ಕಂಡಿದ್ದೆಲ್ಲ ಕೊಳ್ಳೋ ಅಭ್ಯಾಸನಾ? ಒಮ್ಮೆ ಇಲ್ಲಿ ಕಣ್ಣು ಹಾಯಿಸಿ...

By Suvarna NewsFirst Published Aug 5, 2021, 6:48 PM IST
Highlights

ಕೆಲವರಿಗೆ ಇನ್ನೊಬ್ಬರನ್ನು ಅನುಕರಿಸೋ ಚಾಳಿ. ಅವರ ಬಳಿಯಿರೋದೆಲ್ಲ ತನಗೂ ಬೇಕೆಂಬ ಬಯಕೆ ಮುಂದೆ ದೊಡ್ಡ ಆರ್ಥಿಕ ಸಂಕಷ್ಟಕ್ಕೆ ಮುನ್ನುಡಿಯಾಗಬಲ್ಲದು. 

ಆಧುನಿಕ ಜೀವನಶೈಲಿ ದುಂದುವೆಚ್ಚಕ್ಕೆ ಮೂಲವಾಗಿದೆ. ಪಕ್ಕದ ಮನೆಯವರು,ಸ್ನೇಹಿತರು,ಬಂಧುಗಳು….ಹೀಗೆ ಎಲ್ಲರ ಬಳಿಯಿರೋ ವಸ್ತು ತನಗೂ ಬೇಕೆಂಬ ಹಪಾಹಪಿ ಇಂದು ಹಿಂದಿಗಿಂತ ಹೆಚ್ಚಿದೆ. ಪರಿಣಾಮ ದುಡಿಮೆಗಿಂತ ವೆಚ್ಚವೇ ಅಧಿಕ. ವೇತನ ಹೆಚ್ಚಾದ್ರೆ ಎಲ್ಲವೂ ಸರಿಯಾಗುತ್ತೆ ಎಂದು ಭಾವಿಸುತ್ತೇವೆ.ಆದ್ರೆ ಸಂಬಳ ಏರಿದಂತೆ ವೆಚ್ಚವೂ ಹೆಚ್ಚುತ್ತದೆ.ಇಂಥ ಪರಿಸ್ಥಿತಿಗೆ ಜೀವನಶೈಲಿ ಹಣದುಬ್ಬರ ಎಂದು ಕರೆಯಲಾಗುತ್ತದೆ. ದುಡಿದ ದುಡ್ಡನ್ನೆಲ್ಲ ಹೀಗೆ ಬಯಸಿದ್ದಕ್ಕೆಲ್ಲ ವ್ಯಯಿಸಿದ್ರೆ ಭವಿಷ್ಯದಲ್ಲಿ ದೊಡ್ಡ ಸಂಕಷ್ಟ ಎದುರಾಗಬಹುದು. ಸೂಕ್ತ ಯೋಜನೆ ರೂಪಿಸೋ ಮೂಲಕ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಲು ಸಾಧ್ಯವಿದೆ. ಹಾಗಾದ್ರೆ ಜೀವನಶೈಲಿ ಮೇಲಿನ ವೆಚ್ಚ ತಗ್ಗಿಸಲು ಏನ್‌ ಮಾಡ್ಬೇಕು?

ಇ-ರುಪಿ ಅಂದ್ರೆ ಏನು? ಇದ್ರ ಪ್ರಯೋಜನಗಳೇನು? 

ನಿಮಗೆಂದೇ ಬಜೆಟ್‌ ರೂಪಿಸಿ
ನಿಮ್ಮಆದಾಯ ಹಾಗೂ ವೆಚ್ಚಗಳನ್ನು ಪರಿಗಣಿಸಿ ನೀವೇ ಒಂದು ಬಜೆಟ್‌ ಸಿದ್ಧಪಡಿಸಿ. ಈ ಬಜೆಟ್‌ಗೆ ಬದ್ಧರಾಗೋ  ಮೂಲಕ ನಿಮ್ಮ ವೆಚ್ಚಗಳಿಗೆ ನೀವೇ ಕಡಿವಾಣ ಹಾಕಲು ಸಾಧ್ಯವಿದೆ. ಅಗತ್ಯ ಹಾಗೂ ಆಸೆಗಳ ನಡುವಿನ ವ್ಯತ್ಯಾಸವನ್ನು ಸರಿಯಾಗಿ ಅರ್ಥೈಸಿಕೊಳ್ಳಿ. ಅಗತ್ಯಗಳಿಗೆ ವ್ಯಯಿಸೋದು ಅನಿವಾರ್ಯ. ಆದ್ರೆ ಆಸೆಗಳನ್ನು ಮುಂದೂಡಲು ಸಾಧ್ಯವಿದೆ. ಅಲ್ಲದೆ, ಅನಗತ್ಯ ಆಸೆ-ಆಕಾಂಕ್ಷೆಗಳಿಗೆ ಹಣ ವ್ಯಯಿಸೋದನ್ನು ತಗ್ಗಿಸಿದಷ್ಟೂ ಬದುಕಿನಲ್ಲಿ ನೆಮ್ಮದಿ ನೆಲೆಸುತ್ತದೆ.

ಸ್ವಯಂ ಚಾಲಿತ ಹೂಡಿಕೆ 
ಹಣ ಉಳಿಸಲು ಇರೋ ಸರಳ ವಿಧಾನವೆಂದ್ರೆ ಯಾವುದಾದ್ರೂ ಹೂಡಿಕೆ ಅಥವಾ ಉಳಿತಾಯ ಯೋಜನೆಗೆ ನಿಮ್ಮ ಖಾತೆಯಿಂದ ಪ್ರತಿ ತಿಂಗಳು ಹಣ ನೇರವಾಗಿ ಜಮೆ ಆಗೋ ವ್ಯವಸ್ಥೆ ಮಾಡೋದು. ಇದ್ರಿಂದ ಭವಿಷ್ಯಕ್ಕೆ ಆರ್ಥಿಕ ಭದ್ರತೆ ಸಿಗುತ್ತದೆ.  ಉದಾಹರಣೆಗೆ ಇಕ್ವಿಟಿ ಮ್ಯೂಚುವಲ್‌ ಫಂಡ್‌ನಲ್ಲಿ ಮಾಸಿಕ  5 ಸಾವಿರ ರೂ. ಎಸ್‌ಐಪಿ ಮಾಡಿದ್ರೆ 10 ವರ್ಷಗಳ ಅವಧಿಗೆ ಶೇ.12ರಷ್ಟು ವಾರ್ಷಿಕ ರಿಟರ್ನ್ಸ್‌ ಬರುತ್ತೆ. ಅಂದ್ರೆ ನಿಮಗೆ 11ಲಕ್ಷ ರೂ. ಸಿಗುತ್ತದೆ. 

ಗೃಹ ಸಾಲದ EMI ಮೊತ್ತ ತಗ್ಗಿಸೋದು ಹೇಗೆ? ಇಲ್ಲಿದೆ ಮಾಹಿತಿ

ಜೀವನಶೈಲಿ ಆಧಾರಿತ ವೆಚ್ಚಕ್ಕೆ ಕಡಿವಾಣ
ಫ್ರಿಜ್‌ನಿಂದ ಹಿಡಿದು ಕಾರ್‌ ತನಕ ಪ್ರತಿ ವಸ್ತುವನ್ನು ಕೂಡ ಇಎಂಐ ಮೂಲಕ ಖರೀದಿಸೋ ಅವಕಾಶವಿದೆ. ಹಾಗಂತ ಆದಾಯ ಮೀರಿ ಮನಸ್ಸು ಬಯಸಿದ ವಸ್ತುಗಳನ್ನೆಲ್ಲ ಖರೀದಿಸಿದ್ರೆ ಸಾಲ ಬೆಳೆಯುತ್ತ ಹೋಗುತ್ತದೆ. ಜೊತೆಗೆ ಪ್ರತಿ ತಿಂಗಳು ದುಡಿದ ದುಡ್ಡೆಲ್ಲ ಇಎಂಐ ಭರಿಸೋದಕ್ಕೆ ಸರಿ ಹೋಗುತ್ತದೆ. ಒಂದೇ ಒಂದು ಇಎಂಐ ಮಿಸ್‌ ಆದ್ರೂ ನಿಮ್ಮ ಕ್ರೆಡಿಟ್‌ ಸ್ಕೋರ್‌ ಮೇಲೆ ಅದು ಪರಿಣಾಮ ಬೀರುತ್ತದೆ. 

ನಿಮ್ಮನ್ನು ನೀವು ಅರಿತುಕೊಳ್ಳಿ
ಬಂಧುಗಳು, ಸ್ನೇಹಿತರೆಲ್ಲರೂ ಮನೆ ಖರೀದಿಸಿದ್ರೂ ಎಂಬ ಕಾರಣಕ್ಕೆ ನಿವೇಶನ ಅಥವಾ ಮನೆ ಕೊಳ್ಳೋರ ಸಂಖ್ಯೆಗೇನೂ ಕಡಿಮೆಯಿಲ್ಲ. ಆದ್ರೆ ಈ ರೀತಿ ಮನೆ ಖರೀದಿಸೋ ಮುನ್ನ ನಿಮ್ಮ ಆದಾಯ ಹಾಗೂ ಇತರ ವೆಚ್ಚಗಳನ್ನು ಲೆಕ್ಕ ಹಾಕಿ ನೋಡೋದು ಅಗತ್ಯ. ಇಲ್ಲವಾದ್ರೆ ಮುಂದೆ ದೊಡ್ಡ ಆರ್ಥಿಕ ಸಂಕಷ್ಟ ಎದುರಾಗಬಹುದು. ಇನ್ನೊಬ್ಬರನ್ನು ಅನುಕರಿಸೋ ಮುನ್ನ ನಿಮ್ಮ ಇತಿಮಿತಿಗಳನ್ನು ಅರಿಯೋದು ಅಗತ್ಯ. ಹೀಗಾಗಿ ನಿಮ್ಮ ಅಗತ್ಯಗಳನ್ನು ಮನಗಂಡು ಅವುಗಳನ್ನು ಪೂರೈಸೋ ಕಡೆಗಷ್ಟೇ ಗಮನ ನೀಡಿ.
 

ಜಾಣತನದಿಂದ ಹೂಡಿಕೆ ಮಾಡಿ
ಎಷ್ಟು ಆದಾಯ ಗಳಿಸುತ್ತೇವೆ ಅನ್ನೋದಕ್ಕಿಂತ ಅದನ್ನು ಎಷ್ಟು ಜಾಣತನದಿಂದ ಹೂಡಿಕೆ ಮಾಡುತ್ತೇವೆ ಅನ್ನೋದು ಮುಖ್ಯವಾಗುತ್ತದೆ. ಷೇರುಗಳು, ಮ್ಯೂಚುವಲ್‌ ಫಂಡ್ಸ್‌, ವಿವಿಧ ಉಳಿತಾಯ ಯೋಜನೆಗಳು ಹೀಗೆ ಅನೇಕ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಬಹುದು. ಆದ್ರೆ ಯಾವ ಕ್ಷೇತ್ರದಲ್ಲಿ ಹೂಡಿಕೆ ಮಾಡೋದು ಸುರಕ್ಷಿತ ಹಾಗೂ ಲಾಭದಾಯಕ ಎಂಬುದರ ಅರಿವಿರೋದು ಅಗತ್ಯ. ಜಾಣತನದಿಂದ ಸರಿಯಾದ ಕ್ಷೇತ್ರದಲ್ಲಿ ಹೂಡಿಕೆ ಮಾಡಿದವರು ಉತ್ತಮ ರಿಟರ್ನ್ಸ್‌ ಪಡೆಯೋದ್ರಲ್ಲಿ ಸಂಶಯವೇ ಇಲ್ಲ. ಹೂಡಿಕೆಯಿಂದ ಉತ್ತಮ ರಿಟರ್ನ್ಸ್‌ ಬಂದಾಗ ನಿಮ್ಮ ಆದಾಯ ಕೂಡ ಹೆಚ್ಚುತ್ತದೆ. ಆಗ ನಿಮ್ಮ ಆಸೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗುತ್ತದೆ.

ಸಾಲ ಮರುಪಾವತಿಸಲು ಸಾಧ್ಯವಾಗಿಲ್ಲವೆ?

ಸಾಲ ಮಾಡೋ ಮುನ್ನ ಯೋಚಿಸಿ
ಕೆಲವೊಂದು ಪರಿಸ್ಥಿತಿಯಲ್ಲಿ ಸಾಲ ಮಾಡೋದು ಅನಿವಾರ್ಯ. ಆದ್ರೆ ಸಾಲ ಮಾಡೋ ಮುನ್ನ ನೀವು ಯಾವ ಉದ್ದೇಶಕ್ಕಾಗಿ ಮಾಡುತ್ತಿದ್ದೀರಿ? ಅದ್ರಿಂದ ಮುಂದೆ ನಿಮ್ಮ ಆರ್ಥಿಕ ಪರಿಸ್ಥಿತಿ ಮೇಲಾಗೋ ಪರಿಣಾಮವೇನು ಎಂಬುದರ ಅರಿವಿರಲಿ. ಬಡ್ಡಿ, ಸಾಲದ ಅವಧಿ, ಇಎಂಐ ಮೊತ್ತ ಎಲ್ಲವನ್ನೂ ಲೆಕ್ಕ ಹಾಕಿದ ಬಳಿಕವೇ ಸಾಲ ಮಾಡಬೇಕೋ, ಬೇಡವೋ ಎಂಬ ತೀರ್ಮಾನ ಕೈಗೊಳ್ಳಿ. ಇದ್ಯಾವುದರ ಲೆಕ್ಕವಿರದೆ ಅನಗತ್ಯ ವಿಷಯಗಳಿಗಾಗಿ ಸಾಲ ಮಾಡಬೇಡಿ. 


 

click me!