ಪೂರ್ವಾನ್ವಯ ತೆರಿಗೆ ರದ್ದತಿಗೆ ಕೇಂದ್ರದ ಮಹತ್ವದ ನಿರ್ಧಾರ

By Kannadaprabha NewsFirst Published Aug 6, 2021, 8:30 AM IST
Highlights
  • ಕಂಪನಿಗಳ ಮೇಲೆ ಪೂರ್ವಾನ್ವಯ ತೆರಿಗೆ ಪದ್ಧತಿ ಕೊನೆಗೊಳಿಸುವಲ್ಲಿ ಕೇಂದ್ರ ಸರ್ಕಾರ ಗುರುವಾರ ಮಹತ್ವದ ನಿರ್ಧಾರ
  • ಈ ನಿಟ್ಟಿನಲ್ಲಿ ಅದು ಲೋಕಸಭೆಯಲ್ಲಿ ತೆರಿಗೆ ಕಾನೂನುಗಳ (ತಿದ್ದುಪಡಿ) ಮಸೂದೆ- 2021 ಮಂಡಿಸಿದೆ

ನವದೆಹಲಿ (ಆ.06): ಕಂಪನಿಗಳ ಮೇಲೆ ಪೂರ್ವಾನ್ವಯ ತೆರಿಗೆ ಪದ್ಧತಿ ಕೊನೆಗೊಳಿಸುವಲ್ಲಿ ಕೇಂದ್ರ ಸರ್ಕಾರ ಗುರುವಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ನಿಟ್ಟಿನಲ್ಲಿ ಅದು ಲೋಕಸಭೆಯಲ್ಲಿ ತೆರಿಗೆ ಕಾನೂನುಗಳ (ತಿದ್ದುಪಡಿ) ಮಸೂದೆ- 2021 ಮಂಡಿಸಿದೆ.

ಇದರ ಅನ್ವಯ 2012 ಮೇ 28ಕ್ಕಿಂತ ಹಿಂದಿನ ವ್ಯವಹಾರಗಳಿಗೆ ವಿಧಿಸಲಾದ ಪೂರ್ವಾನ್ವಯ ತೆರಿಗೆಗಳು ಸಂಪೂರ್ಣ ರದ್ದಾಗಲಿವೆ. ವೊಡಾಫೋನ್‌, ಕೇರ್ನ್‌ ಎನರ್ಜಿ ಹಾಗೂ ಇತರ ಕಂಪನಿಗಳಿಂದ ಪಡೆದಿದ್ದ 8100 ಕೋಟಿ ರು. ತೆರಿಗೆಯನ್ನು (ಬಡ್ಡಿ ರಹಿತವಾಗಿ) ಆ ಕಂಪನಿಗಳಿಗೇ ಸರ್ಕಾರ ಮರಳಿಸಲಿದೆ. ಇದೊಂದು ಉದ್ಯಮಸ್ನೇಹಿ ನಿರ್ಧಾರ ಎಂಬ ವ್ಯಾಪಕ ಪ್ರಶಂಸೆ ಉದ್ಯಮ ವಲಯದಲ್ಲಿ ವ್ಯಕ್ತವಾಗಿದೆ.

5 ಕೋಟಿ ವಹಿವಾಟಿಗೆ ವಾರ್ಷಿಕ ರಿಟರ್ನ್ಸ್‌ ವೇಳೆ ಸ್ವಯಂ ಪ್ರಮಾಣಪತ್ರ ಸಾಕು!

ಬ್ರಿಟನ್‌ ಮೂಲದ ಕಂಪನಿಗಳಾದ ತೈಲ ಕ್ಷೇತ್ರದ ಕೇರ್ನ್‌ ಎನರ್ಜಿ ಹಾಗೂ ಟೆಲಿಕಾಂ ಕ್ಷೇತ್ರದ ವೊಡಾಫೋನ್‌ಗಳು 2012ಕ್ಕಿಂತ ಮುನ್ನ ಭಾರತದಲ್ಲಿ ಹೂಡಿಕೆ ಮಾಡಿದ್ದವು. ಭಾರತದಲ್ಲಿನ ಹಚ್‌ ಕಂಪನಿಯನ್ನು ವೊಡಾಫೋನ್‌ ಖರೀದಿಸಿತ್ತು. 2012ಕ್ಕಿಂತ ಮುನ್ನ ನಡೆದ ವಹಿವಾಟಾದ ಕಾರಣ ಭಾರತ ಸರ್ಕಾರ ಸಾವಿರಾರು ಕೋಟಿ ರು. ಪೂರ್ವಾನ್ವಯ ತೆರಿಗೆ ವಿಧಿಸಿತ್ತು. ಇದು ವಿದೇಶಗಳ ಕೋರ್ಟ್‌ ಮೆಟ್ಟಿಲೇರಿ ಭಾರತ ಸರ್ಕಾರ ಸೋಲು ಅನುಭವಿಸಿತ್ತು. ಕಟ್ಟಿದ ತೆರಿಗೆ ಹಣ ವಸೂಲಿಗೆ ಕೇರ್ನ್‌ ಎನರ್ಜಿ ಫ್ರಾನ್ಸ್‌ನಲ್ಲಿನ ಭಾರತದ ಆಸ್ತಿಗಳ ಹರಾಜಿಗೂ ನಿರ್ಧರಿಸಿತ್ತು. ಇದರ ಬೆನ್ನಲ್ಲೇ ತೆರಿಗೆ ಹಿಂಪಡೆಯಲು ಸರ್ಕಾರ ನಿರ್ಧರಿಸಿದೆ

click me!