28 ಬ್ಯಾಂಕ್ ಗಳಿಗೆ 22,842 ಕೋಟಿ ರೂ. ವಂಚನೆ, ಎಬಿಜಿ ಸಂಸ್ಥಾಪಕ ರಿಷಿ ಅಗರ್ ವಾಲ್ ಬಂಧನ

By Suvarna News  |  First Published Sep 22, 2022, 4:38 PM IST

*ಎಸ್ ಬಿಐ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಸಿಬಿಐ
*ದೇಶದ ಇತಿಹಾಸದಲ್ಲೇ ಬೃಹತ್ ಬ್ಯಾಂಕ್ ಸಾಲ ಹಗರಣ
*2012 ರಿಂದ 2017ರ ನಡುವೆ ನಡೆದ ವಂಚನೆ 


ನವದೆಹಲಿ (ಸೆ.22): ಬ್ಯಾಂಕ್ ಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪದ ಮೇಲೆ ಎಬಿಜಿ ಶಿಪ್ ಯಾರ್ಡ್ ಲಿಮಿಟೆಡ್ ಸಂಸ್ಥೆ ಮಾಜಿ ಅಧ್ಯಕ್ಷ ಹಾಗೂ ಸಿಎಂಡಿ ರಿಷಿ ಅಗರ್ ವಾಲ್ ಅವರನ್ನು ಸಿಬಿಐ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ. ಎಸ್ ಬಿಐ, ಐಸಿಐಸಿಐ ಸೇರಿದಂತೆ 28 ಬ್ಯಾಂಕ್ ಗಳಿಗೆ 22,842 ಕೋಟಿ ರೂ. ವಂಚಿಸಿದ ಆರೋಪ ರಿಷಿ ಅಗರ್ ವಾಲ್ ಅವರ ಮೇಲಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ  ನೀಡಿದ ದೂರಿನ ಆಧಾರದಲ್ಲಿ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು. 2012 ರಿಂದ 2017ರ ನಡುವೆ ಈ ವಂಚನೆ ನಡೆದಿದೆ ಎಂದು ಹೇಳಲಾಗಿದೆ. ಅಗರ್ ವಾಲ್, ಕಾರ್ಯನಿರ್ವಾಹಕ ನಿರ್ದೇಶಕ ಶಾಂತಾರಾಮ್ ಮುತ್ತಸ್ವಾಮಿ ಹಾಗೂ ನಿರ್ದೇಶಕರಾದ ಅಶ್ವಿನಿ ಕುಮಾರ್, ಸುಶೀಲ್ ಕುಮಾರ್ ಅಗರ್ ವಾಲ್ ಹಾಗೂ ರವಿ ವಿಮಲ್ ನೆವೆಟಿಯಾ ವಿರುದ್ಧ ಸಿಬಿಐ  ಈ ವರ್ಷದ ಫೆಬ್ರವರಿ 7ರಂದು  ಪ್ರಕರಣ ದಾಖಲಿಸಿತ್ತು. ಇದು ದೇಶದ ಇತಿಹಾಸದಲ್ಲೇ ಅತೀದೊಡ್ಡ ಮೊತ್ತದ ಬ್ಯಾಂಕ್ ಸಾಲದ ಹಗರಣವಾಗಿದೆ. ಈ ವಂಚನೆಗೆ ಸಂಬಂಧಿಸಿ ಬ್ಯಾಂಕ್ ಗಳ ನಿಯೋಗ 2019ರ ನವೆಂಬರ್‌ 8ರಂದು ಮೊದಲ ಬಾರಿಗೆ ದೂರು ದಾಖಲಿಸಿತ್ತು. 

'ಅಗರ್ ವಾಲ್ ಅವರನ್ನು ವಿಚಾರಣೆಗಾಗಿ ಬುಧವಾರ ಸಿಬಿಐ ಮುಖ್ಯ ಕಚೇರಿಗೆ ಕರೆಸಲಾಗಿತ್ತು. ತನಿಖೆಗೆ ಅವರು ಸಹಕಾರ ನೀಡುತ್ತಿಲ್ಲ ಎಂಬ ಅನುಮಾನ ವ್ಯಕ್ತಪಡಿಸಿದ್ದರು. ಅಲ್ಲದೆ, ಅಗರ್ ವಾಲ್ ಅವರ ಪ್ರತಿಕ್ರಿಯೆಗಳು ಸಮರ್ಪಕವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ' ಎಂದು ಸಿಬಿಐ ವಕ್ತಾರರು ಮಾಹಿತಿ ನೀಡಿದ್ದಾರೆ. ಕ್ರಿಮಿನಲ್ ಪಿತೂರಿ, ವಂಚನೆ, ಅಧಿಕೃತ ಸ್ಥಾನದ ದುರುಪಯೋಗ ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆ ಅಡಿಗಳಲ್ಲಿ ರಿಷಿ ಅಗರ್ ವಾಲ್ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. 

Tap to resize

Latest Videos

Gautam Adani ಅಣ್ಣ ಈಗ ಭಾರತದ 6ನೇ ಶ್ರೀಮಂತ: ಆಸ್ತಿ ಮೌಲ್ಯ ವಿವರ ಹೀಗಿದೆ..

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ 2,468.51 ಕೋಟಿ ರೂ. ವಂಚನೆ ಮಾಡಲಾಗಿದೆ ಎಂದು ಹೇಳಲಾಗಿದೆ. ಇನ್ನು ಐಸಿಐಸಿಐ ಬ್ಯಾಂಕ್ (7,089 ಕೋಟಿ ರೂ.), ಐಡಿಬಿಐ ಬ್ಯಾಂಕ್ (3,634 ಕೋಟಿ ರೂ.), ಬ್ಯಾಂಕ್ ಆಫ್ ಬರೋಡಾ (1,614 ಕೋಟಿ ರೂ.), ಪಂಜಾಬ್ ನ್ಯಾಷನಲ್ ಬ್ಯಾಂಕ್ (1,244 ಕೋಟಿ ರೂ.) ಹಾಗೂ ಐಒಬಿ ಬ್ಯಾಂಕ್ (1,228 ಕೋಟಿ ರೂ.) ವಂಚನೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಎಬಿಜಿ ಶಿಪ್ ಯಾರ್ಡ್ (ABG Shipyard) ಭಾರತದ ಹಡಗು ನಿರ್ಮಾಣ ಕೈಗಾರಿಕೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಇದು ಗುಜರಾತ್  ದಹೆಜಿ ಹಾಗೂ ಸೂರತ್ ನಿಂದ ಕಾರ್ಯನಿರ್ವಹಿಸುತ್ತಿದೆ. ಸೂರತ್ ಶಿಪ್ ಯಾರ್ಡ್ 18,000 ಡಿಡಬ್ಲ್ಯುಟಿ ತನಕದ ಹಡಗುಗಳನ್ನು ನಿರ್ಮಿಸುವ ಸಾಮರ್ಥ್ಯ ಹೊಂದಿದೆ. ಇನ್ನು ದಹೆಜ್ ಶಿಪ್ ಯಾರ್ಡ್ 1,20,000  ಡಿಡಬ್ಲ್ಯುಟಿ ತನಕದ ಹಡಗುಗಳನ್ನು ನಿರ್ಮಾಣ ಮಾಡುವ ಸಾಮರ್ಥ್ಯ ಹೊಂದಿದೆ.  16 ವರ್ಷಗಳಲ್ಲಿ 165 ಹಡುಗುಗಳನ್ನು ನಿರ್ಮಾಣ ಮಾಡಿದ್ದ ಕಂಪನಿ ಸಾಕಷ್ಟು ಪ್ರಗತಿಯಲ್ಲೇ ಇತ್ತು. ಆದರೆ, ಜಾಗತಿಕ ಶಿಪ್ಪಿಂಗ್ ಕ್ಷೇತ್ರದಲ್ಲಿನ ಮರುಪಾವತಿ ವೇಳಾಪಟ್ಟಿಯಲ್ಲಿನ ಅವ್ಯವಹಾರಗಳಿಂದ ತೊಂದರೆಗೆ ಸಿಲುಕಿತ್ತು. 

ಎಬಿಜಿ ಶಿಪ್‌ಯಾರ್ಡ್‌ ಸಂಸ್ಥೆ 28 ಬ್ಯಾಂಕ್‌ಗಳಿಂದ ನಾನಾ ಯೋಜನೆಗಳ ಹೆಸರಿನಲ್ಲಿ 22,842 ಕೋಟಿ ರು. ಸಾಲ ಪಡೆದುಕೊಂಡಿತ್ತು. ಆದರೆ ನಂತರದ ದಿನಗಳಲ್ಲಿ ಸಾಲ, ಬಡ್ಡಿ ಮರು ಪಾವತಿ ಮಾಡದೇ ವಂಚಿಸಿತ್ತು. ಈ ಹಿನ್ನೆಲೆಯಲ್ಲಿ 2016ರಲ್ಲಿ ಈ ಬ್ಯಾಂಕ್‌ ಖಾತೆಗಳನ್ನು ಅನುತ್ಪಾದಕ ಆಸ್ತಿ ಎಂದು ಮತ್ತು 2019ರಲ್ಲಿ ಇದೊಂದು ವಂಚನೆ ಪ್ರಕರಣ ಎಂದು ಬ್ಯಾಂಕ್‌ಗಳು ಘೋಷಿಸಿದ್ದವು.

ನೈಕಾ ಸಂಸ್ಥಾಪಕಿ ಫಲ್ಗುಣಿ ನಾಯರ್ ಈಗ ಭಾರತದ ಶ್ರೀಮಂತ ಮಹಿಳೆ; ಎರಡನೇ ಸ್ಥಾನದಲ್ಲಿ ರೇಖಾ ಜುಂಜುನ್‌ವಾಲಾ

ಇಂಥ ಘೋಷಣೆ ಬೆನ್ನಲ್ಲೇ 2019ರಲ್ಲಿ ಎಬಿಜಿ ವಿರುದ್ಧ ಎಸ್‌ಬಿಐ, ಸಿಬಿಐ ಬಳಿ ವಂಚನೆಯ ದೂರು ದಾಖಲಿಸಿತ್ತು. ಈ ದೂರನ್ನು ಆಧರಿಸಿ ಸಿಬಿಐ, ಅರ್ನೆಸ್ಟ್‌ ಆ್ಯಂಡ್‌ ಯಂಗ್‌ ಸಂಸ್ಥೆಯ ಮೂಲಕ ಎಬಿಜಿ ಕಂಪನಿಯ 2012-17ರ ಅವಧಿ ಲೆಕ್ಕಪತ್ರಗಳನ್ನು ಪರಿಶೋಧನೆಗೆ ಒಳಪಡಿಸಿತ್ತು.ಈ ವೇಳೆ ಎಬಿಜಿ ಕಂಪನಿಯ ಹಲವು ಹಿರಿಯ ಅಧಿಕಾರಿಗಳು, ಬ್ಯಾಂಕ್‌ನಿಂದ ಪಡೆದ ಸಾಲವನ್ನು ಉದ್ದೇಶಿತ ಕೆಲಸದ ಬದಲು ಅನ್ಯ ಕಾರಣಕ್ಕಾಗಿ ದುರ್ಬಳಕೆ ಮಾಡಿಕೊಂಡಿದ್ದು,ಅಕ್ರಮ ಎಸಗಿರುವುದು, ವಿಶ್ವಾಸ ದ್ರೋಹ ಎಸಗಿರುವುದು ಪತ್ತೆಯಾಗಿತ್ತು. 

click me!