿದೆ.

ಯಾವ ಬ್ಯಾಂಕ್‌ ಖಾಸಗೀಕರಣ?

- ಪಂಜಾಬ್‌ ಅಂಡ್‌ ಸಿಂಧ್‌ ಬ್ಯಾಂಕ್‌

- ಬ್ಯಾಂಕ್‌ ಆಫ್‌ ಮಹಾರಾಷ್ಟ್ರ

- ಇಂಡಿಯನ್‌ ಓವರ್‌ಸೀಸ್‌

click me!