ಮತ್ತೆ ಸೇಲ್‌ಗಿದೆ ಏರ್ ಇಂಡಿಯಾ| ಈ ಬಾರಿ 100% ಷೇರು ಮಾರಲು ಕೇಂದ್ರ ಸರ್ಕಾರ ಸಜ್ಜು| ಪ್ರಾಥಮಿಕ ಬಿಡ್ ದಾಖಲೆ ಬಿಡುಗಡೆ| ಆಸಕ್ತಿ ವ್ಯಕ್ತಪಡಿಸುವಿಕೆಗೆ ಮಾ.17 ಗಡುವು| ಇದು ದೇಶದ್ರೋಹ, ಕೋರ್ಟಿಗೆ ಹೋಗುವೆ: ಸ್ವಾಮಿ| ಸರ್ಕಾರದ ಬಳಿ ದುಡ್ಡಿಲ್ಲ, ಅದಕ್ಕೆ ಮಾರ್ತಿದೆ: ಕಾಂಗ್ರೆಸ್| ಬಿಳಿಯಾನೆ ಮಾರಲು 2ನೇ ಸಲ ಕಸರತ್ತು
ನವದೆಹಲಿ[ಜ.28]: ಬರೋಬ್ಬರಿ 58 ಸಾವಿರ ಕೋಟಿ ರು. ಸಾಲದ ಹೊರೆಯನ್ನು ಹೊತ್ತಿರುವ, ದೇಶದ ಪಾಲಿಗೆ ಬಿಳಿಯಾನೆಯಾಗಿರುವ ಸರ್ಕಾರಿ ಸ್ವಾಮ್ಯದ ವಿಮಾನಯಾನ ಕಂಪನಿ ಏರ್ ಇಂಡಿಯಾವನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಮತ್ತೊಮ್ಮೆ ಪ್ರಯತ್ನ ಆರಂಭಿಸಿದೆ. 2018ರಲ್ಲಿ ಶೇ.76ರಷ್ಟುಷೇರುಗಳನ್ನು ಮಾರಾಟಕ್ಕಿಟ್ಟರೂ ಯಾರೊಬ್ಬರೂ ಮುಂದೆ ಬಾರದ ಕಾರಣ ಹಿನ್ನಡೆ ಅನುಭವಿಸಿದ್ದ ಸರ್ಕಾರ, ಈ ಬಾರಿ ಶೇ.100ರಷ್ಟುಷೇರುಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ. ಅಲ್ಲದೆ ಖರೀದಿದಾರರಿಗೆ ಈ ಹಿಂದೆ ವಿಧಿಸಿದ್ದ ಕೆಲವು ನಿಯಮಗಳನ್ನೂ ಸರಳೀಕೃತಗೊಳಿಸಿದೆ.
ಇದಕ್ಕಾಗಿ ಪ್ರಾಥಮಿಕ ಬಿಡ್ ದಾಖಲೆಗಳನ್ನು ಸೋಮವಾರ ಬಿಡುಗಡೆ ಮಾಡಿದ್ದು, ಆಸಕ್ತಿ ವ್ಯಕ್ತಪಡಿಸುವಿಕೆಗೆ ಮಾ.17ರ ಗಡುವನ್ನು ನೀಡಿದೆ. ಮಾ.31ರಂದು ಬಿಡ್ ವಿಜೇತರ ಹೆಸರನ್ನು ಪ್ರಕಟಿಸಲಾಗುವುದು.
ಸರ್ಕಾರದ ಈ ನಿರ್ಧಾರಕ್ಕೆ ಸ್ವತಃ ಬಿಜೆಪಿ ಸಂಸದರೊಬ್ಬರಿಂದಲೇ ವಿರೋಧ ವ್ಯಕ್ತವಾಗಿದೆ. ಸರ್ಕಾರದ ಈ ಕ್ರಮ ದೇಶದ್ರೋಹದ್ದು ಎಂದು ಜರಿದಿರುವ ಸಂಸದ ಸುಬ್ರಮಣಿಯನ್ ಸ್ವಾಮಿ, ಈ ನಿರ್ಧಾರದ ವಿರುದ್ಧ ಕೋರ್ಟಿಗೆ ಹೋಗುವ ಎಚ್ಚರಿಕೆ ನೀಡಿದ್ದಾರೆ. ಮತ್ತೊಂದೆಡೆ, ಸರ್ಕಾರದ ಬಳಿ ದುಡ್ಡಿಲ್ಲ. ಹೀಗಾಗಿ ದೇಶದ ಬಳಿ ಇರುವ ಮೌಲ್ಯಯುತ ಆಸ್ತಿಯನ್ನು ಮಾರುತ್ತಿದೆ ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಟೀಕಿಸಿದ್ದಾರೆ.
'ನಾನು ಸಚಿವ ಆಗಿರದಿದ್ರೆ ಏರಿಂಡಿಯಾಗೆ ಬಿಡ್ ಮಾಡ್ತಿದ್ದೆ'
ಸೇಲ್‌ಗಿದೆ ಕಂಪನಿ:
ಏರ್ ಇಂಡಿಯಾದ ಶೇ.100 ಹಾಗೂ ಅದೇ ಸಂಸ್ಥೆಯ ಅಗ್ಗದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿರುವ ಶೇ.100ರಷ್ಟುಷೇರು ಮತ್ತು ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಸರಕು ಮತ್ತು ಗ್ರೌಂಡ್ ಹ್ಯಾಂಡಲಿಂಗ್ ಸೇವೆ ಒದಗಿಸುತ್ತಿರುವ ಏರ್ ಇಂಡಿಯಾ- ಸಿಂಗಾಪುರ ಏರ್‌ಲೈನ್ಸ್ ನಡುವಣ ಜಂಟಿ ಪಾಲುದಾರಿಕಾ ಕಂಪನಿ ಎಐಎಸ್‌ಎಟಿಎಸ್‌ನಲ್ಲಿನ ಶೇ.50ರಷ್ಟುಷೇರುಗಳನ್ನು ಮಾರಾಟ ಮಾಡಲಾಗುತ್ತದೆ ಎಂದು ಬಿಡ್ ದಾಖಲೆ ತಿಳಿಸಿದೆ.
ಯಶಸ್ವಿ ಬಿಡ್‌ದಾರರಿಗೆ ಕಂಪನಿಯ ನಿರ್ವಹಣೆಯನ್ನು ವರ್ಗಾಯಿಸಲಾಗುತ್ತದೆ. ಆ ಬಿಡ್‌ದಾರರು ಏರ್ ಇಂಡಿಯಾ ಹಾಗೂ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಹೊಂದಿರುವ 23,286 ಕೋಟಿ ರು. ಸಾಲದ ಹೊರೆಯನ್ನು ವಹಿಸಿಕೊಳ್ಳಬೇಕಾಗುತ್ತದೆ. ಉಳಿಕೆ ಸಾಲವನ್ನು ಏರ್ ಇಂಡಿಯಾ ಅಸ್ಸೆಟ್ಸ್ ಹೋಲ್ಡಿಂಗ್ ಲಿಮಿಟೆಡ್‌ಗೆ ಹಂಚಿಕೆ ಮಾಡಲಾಗುತ್ತದೆ. ಏರ್ ಇಂಡಿಯಾ ಎಂಜಿನಿಯರಿಂಗ್ ಸವೀರ್‍ಸ್, ಏರ್ ಇಂಡಿಯಾ ಏರ್ ಟ್ರಾಫಿಕ್ ಸವೀರ್‍ಸಸ್, ಏರ್‌ಲೈನ್ ಅಲೈಡ್ ಸವೀರ್‍ಸಸ್, ಹೋಟೆಲ್ ಕಾರ್ಪೊರೆಷನ್ ಆಫ್ ಇಂಡಿಯಾ ಕಂಪನಿಗಳನ್ನು ಅಸ್ಸೆಟ್ಸ್ ಹೋಲ್ಡಿಂಗ್ಸ್‌ಗೆ ವರ್ಗಾಯಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಕಂಪನಿಗಳು ಮಾರಾಟಕ್ಕಿಲ್ಲ ಎಂದು ಬಿಡ್ ದಾಖಲೆ ತಿಳಿಸಿದೆ.
ಅಲ್ಲದೆ ಖರೀದಿ ಪ್ರಕ್ರಿಯೆಯಲ್ಲಿ ಏರ್‌ಇಂಡಿಯಾದ ಕಾಯಂ ಸಿಬ್ಬಂದಿಗೆ ಶೇ.3ರಷ್ಟುಷೇರುಗಳನ್ನು ರಿಯಾಯಿತಿ ದರದಲ್ಲಿ ನೀಡುವ ಪ್ರಸ್ತಾಪವನ್ನು ಮಾಡಲಾಗಿದೆ. ಜೊತೆಗೆ ಬಿಡ್‌ದಾರರು, ಕಂಪನಿಗೆ ಏರ್ ಇಂಡಿಯಾ ಎಂಬ ಹೆಸರನ್ನು ಉಳಿಸಿಕೊಂಡು ಹೋಗಬೇಕು ಎಂಬ ಷರತ್ತು ವಿಧಿಸಲಾಗಿದೆ.
80000 ಕೋಟಿ ಸಾಲ ಹಿನ್ನಲೆ: ಏರಿಂಡಿಯಾ ಖಾಸಗೀಕರಣ ಅಗತ್ಯ
ಏನೇನು ರಿಯಾಯ್ತಿ
ಈ ಹಿಂದೆ ಶೆ.76ರಷ್ಟುಪಾಲು ಮಾರಾಟಕ್ಕೆ ನಿರ್ಧಾರ. ಇದೀಗ ಶೇ.100ರಷ್ಟುಪಾಲು ಮಾರಾಟ ನಿರ್ಧಾರ
ಈ ಹಿಂದೆ ಬಿಡ್‌ದಾರರು 49000 ಕೋಟಿ ಸಾಲ ಹೊತ್ತುಕೊಳ್ಳಬೇಕಿತ್ತು, ಈಗ 23286 ಕೋಟಿ ರು. ಇರಲಿದೆ
ಬಿಡ್ ಸಲ್ಲಿಸುವರು 5000 ಕೋಟಿ ಆಸ್ತಿ ಹೊಂದಿರಬೇಕು ಎಂಬ ಷರತ್ತನ್ನು ಇದೀಗ 3500 ಕೋಟಿಗೆ ಇಳಿದಿದೆ
ಶೇ.49 ಪಾಲು ಖರೀದಿಗೆ ವಿದೇಶಿಯರಿಗೂ ಅನುಮತಿ. ಆದರೆ ಪ್ರಮುಖ ಷೇರುದಾರ ಭಾರತೀಯ ಆಗಿರಬೇಕು
16077: ಏರಿಂಡಿಯಾದ ಒಟ್ಟು ಸಿಬ್ಬಂದಿಗಳ ಸಂಖ್ಯೆ
58000 ಕೋಟಿ: ಏರಿಂಡಿಯಾದ ಒಟ್ಟು ಸಾಲದ ಪ್ರಮಾಣ
80000 ಕೋಟಿ ಸಾಲ ಹಿನ್ನಲೆ: ಏರಿಂಡಿಯಾ ಖಾಸಗೀಕರಣ ಅಗತ್ಯ