ಆದಾಯ ತೆರಿಗೆ ವಿನಾಯ್ತಿ ಮಿತಿ 5 ಲಕ್ಷಕ್ಕೆ ಹೆಚ್ಚಳವಾಗಲಿದೆ ಎಂದು ಹೇಳಲಾಗುತ್ತಿದ್ದು, ಕೇಂದ್ರ ಬಜೆಟ್‌ನಲ್ಲಿ ಈ ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ. ಮೋದಿ-2 ಸರ್ಕಾರದ ಕೊನೆ ಪೂರ್ಣ ಬಜೆಟ್ ಇದಾಗಿದ್ದು, ಈ ವೇಳೆ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಎನ್‌ಡಿಎ (NDA) ಸರ್ಕಾರದ 2ನೇ ಅವಧಿಯ ಪೂರ್ಣಪ್ರಮಾಣದ ಕೊನೆಯ ಬಜೆಟ್ (Budget) ಫೆಬ್ರವರಿ 1ರಂದು ಮಂಡನೆಯಾಗಲಿದ್ದು, ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು (Income Tax Free Slab) ಹಾಲಿ 2.50 ಲಕ್ಷ ರೂ. ನಿಂದ 5 ಲಕ್ಷ ರೂ. ಗೆ ಹೆಚ್ಚಳ ಮಾಡುವ ನಿರೀಕ್ಷೆ ಇದೆ. ಬಜೆಟ್ ಕುರಿತು ಸಮಾಲೋಚನೆಗಳು ಆರಂಭವಾಗಿರುವುದು ಹಾಗೂ ಬಜೆಟ್ ಮಂಡನೆಗೆ ಇನ್ನು ಎರಡು ತಿಂಗಳುಗಳಿಗಿಂತ ಕಡಿಮೆ ಅವಧಿ ಇರುವ ಬೆನ್ನಲ್ಲೇ ಇಂತಹ ಲಕ್ಷಣಗಳು ಕಂಡುಬರುತ್ತಿವೆ.
ಹಾಲಿ ಇರುವ ತೆರಿಗೆ ನೀತಿಯ ಪ್ರಕಾರ, ವಾರ್ಷಿಕ 2.50 ಲಕ್ಷ ರೂ. ವರೆಗೆ ಯಾವುದೇ ಆದಾಯ ತೆರಿಗೆ ಇಲ್ಲ. ಅದರಿಂದಾಚೆಗೆ ತೆರಿಗೆ ಪಾವತಿಸಬೇಕಿದೆ. ಹಣದುಬ್ಬರ ದುಬಾರಿಯಾಗಿರುವುದರಿಂದ ಜೀವನ ನಿರ್ವಹಣೆ ವೆಚ್ಚವೂ ಅಧಿಕವಾಗಿದೆ. ಆದರೆ ತೆರಿಗೆ ಹೊರೆ ಮಾತ್ರ ಕಡಿಮೆಯಾಗಿಲ್ಲ. ಹೀಗಾಗಿ ವೈಯಕ್ತಿಕ ಆದಾಯ ತೆರಿಗೆ ದರವನ್ನು ಕಡಿತ ಮಾಡಿ, ಜನರ ಕೈಗೆ ಹಣ ನೀಡಬೇಕು ಎಂದು ಹಲವು ತಜ್ಞರು ಸಲಹೆ ನೀಡಿದ್ದಾರೆ. ಹೀಗಾಗಿ ಚುನಾವಣೆಗೂ (Election) ಮುನ್ನ ಮಂಡನೆಯಾಗಲಿರುವ ಕೊನೆಯ ಪೂರ್ಣಾವಧಿ ಬಜೆಟ್‌ನಲ್ಲಿ ತೆರಿಗೆ ವಿನಾಯಿತಿ ಸೇರಿ ಹಲವು ಮಹತ್ವದ ಕೊಡುಗೆಗಳಿರುವ ಸಾಧ್ಯತೆಗಳು ಇವೆ ಎಂದು ಹೇಳಲಾಗುತ್ತಿದೆ.
ಇದನ್ನು ಓದಿ: ತೆರಿಗೆದಾರರಿಗೆ ಶುಭ ಸುದ್ದಿ; ತೆರಿಗೆ ರೀಫಂಡ್ ನಿಯಮ ಬದಲಾಯಿಸಿದ ಐಟಿ ಇಲಾಖೆ
ತೆರಿಗೆ ವಿನಾಯಿತಿ ಹೆಚ್ಚಿಸಿದರೆ ತೆರಿಗೆದಾರರಿಗೆ ಒಂದಷ್ಟು ಹಣ ಉಳಿತಾಯವಾಗುತ್ತದೆ. ಅವರು ಅದನ್ನು ಹೂಡಿಕೆ ಯೋಜನೆಗಳಲ್ಲಿ ತೊಡಗಿಸುತ್ತಾರೆ ಎಂದು ಹೆಸರು ಹೇಳಲು ಬಯಸದ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವಾಣಿಜ್ಯ ದೈನಿಕವೊಂದು ವರದಿ ಮಾಡಿದೆ.
ಆದಾಯ ತೆರಿಗೆ ವಿನಾಯ್ತಿ 5 ಲಕ್ಷಕ್ಕೆ ಏರಿಸಿದರೆ ಎಷ್ಟು ಹಣ ಉಳಿಯುತ್ತೆ?
ಒಂದು ವೇಳೆ ಕೇಂದ್ರ ಸರ್ಕಾರ ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು 5 ಲಕ್ಷ ರು.ಗೆ ಏರಿಸಿದರೆ ಉದ್ಯೋಗಿಯೊಬ್ಬ ಎಷ್ಟು ಹಣ ಉಳಿಸಬಹುದು ಎಂಬ ಲೆಕ್ಕಾಚಾರ ಇಲ್ಲಿದೆ. ಹಾಲಿ ತೆರಿಗೆ ನಿಯಮಗಳ ಅನ್ವಯ 2.50 ಲಕ್ಷ ರೂ. ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ, 2.5- 5 ಲಕ್ಷಕ್ಕೆ ಶೇ. 2.5, 5-10 ಲಕ್ಷಕ್ಕೆ ಶೇ.10, 10-15 ಲಕ್ಷ ರೂ. ಗೆ ಶೇ. 20, 15-20 ಲಕ್ಷಕ್ಕೆ ಶೇ. 25, 20 ಲಕ್ಷ ರೂ. ಮೇಲ್ಟಟ್ಟ ಆದಾಯಕ್ಕೆ ಶೇ. 30ರಷ್ಟು ತೆರಿಗೆ ಇದೆ.
ಇದನ್ನೂ ಓದಿ: ಯುಪಿಐ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಆದಾಯ ತೆರಿಗೆ ಪಾವತಿಸೋದು ಹೇಗೆ? ಇಲ್ಲಿದೆ ಮಾಹಿತಿ
20 ಲಕ್ಷ ರೂ. ಆದಾಯದ ವ್ಯಕ್ತಿಗೆ 1.26 ಲಕ್ಷ ರೂ. ಉಳಿತಾಯ
ಈ ಲೆಕ್ಕಾಚಾರದನ್ವಯ ಉದ್ಯೋಗಿಯೊಬ್ಬನ ವಾರ್ಷಿಕ ಆದಾಯ 20 ಲಕ್ಷ ರೂ. ಇದ್ದರೆ ಆತನಿಗೆ 50,000 ರು.ವರೆಗೆ ಸ್ಟ್ಯಾಡಂಡ್ ಡಿಡಕ್ಷನ್ ಅಡಿ ವಿನಾಯ್ತಿ, ಸೆಕ್ಷನ್ 80 ಸಿ ಅನ್ವಯ 1.50 ಲಕ್ಷ ರೂ. ವಿನಾಯ್ತಿ ಸಿಗುತ್ತದೆ. ಅಂದರೆ ಆದಾಯ 18 ಲಕ್ಷ ರೂ. ಗೆ ಇಳಿಯುತ್ತದೆ. ಇದಕ್ಕೆ ಶೇ. 25ರ ತೆರಿಗೆ ಸ್ತರದ ಅನ್ವಯ 3.52 ಲಕ್ಷ ರೂ. ತೆರಿಗೆ ಕಟ್ಟಬೇಕು. ಇದಕ್ಕೆ ಶೇ.4 ರಷ್ಟು ಸೆಸ್ ಸೇರಿಸಿದರೆ 3.66 ಲಕ್ಷ ರೂ. ತೆರಿಗೆ ಕಟ್ಟಬೇಕು. ಒಂದು ವೇಳೆ ಆದಾಯ ತೆರಿಗೆ ಮಿತಿಯನ್ನು 5 ಲಕ್ಷ ರೂ. ಗೆ ಏರಿಸಿದರೆ 2.40 ಲಕ್ಷ ರೂ. ತೆರಿಗೆ ಕಟ್ಟಿದರೆ ಸಾಕು. ಅಂದರೆ 1.26 ಲಕ್ಷ ರೂ. ಉಳಿಸಬಹುದು.
ಇದನ್ನೂ ಓದಿ: ದೀಪಾವಳಿಗೆ ದುಬಾರಿ ಗಿಫ್ಟ್ ಪಡೆದು ಸಂಭ್ರಮಿಸುತ್ತಿದ್ದೀರಾ? ಅದಕ್ಕೂ ಟ್ಯಾಕ್ಸ್ ಕಟ್ಟಬೇಕು ಗೊತ್ತಾ?